Kambala: ಕಂಬಳ ಕ್ರೀಡೆಗೆ ಮಹಿಳಾ ಸಾರಥಿಗಳು; ಐವರು ಯುವತಿಯರಿಗೆ ತರಬೇತಿ ನೀಡಲು ತಯಾರಿ

ಮಂಗಳೂರಿನ ಇಬ್ಬರು ಯುವತಿಯರು, ಕುಂದಾಪುರ, ಉಡುಪಿ, ಕಾಸರಗೋಡಿನ ತಲಾ ಒಬ್ಬರು ಯುವತಿಯರಿಗೆ ತರಬೇತಿ ನೀಡಲಾಗುತ್ತದೆ. ಅವರ ಮನೆಯಲ್ಲೇ ಕೋಣಗಳು ಇರುವುದರಿಂದ ಅದರ ಜೊತೆಯಲ್ಲೇ ಈ ಸೀಸನ್​ಗಳಲ್ಲಿ ಕಂಬಳ ಕೆರೆಗೆ ಯುವತಿಯರು ಇಳಿಯಲಿದ್ದಾರೆ.

Kambala: ಕಂಬಳ ಕ್ರೀಡೆಗೆ ಮಹಿಳಾ ಸಾರಥಿಗಳು; ಐವರು ಯುವತಿಯರಿಗೆ ತರಬೇತಿ ನೀಡಲು ತಯಾರಿ
ಕಂಬಳ

ಮಂಗಳೂರು: ಕರಾವಳಿಯ ಜನಪದ ಕ್ರೀಡೆ ಕಂಬಳ. ಕಂಬಳ ತುಳುನಾಡಿನ ಗ್ರಾಮೀಣ ಪರಿಸರದಲ್ಲಿ ಮನರಂಜನೆಯ ಭಾಗವೂ ಹೌದು. ಅನಾದಿಕಾಲದಿಂದ ನಡೆದು ಬರುತ್ತಿರುವ ಈ ಕ್ರೀಡೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿದೆ. ತುಳುನಾಡಿನ ಗ್ರಾಮೀಣ ಸೊಗಡನ್ನು ಉಳಿಸಿಕೊಳ್ಳವ ದೃಷ್ಟಿಯಿಂದ ಕಂಬಳಕ್ಕೆ ಪಾರಂಪರಿಕ ಹಾಗು ಸಾಂಪ್ರದಾಯಿಕ ಟಚ್ ನೀಡಲಾಗಿದೆ. ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೋಣಗಳನ್ನು ಓಡಿಸುವ ಓಟಗಾರರಿಗೆ ಶಿಸ್ತುಬದ್ದ ತರಬೇತಿಯನ್ನು ನೀಡಲಾಗುತ್ತಿದೆ. ಅಷ್ಟೆ ಅಲ್ಲದೇ, ಈ ಬಾರಿ ಕಂಬಳಕ್ಕೆ ಹುಡುಗಿಯರು ಸಾರಥಿಯಾಗಲಿದ್ದಾರೆ.

ರಾಜ್ಯದ ಕರಾವಳಿಯ ಗ್ರಾಮೀಣ ಬದುಕಿನ ಅತ್ಯಂತ ಮಹತ್ವದ ಭಾಗವೇ ಕಂಬಳ ಕ್ರೀಡೆ. ಈ ಕ್ರೀಡೆ ಇಂದು ವಿಶ್ವದ ಗಮನ ತನ್ನತ್ತ ಸೆಳೆದಿದೆ. ತುಳುನಾಡಿನಲ್ಲಿ ಇರುವಷ್ಟು ಕಂಬಳದ ಕ್ರೇಝ್ ಬೇರೆಲ್ಲೂ ಕಾಣಸಿಗದು. ತುಳುನಾಡ ಜನಪದ ಕ್ರೀಡೆಯಾಗಿ ಗುರುತಿಸಿ ಕೊಂಡಿರುವ ಕಂಬಳ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತರ ಕೇರಳದ ಕಾಸರಗೋಡು ಜಿಲ್ಲೆಯ ಉದ್ದಗಲದಲ್ಲಿ ಜರುಗುತ್ತದೆ. ಉಳಿದ ಕ್ರೀಡೆಗಳಿಗೆ ಹೋಲಿಸಿದ್ರೆ ಕಂಬಳ ತುಂಬಾ ಢಿಪರೆಂಟ್ ಆಗಿ ಕಾಣುತ್ತದೆ. ಕೋಣಗಳೇನೂ ಓಡ್ತಾವೆ ಬಿಡಿ. ಆದರೆ ಅದನ್ನು ಬೆನ್ನತ್ತಿ ಓಡಿಸುವ ಓಟಗಾರರು ಕೂಡಾ ಅಷ್ಟೇ ತರಬೇತಿಯನ್ನು ಪಡೆದಿರುತ್ತಾರೆ. ಕೋಣ ಓಡಿಸುವುದು ಒಂದು ಕಲೆ. ಆ ಕಲೆ ಎಲ್ಲರಿಗೂ ಕರಗತ ಮಾಡಿಕೊಳ್ಳಲು ಸಾದ್ಯವಾಗುವುದಿಲ್ಲ. ಕಂಬಳದ ಕೋಣಗಳನ್ನು ಪಳಗಿಸೋದು ಅಷ್ಟು ಸುಲಭವಲ್ಲ. ಈ ಕಂಬಳದ ಜಾಕಿಗಳಿಗೆ ಸಾಕಷ್ಟು ಡಿಮಾಂಡ್ ಇದೆ. ಅದರಲ್ಲೂ ಸಾಂಪ್ರದಾಯಿಕವಾಗಿ ಪಳಗಿದವರಿಗೆ ಅಷ್ಟೇ ಗೌರವ ಕೂಡ ಇದೆ. ಸಾಂಪ್ರದಾಯಿಕ ಕಂಬಳವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು ಈ ಬಾರಿ ಮೊದಲ ಸೀಸನ್ ನಲ್ಲಿ  33 ಮಂದಿ ಯುವಕರಿಗೆ ಸಂಸ್ಥೆ ಉಚಿತವಾಗಿ ತರಬೇತಿ ನೀಡುತ್ತಿದೆ.

ನವತರುಣ ಕಂಬಳ ಸಾರಥಿಗಳಿಗೆ ಟ್ರೈನಿಂಗ್..!
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಕಡಲಕೆರೆಯಲ್ಲಿ 33 ನವ ತರುಣರಿಗೆ ಕೋಣಗಳ ಸಂಪೂರ್ಣ ನಿರ್ವಹಣಾ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಈ ಬಾರೀ 219 ಜನ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ದೈಹಿಕ, ಶಾರೀರಿಕ ಪರೀಕ್ಷೆ ನಡೆಸಿ 87 ಮಂದಿಯನ್ನು ಸ್ಕ್ರೀನಿಂಗ್ ಮಾಡಿ ನಂತರ ಅಂತಿಮವಾಗಿ 33 ಗ್ರಾಮೀಣ ಭಾಗದ ಯುವಕರನ್ನು ಈ ಕಠಿಣ ತರಬೇತಿಗೆ ಆಯ್ಕೆ ಮಾಡಲಾಗಿದೆ. ಒಟ್ಟು 15 ದಿನಗಳ ತರಬೇತಿ ನಡೆಯುತ್ತಿದ್ದು, ತರಬೇತಿ ಬಳಿಕ ಪ್ರಾಯೋಗಿಕ ಕಂಬಳವೂ ನಡೆಯಲಿದೆ.

ಕಂಬಳ ಕೆರೆಯಲ್ಲಿ ಬಾರು ಕೋಲು ಹಿಡಿಯಲಿದ್ದಾರೆ ಮಹಿಳಾ ಸಾರಥಿಗಳು!
ಕಂಬಳದಲ್ಲಿ ಇದುವರೆಗೂ ಕೇವಲ ಪುರುಷರು ಭಾಗವಹಿಸುತ್ತಿದ್ದರು. ಇಲ್ಲಿವರೆಗೂ ಕೂಡ ಕಂಬಳ ಪುರುಷ ಪ್ರಧಾನ ಜನಪದ ಕ್ರೀಡೆಯಾಗಿದೆ. ಆದರೆ ಕಳೆದ ವರ್ಷ ಕುಂದಾಪುರದ ಚೈತ್ರ ಎಂಬ ಬಾಲಕಿಯನ್ನು ಕಂಬಳ ಕೆರೆಗೆ ಇಳಿಸಿ ಸಂಪ್ರದಾಯವನ್ನು ಮುರಿಯಲಾಯಿತು. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಹಿನ್ನೆಲೆಯಲ್ಲಿ ಈ ವರ್ಷ 5 ಯುವತಿಯರನ್ನು ಕಂಬಳ ಕ್ರೀಡೆಗೆ ತಯಾರು ಮಾಡಲಾಗುತ್ತಿದೆ. ಮುಂದಿನ ಎರಡು ವಾರಗಳಲ್ಲಿ ಮೂಡಬಿದ್ರೆಯಲ್ಲಿ ಇರುವ ಕಡಲಕೆರೆ ಬಳಿ ಯುವತಿಯರಿಗೆ ತರಬೇತಿ ನೀಡಲಾಗುತ್ತದೆ. ಮಂಗಳೂರಿನ ಇಬ್ಬರು ಯುವತಿಯರು, ಕುಂದಾಪುರ, ಉಡುಪಿ, ಕಾಸರಗೋಡಿನ ತಲಾ ಒಬ್ಬರು ಯುವತಿಯರಿಗೆ ತರಬೇತಿ ನೀಡಲಾಗುತ್ತದೆ. ಅವರ ಮನೆಯಲ್ಲೇ ಕೋಣಗಳು ಇರುವುದರಿಂದ ಅದರ ಜೊತೆಯಲ್ಲೇ ಈ ಸೀಸನ್​ಗಳಲ್ಲಿ ಕಂಬಳ ಕೆರೆಗೆ ಯುವತಿಯರು ಇಳಿಯಲಿದ್ದಾರೆ.

ಟಿವಿ9 ಜತೆ ಮಾತನಾಡಿದ ಗುಣಪಾಲ ಕಡಂಬ ತಲತಲಾಂತರಗಳಿಂದ ಇದು ಪುರುಷ ಪ್ರಧಾನ ಜನಪದ ಕ್ರೀಡೆಯಾಗಿತ್ತು. ಆದರೆ ಈಗ ಮಹಿಳೆಯರನ್ನು ಕೂಡ ಕಂಬಳದ ಆಟಗಾರರನ್ನಾಗಿ ಮಾಡುವ ಉದ್ದೇಶವಿದೆ. ಈ ಉದ್ದೇಶದ ಹಿಂದೆ ಸಂಪ್ರದಾಯವನ್ನು ಮುರಿಯುವ ಯಾವುದೇ ದುರುದ್ದೇಶ ಇಲ್ಲ. ಕಂಬಳದ ಪವಿತ್ರತೆಗೆ ಎಲ್ಲೂ ತೊಡಕಾಗದಂತೆ ಮಹಿಳೆಯರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ರೂಪರೇಷೆಯನ್ನು ರಚಿಸಲಾಗಿದೆ. ಅದಕ್ಕೆ ಶೇಕಡ 90ರಷ್ಟು ಜನರ ಬೆಂಬಲ ಕೂಡ ಇದೆ ಎಂದು ತಿಳಿಸಿದರು.

ಗುಣಪಾಲ ಕಡಂಬ. ಸಂಚಾಲಕರು, ಕಂಬಳ ಸಂರಕ್ಷಣೆ-ನಿರ್ವಹಣೆ ತರಬೇತಿ ಸಮಿತಿ
ಕೋಣಗಳನ್ನು ಅದರಲ್ಲೂ ಕಂಬಳದ ಕೋಣಗಳನ್ನು ಪಳಗಿಸುವುದು, ಹದ್ದು ಬಸ್ತಿನಲ್ಲಿಡುವುದು ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ಈ ತರಬೇತಿ ಶಿಬಿರದಲ್ಲಿ ಕೋಣಗಳನ್ನು ತೊಳೆಯುವುದು, ಎಣ್ಣೆ ಉಜ್ಜುವುದು, ಕಂಬಳಕ್ಕೆ ಸಿದ್ಧಗೊಳಿಸುವುದು, ನೊಗ ಕಟ್ಟುವುದು, ಹಲಗೆ, ಮರ ಕಟ್ಟುವುದು, ವಿವಿಧ ರೀತಿಯ ಹಗ್ಗ ಸಲಕರಣೆ ತಯಾರಿಸುವುದು, ಬೆತ್ತ ಹೆಣೆಯುವುದು ಹೀಗೆ ವಿವಿಧ ವಿಷಯದಲ್ಲಿ ವೈಜ್ಞಾನಿಕವಾಗಿ ತರಬೇತಿ ನೀಡಲಾಗುತ್ತದೆ. ಶಾರೀರಿಕವಾಗಿ ಸಿದ್ಧಗೊಳ್ಳಲು ವ್ಯಾಯಾಮ, ಯೋಗಾಸನ, ಆಹಾರ ಪದ್ಧತಿಯ ಬಗೆಗೂ ಹೇಳಿ ಕೊಡಲಾಗುತ್ತಿದೆ. ಹೀಗೆ ತರಬೇತಿ ಪಡೆದ ಶಿಬಿರಾರ್ಥಿಗಳು ಮುಂದಿನ ಕಂಬಳಕ್ಕೆ ಭರ್ಜರಿಯಾಗಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಕಂಬಳದಲ್ಲಿ ದಾಖಲೆ ನಿರ್ಮಿಸಿದ್ದ ಶ್ರೀನಿವಾಸ್ ಗೌಡ ಪ್ರಸಿದ್ದಿಗೆ ಬಂದಿದ್ದರು.
ಕೆಲ ವರ್ಷಗಳಿಂದ ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು ಕಂಬಳಕ್ಕೆ ವಿಘ್ನ ಎದುರಾಗಿತ್ತು. ಸದ್ಯ ಈ ವಿಘ್ನದಿಂದ ಮುಕ್ತಿ ದೊರಕಿದರೂ ಕಂಬಳ ತರಬೇತಿ ಸಮಿತಿ ಮುನ್ನೆಚ್ಚರಿಕೆಯನ್ನು ವಹಿಸಿದೆ. ಈ ತರಬೇತಿಯಲ್ಲಿ ಪದವಿ, ಡಬಲ್ ಡಿಗ್ರಿ ಪಡೆದವರು ಕೂಡಾ ಇದ್ದು, ಮುಂದಿನ ನವೆಂಬರ್ ಅಂತ್ಯದಲ್ಲಿ ಶುರುವಾಗಲಿರುವ ಕಂಬಳ ಸೀಸನ್​ಗೆ ರೆಡಿಯಾಗುತ್ತಿದ್ದಾರೆ.

ವಿಶೇಷ ವರದಿ: ಪೃಥ್ವಿರಾಜ್
ಬೊಮ್ಮನಕೆರೆ ಟಿವಿ9 ಮಂಗಳೂರು

ಇದನ್ನೂ ಓದಿ:

 ತಮ್ಮ ದಾಖಲೆಯನ್ನೇ ಮುರಿದು ಮತ್ತೆ ಹೊಸ ದಾಖಲೆ ಸೃಷ್ಟಿಸಿದ ಕಂಬಳ ವೀರ ಶ್ರೀನಿವಾಸ ಗೌಡ

ಕಂಬಳದಲ್ಲಿ ಪುಟ್ಟ ಬಾಲಕಿಯೊಬ್ಬಳು ಕಂಬಳ ಗದ್ದೆಗೆ ಇಳಿದು ಹೊಸ ಇತಿಹಾಸ ಬರೆದಿದ್ದಾಳೆ

Read Full Article

Click on your DTH Provider to Add TV9 Kannada