ಹೆಚ್‌ಐವಿ ಇದೆ ಎಂದು ವದಂತಿ ಹಬ್ಬಿಸುವುದಾಗಿ ಬೆದರಿಸಿ 50 ಲಕ್ಷಕ್ಕೆ ಬೇಡಿಕೆ: ಪತ್ನಿ ವಿರುದ್ಧವೇ ಉದ್ಯಮಿ ದೂರು
ಹೆಚ್‌ಐವಿ ಸೋಂಕು ಇದೆ ಎಂದು ಸುಳ್ಳು ವದಂತಿ ಹಬ್ಬಿಸುವುದಾಗಿ ಬೆದರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪತ್ನಿ ವಿರುದ್ಧವೇ ಬೆಂಗಳೂರಿನ ಉದ್ಯಮಿಯೊಬ್ಬರು ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯಿಂದ 18 ಲಕ್ಷ ನಗದು, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವುದಲ್ಲದೆ, ನಕಲಿ ಕೀಲಿ ಬಳಸಿ ಕಾರು ಕೂಡ ತೆಗೆದುಕೊಂಡು ಹೋಗಿದ್ದಾಳೆ. ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು ಬೆದರಿಸಿರೋದಾಗಿ ದೂರಲ್ಲಿ ತಿಳಿಸಲಾಗಿದೆ.

ಬೆಂಗಳೂರು, ಜೂನ್ 19: ಹೆಚ್‌ಐವಿ/ಏಡ್ಸ್ ಸೋಂಕು ಇದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪತ್ನಿ ವಿರುದ್ಧವೇ ಬೆಂಗಳೂರಿನ (Bengaluru) ಉದ್ಯಮಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ. 51 ವರ್ಷದ ವ್ಯಕ್ತಿ ನೀಡಿರುವ ದೂರಿನ ಆಧಾರದಲ್ಲಿ ಮಾರತ್ತಹಳ್ಳಿ ಪೊಲೀಸರು 37 ವರ್ಷದ ಸ್ವಾತಿ ಬಿ. ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳವು, ಸುಲಿಗೆ, ಮಾನಹಾನಿ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಉದ್ಯಮಿ ಆರೋಪವೇನು?
ಮಾರತ್ತಹಳ್ಳಿಯಲ್ಲಿ ಕಂಪ್ಯೂಟರ್ ಏಡೆಡ್ ಡಿಸೈನ್ ಅಂಡ್ ಡ್ರಾಫ್ಟಿಂಗ್ (CADD) ತರಬೇತಿ ಸಂಸ್ಥೆ ನಡೆಸುತ್ತಿರುವ ಉದ್ಯಮಿ, 2021ರ ಅಕ್ಟೋಬರ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಸ್ವಾತಿಯನ್ನು ಪರಿಚಯಿಸಿಕೊಂಡು 2022ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ವಿವಾಹದ ನಂತರ ಮಹಿಳೆ ತನ್ನ ಅಸಲಿ ಮುಖ ತೋರಿಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಸುಳ್ಳು ಆರೋಪಗಳನ್ನು ಹರಡುತ್ತೇನೆ ಎಂದು ಉದ್ಯಮಿಯಾಗಿರುವ ಪತಿಗೆ ಬೆದರಿಕೆ ಹಾಕಿದ್ದಾಳೆ. 50 ಲಕ್ಷ ಹಣಕ್ಕೂ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ ಹೆಚ್‌ಐವಿ/ಏಡ್ಸ್ ಇದೆ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೇನೆ ಎಂಬ ಸುಳ್ಳು ಪ್ರಚಾರ ಮಾಡುವುದಾಗಿ ತನಗೆ ಬೆದರಿಸಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
3 ಮದುವೆ ಆರೋಪ
ಮನೆಯಿಂದ 18 ಲಕ್ಷ ನಗದು, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವುದಲ್ಲದೆ, ನಕಲಿ ಕೀಲಿ ಬಳಸಿ ಕಾರು ಕೂಡ ತೆಗೆದುಕೊಂಡು ಹೋಗಿದ್ದಾಳೆ. ಸಾಲದ್ದಕ್ಕೆ ಕಚೇರಿಗೆ ಹಾನಿ ಮಾಡುವ ಜೊತೆಗೆ ಚೆಕ್‌ಗೆ ನಕಲಿ ಸಹಿ ಹಾಕಿ ಬ್ಯಾಂಕ್ ಖಾತೆಯಿಂದ 83 ಸಾವಿರ ಹಣ ಡ್ರಾ ಮಾಡಿಕೊಂಡಿರುವುದಾಗಿ ಕೂಡ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ತನ್ನನ್ನು ಮದುವೆಯಾಗುವ ಮೊದಲು ಆಕೆ ಮೂರು ಬಾರಿ ಮದುವೆಯಾಗಿದ್ದಳು. ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು, ನನ್ನ ವಿರುದ್ಧ ಏನು ಬೇಕಾದರೂ ಮಾಡಬಲ್ಲೆ ಎಂದು ಆಗಾಗ ಬೆದರಿಸುತ್ತಿದ್ದಳು. ಮದುವೆಗೆ ಮುನ್ನವೂ ಹಿಂದಿನ ವಿವಾಹದಿಂದ ಜನಿಸಿದ ಮಗನ ಶಿಕ್ಷಣಕ್ಕಾಗಿ ತನ್ನಿಂದ ಹೆಚ್ಚಿನ ಹಣ ಖರ್ಚು ಮಾಡಿಸಿಕೊಂಡಿದ್ದಾಳೆ ಎಂದು ಉದ್ಯಮಿ ಆರೋಪಿಸಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




