AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ದುಡುಕಿನ ನಿರ್ಧಾರಕ್ಕೆ ಹೆತ್ತವರು ಕಂಗಾಲು

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅಂಕ ಕಡಿಮೆ ಬಂದಿದ್ದಕ್ಕೆ ಓರ್ವ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಿರೀಕ್ಷಿಸಿದ ಅಂಕ ಬಾರದಿರುವುದಕ್ಕೆ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾಳೆ. ವಿದ್ಯಾರ್ಥಿನಿಯ ಈ ದುಡುಕಿನ ನಿರ್ಧಾರಕ್ಕೆ ಹೆತ್ತವರಿಗೆ ಬರಸಿಡಿಲೇ ಬಡಿದಂತಾಗಿದೆ.

ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ದುಡುಕಿನ ನಿರ್ಧಾರಕ್ಕೆ ಹೆತ್ತವರು ಕಂಗಾಲು
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿImage Credit source: tv9 kannada
ಸಂಜಯ್ಯಾ ಚಿಕ್ಕಮಠ
| Edited By: |

Updated on:Apr 11, 2026 | 6:51 PM

Share

ಹುಬ್ಬಳ್ಳಿ, ಏಪ್ರಿಲ್​ 11: ಏಪ್ರಿಲ್​ 09ರಂದು ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ (2nd PUC Results)  ಬಂದಿದ್ದು, ಹೆಚ್ಚು ಅಂಕ ಪಡೆದವರು ಸಂಭ್ರಮಿಸಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ ಓರ್ವ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಂದಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ (death) ಶರಣಾಗಿದ್ದಾಳೆ. ಜೀವನದಲ್ಲಿ ಹತ್ತಾರು ಕನಸು ಕಂಡವಳು ಕಡಿಮೆ ಅಂಕ ಬಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ನಡೆದದ್ದೇನು?

ಮೊನ್ನೆಯಷ್ಟೇ ರಾಜ್ಯದ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಸಂಭ್ರಮಸಿದ್ದಾರೆ. ಇನ್ನು ಅಂಕ ಸುಧಾರಣೆ ಬಯಸುವವರು, ಅನುತ್ತೀರ್ಣವಾದವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಕೂಡಾ ಪಿಯು ಬೋರ್ಡ್ ಅವಕಾಶ ನೀಡಿದೆ. ಆದರೆ ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದ ವಿದ್ಯಾರ್ಥಿನಿ ಶ್ರಾವಣಿ ಕಾಳೆ, ಕಡಿಮೆ ಅಂಕ ಬಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಸಲಿಗೆ ಆಗಿದ್ದೇ ಬೇರೆ!

ಹುಬ್ಬಳ್ಳಿ ನಗರದ ಕನಕದಾಸ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದಿದ್ದ ಶ್ರಾವಣಿ, ಪರೀಕ್ಷೆಯನ್ನು ಕೂಡ ಚೆನ್ನಾಗಿ ಬರೆದಿದ್ದಳು. ಆಕೆಗೆ ಪರೀಕ್ಷೆಯಲ್ಲಿ 600 ಅಂಕಕ್ಕೆ ಬರೋಬ್ಬರಿ 466 ಅಂಕಗಳು ಬಂದಿದ್ದು ಶೇಕಡಾ 77.67 ಅಂಕ ಪಡೆದಿದ್ದು ಫಸ್ಟ್ ಕ್ಲಾಸ್​ನಲ್ಲಿ ಪಾಸಾಗಿದ್ದಾಳೆ. ಆದರೆ ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಅಜ್ಜನಿಗೆ ಊಟ ಕೊಟ್ಟು ಕೋಣೆಗೆ ಹೋಗಿದ್ದ ಶ್ರಾವಣಿ, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆಯಾದರೂ ಶ್ರಾವಣಿ ರೂಮ್​​ನಿಂದ ಹೊರಬರದೇ ಇದ್ದಾಗ ಕುಟುಂಬದವರು ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ದುಡುಕಿನ ನಿರ್ಧಾರ

ಇನ್ನು ಶ್ರಾವಣಿ, ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಬರುವ ವಿಶ್ವಾಸದಲ್ಲಿದ್ದಳಂತೆ. ಇದನ್ನು ಅನೇಕರ ಮುಂದೆ ಹೇಳಿದ್ದಳಂತೆ. ಕನಿಷ್ಟ ಶೇಕಡಾ 90ರ ಮೇಲಾದರೂ ಅಂಕ ಬಂದೇ ಬರ್ತಾವೆ ಅಂತ ವಿಶ್ವಾಸ ಹೊಂದಿದ್ದಳಂತೆ. ಆದರೆ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಅಂಕ ಬಂದಿದ್ದಕ್ಕೆ ಶ್ರಾವಣಿ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ಶ್ರಾವಣಿ ತಂದೆ ಆಟೋ ಚಾಲಕನಾಗಿದ್ದಾರೆ. ಆದರೆ ತಾನು ಚೆನ್ನಾಗಿ ಓದಬೇಕು, ದೊಡ್ಡ ಕೆಲಸ ಪಡೆಯಬೇಕು ಅಂತ ಅಜ್ಜ, ಅಜ್ಜಿ ಜೊತೆಗೆ ವಾಸವಾಗಿದ್ದ ಶ್ರಾವಣಿ, ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು: ತಾಯಿಯ ನಡವಳಿಕೆ ಮೇಲೆಯೇ ಸಂಬಂಧಿಕರ ಶಂಕೆ!

ವಿದ್ಯಾರ್ಥಿನಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿದ್ಯಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರೀಕ್ಷೆಯಲ್ಲಿ ಫೇಲ್​ ಆದರೂ ಜೀವನದಲ್ಲಿ ಫೇಲ್​ ಆಗಬಾರದು. ಆದರೆ ಶ್ರಾವಣಿ ಉತ್ತಮ ಅಂಕ ಪಡೆದ್ರು ಕೂಡ ನಿರೀಕ್ಷಿತ ಅಂಕ ಬಂದಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದು ದುರ್ದೈವದ ಸಂಗತಿ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ, ಹೆಚ್ಚು ಅಂಕ ಪಡೆಯಲು ಮತ್ತೆ ಅನೇಕ ಅವಕಾಶಗಳಿವೆ. ಹೀಗಾಗಿ ವಿದ್ಯಾರ್ಥಿಗಳು ಅಂಕದ ಬಗ್ಗೆ ಚಿಂತಿಸದೇ ಭವಿಷ್ಯತ್ತಿನ ಬಗ್ಗೆ ಚಿಂತಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:42 pm, Sat, 11 April 26

Follow Us