ಕೇಂದ್ರದಿಂದ ಕನ್ನಡ ರಾಜ್ಯೋತ್ಸವ ಬಂಪರ್ ಕೊಡುಗೆ: ಕರ್ನಾಟಕಕ್ಕೆ 4,504 ಕೋಟಿ ತೆರಿಗೆ ಪಾಲು
ನರೇಂದ್ರ ಮೋದಿ ಸರ್ಕಾರವು ರಾಜ್ಯಗಳ ಆರ್ಥಿಕತೆಗೆ ಬಲ ತುಂಬಲು ಮಹತ್ವದ ಹೆಜ್ಜೆ ಇಟ್ಟಿದ್ದು, ನಿಯಮಿತ ಮಾಸಿಕ ತೆರಿಗೆ ಪಾಲು ಹಂಚಿಕೆಯ ಜತೆಗೆ ಹೆಚ್ಚುವರಿ ಕಂತಿನ ರೂಪದಲ್ಲಿ ಒಟ್ಟು 1.09 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಕೇಂದ್ರದ ಈ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂಪಾಯಿ ಹಂಚಿಕೆಯಾಗಿದೆ. ಇನ್ನು ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

ಬೆಂಗಳೂರು, (ನವೆಂಬರ್ 01): ಕೇಂದ್ರ ಸರ್ಕಾರವು ರಾಜ್ಯಗಳಿಗೆ 1.09 ಲಕ್ಷ ಕೋಟಿ ರೂ. ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ನೀಡುವ ತೆರಿಗೆ ಪಾಲಿನ ಜೊತೆಗೆ ಬಿಡುಗಡೆಯಾಗಿರುವ ಹೆಚ್ಚುವರಿ ಮೊತ್ತವಾಗಿದೆ. ಇದರಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂ. ಹಂಚಿಕೆಯಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬಲ ಸಿಕ್ಕಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ಹೆಚ್ಚುವರಿ ಕಂತಾಗಿದೆ.
ಕರ್ನಾಟಕಕ್ಕೆ ಕೇವಲ 4,504 ಕೋಟಿ ರೂ
ಬರದಿಂದ ತತ್ತರಿಸಿರುವ ಮಧ್ಯೆ ಕರ್ನಾಟಕಕ್ಕೆ ಬಿಡುಗಡೆಯಾಗಿರುವ 4,504 ಕೋಟಿ ರೂ. ಮೊತ್ತವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮೂಲಸೌಕರ್ಯ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಕೊರತೆಯಾಗದಂತೆ ವೇಗ ನೀಡಲು ಸಹಕಾರಿಯಾಗಲಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಶೇಕಡಾ 14.7 ರಷ್ಟು ಏರಿಕೆಯಾಗಿ 2.03 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದರಲ್ಲಿ ಕರ್ನಾಟಕವು ಶೇಕಡಾ 16 ರಷ್ಟು ಏರಿಕೆ ಕಂಡು 13,884 ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೂ ಸಹ ಉತ್ತರ ಪ್ರದೇಶ (19,208 ಕೋಟಿ ರೂ.) ಹಾಗೂ ಬಿಹಾರ (10,845 ಕೋಟಿ ರೂ.) ರಾಜ್ಯಗಳಿಗೆ ಅತಿ ಹೆಚ್ಚು ಮೊತ್ತವನ್ನು ನೀಡಲಾಗಿದೆ.
ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ ಎರಡು ಲಕ್ಷ ಕೋಟಿ ರೂ ದಾಟಿದ ಜಿಎಸ್‌ಟಿ ಸಂಗ್ರಹ; ಈ ವರ್ಷ ಇಲ್ಲಿಯವರೆಗೆ ಸಿಕ್ಕಿದ್ದು 12 ಲಕ್ಷ ಕೋಟಿಗೂ ಹೆಚ್ಚು
ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡನೇ ಕಂತು
ರಾಜ್ಯ ಸರ್ಕಾರಗಳಿಗೆ ಒಟ್ಟು 1,09,019 ಕೋಟಿ ರೂ. ತೆರಿಗೆ ಪಾಲನ್ನು ಬಿಡುಗಡೆ ಮಾಡಲಾಗಿದೆ. ನಿಯಮಿತ ಮಾಸಿಕ ಹಂಚಿಕೆಯ ಹೊರತಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ನೀಡುತ್ತಿರುವ 2ನೇ ಹೆಚ್ಚುವರಿ ಕಂತು ಇದಾಗಿದೆ. ಕಳೆದ ಆಗಸ್ಟ್‌ನಲ್ಲಿ 1.09 ಲಕ್ಷ ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಹಬ್ಬದ ಋತುವಿನಲ್ಲಿ ರಾಜ್ಯಗಳು ವಿವಿಧ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ನಿಧಿ ಕೊರತೆಯನ್ನು ನೀಗಿಸಲು ಈ ಮೊತ್ತವನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಗಣನೀಯವಾಗಿ ಸದೃಢಗೊಂಡಿರುವ ಆರ್ಥಿಕ ಚಟುವಟಿಕೆಗಳು ಹಾಗೂ ನಿರೀಕ್ಷೆಗಿಂತ ಉತ್ತಮವಾಗಿರುವ ತೆರಿಗೆ ಸಂಗ್ರಹದ ಪರಿಣಾಮವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡನೇ ಬಾರಿಗೆ ಹೆಚ್ಚುವರಿ ಕಂತಿನಡಿ ರಾಜ್ಯಗಳಿಗೆ ತೆರಿಗೆ ಪಾಲನ್ನು ಹಂಚಿಕೆ ಮಾಡಲಾಗಿದೆ. ಈ ಕ್ರಮವು ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಆರ್ಥಿಕ ಚೈತನ್ಯ ನೀಡಿದೆ.
ಯಾವ್ಯಾವ ರಾಜ್ಯಗಳಿಗೆ ಎಷ್ಟು?
1. ಉತ್ತರ ಪ್ರದೇಶ – 19,208 ಕೋಟಿ ರೂ. 2. ಬಿಹಾರ – 10,845 ಕೋಟಿ ರೂ. 3. ಮಧ್ಯಪ್ರದೇಶ – 8,010 ಕೋಟಿ ರೂ. 4. ಪಶ್ಚಿಮ ಬಂಗಾಳ – 7,866 ಕೋಟಿ ರೂ. 5. ಮಹಾರಾಷ್ಟ್ರ – 7,022 ಕೋಟಿ ರೂ. 6. ರಾಜಸ್ಥಾನ – 6,460 ಕೋಟಿ ರೂ. 7. ಒಡಿಶಾ – 4,819 ಕೋಟಿ ರೂ. 8. ಆಂಧ್ರಪ್ರದೇಶ – 4,597 ಕೋಟಿ ರೂ. 9. ಕರ್ನಾಟಕ – 4,504 ಕೋಟಿ ರೂ. 10. ತಮಿಳುನಾಡು – 4,466 ಕೋಟಿ ರೂ. 11. ಗುಜರಾತ್ – 4,094 ಕೋಟಿ ರೂ. 12. ಜಾರ್ಖಂಡ್ – 3,660 ಕೋಟಿ ರೂ. 13. ಛತ್ತೀಸ್‌ಗಢ – 3,602 ಕೋಟಿ ರೂ. 14. ಅಸ್ಸಾಂ – 3,552 ಕೋಟಿ ರೂ. 15. ಕೇರಳ – 2,597 ಕೋಟಿ ರೂ. 16. ತೆಲಂಗಾಣ – 2,370 ಕೋಟಿ ರೂ. 17. ಪಂಜಾಬ್ – 2,176 ಕೋಟಿ ರೂ. 18. ಹರಿಯಾಣ – 1,484 ಕೋಟಿ ರೂ. 19. ಅರುಣಾಚಲ ಪ್ರದೇಶ – 1,476 ಕೋಟಿ ರೂ. 20. ಉತ್ತರಾಖಂಡ – 1,244 ಕೋಟಿ ರೂ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:44 am, Sun, 1 November 26




