ನೂರು ವರ್ಷದ ಇತಿಹಾಸ ಹೊಂದಿದ ಪಾಪಸ್ ಕಳ್ಳಿ; ಗಿನ್ನಿಸ್ ರೆಕಾರ್ಡ್ ಸೇರುವ ಹೊಸ್ತಿಲಲ್ಲಿ ವಿದೇಶಿ ಗಿಡ
ಸೀರಿಸ್ ನೈಟ್ ಬ್ಲೂಂ ಕ್ಯಾಕ್ಟಸ್ ಅಥವಾ ಪಾಪಸ್ ಕಳ್ಳಿ ಗಿಡ ನಮ್ಮಲ್ಲಿ ಹೆಚ್ಚು ಕಾಣಸಿಗುವುದಿಲ್ಲ. ಈ ಗಿಡ ವಿದೇಶದಲ್ಲಿ ಹೆಚ್ಚು ಬೆಳೆಯುತ್ತದೆ. ಆದರೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದ ಅಮರನಾಥ್ ಎಂಬುವವರ ಮನೆಯಲ್ಲಿ 40 ಅಡಿ ಎತ್ತರ, 38 ಅಡಿ ಅಗಲವಿರುವ ಪಾಪಸ್ ಕಳ್ಳಿ ಗಿಡ ಇದೆ. ಬೃಹತ್ತಾಕಾರದಲ್ಲಿ ಬೆಳೆದುಕೊಂಡಿರುವ ಈ ಗಿಡದ ಆಯಸ್ಸು ಬರೋಬ್ಬರಿ 100 ವರ್ಷ.
ಚಿಕ್ಕಮಗಳೂರು: ಪ್ರಕೃತಿಯ ವೈಚಿತ್ರ್ಯವೇ ಹಾಗೆ. ಇಲ್ಲಿನ ಅದೆಷ್ಟೋ ಕಾರಣಗಳಿಗೆ ಸತ್ಯ ಹುಡುಕ ಹೊರಟರೆ ಸೋಲು ಕಟ್ಟಿಟ್ಟ ಬುತ್ತಿ. ಪ್ರಕೃತಿ ಮುಂದೆ ಮನುಷ್ಯ ತಲೆತಗ್ಗಿಸಿ ನಿಲ್ಲಲೇಬೇಕು. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 100 ವರ್ಷದ ಪಾಪಸ್ ಕಳ್ಳಿ ಗೋಚರವಾಗಿದೆ. ಇದು ಉತ್ತರ ಅಮೆರಿಕಾ, ಬ್ರೆಜಿಲ್‍ನಂತಹ ವಿದೇಶದಲ್ಲಿ ಬೆಳೆಯುವ ಗಿಡ. ಅಲ್ಲೇ ಹೆಚ್ಚೆಂದರೆ 10 ರಿಂದ 15 ಅಡಿ ಬೆಳೆಯುತ್ತದೆ. ಈ ಗಿಡ ಬೆಳೆಯುವುದು ಬಹುತೇಕ ಮರಳುಗಾಡಲ್ಲಿ. ಆದರೆ ಕಾಫಿನಾಡಲ್ಲಿ ಬೆಳೆದಿರುವ ಈ ವಿದೇಶಿ ಗಿಡ ಗಿನ್ನಿಸ್ ರೆಕಾರ್ಡ್ ಸೇರುವ ಹೊಸ್ತಿಲಲ್ಲಿದೆ. ಅದರ ಉದ್ದ-ಅಗಲ ನೋಡಿದರೆ ಇದೇನು ಗಿಡವೋ-ಮರವೋ ಎನ್ನುವಂತಾಗಿದೆ.
ಸೀರಿಸ್ ನೈಟ್ ಬ್ಲೂಂ ಕ್ಯಾಕ್ಟಸ್ ಅಥವಾ ಪಾಪಸ್ ಕಳ್ಳಿ ಗಿಡ ನಮ್ಮಲ್ಲಿ ಹೆಚ್ಚು ಕಾಣಸಿಗುವುದಿಲ್ಲ. ಈ ಗಿಡ ವಿದೇಶದಲ್ಲಿ ಹೆಚ್ಚು ಬೆಳೆಯುತ್ತದೆ. ಆದರೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದ ಅಮರನಾಥ್ ಎಂಬುವವರ ಮನೆಯಲ್ಲಿ 40 ಅಡಿ ಎತ್ತರ, 38 ಅಡಿ ಅಗಲವಿರುವ ಪಾಪಸ್ ಕಳ್ಳಿ ಗಿಡ ಇದೆ. ಬೃಹತ್ತಾಕಾರದಲ್ಲಿ ಬೆಳೆದುಕೊಂಡಿರುವ ಈ ಗಿಡದ ಆಯಸ್ಸು ಬರೋಬ್ಬರಿ 100 ವರ್ಷ.
ಎಲ್ಲಾ ಹೂವಿನ ಗಿಡಗಳು ಬೆಳಗ್ಗೆ ಅರಳಿ ಸಂಜೆಗೆ ಬಾಡಿ ಹೋದರೆ, ಈ ಗಿಡದ ಹೂ ರಾತ್ರಿ ಅರಳಿ ಬೆಳಗ್ಗೆಗೆ ಬಾಡಿ ಹೋಗುತ್ತದೆ. ಬ್ರಹ್ಮ ಕಮಲದಂತೆ ಇರುವ ಈ ಹೂ ಇಡೀ ಮರದ ತುಂಬಾ ಅರಳಿ ನಿಂತಾಗ ನೋಡುವುದೇ ಒಂದು ಚೆಂದ. ಹಾಗಾಗಿ, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲ ಗಿನ್ನಿಸ್ ರೆಕಾರ್ಡ್‍ಗೆ ಬರೆದಿದ್ದಾರೆ ಎಂದು ಪಾಪಸ್ ಕಳ್ಳಿ ಗಿಡ ಪೋಷಿಸುತ್ತಿರುವ ಅಮರ್ನಾಥ್ ಹೇಳಿದ್ದಾರೆ.
ಮನೆಗೂ 100 ವರ್ಷಗಳ ಇತಿಹಾಸ ಕೇವಲ ಗಿಡವಷ್ಟೆ ಅಲ್ಲ. ಅಮರ್ನಾಥ್ ವಾಸಿಸುತ್ತಿರುವ ಮನೆಗೂ 100 ವರ್ಷಗಳ ಇತಿಹಾಸವಿದೆ. 1920ನೇ ಇಸವಿಯಲ್ಲಿ ಬ್ರಿಟಿಷರಿಂದ ಕೊಂಡ ಮನೆ ಇದು. ಈ ಮನೆಯಲ್ಲಿ ಅಂದು ಬ್ರಿಟಿಷರು ಬಳಸುತ್ತಿದ್ದ ವಸ್ತುಗಳು ಇಂದಿಗೂ ಬಳಕೆಯಲ್ಲಿವೆ. ಈ ಮನೆ ಕೊಂಡಾಗ ಈ ಗಿಡ ಮೂರ್ನಾಲ್ಕು ವರ್ಷದ್ದಾಗಿತ್ತು. ಸಣ್ಣ ಗಿಡವಾಗಿತ್ತು. ಬೆಳೆಯುತ್ತಾ ಬೆಳೆಯುತ್ತಾ ಇಂದು ಗಿಡ ಹೆಮ್ಮಾರವಾಗಿ ಬೆಳೆದಿದೆ. ಈ ಗಿಡ ಕಾಫಿನಾಡಿನ ವಾತಾವರಣದಲ್ಲಿ ಬೆಳೆಯುವುದು ತೀರಾ ವಿರಳ. ಯಾಕೆಂದರೆ, ಮರಳುಗಾಡಲ್ಲಿ ಬೆಳೆಯುವ ಪಾಪಸ್ ಕಳ್ಳಿ ಗಿಡ ಹೀಗೆ ಮಲೆನಾಡಲ್ಲೂ ಮರದಂತೆ ಬೆಳೆದಿರುವುದು ನೋಡುಗರನ್ನು ಚಕಿತಗೊಳಿಸಿದೆ.
ಅಮರ್ನಾಥ್ ಕೂಡ ಈ ಗಿಡವನ್ನು ರಕ್ಷಿಸಿಕೊಂಡು ಪೋಷಿಸಿಕೊಂಡು ಬಂದಿದ್ದಾರೆ. ಈ ಗಿಡಕ್ಕೆ ವಿಶೇಷವಾದ ಆರೈಕೆಯನ್ನೇನು ಮಾಡಿಲ್ಲ. ನೀರು-ಸಗಣಿ ಗೊಬ್ಬರ ಹೊರತು ಪಡಿಸಿ ಬೇರೇನೂ ಹಾಕಿಲ್ಲ. ಮಲೆನಾಡ ಮಣ್ಣಿನ ಶಕ್ತಿಯೋ ಅಥವ ಸಗಣಿಯ ಶಕ್ತಿಯ ಗೊತ್ತಿಲ್ಲ. ಎಲ್ಲೂ ಹೀಗೆ ಮರದಂತೆ ಬೆಳೆಯದ ಈ ಗಿಡ ಕಾಫಿನಾಡ ಮಣ್ಣಲ್ಲಿ ಬೆಳೆದು ನಿಂತಿದೆ. ಈ ಮರವನ್ನು ಈ ಮನೆಯ ಏಳನೇ ಜನರೇಷನ್ ಜನ ನೋಡುತ್ತಿದ್ದಾರೆ ಎಂದು ಪಾಪಸ್ ಕಳ್ಳಿ ಗಿಡ ಪೋಷಿಸುತ್ತಿರುವ ಅಮರ್ನಾಥ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ, ಮರಳುಗಾಡಲ್ಲಿ ಮಾತ್ರ ಹೆಚ್ಚಾಗಿ ಬೆಳೆಯುವ ಪಾಪಸ್ ಕಳ್ಳಿ ಮಲೆನಾಡಲ್ಲಿ ಹೀಗೆ ಹೆಮ್ಮಾರವಾಗಿ ಬೆಳೆದಿರುವುದು ನಿಜಕ್ಕೂ ಪ್ರಕೃತಿಯ ವೈಚಿತ್ರ್ಯವೇ ಸರಿ. ಅದರಲ್ಲೂ ಮಲ್ಲಂದೂರು ಗ್ರಾಮ ಯತೇಚ್ಛವಾಗಿ ಮಳೆ ಬೀಳುವ ಪ್ರದೇಶ. ಇಂತಹ ಜಾಗದಲ್ಲಿ ಅಂತಹ ಗಿಡ ಹೀಗೆ ಹೆಮ್ಮರವಾಗಿ ಬೆಳೆದಿರುವುದು ನಿಜಕ್ಕೂ ಮಲೆನಾಡ ಶಕ್ತಿಯೇ ಸರಿ. ಗಿಡ ಬೆಳೆದಿರುವುದು ಎಷ್ಟು ಮುಖ್ಯವೋ ಅದನ್ನು ಫೋಷಿಸಿಕೊಂಡು ಬರುತ್ತಿರುವುದು ಅಷ್ಟೆ ಮುಖ್ಯ. ಈ ಪಾಪಸ್ ಕಳ್ಳಿ ಗಿಡ ಜೊತೆ ಗಿನ್ನಿಸ್ ರೆಕಾರ್ಡ್ ಬುಕ್ಕಲ್ಲಿ ಕಾಫಿನಾಡ ಹೆಸರೂ ಸೇರಲಿ ಎನ್ನುವುದು ಕಾಫಿನಾಡಿಗರ ಬಯಕೆ.
ವರದಿ: ಪ್ರಶಾಂತ್
ಇದನ್ನೂ ಓದಿ: ಮನೆಯಲ್ಲಿ ನೆಮ್ಮದಿ ಮತ್ತು ಆರೋಗ್ಯ ತುಂಬಿರಲು ಈ ಗಿಡಗಳನ್ನು ನೆಡುವುದು ಸೂಕ್ತ
ಕುರುಡುಮಲೆ ಗ್ರಾಮದಲ್ಲಿ ಸಿಗುತ್ತೆ ಚಿನ್ನದ ನಾಣ್ಯ; ಮೂರು ಯುಗದ ಇತಿಹಾಸ ಹೇಳುವ ಈ ಸ್ಥಳದಲ್ಲಿದೆ ಒಂದು ವಿಶಿಷ್ಟ ನಂಬಿಕೆ