ಬೀದರ್: ಕಾರಂಜಾ ಕಾಲುವೆ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಂಪುಟ ಅಸ್ತು; ಈಗಲಾದ್ರೂ ಸಿಗುತ್ತಾ ರೈತರಿಗೆ ನೀರು?
Bidar Karanga Canal: ಬೀದರ್‌ನ ಕಾರಂಜಾ ಬಲದಂಡೆ ಕಾಲುವೆ ಎರಡು ದಶಕಗಳಿಂದಲೂ ಕೊನೆಭಾಗದ ರೈತರಿಗೆ ನೀರು ತಲುಪಿಸದೆ ನಿರಾಸೆ ಮೂಡಿಸಿತ್ತು. ಪ್ರತಿ ವರ್ಷ ಲಕ್ಷಾಂತರ ರೂ. ದುರಸ್ತಿ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಕರ್ನಾಟಕ ಸಚಿವ ಸಂಪುಟ 181 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದ್ದು, ಸಾವಿರಾರು ರೈತರ ನೀರಾವರಿ ಕನಸಿಗೆ ಹೊಸ ಭರವಸೆ ಮೂಡಿಸಿದೆ. ಶಾಶ್ವತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.

ಮುಖ್ಯಾಂಶಗಳು
- ಕಾರಂಜಾ ಬಲದಂಡೆ ಕಾಲುವೆಗೆ ಹರಿಯದ ನೀರು
- ರೈತರ ನೀರಾವರಿ ಕನಸು ನುಚ್ಚುನೂರು
- ಕಾಲುವೆ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಬೀದರ್, ಜುಲೈ 22: ಜಿಲ್ಲೆಯ ಸಾವಿರಾರು ರೈತರ (Farmers) ನೀರಾವರಿ ಕನಸಿಗೆ ಆಸರೆಯಾಗಬೇಕಿದ್ದ ಕಾರಂಜಾ ಬಲದಂಡೆ ಕಾಲುವೆ (Karanga Canal), ಇದೀಗ ರೈತರ ಪಾಲಿಗೆ ಕೇಲವ ಭರವಸೆಯಾಗಿ ಉಳಿದಿದೆ. ಕಾಲುವೆ ನಿರ್ಮಾಣವಾಗಿ ಎರಡು ದಶಕಗಳು ಕಳೆದರೂ ಕೊನೆಯ ಭಾಗದವರೆಗೆ ನೀರು ತಲುಪದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಕಾಲುವೆ ದುರಸ್ತಿಗೆ ಲಕ್ಷಾಂತರ ರೂ ವೆಚ್ಚ ಮಾಡಿದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಇದೀಗ ಕಾರಂಜಾ ಬಲದಂಡೆ ಕಾಲುವೆ ಸಮಗ್ರ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ರೈತರ ಖುಷಿ ಹೆಚ್ಚಿಸಿದೆ.
ಪ್ರತಿ ವರ್ಷ ನೀರಿಗೆ ರೈತರು ಪರದಾಟ
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ ಕೆ. ಗ್ರಾಮದ ಬಳಿಯಿರುವ ಕಾರಂಜಾ ಜಲಾಶಯದ ನೀರು ಜಿಲ್ಲೆಯ ಸಾವಿರಾರು ಎಕರೆ ಕೃಷಿ ಭೂಮಿಗೆ ಜೀವನಾಡಿಯಾಗಬೇಕಿತ್ತು. ಆದರೆ ವಾಸ್ತವದಲ್ಲಿ ಕಾರಂಜಾ ಬಲದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ಮಾತ್ರ ಇನ್ನೂ ನೀರು ಸಿಗುತ್ತಿಲ್ಲ. ಪ್ರತಿ ವರ್ಷ ಮಳೆಗಾಲ ಅಥವಾ ನೀರು ಬಿಡುವ ಮುನ್ನ ಕಾಲುವೆ ಸ್ವಚ್ಛತೆ, ದುರಸ್ತಿ ಮತ್ತು ನಿರ್ವಹಣೆ ಹೆಸರಿನಲ್ಲಿ ಲಕ್ಷಾಂತರ ರೂ ವೆಚ್ಚ ಮಾಡಲಾಗುತ್ತದೆ. ಆದರೆ ನೀರು ಮಾತ್ರ ಮಧ್ಯದಲ್ಲೇ ನಿಂತುಹೋಗುತ್ತದೆ. ಪರಿಣಾಮ ಕಾಲುವೆಯ ಕೊನೆಯ ಭಾಗದ ನೂರಾರು ಗ್ರಾಮಗಳ ರೈತರು ಪ್ರತಿ ವರ್ಷ ನೀರು ಸಿಗದೇ ಪರದಾಡುವಂತಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!
ಕೃಷಿಗಾಗಿ ಕಾಲುವೆಯನ್ನೇ ನಂಬಿಕೊಂಡಿರುವ ರೈತರು ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುವಂತಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಇಂದು ನೀರು ಬರುತ್ತದೆ, ನಾಳೆ ನೀರು ಬರುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ನೀರು ಮಾತ್ರ ಕೊನೆಯ ಭಾಗದವರೆಗೆ ತಲುಪುವುದಿಲ್ಲ. ಹೀಗಾಗಿ ಕಾಲುವೆಯತ್ತ ರೈತರು ನೀರಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.
ಮೂಲ ಸಮಸ್ಯೆಗೆ ಸಿಗದ ಶಾಶ್ವತ ಪರಿಹಾರ
ಕಾಲುವೆ ನಿರ್ಮಾಣವಾಗಿ ಸುಮಾರು ಎರಡು ದಶಕಗಳು ಕಳೆದಿವೆ. ಈ ಅವಧಿಯಲ್ಲಿ ಹಲವು ಬಾರಿ ದುರಸ್ತಿ ಕಾಮಗಾರಿ ನಡೆದಿದ್ದರೂ ಮೂಲ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕೆಲವೆಡೆ ಕಾಲುವೆ ಒಡೆದು ಹೋಗಿರುವುದು ಮತ್ತೆ ಕೆಲವೆಡೆ ಹೂಳು ತುಂಬಿರುವುದು, ಇನ್ನೂ ಕೆಲವೆಡೆ ನೀರು ಸೋರುತ್ತಿದೆ. ಹೀಗಾಗಿ ಕೊನೆಯ ಭಾಗದ ರೈತರಿಗೆ ನೀರಾವರಿ ಸೌಲಭ್ಯ ದೊರೆಯುತ್ತಿಲ್ಲ. ಮಳೆ ಕೈಕೊಟ್ಟರೆ ಕಾರಂಜಾ ನೀರೇ ಆಧಾರ ಎಂದು ಭಾವಿಸಿದ್ದ ರೈತರು ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೋರ್‌ವೆಲ್‌ಗಳಲ್ಲೂ ನೀರಿನ ಮಟ್ಟ ಕುಸಿದಿರುವ ಕಾರಣ ಕಾಲುವೆಯ ನೀರಿನ ಮೇಲಿನ ಅವಲಂಬನೆ ಹೆಚ್ಚಾಗಿದೆ. ಆದರೆ ನೀರೇ ತಲುಪದ ಕಾರಣ ಬೆಳೆ ಬೆಳೆಯುವುದು ದುಸ್ತರವಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೇ ಜುಲೈ 19ರಂದು ನಡೆದ ರಾಜ್ಯ ಸಚಿವ ಸಂಪುಟದ ತುರ್ತು ಸಭೆಯಲ್ಲಿ ಕಾರಂಜಾ ಬಲದಂಡೆ ಕಾಲುವೆಯ ಸಮಗ್ರ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಈ ನಿರ್ಧಾರ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಕಾಲುವೆಯ ಸಂಪೂರ್ಣ ದುರಸ್ತಿ, ಕಾಂಕ್ರೀಟೀಕರಣ, ಸೋರಿಕೆ ತಡೆ ಹಾಗೂ ನೀರಿನ ಹರಿವಿಗೆ ಇರುವ ಅಡ್ಡಿಗಳನ್ನು ನಿವಾರಿಸಿದರೆ ಮಾತ್ರ ಕೊನೆಯ ಭಾಗದ ರೈತರಿಗೂ ನೀರು ತಲುಪಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ. ಪ್ರತಿ ವರ್ಷ ಕೇವಲ ತಾತ್ಕಾಲಿಕ ದುರಸ್ತಿಗೆ ಸೀಮಿತವಾಗದೆ, ಈ ಬಾರಿ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು. ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ರೈತ ಪ್ರವೀಣ ಹೇಳಿದ್ದಾರೆ.
ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸುವಂತೆ ಆಗ್ರಹ
ಕಾರಂಜಾ ಬಲದಂಡೆ ಕಾಲುವೆ ಸಮರ್ಪಕವಾಗಿ ದುರಸ್ತಿಯಾದರೆ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ರೈತರ ಬದುಕಿಗೆ ಹೊಸ ಚೈತನ್ಯ ಸಿಗಲಿದೆ. ಸರ್ಕಾರ ಘೋಷಿಸಿರುವ 181 ಕೋಟಿ ರೂ ಅನುದಾನ ಫಲಪ್ರದವಾಗಿ ಬಳಕೆಯಾಗಿ, ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಯಲಿ ಎಂಬುದು ಜಿಲ್ಲೆಯ ರೈತರ ಒಕ್ಕೊರಲಿನ ಆಗ್ರಹವಾಗಿದೆ.
ಇದನ್ನೂ ಓದಿ: ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!
ಒಟ್ಟಾರೆ ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿರುವ ಕಾರಂಜಾ ಬಲದಂಡೆ ಕಾಲುವೆಯ ರೈತರಿಗೆ 181 ಕೋಟಿ ರೂ ದುರಸ್ತಿ ಯೋಜನೆ ಹೊಸ ಭರವಸೆ ಮೂಡಿಸಿದೆ. ಆದರೆ ಈ ಭರವಸೆ ಮತ್ತೊಮ್ಮೆ ಭರವಸೆಯಾಗಿಯೇ ಉಳಿಯುತ್ತದೆಯೇ ಅಥವಾ ಕೊನೆಯ ಭಾಗದ ರೈತರ ಜಮೀನಿಗೆ ನೀರು ತಲುಪುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




