ಬೀದರ್: ಪತಿ ಸತ್ತ ನಂತರ ಪತ್ನಿಗೆ ವಿಮೆ ಮೊತ್ತ ನೀಡಲು ಸಬೂಬು ಹೇಳಿದ ಸರ್ಕಾರಿ ವಿಮಾ ಸಂಸ್ಥೆ! ಬಡ್ಡಿ ಸಮೇತ 20 ಲಕ್ಷ ರೂ ನೀಡುವಂತೆ ಝಾಡಿಸಿದ ಗ್ರಾಹಕ ನ್ಯಾಯಾಲಯ
ನಮ್ಮೆಜಮಾನ್ರು ಚಾಲ್ತಿಯಲ್ಲಿದ್ದ ತಮ್ಮ ಉಳಿತಾಯ ಖಾತೆಯಿಂದ ಕಾಲಕಾಲಕ್ಕೆ ವಿಮಾ ಬಾಬತ್ತಿಗೆ ಪ್ರೀಮಿಯಂ ಭರ್ತಿ ಮಾಡಿಕೊಳ್ಳುವಂತೆ ಸ್ವಯಂ ಆದೇಶ ಪತ್ರವೊಂದನ್ನು ಬ್ಯಾಂಕಿಗೆ ನೀಡಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಬ್ಯಾಂಕ್ ಒಪ್ಪಿಕೊಳ್ಳಬೇಕಿತ್ತು. ಆದರೆ SBI ಬ್ಯಾಂಕ್ ತನ್ನ ಹಿತಾಸಕ್ತಿ ಕಾಯ್ದುಕೊಳ್ಳಲು ಪ್ರೀಮಿಯಂ ಕಟ್ಟಿಲ್ಲ-ಪಾಲಿಸಿ ಶೂನ್ಯವಾಗಿದೆ. ತತ್ಫಲವಾಗಿ ನಿಗದಿತ ವಿಮಾ ಮೊತ್ತ ನೀಡಲು ಬರುವುದಿಲ್ಲ ಎಂದು ನಾಮಿನಿಯನ್ನು ಸಾಗಹಾಕಿದೆ.
ಬೀದರ್: ಸಣ್ಣ ಸಬೂಬು ಮುಂದಿಟ್ಟುಕೊಂಡು ಮಹಿಳೆಯೊಬ್ಬರಿಗೆ ಅವರ ಪತಿ ಮೃತ್ಯವಿನ ನಂತರ ಅರ್ಹವಾಗಿ ಸಲ್ಲಬೇಕಿದ್ದ ಭಾರಿ ಮೊತ್ತದ ಅಮೌಂಟ್ ನೀಡಲು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ನಿರಾಕರಿಸಿದೆ. ತಮ್ಮದಲ್ಲದ ತಪ್ಪಿಗೆ ಬರೋಬ್ಬರಿ ಮೂರು ವರ್ಷಗಳ ಕಾಲ ಆ ಅಸಹಾಯಕ ಮಹಿಳೆ ಪಡಿಪಾಟಲು ಅನುಭವಿಸಿದ ಬಳಿಕ, ಇದೀಗ ಜಿಲ್ಲಾ ಗ್ರಾಹಕ ನ್ಯಾಯಾಲಯವು ಬಡ್ಡಿ ಸಮೇತ, ಸಮಂಜಸ ಪರಿಹಾರದೊಂದಿಗೆ ಮೊದಲು ಆಕೆಗೆ ಸಲ್ಲಬೇಕಾದ ಅಷ್ಟೂ ಮೊತ್ತವನ್ನು ಪಾವತಿಸುವಂತೆ ಕೋರ್ಟ್ (District Consumer Disputes Redressal Commission, Bidar) ಝಾಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಇನ್ಶೂರೆನ್ಸ್ ಕಂಪನಿ (State Bank of India General Insurance Company Ltd) ಇಂತಹ ಬೇಜವಾಬ್ದಾರಿ ತೋರಿದ ಸಂಸ್ಥೆಯಾಗಿದೆ.
ಇದೆಲ್ಲಾ ಶುರವಾಗಿದ್ದು ಹೀಗೆ: 2018 ಡಿಸೆಂಬರ್ 22 ರ ಸಂಜೆ ಬೀದರ್ನ ಔರಾದ್ ನಿವಾಸಿ ಧನರಾಜ್ ಮಡಿವಾಳಪ್ಪ ಅವರು ಬೋರಲ್ ಗ್ರಾಮದಲ್ಲಿರುವ ಹೋಟೆಲಿನಲ್ಲಿ ಪತ್ನಿಯ ಜೊತೆ ಊಟ ತಿನ್ನುತ್ತಿದ್ದರು. ದುರಾದೃಷ್ಟದ ರೂಪದಲ್ಲಿ ಟ್ರಕ್ ವಾಹನವೊಂದು ಧುತ್ತನೆ ಇವರು ಕುಳಿತು ಊಟ ಮಾಡುತ್ತಿದ್ದ ಹೋಟೆಲಿಗೆ ನುಗ್ಗೇ ಬಿಟ್ಟಿದೆ. ಧನರಾಜ್ ಮಡಿವಾಳಪ್ಪ ಸ್ಥಳದಲ್ಲಿಯೆ ಅಸುನೀಗಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸಿ, ಕೇಸ್ ದಾಖಲಿಸಿದರು. ಇನ್ನು, ಧನರಾಜ್ ಪತ್ನಿ ಮಹಾದೇವಿ ಬದುಕುಳಿದಿದ್ದರು.
ಅದಾದ ಮೂರ್ನಾಲ್ಕು ತಿಂಗಳ ಬಳಿಕ ಮಹಾದೇವಿ ಅವರಿಗೆ ತಮ್ಮ ಪತಿ ಧನರಾಜ್ ಅದ್ಯಾವುದೋ ಅಪಘಾತ ವಿಮೆ ಮಾಡಿಸಿರುವ ಬಗ್ಗೆ ಹೇಳುತ್ತಿದ್ದುದು ಜ್ಞಾಪಕಕ್ಕೆ ಬಂದಿದೆ. ತಕ್ಷಣ ಮನೆಯೆಲ್ಲಾ ತಡಕಾಡಿದಾಗ SBI General Insurance personal accident policy ತೆಗೆದುಕೊಂಡಿರುವುದು ಪತ್ತೆಯಾಗಿದೆ. ವರ್ಷಕ್ಕೆ ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸುತ್ತಾ ಪಾಲಿಸಿ ತೆಗೆದುಕೊಂಡಿರುವುದು ಅವರ ಅರಿವೆಗೆ ಬಂದಿದೆ. ಬರಡಾದ ತನ್ನ ಬಾಳಿನಲ್ಲಿ ಹುಲ್ಲುಕಡ್ಡಿಯಾಸರೆಯಾಗಿ ತನ್ನ ಪತಿ ಮಾಡಿಸಿರುವ ಅಪಘಾತ ವಿಮೆ ಅವರ ಕೈಗೆಟುಕಿದೆ. ಮತ್ತು ಪ್ರಧಾನವಾಗಿ 2017 ಆಗಸ್ಟ್ 16 ರಿಂದ 2018 ಆಗಸ್ಟ್ 15 ವರೆಗೂ ಆ ವಿಮಾ ಪಾಲಿಸಿ ಚಾಲ್ತಿಯಲ್ಲಿರುವುದಾಗಿ ತಿಳಿದವರು ಆ ನಿಸ್ಸಹಾಯಕ ಮಹಿಳೆಗೆ ತಿಳಿಯ ಹೇಳಿದ್ದಾರೆ. ಆದರೆ ಆ ಘನಂದಾರಿ ವಿಮಾ ಸಂಸ್ಥೆ ಸಬೂಬು ಹೇಳಿ, ಆ ಅಸಾಹಯಕ ಮಹಿಳೆಯನ್ನು ಸಾಗಹಾಕಲು ಶಕ್ತಿಮೀರಿ ಪ್ರಯತ್ನಿಸಿದೆ.
ಸುರಕ್ಷೆ ಮತ್ತು ಭರವಸೆ -ಎರಡನ್ನೂ ಕಿತ್ತುಕೊಂಡ SBI Insurance, ಅದಕ್ಕೆ ಕೋರ್ಟ್ ಹೇಳಿದ್ದೇನು? ನಿರ್ಗತಿಕ ಕಾಲದಲ್ಲಿ ತನ್ನ ಪತಿಗೆ ನೆರವಾಗಲೆಂದು ಧನರಾಜ್ ಮಾಡಿಸಿದ್ದ ವಿಮಾ ಪಾಲಿಸಿ ಬಗ್ಗೆ ವಿಚಾರಿಸಲು ಮಹಾದೇವಿ ಅವರು ಚಿಟಗುಪ್ಪ ಶಾಖೆಗೆ ಹೋಗಿದ್ದಾರೆ. ಅಲ್ಲಿ ಉಳಿತಾಯ ಖಾತೆ ಜೊತೆಗೆ ಹೊಂದಿಸಿ, ತನ್ನ ಪತಿ 20 ಲಕ್ಷ ರೂಪಾಯಿ ಮೊತ್ತದ ವಿಮಾ ಪಾಲಿಸಿ ಮಾಡಿಸಿರುವುದು ಆಕೆಗೆ ದೃಢಪಟ್ಟಿದೆ. ಅದರೆ ಅಷ್ಟೊಂದು ಮೊತ್ತ ಕೊಡಬೇಕೆಂದು ಗಾಬರಿಗೆ ಬಿದ್ದ ಎಸ್ಬಿಐ ಸಂಸ್ಥೆ, ಸಕಾಲದಲ್ಲಿ ತನ್ನ ಗ್ರಾಹಕನಿಗೆ ನೆರವಾಗುವುದು ಬಿಟ್ಟು ಪಿಳ್ಳೆ ನೆವ ಹುಡುಕಿದೆ. ಧನರಾಜ್ ಅವರು ಮಾಡಿದ್ದ ತಪ್ಪು ಒಂದೇ… ಔರಾದ್ ಶಾಖೆಯಲ್ಲಿದ್ದ ತಮ್ಮ ಉಳಿತಾಯ ಖಾತೆಯನ್ನು ತಮಗೆ ಅನುಕೂಲವಾಗುವಂತೆ 2018ರಲ್ಲಿ ಔರಾದ್ ಶಾಖೆಗೆ ವರ್ಗಾಯಿಸಿದ್ದು. ಈ ಖಾತೆ ವರ್ಗಾವಣೆ ವೇಳೆ ಸ್ವತಃ ಎಸ್ಬಿಐ ವಿಮಾ ಸಂಸ್ಥೆಯೆ ಒಂದು ಎಡವಟ್ಟು ಮಾಡಿತು. ಖಾತೆ ಶಿಫ್ಟ್ ಆದ ಮೇಲೆ 2018ರ ಆಗಸ್ಟ್ ಬಳಿಕ ವಿಮಾ ಪಾಲಿಸಿದಾರರಾದ ಧನರಾಜ್ ಅವರು ಪ್ರೀಮಿಯಂ ತುಂಬಿಲ್ಲ. ಹಾಗಾಗಿ ಸದರಿ ಅವಧಿಯಲ್ಲಿ ಅದು ಶೂನ್ಯ (ಲ್ಯಾಪ್ಸ್) ಆಗಿದೆ ಎಂದು ಎಸ್ಬಿಐ ವಿಮಾ ಸಂಸ್ಥೆ ಅಲವತ್ತುಕೊಂಡಿದೆ.
ವಿಷಯ ಹಾಗಲ್ಲ; ನಮ್ಮೆಜಮಾನ್ರು ಚಾಲ್ತಿಯಲ್ಲಿದ್ದ ತಮ್ಮ ಉಳಿತಾಯ ಖಾತೆಯಿಂದ ಕಾಲಕಾಲಕ್ಕೆ ವಿಮಾ ಬಾಬತ್ತಿಗೆ ಪ್ರೀಮಿಯಂ ಭರ್ತಿ ಮಾಡಿಕೊಳ್ಳುವಂತೆ ಸ್ವಯಂ ಆದೇಶ ಪತ್ರವೊಂದನ್ನು (automatic debiting system) ಬ್ಯಾಂಕಿಗೆ ನೀಡಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಬ್ಯಾಂಕ್ ಒಪ್ಪಿಕೊಳ್ಳಬೇಕಿತ್ತು. ಆದರೆ SBI ಬ್ಯಾಂಕ್ ತನ್ನ ಹಿತಾಸಕ್ತಿ ಕಾಯ್ದುಕೊಳ್ಳಲು, ಹಾಗೇನೂ ಇಲ್ಲ, ಪ್ರೀಮಿಯಂ ಕಟ್ಟಿಲ್ಲ, ಪಾಲಿಸಿ ಶೂನ್ಯವಾಗಿದೆ. ತತ್ಫಲವಾಗಿ ನಿಗದಿತ ವಿಮಾ ಮೊತ್ತ ನೀಡಲು ಬರುವುದಿಲ್ಲ ಎಂದು ತನ್ನ ಪಾಲಿಸಿದಾರರ ನಾಮಿನಿಯನ್ನು ಸಾಗಹಾಕಿದೆ. ಇನ್ನು ತನ್ನ ಕೈಯಲ್ಲಿ ಓಡಾಡಲು ಆಗದು, ಕೋರ್ಟ್ ಮಧ್ಯ ಪ್ರವೇಶಿಸಲಿ ಎಂದು ಮಹಾದೇವಿ ಅವರು 2019ರ ಮಾರ್ಚ್ 5ರಂದು ಕೋರ್ಟ್ ಮೂಲಕ SBI ವಿಮಾ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ತಿರುವು ಪಡೆದ ಪ್ರಕರಣ: SBI ಬ್ಯಾಂಕ್ ಮತ್ತು ಅದರ ಅಧೀನ ವಿಮಾ ಸಂಸ್ಥೆ ಕಡೆಯಿಂದ ಸೇವಾ ನ್ಯೂನತೆಯಾಗಿದೆ ಎಂದು ಮಹಾದೇವಿ ಅವರು ಬೀದರ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮೊರೆಯಿಟ್ಟಿದ್ದಾರೆ. ಕೋರ್ಟ್ ವ್ಯವಹಾರ ಗೊತ್ತಲ್ಲಾ… ಬರೋಬ್ಬರಿ 3 ವರ್ಷ ಎಳೆದಿದೆ ಪ್ರಕರಣ. ಆದರೂ ಕೊನೆಗೆ ಮಹಾದೇವಿ ಅವರು ಸಮಾಧಾನದ ನಿಟ್ಟುಸಿರು ಬಿಡುವುದಕ್ಕೆ ಬೀದರ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನೆರವಾಗಿದೆ.
ಪ್ರೀಮಿಯಂ ಕಟ್ಟಿಲ್ಲ ಎಂಬುದು ಸಬೂಬು. SBI ಬ್ಯಾಂಕ್ ಕಡೆಯಿಂದ ಆಗಿರುವ ಸೇವಾ ನ್ಯೂನತೆ. ಅದನ್ನು ಸರಿಪಡಿಸಿಕೊಂಡು ಮಹಿಳೆಗೆ ಅರ್ಹವಾಗಿ ಸಲ್ಲಬೇಕಾದ ವಿಮಾ ಪರಿಹಾರವನ್ನು ತಕ್ಷಣ ಕೊಡಬೇಕು ಎಂದು ಕೋರ್ಟ್ ಗದರಿದೆ. 2022 ಏಪ್ರಿಲ್ 20 ರಂದು ಅಂತಿಮ ತೀರ್ಪು ನೀಡಿದ ಬೀದರ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಔರಾದ್ ಮತ್ತು ಚಿತಗುಪ್ಪ ಶಾಖಾ ಪ್ರಬಂಧಕರಿಂದ ತಪ್ಪಾಗಿದೆ ಎಂದು ಸಾರಿತು. ಹಾಗಾಗಿ ಇಬ್ಬರೂ ಸೇರಿ ಮಹಾದೇವಿ ಅವರಿಗೆ ಶೇ. 6 ರಂತೆ ಬಡ್ಡಿಯೊಂದಿಗೆ 20 ಲಕ್ಷ ರೂಪಾಯಿ ವಿಮಾ ಮೊತ್ತ, ಮಾನಸಿಕ ಕಿರುಕುಳ ಅನುಭವಿಸಿದ್ದಕ್ಕೆ 10 ಸಾವಿರ ರೂಪಾಯಿ ಜೊತೆಗಿರಲಿ ಎಂದು ಕೋರ್ಟ್ ವೆಚ್ಚವಾಗಿ 5 ಸಾವಿರ ರೂಪಾಯಿ ಒಟ್ಟು ಮೊತ್ತವನ್ನು 45 ದಿನಗಳಲ್ಲಿ ಪಾವತಿಸಬೇಕು ಎಂದು ಕೋರ್ಟ್ ತೀರ್ಪು ನೀಡಿದೆ. ನಿಶ್ಯಬ್ದ ಕೋರ್ಟ್ ಹಾಲ್ ನಲ್ಲಿ ತೀರ್ಪು ಹೊರಬೀಳುತ್ತಿದ್ದಂತೆ ಬಾಧಿತ ಮಹಾದೇವಿ ಅವರ ನಿಟ್ಟುಸಿರು ಕೋರ್ಟ್ನಲ್ಲಿದ್ದವರಿಗೆಲ್ಲಾ ಅಗತ್ಯಕ್ಕಿಂತ ಹೆಚ್ಚಾಗಿ ಕೇಳಿಬಂದಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಬಗ್ಗೆ ವಿವರವಾದ ವರದಿ ಪ್ರಕಟಿಸಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:05 pm, Sat, 7 May 22