ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್ ಪರಿಷತ್ ಸದಸ್ಯರ ಆಗ್ರಹ: ಜನವರಿ 23 ಸರ್ಕಾರಕ್ಕೆ ಡೆಡ್ಲೈನ್
ಒಕ್ಕಲಿಗರ ಮೀಸಲಾತಿ ಹೆಚ್ಚಳ ಮಾಡುವಂತೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರು ಆಗ್ರಹಿಸಿದ್ದು, ಜನವರಿ 23ರೊಳಗೆ ಬೇಡಿಕೆ ಈಡೇರಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಒಂದೊಂದು ಸಮುದಾಯ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಆರಂಭಿಸಿವೆ. ಇದೀಗ 2Aಗೆ ಸೇರಿಸಬೇಕೆಂದು ಪಂಚಮಸಾಲಿ ಸಮುದಾಯ ಪಟ್ಟು ಹಿಡಿದಿದೆ. ಇದರ ಮಧ್ಯೆ ಈಗ ಒಕ್ಕಲಿಗರ ಮೀಸಲಾತಿ(Vokkaliga Reservation) ಹೆಚ್ಚಳಕ್ಕೆ ಕೂಗು ಹೆಚ್ಚಾಗಿದ್ದು, ಈ ವಿಚಾರವಾಗಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರು (Congress MLC) ರಾಜ್ಯ ಸರ್ಕಾರಕ್ಕೆಒಕ್ಕೂರಲಿನಿಂದ ಮನವಿ ಮಾಡಿದ್ದಾರೆ. ಅಲ್ಲದೇ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಜನವರಿ 23 ಡೆಡ್ಲೈನ್ ಕೊಟ್ಟಿದ್ದಾರೆ.
ಒಕ್ಕಲಿಗ ಸಮುದಾಯ ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ಬೆಳಗಾವಿಯಲ್ಲಿ ಇಂದು(ಡಿ.22) ಕಾಂಗ್ರೆಸ್ ಪರಿಷತ್ ಸದಸ್ಯರಾದ ಸಿಎಂ ಲಿಂಗಪ್ಪ, ಎಸ್ ರವಿ, ಗೊವಿಂದ್ ರಾಜು, ಅನಿಲ್ ಕುಮಾರ್ , ಮಂಜುನಾಥ್ ಬಂಡಾರಿ, ದಿನೇಶ್ ಗೂಳಿಗೌಡ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಒಕ್ಕಲಿಗ ಜನಾಂಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಕಲ್ಪಿಸಲು ಸಮಾಜದ ಮಠಾಧೀಶರಾದ ಪೂಜ್ಯ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಹಾಗೂ ನಂಜಾವದೂತ ಸ್ವಾಮೀಜಿಗಳು ರವರ ನೇತೃತ್ವದಲ್ಲಿ ಮೀಸಲಾತಿಯನ್ನು ಶೇಕಡಾ 12 ಕ್ಕೆ ಹೆಚ್ಚಿಸಲು ಹಾಕ್ಕೋತಾಯವನ್ನು ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷವಲ್ಲದೆ, ಪಕ್ಷಾತೀತವಾಗಿ ಸಮಾಜದ ಎಲ್ಲಾ ಸಂಘಟನೆಗಳು ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ಜನವರಿ 23ರ ವರೆಗೆ ಅಂತಿಮ ಗಡುವನ್ನು ನೀಡಲಾಗಿದೆ. ಈ ಅವಧಿಯ ಒಳಗಡೆ ಸರ್ಕಾರ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಸಮುದಾಯ ಬೀದಿಗಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಒಕ್ಕಲಿಗರ ಜನಸಂಖ್ಯೆಯು ಎರಡನೇ ಸ್ಥಾನದಲ್ಲಿದೆ. ಒಕ್ಕಲಿಗರ ಜನಸಂಖ್ಯೆಯು ರಾಜ್ಯದಲ್ಲಿ ಅಂದಾಜು ಒಂದು ಕೋಟಿ ಇಪ್ಪತ್ತು ಲಕ್ಷ ಇದೆ. ರಾಜ್ಯದ ಹಳೆ ಮೈಸೂರು & ಮಲನಾಡು ಭಾಗ ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಜನಾಂಗವು ವಾಸಿಸುತ್ತಿದೆ. ಒಕ್ಕಲಿಗ ಜನಾಂಗದ ಶೇ.80 ರಷ್ಟು ಜನಾಂಗ ವ್ಯವಸಾಯವನ್ನು ಅದರಲ್ಲೂ ಹೆಚ್ಚಾಗಿ ಮಳೆಯನ್ನು ಆಶ್ರಯಿಸಿ ಜೀವನ ನಡೆಸುತ್ತಿದ್ದು. ಕೃಷಿಯು ಲಾಭದಾಯಕ ಅಲ್ಲವಾದ್ದರಿಂದ ಒಕ್ಕಲಿಗ ಜನಾಂಗ ತೀರಾ ಹಿಂದುಳಿದಿದೆ ಎಂದರು.
ಈ ಸಮುದಾಯ ರಾಜ್ಯದ ಮೂಲ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳಾದ ಕೈಗಾರಿಕೆಗಳು, ಶಾಲಾ ಕಾಲೇಜುಗಳ ನಿರ್ಮಾಣ ಹಾಗೂ ನೀರಾವರಿ ಯೋಜನೆಗಳಿಗೆ ತಮ್ಮ ಜಮೀನುಗಳನ್ನು ನೀಡಿರುತ್ತಾರೆ. ಒಕ್ಕಲಿಗ ಜನಾಂಗವು ಜಮೀನನ್ನು ಕಳೆದುಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ರೀತಿ ವಲಸೆ ಬಂದವರು ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಕ್ಕಲಿಗ ಜನಾಂಗಕ್ಕೆ ಮೀಸಲಾತಿ ವಿಚಾರವಾಗಿ ಇಂದಿನಿಂದಲೂ ರಾಜಕೀಯವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಹಾವನೂರು ಆಯೋಗದ ವರದಿ ಅನುಸಾರ ಈ ಜನಾಂಗಕ್ಕೆ ಶೇಕಡ 11ರಷ್ಟು ಮೀಸಲಾತಿ ಸಿಕ್ಕಿದ್ದು ಬಿಟ್ಟರೆ ತದನಂತರ ಬಂದ ಚಿನ್ನಪ್ಪರೆಡ್ಡಿ ಆಯೋಗವು ಈ ಜನಾಂಗಕ್ಕೆ ಕೇವಲ ಶೇ 4 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಈ ಶೇ 4 ಮೀಸಲಾತಿ ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಇನ್ನಿತರ ವರ್ಗಗಳೂ ಸೇರಿ ಹಂಚಿಕೆಯಾಗಿದೆ. ಎಂದು ತಿಳಿಸಿದರು.
ರಾಜ್ಯದಲ್ಲಿ ಒಕ್ಕಲಿಗರ ಜನಾಂಗವು ಶೇ.15 ರಷ್ಡು ಜನರಿದ್ದು, ವಾಸ್ತವವಾಗಿ ಈ ಸಮುದಾಯಕ್ಕೆ ಕೇವಲ ಶೇ 2.5 ರಷ್ಟು ಮೀಸಲಾತಿಗೆ ಸೀಮಿತವಾಗಿರುವುದು ಸ್ಪಷ್ಷವಾಗಿದೆ. ಮತ್ತು EWS ಜನರಿಗೆ ರಾಜ್ಯದಲ್ಲಿ ಶೇ 10 ರಷ್ಟು ಮೀಸಲಾತಿ ನೀಡಲಾಗಿದ್ದು, ಈ ಮೀಸಲಾತಿ ಜನಸಂಖ್ಯೆ ಅನುಪಾತಕ್ಕಿಂತ ಹೆಚ್ಚಿನ ಮೀಸಲಾತಿ ಕಲ್ಪಿಸಲಾಗಿದೆ. ನಮ್ಮ ಜನಾಂಗದ 3 ಉಪ ಪಂಗಡಗಳನ್ನು ಮಾತ್ರ ಕೇಂದ್ರದ OBC ಪಟ್ಡಿಗೆ ಸೇರಿಸಿದ್ದು, ಉಳಿದ ಒಕ್ಕಲಿಗ ಉಪ ಪಂಗಡಗಳನ್ನು ಸಾಮಾನ್ಯ ವರ್ಗಕ್ಕೆ ಸೇರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕಲಿಗ ಜನಾಂಗಕ್ಕೆ ಶೇಕಡ 12ರ ಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಯಾವುದೇ ಶಿಫಾರಸ್ಸು ಮಾಡುವ ಅವಶ್ಯಕತೆ ಸಹ ಕಂಡುಬರುವುದಿಲ್ಲ. ಒಕ್ಕಲಿಗ ಜನಾಂಗ ಈಗಾಗಲೇ ಕೇಂದ್ರದ ಒಬಿಸಿ ಪಟ್ಟಿಯಲ್ಲಿರುವುದರಿಂದ ರಾಜ್ಯ ಸರ್ಕಾರವೇ ಸ್ವಯಂ ನಿರ್ಣಯದೊಂದಿಗೆ ಒಕ್ಕಲಿಗರಿಗೆ ಶೇಕಡ 12ರ ಮೀಸಲಾತಿಯ ಹೆಚ್ಚಳವನ್ನು ಘೋಷಣೆ ಮಾಡಬಹುದಾಗಿದೆ. ಒಕ್ಕಲಿಗ ಜನಾಂಗವು ಯಾವುದೇ ಸಮಾಜದ ಮೀಸಲಾತಿ ಹೋರಾಟದ ವಿರೋಧಿಗಳಲ್ಲ ನಾವು ಇತರೆ ಸಮುದಾಯಗಳ ಮೀಸಲಾತಿ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಸಹ ನೀಡುತ್ತೇವೆ. ಅದರೆ ನಮಗೆ ಆಗಿರುವ ಮೀಸಲಾತಿ ಅನ್ಯಾಯದ ವಿರುದ್ದ ನಮ್ಮ ಹೋರಾಟವಿದೆ. ಇದು ಸ್ಪಷ್ಟ ನಿಲುವು ಎಂದು ಸ್ಪಷ್ಟಪಡಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:34 pm, Thu, 22 December 22