ಹೂಗಳಿಗೆ ಬೆಲೆಯಿಲ್ಲದೆ ಕಂಗಾಲಾದ ಚಿಕ್ಕಬಳ್ಳಾಪುರ ರೈತರು; ಮಾರುಕಟ್ಟೆಯಲ್ಲಿಯೇ ಹೂ ರಾಶಿ ಹಾಕಿ ಆಕ್ರೋಶ
ಕೊರೊನಾ ಸೋಂಕು ಕಡಿವಾಣಕ್ಕೆ ಎಲ್ಲೇಡೆ ಲಾಕ್ಡೌನ್ ಮಾಡಿ, ಕಠಿಣ ನಿಯಮಗಳನ್ನು ಜಾರಿ ಮಾಡಿದ ಕಾರಣ. ಎಲ್ಲಿಯೂ ಶುಭ ಸಮಾರಂಭಗಳು ನಡೆಯುತ್ತಿಲ್ಲ, ದೇವಸ್ಥಾನಗಳಲ್ಲಿ ಅದ್ದೂರಿ ಪೂಜೆಗಳು ನಡೆಯುತ್ತಿಲ್ಲ. ಹೀಗಾಗಿ ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ ಎಂದು ಹೂ ವರ್ತಕ ರಾಜಶೇಖರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಕೊರೊನಾ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಅದರಂತೆ ಲಾಕ್ಡೌನ್ನಿಂದಾಗಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೆ ರೈತರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು ಇದರಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರದ ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ ಕಂಗಾಲಾಗಿದ್ದು, ಮಾರುಕಟ್ಟೆಯಲ್ಲಿಯೇ ಬೆಳೆಯನ್ನು ರಾಶಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದ ರೈತರು ತರಕಾರಿ, ಹಣ್ಣು ಹಂಪಲದ ಜೊತೆ ಹೂಗಳನ್ನು ಬೆಳೆದು ಅದರಿಂದಲೇ ಜೀವನ ಸಾಗಿಸುತ್ತಿದ್ದರು. ರಾಜ್ಯದಲ್ಲಿ ನೆರೆ ಬರಲಿ, ಬರ ವಿರಲಿ ಯಾವುದಕ್ಕೂ ಜಗ್ಗದೆ, ಯಾವುದಕ್ಕೂ ಕುಗ್ಗದೆ, ಆದಾಯ ಗಳಿಸುತ್ತಿದ್ದರು. ಆದರೆ ಈಗ ಅದೇ ರೈತರು ಕಷ್ಟ ಪಟ್ಟು ಬೆಳೆದ ತರೇವಾರಿ ಹೂಗಳನ್ನು ಮಾರಲು ಆಗದೆ ಕಷ್ಟಕ್ಕೆ ಸಿಲುಕಿದ್ದಾರೆ.
ಹೂ ಬೆಳೆಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದ ರೈತರು, ಹೂಗಳಲ್ಲೆ ಶ್ರೀಮಂತರು ಆಗಿದ್ದಾರೆ. ಆದರೆ ಕಳೆದ ಕೊರೊನಾ ಪ್ರಥಮ ಹಂತದಲ್ಲಿ ಬೆಳೆದ ಹೂಗಳಿಗೆ ಬೆಲೆಯಿಲ್ಲದೆ ಹಾಳಾಗಿ ಹೊಗಿತ್ತು. ಈಗಲಾದರೂ ಬೆಲೆ ಸಿಗುತ್ತೆ ಎಂದು ಭರವಸೆಯಿಂದ ರೈತರು ಸಾಲ ಸೂಲ ಮಾಡಿ ಹೂ ಬೆಳೆದಿದ್ದರು.ಆದರೆ ರೈತರ ಕನಸು ಹುಸಿಯಾಗಿದೆ. ಬೆಳೆದ ಹೂವನ್ನು ಚಿಕ್ಕಬಳ್ಳಾಪುರದಲ್ಲಿರುವ ಹೂ ಮಾರುಕಟ್ಟೆಗೆ ತಂದರೆ ಅಲ್ಲಿ ಹೂಗಳನ್ನು ಕೇಳುವವರೆ ಇಲ್ಲ. ಇದರಿಂದ ಹೂಗಳನ್ನು ತಿಪ್ಪೆಗೆ ಸುರಿದು, ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಬಂದಿದ್ದೇವೆ ಎಂದು ಹೂ ಬೆಳೆಗಾರರಾದ ಮಹೇಂದ್ರ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆ ಹೆಚ್ಚು ಹೆಸರುವಾಸಿಯಾಗಿದ್ದು, ಇಲ್ಲಿ ಇರುವ ತರೇವಾರಿ ಹೂ, ಹೂವಿನ ಗುಣಮಟ್ಟ, ಬಣ್ಣ ಮತ್ತು ವಾಸನೆಯಿಂದಲೇ ಖ್ಯಾತಿ ದೊರೆತಿದೆ. ಇದರಿಂದ ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಗಳಿಗೂ ಹೂ ರಪ್ತು ಆಗುತ್ತಿತ್ತು. ಆದರೆ ಈಗ ಕೊರೊನಾ ಸೋಂಕು ಕಡಿವಾಣಕ್ಕೆ ಎಲ್ಲೇಡೆ ಲಾಕ್ಡೌನ್ ಮಾಡಿ, ಕಠಿಣ ನಿಯಮಗಳನ್ನು ಜಾರಿ ಮಾಡಿದ ಕಾರಣ. ಎಲ್ಲಿಯೂ ಶುಭ ಸಮಾರಂಭಗಳು ನಡೆಯುತ್ತಿಲ್ಲ, ದೇವಸ್ಥಾನಗಳಲ್ಲಿ ಅದ್ದೂರಿ ಪೂಜೆಗಳು ನಡೆಯುತ್ತಿಲ್ಲ. ಹೀಗಾಗಿ ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ ಎಂದು ಹೂ ವರ್ತಕ ರಾಜಶೇಖರ್ ತಿಳಿಸಿದ್ದಾರೆ.
ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಆಗಿದೆ ರೈತರ ಪರಿಸ್ಥಿತಿ. ರೈತರು ವರ್ಷವಿಡಿ ಕಷ್ಟ ಪಟ್ಟು ಬೆಳೆದ ಬೆಳೆ ಫಸಲು ಬಂದ ಮೇಲೆ ಈ ರೀತಿ ಕೊರೊನಾ ಲಾಕ್ಡೌನ್ಗೆ ಸಿಲುಕಿ ಬೆಲೆ ಇಲ್ಲದಂತಾಗುತ್ತಿದೆ. ಇನ್ನಾದರೂ ಸರ್ಕಾರ ರೈತರ ಸಮಸ್ಯೆಯನ್ನು ಅರಿತು ಸೂಕ್ತ ಪರಿಹಾರ ಘೋಷಿಸಬೇಕು ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಲಾಕ್ಡೌನ್ನಿಂದ ಬೆಳೆದ ಬೆಳೆಗೆ ಬೆಲೆ ಇಲ್ಲ; ಹೊಲದಲ್ಲಿಯೇ ಬದನೆಕಾಯಿಯನ್ನು ನಾಶ ಮಾಡಿದ ಬೆಳಗಾವಿ ರೈತ
ಲಾಕ್ಡೌನ್ ಎಫೆಕ್ಟ್: ಮಾರಾಟವಾಗಲಿಲ್ಲ ಕಲ್ಲಂಗಡಿ ಹಣ್ಣು, ಸಾಲ ಮಾಡಿ ಬೆಳೆದ ಬೆಳೆಯನ್ನು ನಾಶ ಮಾಡಿದ ಬಡ ರೈತ