ಕೋಟಿ ಹಣದ ಕನಸಲ್ಲಿ ಮಾಜಿ ಶಾಸಕನ ಮನೆಗೆ ಕನ್ನ; 12 ಗಂಟೆಯಲ್ಲಿ ಆರೋಪಿಗಳನ್ನ ಹೆಡೆಮುರಿ ಕಟ್ಟಿದ ಪೊಲೀಸರು
ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಚುನಾವಣಾ ಕಣದಲ್ಲಿ ಕೋಟಿ, ಕೋಟಿ ಹಣದ ಹೊಳೆಯು ಹರಿಯುತ್ತಿದೆ. ಹೊಡೆದರೆ ಕೋಟಿ ಹೊಡಿಬೇಕು, ಒನ್ ಟೈಮ್ ಲೈಫ್ ಸೆಟಲ್ ಆಗುವ ಲೆಕ್ಕಚಾರದಲ್ಲಿದ್ದ 15 ಜನರ ತಂಡ ಪ್ಲಾನ್ ಮಾಡಿತ್ತು. ಎಲೆಕ್ಷನ್ ಫಂಡಿಂಗ್ ದುಡ್ಡು ಕೋಟಿ ಲೆಕ್ಕದಲ್ಲಿ ಮನೆಯಲ್ಲಿ ಇಟ್ಟಿದ್ದಾರೆ ಎಂದು ಮಾಜಿ ಶಾಸಕನ ಮನೆಗೆ ದರೋಡೆ ಮಾಡಿತ್ತು. ಇದೀಗ ಕಿರಾತಕರು ಕೋಟಿ ಲೂಟಿ ಮಾಡಲು ಬಂದು ಜೈಲು ಸೇರಿದ್ದಾರೆ.
ಚಿಕ್ಕಮಗಳೂರು: ಅದು ಮಾಜಿ ಕಾಂಗ್ರೆಸ್(Congress) ಶಾಸಕನ ಒಂಟಿ ಮನೆ, ಚುನಾವಣೆ ಸಮಯ ಬೇರೆ. ಕೋಟಿ ಲೆಕ್ಕದಲ್ಲಿ ಮನೆಯಲ್ಲಿ ಹಣ ಇಟ್ಟಿರಬಹುದು ಎಂಬ ಲೆಕ್ಕಚಾರದಲ್ಲಿ ಒಂಟಿ ಮನೆ ದರೋಡೆ ಮಾಡಲು 15 ಜನರ ತಂಡ ಪಕ್ಕಾ ಪ್ಲಾನ್ ಮಾಡಿತ್ತು. ಹೌದು ಜಿಲ್ಲೆಯ ಅಜ್ಜಂಪುರ (Ajjampur) ತಾಲೂಕಿನ ಗಡಿಹಳ್ಳಿ ಸಮೀಪದ ಕಾಂಗ್ರೆಸ್ ಮಾಜಿ ಶಾಸಕ ಎಸ್. ಎಂ ನಾಗರಾಜ್(SM Nagaraj) ಮನೆಗೆ ರಾತ್ರೋರಾತ್ರಿ 15 ಜನರ ಟೀಮ್ ದರೋಡೆಗೆ ಬಂದಿತ್ತು. ಕೈಯಲ್ಲಿ ಲಾಂಗ್, ಮಚ್ಚು ಹಿಡಿದು ಬಂದವರು ಮನೆಯಲ್ಲಿದ್ದವರ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆಗೂ ಯತ್ನಿಸಿತ್ತು. ಮನೆಯ ಇಂಚಿಂಚು ಜಾಗವನ್ನು ಕೋಟಿ ಹಣಕ್ಕಾಗಿ ತಡಕಾಡಿತ್ತು. ಕೊನೆಗೆ ಸಿಕ್ಕ 43,33,500 ಲಕ್ಷ ಮೌಲ್ಯದ 980 ಗ್ರಾಂ ಚಿನ್ನ ,ಬೆಳ್ಳಿ 75 ಸಾವಿರ ಹಣದ ಜೊತೆಗೆ ಎಸ್ಕೇಪ್ ಆಗಿತ್ತು.
ಹೊರ ಜಿಲ್ಲೆಗಳಿಂದ ಯುವಕರನ್ನ ಕರೆಯಿಸಿ ಪ್ಲಾನ್
ತರೀಕೆರೆ ಕ್ಷೇತ್ರದ ಮಾಜಿ ಶಾಸಕರಾದ ಎಸ್.ಎಮ್ ನಾಗರಾಜ್ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಗೆ ಬೆಂಬಲವನ್ನ ಸೂಚಿಸಿದ್ರು. ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಚುನಾವಣಾ ಖರ್ಚಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಎಸ್.ಎಂ ನಾಗರಾಜ್ ಅವರ ಮನೆಯಲ್ಲಿ ಇರಿಸಲಾಗಿದೆ ಎಂಬ ಡೌಟ್ ಮೇಲೆ ಮನೆಯನ್ನ ದರೋಡೆ ಮಾಡಲು ಪ್ಲಾನ್ ರೂಪಿಸಿದ್ರು. ಅಜ್ಜಂಪುರ ತಾಲೂಕಿನ ದಿನೇಶ್, ನಾಗೇಂದ್ರ ಸ್ಕೆಚ್ ರೂಪಿಸಿ ಪಕ್ಕದ ಜಿಲ್ಲೆ ಶಿವಮೊಗ್ಗ, ಚಿತ್ರದುರ್ಗ ಮೂಲದ ಧನಂಜಯ್,ಗೋಪಿನಾಥ್, ಮೂರ್ತಿ ಜೊತೆಗೆ 15 ಜನರ ತಂಡ ರಚಿಸಿ ಕೋಟಿ ಹಣದ ದರೋಡೆ ಮಾಡುವ ಪ್ಲಾನ್ ಮಾಡಿದ್ದರು.
ಇದನ್ನೂ ಓದಿ:ಬೆಂಗಳೂರು: ವೀಲಿಂಗ್ ಮಾಡಲು ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳ ಕಳ್ಳತನ: ಡಿಯೋ ಬೈಕ್ ಟಾರ್ಗೆಟ್
ಕೃತ್ಯ ನಡೆದ 12 ಗಂಟೆಯಲ್ಲಿ ಬಂಧಿಸಿದ ಪೊಲೀಸರು
ಕೋಟಿ ಹಣದ ಆಸೆಗೆ ಬಿದ್ದು ಮನೆ ದರೋಡೆಗೆ ಬಂದಿದ್ದ ದಿನೇಶ್, ಮೂರ್ತಿ, ಗೋಪಿನಾಥ್, ನಾಗೇಂದ್ರ, ಧನಂಜಯ್ನನ್ನ ಅಜ್ಜಂಪುರ ಪೊಲೀಸರು ಕೃತ್ಯ ನಡೆದ 12 ಗಂಟೆಯಲ್ಲಿ ಬಂಧಿಸಿ ಇನ್ನುಳಿದ 10 ಜನರ ಬಂಧನಕ್ಕೆ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ವಿಶೇಷ ತಂಡ ರಚನೆ ಮಾಡಿದ್ದಾರೆ. ಒನ್ ಟೈಮ್ ಲೈಫ್ ಸೆಟಲ್ ಆಗುವ ಆಸೆಯಿಂದ ಕೋಟಿ ದುಡ್ಡಿನ ಕನಸಿನಲ್ಲಿ ಮಾಜಿ ಶಾಸಕನ ಮನೆ ಲೂಟಿಗೆ ಬಂದು ಜೈಲಿನ ದಾರಿ ತುಳಿಯುವಂತಾಗಿದೆ.
ವರದಿ: ಅಶ್ವಿತ್ ಟಿವಿ9 ಚಿಕ್ಕಮಗಳೂರು
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ