ದೇಶದ ಮೂರನೇ ಅತ್ಯುತ್ತಮ ಮೃಗಾಲಯವಾಗಿ ಹೊರಹೊಮ್ಮಿದ ಮೈಸೂರು ಮೃಗಾಲಯ
ದೇಶದ ಮೂರನೇ ಅತ್ಯುತ್ತಮ ಮೃಗಾಲಯವಾಗಿ ಮೈಸೂರು ಮೃಗಾಲಯ ಹೊರಹೊಮ್ಮಿದೆ. ಮೊದಲ ಸ್ಥಾನವನ್ನು ಡಾರ್ಜಿಲಿಂಗ್ನ ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್ ಹಾಗೂ 2ನೇ ಸ್ಥಾನವನ್ನು ಚೆನ್ನೈನಲ್ಲಿರುವ ಅರಿಗ್ನಾರ್ ಅಣ್ಣಾ ಝೂಲಾಜಿಕಲ್ ಪಾರ್ಕ್ ಪಡೆದುಕೊಂಡಿದೆ.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವು ದೇಶದ ಮೂರನೇ ಅತ್ಯುತ್ತಮ ಮೃಗಾಲಯವಾಗಿ ಹೊರಹೊಮ್ಮಿದೆ. ಸೆಪ್ಟೆಂಬರ್ 10 ರಂದು ಭುವನೇಶ್ವರದಲ್ಲಿ ಮೃಗಾಲಯದ ನಿರ್ದೇಶಕರ ಸಮಾವೇಶ ನಡೆದಿತ್ತು. ಅದರಂತೆ ದೇಶದ ವಿವಿಧ ಮೃಗಾಯಲಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿಕೊಂಡು ಅತ್ಯುತ್ತಮ ಮೃಗಾಲಯಗಳ ಪಟ್ಟಿಯನ್ನು ತಯಾರಿಸಲಾಗಿತ್ತು. ಸದ್ಯ ಕೇಂದ್ರ ಮೃಗಾಲಯ ಪ್ರಾಧಿಕಾರವು ಈ ಪಟ್ಟಿ ಬಿಡುಗಡೆ ಮಾಡಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರವು ಘೋಷಣೆ ಮಾಡಿದಂತೆ ಮೈಸೂರು ಮೃಗಾಯಲವು ದೇಶದ ಮೂರನೇ ಅತ್ಯುತ್ತಮ ಮೃಗಾಲಯವಾಗಿ ಹೊರಹೊಮ್ಮಿದೆ. ಇನ್ನು ಡಾರ್ಜಿಲಿಂಗ್‌ನಲ್ಲಿರುವ ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್ (PNHZP) ದೇಶದ ಅತ್ಯುತ್ತಮ ಮೃಗಾಲಯವೆಂದು ಗುರುತಿಸುವ ಮೂಲಕ ಮೊದಲ ಸ್ಥಾನ ಪಡೆದಿದೆ. ಚೆನ್ನೈನಲ್ಲಿರುವ ಅರಿಗ್ನಾರ್ ಅಣ್ಣಾ ಝೂಲಾಜಿಕಲ್ ಪಾರ್ಕ್ ಎರಡನೇ ಸ್ಥಾನ ಪಡೆದಿದೆ. ಕೋಲ್ಕತ್ತಾದ ಅಲಿಪೋರ್ ಝೂಲಾಜಿಕಲ್ ಗಾರ್ಡನ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
ದೇಶದ ಅತ್ಯಂತ ಹಳೆಯ ಮೃಗಾಲಯವಾಗಿರುವ ಮೈಸೂರು ಮೃಗಾಲಯ, 157 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇದನ್ನು 1892 ರಲ್ಲಿ ಆರಂಭಿಸಲಾಯಿತು. ಇದು ಮೈಸೂರು ಅರಮನೆಯಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿದ್ದು, 1909 ರಲ್ಲಿ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಸುಮಾರು 1,300 ಪ್ರಾಣಿಗಳನ್ನು ಮೃಗಾಲಯದಲ್ಲಿ ಕಾಣಬಹುದು.
ಕೇಂದ್ರ ಮೃಗಾಲಯ ಪ್ರಾಧಿಕಾರವು ನಿರ್ವಹಣೆ ಮತ್ತು ಪರಿಣಾಮಕಾರಿತ್ವದಂತಹ ವಿವಿಧ ನಿಯತಾಂಕಗಳ ಆಧಾರದ ಮೇಲೆ ಎಲ್ಲಾ ಮೃಗಾಲಯಗಳ ಮೌಲ್ಯಮಾಪನವನ್ನು ನಡೆಸಿತು ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಅಂಕಗಳನ್ನು ನೀಡಲಾಗಿದೆ. ಇದರಲ್ಲಿ ಮೊದಲ ಸ್ಥಾನ ಪಡೆದಿರುವ ಡಾರ್ಜಿಲಿಂಗ್‌ನಲ್ಲಿರುವ ಮೃಗಾಲಯಕ್ಕೆ 83 ಅಂಕ ನೀಡಲಾಗಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:41 pm, Thu, 15 September 22