AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಪ್ರಕರಣ: ಸುಳ್ಳಿನ ಕಂತೆ ಕಟ್ಟಿದ್ದ ಸುಜಾತ ಭಟ್ ಎಸ್ಐಟಿ ಎದುರು ಸತ್ಯ ಬಾಯ್ಬಿಟ್ಟಿದ್ದೇ ರೋಚಕ!

ಧರ್ಮಸ್ಥಳ ಪ್ರಕರಣ ಸಂಬಂಧ ಅನನ್ಯಾ ಭಟ್ ನಾಪತ್ತೆ ವಿಚಾರವಾಗಿ ಕಥೆ ಕಟ್ಟಿ ಡ್ರಾಮಾ ಮಾಡುತ್ತಿದ್ದ, ಪ್ರಶ್ನೆ ಕೇಳಿದರೆ ಕಣ್ಣೀರು ಹಾಕುತ್ತಿದ್ದ ಸುಜಾತ ಭಟ್ ಎಸ್​​ಐಟಿ ಎದುರು ಲಾಕ್ ಆಗಿದ್ದು ಹೇಗೆ? ಎಸ್ಐಟಿ ವಿಚಾರಣೆ ವೇಳೆ ತಬ್ಬಿಬ್ಬಾಗಿ ತಪ್ಪೊಪ್ಪಿಕೊಂಡಿದ್ದು ಹೇಗೆ ಎಂಬ ಎಕ್ಸ್‌ಕ್ಲೂಸಿವ್ ಮಾಹಿತಿ ‘ಟಿವಿ9’ಗೆ ದೊರೆತಿದೆ. ವಿವರ ತಿಳಿಯಲು ಮುಂದೆ ಓದಿ.

ಧರ್ಮಸ್ಥಳ ಪ್ರಕರಣ: ಸುಳ್ಳಿನ ಕಂತೆ ಕಟ್ಟಿದ್ದ ಸುಜಾತ ಭಟ್ ಎಸ್ಐಟಿ ಎದುರು ಸತ್ಯ ಬಾಯ್ಬಿಟ್ಟಿದ್ದೇ ರೋಚಕ!
ಸುಳ್ಳಿನ ಕಂತೆ ಕಟ್ಟಿದ್ದ ಸುಜಾತ ಭಟ್ ಎಸ್ಐಟಿ ಎದುರು ಸತ್ಯ ಬಾಯ್ಬಿಟ್ಟಿದ್ದೇ ರೋಚಕ!
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: Ganapathi Sharma|

Updated on: Aug 28, 2025 | 2:41 PM

Share

ಮಂಗಳೂರು, ಆಗಸ್ಟ್ 28: ಧರ್ಮಸ್ಥಳ (Dharmasthala) ಪ್ರಕರಣದಲ್ಲಿ ನಿಮಿಷಕ್ಕೊಂದು, ಗಂಟೆಗೊಂದು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದ ಸುಜಾತ ಭಟ್‌, ತಮಗೊಬ್ಬ ಮಗಳಿದ್ದಳು ಎನ್ನುತ್ತಾ ಅನನ್ಯಾ ಭಟ್ ಎಂಬ ಪಾತ್ರ ಸೃಷ್ಟಿಸಿದ್ದರು. ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಳು. ಅವಳು ಸಿಕ್ಕಿದರೆ ಹುಡುಕಿಕೊಡಿ, ಇಲ್ಲವಾದರೆ ಅಸ್ಥಿಯನ್ನಾದರೂ ಹುಡುಕಿ ಕೊಡಿ. ನಾನು ಅಂತ್ಯಕ್ರಿಯೆ ಮಾಡಬೇಕು ಎಂದು ಕಥೆ ಹೇಳಿದ್ದ ಸುಜಾತ ಭಟ್‌ಗೆ ಈಗ ಸಂಕಷ್ಟ ಹೆಗಲೇರಿದೆ. ಕಳೆದ ಮೂರು ದಿನದಿಂದ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

‘ನಾನು ಹೇಳಿದ್ದು ಸುಳ್ಳು’: ವಿಚಾರಣೆ ವೇಳೆ ಸುಜಾತ ಕಣ್ಣೀರು

ಮಂಗಳವಾರ ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಸುಜಾತ ಆಗಮಿಸಿದ್ದರು. ವಿಚಾರಣೆ ಮಾಡಿ ಎಂದು ಎಸ್​​ಐಟಿ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದರು. ಮಧ್ಯಾಹ್ನದ ಬಳಿಕ ಎಸ್ಐಟಿ ಎಸ್‌ಪಿ ಗುಣಪಾಲ್ ವಿಚಾರಣೆ ನಡೆಸಿ ಪ್ರಾಥಮಿಕ ಮಾಹಿತಿ ಪಡೆದಿದ್ದರು. ಆಗ ಎಸ್​​ಐಟಿ ಅಧಿಕಾರಿಗಳು ಮಗಳ ಅಸ್ತಿತ್ವದ ಬಗ್ಗೆ ದಾಖಲೆ ತೆಗೆದುಕೊಂಡು ಬನ್ನಿ ಎಂದು ಕಳುಹಿಸಿದ್ರು. ನನ್ನ ಬಳಿ ದಾಖಲೆ ಇದೆ, ಎಸ್ಐಟಿಗೆ ಕೊಡುತ್ತೇನೆ ಎಂದಿದ್ದ ಸುಜಾತ ಬುಧವಾರ ವಿಚಾರಣೆಗೆ ಹಾಜರಾದಾಗ ಬಂಡವಾಳ ಬಯಲಾಗಿದೆ. ಎಸ್ಐಟಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟು ಬೇಡಿಕೊಂಡ ಸುಜಾತ, ನಾನು ಹೇಳಿದ್ದೆಲ್ಲಾ ಸುಳ್ಳು. ನನ್ನ ಬಿಟ್ಟು ಬಿಡಿ ಎಂದು ಗೋಳಾಡಿದರು. ವಿಚಾರಣೆ ಮುಗಿಸಿ ಹೊರಬಂದ ಬಳಿಕವೂ ಹೈಡ್ರಾಮಾ ಮಾಡಿದರು.

ಸಾಕ್ಷ್ಯ ಮುಂದಿಟ್ಟಾಗ ಸುಜಾತ ಸುಸ್ತು!

ಎಸ್ಐಟಿ ಪ್ರಶ್ನೆಗೆ ಒಂದೇ ಉತ್ತರ ಕೊಡುತ್ತಿದ್ದ ಸುಜಾತ ಭಟ್, ಮೊದಲನೇ ದಿನ ಹೇಳಿದ್ದೆಲ್ಲವನ್ನೂ ಎಸ್​​ಐಟಿ ಅಧಿಕಾರಿಗಳು ಕೇಳಿಕೊಂಡಿದ್ದರು. ಎರಡನೇ ದಿನ ಅಸಲಿ ವಿಚಾರಣೆ ಶುರು ಮಾಡಿದ್ದ ಎಸ್​​ಐಟಿ ಅಧಿಕಾರಿಗಳು ಸುಜಾತ ಪ್ರತಿ ಹೇಳಿಕೆಗೂ ಉತ್ತರ ಸಹಿತ ಸಾಕ್ಷ್ಯ ತೋರಿಸಿದರು. ಸುಜಾತ ಜೀವನ ಚರಿತ್ರೆಯನ್ನು ಮುಂದಿಟ್ಟರು. ಜಮೀನು ವಿಚಾರವಾಗಿ ಸುಜಾತ ಗಲಾಟೆ ಮಾಡಿದ್ದಕ್ಕೆ ಸಾಕ್ಷ್ಯ ಮುಂದಿಟ್ಟಾಗ ಸತ್ಯ ಒಪ್ಪಿಕೊಂಡ ಸುಜಾತ ಭಟ್ , ಸುಳ್ಳು ಹೇಳಿದ್ದನ್ನು ಒಪ್ಪಿಕೊಂಡರು.

ಸುಜಾತ ‘ಷಡ್ಯಂತ್ರ’ ಸಂದರ್ಶನ

ಒಂದು ವರ್ಷದ ಹಿಂದೆ ಸುಜಾತ ಟಿ.ಜಯಂತ್‌ನನ್ನು ಸಂಪರ್ಕ ಮಾಡಿ, ಆಮೂಲಕ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಸುಜಾತ ಸುಳ್ಳು ಆರೋಪ ಮಾಡಿದ್ದರು. 2024ರ ಏಪ್ರಿಲ್​ನಲ್ಲಿ ಯೂಟ್ಯೂಬ್​ನಲ್ಲಿ ಸಂದರ್ಶನ ಅಪ್ಲೋಡ್ ಮಾಡಲಾಗಿತ್ತು. ಆದರೆ, ಸಂದರ್ಶನದಿಂದ ಊಹಿಸಿದಷ್ಟು ದೊಡ್ಡಮಟ್ಟದ ವಿವಾದ ಆಗಲಿಲ್ಲ. ಕೊನೆಯದಾಗಿ ಮತ್ತೊಂದು ಪ್ಲ್ಯಾನ್ ಮಾಡಿದ್ದ ಸುಜಾತ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಲೋಕನಾಥ ಮಟ್ಟಣ್ಣನವರ್​, ಎಂ.ಡಿ.ಸಮೀರ್ ಸಹಾಯದಿಂದ ದೂರು ಕೊಡಲು ಪ್ಲ್ಯಾನ್ ಮಾಡಿದ್ದರು. ಅಂದುಕೊಂಡಂತೆ ಜುಲೈ ತಿಂಗಳಲ್ಲಿ ‘ಮಗಳು ಕಾಣೆ’ಯಾಗಿದ್ದಾಳೆಂದು ದೂರು ನೀಡಿದ್ದರು. ಇದೆಲ್ಲವನ್ನೂ ಜಮೀನಿಗಾಗಿ ಮಾಡಿದೆ ಎಂದು ಸುಜಾತ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಸುಜಾತರಿಂದ ಅಂತರ ಕಾಯ್ದುಕೊಂಡ ತಿಮರೋಡಿ

ಈ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲೇ ಸುಜಾತ ಭಟ್ ಉಳಿದುಕೊಳ್ಳುತ್ತಿದ್ದರು ಎನ್ನಲಾಗಿತ್ತು. ಆದರೆ, ಎರಡು ದಿನದಿಂದ ಉಜಿರೆಯ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ತಿಮರೋಡಿ ಕೂಡಾ, ಸುಜಾತ ಭಟ್ ಹೇಳಿದ್ದು ಸುಳ್ಳು ಎಂಬುದು ಗೊತ್ತಾಗಿ ಅಂತರ ಕಾಯ್ದುಕೊಂಡಿದ್ದಾರೆ. ಸುಜಾತ ಹಲವರು ಹೆಸರುಗಳನ್ನು ಹೇಳಿರುವುದರಿಂದ ಸೂತ್ರಧಾರಿಗಳಿಗೂ ಸಂಕಷ್ಟ ಎದುರಾಗಿದೆ.

‘ಬುರುಡೆ’ ಚಿನ್ನಯ್ಯನ ಮೊಬೈಲ್ ಕೆದಕುತ್ತಿದೆ ಎಸ್ಐಟಿ

ಮತ್ತೊಂದೆಡೆ ‘ಬುರುಡೆ’ ಚಿನ್ನಯ್ಯನ ವಿಚಾರಣೆಯೂ ತೀವ್ರಗೊಂಡಿದೆ. ಚಿನ್ನಯ್ಯ ವಿಚಾರಣೆ ವೇಳೆ ಜೊತೆಗಿದ್ದ ವಕೀಲರೊಬ್ಬರೇ ಪ್ರಮುಖ ಸಾಕ್ಷಿಯಾಗಿದ್ದಾರೆ. ಇನ್ನೂ ಚಿನ್ನಯ್ಯನ ಮೊಬೈಲ್ ಇತಿಹಾಸ ಕೆದಕುತ್ತಿರುವ ಎಸ್ಐಟಿ ಅಧಿಕಾರಿಗಳು ರಿಟ್ರೀವ್‌ ಮಾಡುತ್ತಿದ್ದಾರೆ. ಫೋನ್ ಕಾಲ್ ಲಿಸ್ಟ್ ಡಿಲೀಟ್ ಆಗಿದ್ದು, ಡಿಲೀಟ್ ಆಗಿರುವ ಡೇಟಾ ಪಡೆಯಲು ಮುಂದಾಗಿದ್ದಾರೆ.

ಇದನ್ನೂ ಓದಿ: ಅನನ್ಯಾ ಭಟ್ ನಾಪತ್ತೆ ದೂರು ಹಿಂಪಡೆಯುವೆ: ತಪ್ಪಾಯ್ತು ಬಿಟ್ಟುಬಿಡಿ ಸರ್, ಸುಜಾತಾ ಭಟ್ ಕಣ್ಣೀರಧಾರೆ

ಚಿನ್ನಯ್ಯ ಕೇಸ್‌ ಸಂಬಂಧ ಯಾವುದೇ ಮಾಹಿತಿ ನೀಡದಂತೆ ತನಿಖಾ ತಂಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಎಫ್​ಐಆರ್, ಪ್ರಕರಣ ಸೇರ್ಪಡೆ, ಇತರೆ ಮಾಹಿತಿ ಗೋಪ್ಯವಾಗಿಸಲು ಮನವಿ ಮಾಡಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ