ಯಾರ್ಯಾರು ಎಂತೆಂತಹ ಕೆಲಸ ಮಾಡ್ತಿದ್ದಾರೆ ಅಂತ ದಾಖಲೆ ಇದೆ: ಕುಮಾರಸ್ವಾಮಿಗೆ ಸಿಎಂ ನೇರಾ ನೇರ ತಿರುಗೇಟು
ನೈಸ್ ಯೋಜನೆ ಹಾಗೂ ಟೋಲ್ ಸಂಗ್ರಹದ ಸಂಬಂಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, RTI ದಾಖಲೆಗಳ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಅಕ್ರಮಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿರುವ HDK, ನೈಸ್ ಅಕ್ರಮಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದು ಜೊತೆಗೆ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೀಗ ಇದಕ್ಕೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ಕುಮಾರಸ್ವಾಮಿ ಆರೋಪಿಗಳಿಗೆ ನೇರಾ ನೇರ ತಿರುಗೇಟು ನೀಡಿದ್ದಾರೆ.

ನವದೆಹಲಿ, (ಅಕ್ಟೋಬರ್ 8): ನೈಸ್ ಯೋಜನೆ ಸಂಬಂಧ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಮಾತು ಎತ್ತಿದ್ರೆ, ನೈಸ್ ನೈಸ್ ನೈಸ್ ಅಂತಾ ಹೇಳ್ತಾರೆ. ಇದು ಯಾವ ನೈಸ್ ಅಲ್ಲ ಪಾಪದ ಕೂಸು ಆಗಿದೆ. ನಾನು ಅಲ್ಲಿ ಇಲ್ಲಿ ಮಾತನಾಡಲ್ಲ. ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ. ಯಾವುದಾದ್ರೂ ಅಸೆಂಬ್ಲಿಯಲ್ಲಿ ಉತ್ತರ ಕೊಡುತ್ತೇನೆ, ಎಲ್ಲವನ್ನೂ ಬಿಚ್ಚಿಡುತ್ತೇನೆ. ಯಾರ ಹೆಗಲಿಗೆ ಬರುತ್ತದೆ ಅಂತಾ ಕಾಲ ನಿರ್ಣಯ ಮಾಡುತ್ತೆ. ಯಾರು ಏನು ಮಾಡಿದ್ದಾರೆ ಅಂತ ನನ್ನ ಬಳಿಯೂ ದಾಖಲೆ ಇದೆ ಎಂದು ನೇರಾ ನೇರವಾಗಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಜ್ಯಕ್ಕೆ ನೈಸ್ ಒಂದು ಯೋಜನೆ ಇದೆ. ಅದಕ್ಕೂ ನನಗೂ ಸಂಬಂಧ ಇಲ್ಲ. ನಾನು ಒಬ್ಬ ಶಾಸಕ, ಬಿಸಿನೆಸ್ ಮ್ಯಾನ್, ನಾನು ಏನು ಮಾಡಬೇಕು ಮಾಡುತ್ತಿದ್ದೇನೆ. ಇವರು ಇದ್ದಾಗ ಯಾಕೆ ಮಾಡಲಿಲ್ಲ, ಇವರಿಗೂ ಅವರಿಗೂ ಸೆಟ್ ಆಗಿಲ್ಲ ಕೈ ತಪ್ಪಿದೆ. ಯಾರು ಯಾರದ್ದು ಎಷ್ಟು ಆಸ್ತಿ ಇದೆ ಅವರ ಕುಟುಂಬ ಎಷ್ಟು ಖರೀದಿ ಮಾಡಿದ್ದಾರೆ ಅದನ್ನು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಸಮಯ ಬಂದಾಗ ಮಾಹಿತಿ ಬಿಚ್ಚಿಡ್ತೇನೆ. ಅವರಷ್ಟು ಜ್ಞಾನ ಭಂಡಾರ ನನಗಿಲ್ಲ. ನಾನು ಹಳ್ಳಿ ಪಳ್ಳಿಯಿಂದ ಬಂದವನು. ನಾನೇನು ಪ್ರೈಮ್ ಮಿನಿಸ್ಟರ್ ಮಗ ಅಲ್ಲ, ನನಗೂ ಅಷ್ಟು ಇಷ್ಟು ಅನುಭವ ಇದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ‘ಟ್ರ್ಯಾಪ್ ಮಾಡಲು ಬಂದವರನ್ನು ಯಾಕೆ ಬಿಟ್ರಿ?: ಸಿಎಂ ಡಿಕೆ ಶಿವಕುಮಾರ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೌಂಟರ್
ನಾನು ಯಾಕೆ ಅವರಿಗೆ ದಾಖಲೆ ಬಿಡುಗಡೆ ಮಾಡಲಿ. ಯಾರಿಗೆ ದಾಖಲೆ ಕೊಡಬೇಕು ಕೊಡುತ್ತೇನೆ. ನಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ ಏನು ಮಾತನಾಡಬೇಕು ಸರಿಯಾಗಿ ಮಾತನಾಡ್ತೀನಿ. ಯಾರು ಯಾರು ಎಂತಹ ಕೆಲಸ ಮಾಡುತ್ತಿದ್ದಾರೆ ಎನ್ನುವ ದಾಖಲೆ ನನ್ನ ಬಳಿ ಇದೆ. ಯಾರನ್ನು ಊರು ಬಿಟ್ಟು ಓಡಿಸಿದ್ದಾರೆ ಅದರ ದಾಖಲೆ ಕೂಡ ಇದೆ. ಅದಕ್ಕೆ ನೀವು ಯಾಕೆ ಯೋಚನೆ ಮಾಡ್ತೀರಿ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ತೀರಿ ಎಂದು ಕುಮಾರಸ್ವಾಮಿಗೆ ನೇರವಾಗಿ ಟಾಂಗ್ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Thu, 8 October 26




