ಆತ್ಮಹತ್ಯೆಗೆ ಅವಕಾಶ ಕೊಡಿ ಎಂದ ಅನ್ವರ್ ಕುಟುಂಬಸ್ಥರು; ಗೃಹ ಸಚಿವರಿಗೆ ಮನವಿ ಕೊಡುತ್ತಲೇ ಚುರುಕುಗೊಂಡ ಸಿಐಡಿ ತನಿಖೆ!

ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷನ ಕೊಲೆ ರಾಜಾರೋಷವಾಗಿ ನಗರದ ಹೃದಯಭಾಗದಲ್ಲೂ ನಡೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಇಲ್ಲಿವರೆಗೂ ಯಶಸ್ಸು ಕಂಡಿಲ್ಲ.

ಆತ್ಮಹತ್ಯೆಗೆ ಅವಕಾಶ ಕೊಡಿ ಎಂದ ಅನ್ವರ್ ಕುಟುಂಬಸ್ಥರು; ಗೃಹ ಸಚಿವರಿಗೆ ಮನವಿ ಕೊಡುತ್ತಲೇ ಚುರುಕುಗೊಂಡ ಸಿಐಡಿ ತನಿಖೆ!
ಅನ್ವರ್​ ಕೊಲೆ ವಿಚಾರಣೆ ಮತ್ತೆ ಚುರುಕು
Follow us
TV9 Web
| Updated By: preethi shettigar

Updated on:Aug 23, 2021 | 8:01 AM

ಚಿಕ್ಕಮಗಳೂರು: ಕಾಫಿನಾಡನ್ನು ಬೆಚ್ಚಿಬೀಳಿಸಿದ ಬಿಜೆಪಿ ಮುಖಂಡ ಅನ್ವರ್ ಕೊಲೆಯಾಗಿ ಬರೋಬ್ಬರಿ 3 ವರ್ಷ 2 ತಿಂಗಳಾಯ್ತು. ಪ್ರಕರಣ ಭೇದಿಸುವ ಪೊಲೀಸರು ದಿನ-ವಾರ-ತಿಂಗಳು-ವರ್ಷ ಎಂದು ನೆಪ ಹೇಳುತ್ತಿದ್ದಾರೆ. ಇದರಿಂದ ಅನ್ವರ್ ಕುಟುಂಬಸ್ಥರು ಪೊಲೀಸ್ ಇಲಾಖೆ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಇದೇ ಆಗಸ್ಟ್ 15ರಂದು ಜಿಲ್ಲೆಗೆ ಬಂದಿದ್ದ ಗೃಹ ಸಚಿವರಿಗೆ ಕೊಲೆ ಮಾಡಿದ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಳ್ಳದಂತೆ ಭರವಸೆ ನೀಡಿದ ಸಚಿವರು, ಆರೋಪಿಗಳನ್ನು ಸದ್ಯದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಕಾಫಿನಾಡಿಗೆ ಆಗಮಿಸಿದ್ದು, ಮತ್ತೆ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

ಕೊಲೆ ಆಗಿದ್ದು ಯಾರು? ಅಂದು ಜೂನ್ 22, 2018. ರಾತ್ರಿ 9 ಗಂಟೆಯ ಸಮಯ, ಕಾಡ್ಗಿಚ್ಚಿನಂತೆ ಹರಡಿದ ಸುದ್ದಿ ತಿಳಿದು ಕಾಫಿನಾಡಿಗರು ಬೆಚ್ಚಿಬಿದ್ದಿದ್ದರು. ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಅನ್ವರ್ ಗೌರಿಕಾಲುವೆಯ ಗುಡ್‍ಮಾರ್ನಿಂಗ್ ಶಾಪ್ ಬಳಿ ಕೊಲೆಯಾಗಿದ್ದರು. ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಕೂಡ ಆಗಿದ್ದ ಅನ್ವರ್ ಅವರನ್ನು ದುಷ್ಕರ್ಮಿಗಳು ಡ್ರ್ಯಾಗನ್‍ನಿಂದ ದೇಹದ ಆರು ಕಡೆ ಚುಚ್ಚಿ ಕೊಲೆಗೈದಿದ್ದರು. ಜನನಿಬಿಡ ಪ್ರದೇಶದಲ್ಲೇ ಗುಂಪು ಕಟ್ಟಿಕೊಂಡು ಬಂದು ಅನ್ವರ್​ನನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಯಾವುದೇ ಭಯ, ಪೊಲೀಸರ ಹೆದರಿಕೆ ಇಲ್ಲದೇ ನಗರದ ಹೃದಯಭಾಗದಲ್ಲೇ ನಡೆದ ಬಿಜೆಪಿ ಮುಖಂಡನ ಕೊಲೆ ಆ ದಿನ ರಾತ್ರಿಯಿಡೀ ಕಾಫಿನಾಡಿಗರು ನಿದ್ದೆ ಮಾಡದಂತೆ ಮಾಡಿತ್ತು. ಕಾನೂನು-ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿತ್ತು. ಮರುದಿನ ಚಿಕ್ಕಮಗಳೂರಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ವೇಳೆ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿತ್ತು. ಆಗ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ, ಶಾಸಕರಾಗಿದ್ದ ಸಿ.ಟಿ ರವಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕೊಲೆಯಾದ ಅನ್ವರ್ ಅಂತಿಮ ದರ್ಶನ ಪಡೆದು ಆರೋಪಿಗಳ ಶೀಘ್ರ ಬಂಧನಕ್ಕೆ ಸರ್ಕಾರಕ್ಕೆ ಆಗ್ರಹಿಸಿದ್ದರು.

ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷನ ಕೊಲೆ ರಾಜಾರೋಷವಾಗಿ ನಗರದ ಹೃದಯಭಾಗದಲ್ಲೂ ನಡೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಇಲ್ಲಿವರೆಗೂ ಯಶಸ್ಸು ಕಂಡಿಲ್ಲ. ಅಂದಿನ ಎಸ್​ಪಿ ಅಣ್ಣಾಮಲೈ ಪರಿಸ್ಥಿತಿ ನಿಯಂತ್ರಿಸುವಲ್ಲಿ ಗೆದ್ದರು, ಆದರೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮಾತ್ರ ಸೋತರು. ತನಿಖೆ ನಡೆಯುತ್ತಿದೆ, ಅನುಮಾನ ಬಂದಿದೆ, ಗೊತ್ತಾಗಿದೆ, ಬಂಧಿಸ್ತಿವಿ ಎಂದು ಹೇಳುತ್ತಲೆ ವರ್ಗಾವಣೆಯಾದರು. ಕೊಲೆಗಾರರನ್ನು ಬಂಧಿಸಲೇ ಇಲ್ಲ. ಆಮೇಲೆ ಎರಡ್ಮೂರು ಎಸ್ಪಿಗಳು ಬಂದರೂ ಆರೋಪಿಗಳ ಸುಳಿವೇ ಸಿಗಲಿಲ್ಲ. ಆರೋಪಿಗಳನ್ನು ಬಂಧಿಸುವಂತೆ ಅನೇಕ ಪ್ರತಿಭಟನೆಗಳನ್ನು ನಡೆಸಲಾಯಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ವರ್ಷ ಕಳೆದರೂ ಆರೋಪಿಗಳ ಸುಳಿವಿಲ್ಲ, ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಅನ್ವರ್ ಕೊಲೆಯಾಗಿ ಒಂದು ವರ್ಷವಾದರೂ ಆರೋಪಿಗಳ ಪತ್ತೆ ಸಾಧ್ಯವಾಗದಿದ್ದಾಗ, ಮೃತ ಅನ್ವರ್ ಕುಟುಂಬಸ್ಥರು ಮತ್ತೆ ಧರಣಿಗೆ ಮುಂದಾದರು. ಆರೋಪಿಗಳನ್ನು ಬಂಧಿಸುವಂತೆ ಚಿಕ್ಕಮಗಳೂರು ನಗರದ ಗಾಂಧಿ ಪ್ರತಿಮೆ ಎದುರು ಕುಟುಂಬಸ್ಥರು ಉಪವಾಸ ನಡೆಸಿದರು. ಮೃತ ಅನ್ವರ್ ಕುಟುಂಬಸ್ಥರು ನಡೆಸಿದ ಪ್ರತಿಭಟನೆಗೆ ಬಿಜೆಪಿ ಪಕ್ಷ ಸಾಥ್ ನೀಡಿತ್ತು. ಸಿಬಿಐಗೆ ಪ್ರಕರಣವನ್ನು ಹಸ್ತಾಂತರ ಮಾಡುವಂತೆ ಪಟ್ಟು ಹಿಡಿದು ಧರಣಿ ನಡೆಸಲಾಯಿತು. ಕೊನೆಗೆ ಜಿಲ್ಲಾಡಳಿತದಿಂದ ಸ್ಪಂದನೆ ಸಿಕ್ಕಿದ ಬಳಿಕ ಉಪವಾಸ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆಯಲಾಯಿತು. ಬದಲಾದ ರಾಜಕೀಯದಾಟದಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದರು. ಆ ವೇಳೆ ಬಿಎಸ್​ವೈ ಅವರನ್ನು ಭೇಟಿ ಮಾಡಿದ ಮೃತ ಅನ್ವರ್ ಕುಟುಂಬಕ್ಕೆ ಸ್ಪಂದನೆ ನೀಡಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು ಎಂದು ಭರವಸೆ ನೀಡಿದರು. ಕೆಲ ದಿನಗಳ ಬಳಿಕ ಪ್ರಕರಣ ಸಿಐಡಿಗೆ ಹಸ್ತಾಂತರ ಕೂಡ ಆಯಿತು.

ಆತ್ಮಹತ್ಯೆಗೆ ಅವಕಾಶ ಮಾಡಿಕೊಡುವಂತೆ ಕುಟುಂಬಸ್ಥರ ಮನವಿ! 2019ರಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪಟ್ಟು ಹಿಡಿದಾಗ ಅನ್ವರ್ ಕೊಲೆ ಪ್ರಕರಣ ಸಿಐಡಿಗೆ ಹಸ್ತಾಂತರವಾಯಿತು. ಇಷ್ಟಾದರೂ ಪ್ರಕರಣದಲ್ಲಿ ಯಾವುದೇ ಮಹತ್ವದ ಬೆಳವಣಿಗೆಗಳು ನಡೆಯದಿದ್ದರಿಂದ ಮೊನ್ನೆ ಗೃಹ ಮಂತ್ರಿಗಳು ಚಿಕ್ಕಮಗಳೂರಿಗೆ ಆಗಮಿಸಿದ ವೇಳೆ ಅನ್ವರ್ ಕುಟುಂಬದ ಸದಸ್ಯರು ಸಚಿವರನ್ನು ಭೇಟಿ ಮಾಡಿದರು. ಆರೋಪಿಗಳ ಬಂಧನವಾಗುತ್ತಿಲ್ಲ. ನಾವು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಲ್ಳುತ್ತೀವಿ. ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಈ ವೇಳೆ ಮೃತ ಅನ್ವರ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಗೃಹ ಮಂತ್ರಿ ಆರಗ ಜ್ಞಾನೇಂದ್ರ, ಪ್ರಕರಣವನ್ನು ಚುರುಕುಗೊಳಿಸಲು ಸಿಐಡಿಗೆ ಸೂಚಿಸುವುದಾಗಿ ತಿಳಿಸಿದರು.

ಕಾಫಿನಾಡಿಗೆ ಆಗಮಿಸಿದ ಸಿಐಡಿ ಅಧಿಕಾರಿಗಳು, ಮತ್ತೆ ಪ್ರಕರಣದ ತನಿಖೆ ಚುರುಕು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಚಿಕ್ಕಮಗಳೂರಿಗೆ ಬಂದು ಬೆಂಗಳೂರಿಗೆ ವಾಪಸ್ ಹೋದರು. ಈ ವೇಳೆ ಬೆಂಗಳೂರಿನಿಂದ ಕಾಫಿನಾಡಿಗೆ ಸಿಐಡಿ ತಂಡಬಂದಿದ್ದು, ಪ್ರಕರಣದಲ್ಲಿ ಅನುಮಾನವಿರುವ ಹಲವು ವ್ಯಕ್ತಿಗಳನ್ನು ಕರೆದು ವಿಚಾರಣೆ ನಡೆಸುತ್ತಿದೆ. ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ನಗರದಲ್ಲೇ ಮೊಕ್ಕಾಂ ಹೂಡಿರುವ ಸಿಐಡಿ ಅಧಿಕಾರಿಗಳು ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ. ಇನ್ನೂ ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಮೃತ ಅನ್ವರ್ ಪುತ್ರ ಮೊಹಜ್, ನನ್ನ ತಂದೆಯ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಲಿ, ನ್ಯಾಯ ಕೊಡಿಸಲಿ ಎಮದು ಮನವಿ ಮಾಡಿಕೊಂಡಿದ್ದಾರೆ.

ಮೃತ ಅನ್ವರ್ ಸಹೋದರ ಕಬೀರ್ ಮಾತನಾಡಿ, ಮೂರು ವರ್ಷವಾದರೂ ಆರೋಪಿಗಳ ಬಂಧನವಾಗಿಲ್ಲ. ನಾವು ಭರವಸೆಯನ್ನೇ ಕಳೆದುಕೊಂಡಿದ್ವಿ, ಆದರೆ ಮೊನ್ನೆ ಜಿಲ್ಲೆಗೆ ಬಂದಿದ್ದ ಗೃಹ ಸಚಿವರ ಮಾತಿನಿಂದ ಆಶಾಭಾವನೆ ಮೂಡಿದ್ದು, ಆರೋಪಿಗಳ ಬಂಧನವಾಗುವ ವಿಶ್ವಾಸವಿದೆ ಎಂದಿದ್ದಾರೆ. ಅದೇನೆ ಇರಲಿ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಜಿಲ್ಲಾ ಬಿಜೆಪಿಯ ಅಲ್ಪಸಂಖ್ಯಾತ ಮುಖಂಡನ ಕೊಲೆ ಪ್ರಕರಣವನ್ನು ಭೇದಿಸಲು ಸಾಧ್ಯವಾಗದಿದ್ದಕ್ಕೆ ಸರ್ಕಾರ-ಪೊಲೀಸ್ ಇಲಾಖೆ, ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿರುವುದಂತು ಸತ್ಯ.

ವರದಿ: ಪ್ರಶಾಂತ್

ಇದನ್ನೂ ಓದಿ: ಟಿಎಂಸಿ ನಾಯಕರ ಬಂಧನದ ಬೆನ್ನಲ್ಲೇ ಸಿಬಿಐ ಕಚೇರಿಯೆದುರು ಕಲ್ಲುತೂರಾಟ ನಡೆಸುತ್ತಿರುವ ಕಾರ್ಯಕರ್ತರು; ದೀದಿ ವಿರುದ್ಧ ದೂರು ದಾಖಲು

ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣಾಧೀನ ಗಾಯಾಳು ಖೈದಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು

Published On - 7:52 am, Sat, 21 August 21