AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ಊರಿಗೆ ಉಪಕಾರ ಮಾಡಿ ಕಂಗಾಲಾದ ರೈತರು: ಕೆರೆಗಾಗಿ ಭೂಮಿ ಕೊಟ್ಟವರಿಗೆ 5 ದಶಕವಾದ್ರೂ ಸಿಕ್ಕಿಲ್ಲ ಪರಿಹಾರ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ರೈತರು ಕೆರೆ ನಿರ್ಮಾಣಕ್ಕೆ ಫಲವತ್ತಾದ ಭೂಮಿ ನೀಡಿ ಐದು ದಶಕಗಳಾದರೂ ಪೂರ್ಣ ಪರಿಹಾರ ದೊರೆತಿಲ್ಲ. ಸರ್ಕಾರ ಮೊದಲ ಕಂತು ಮಾತ್ರ ಪಾವತಿಸಿ, ಉಳಿದ ಹಣ ನೀಡದೆ ಅನ್ಯಾಯ ಎಸಗಿದೆ. ಇದರ ಜೊತೆ ಕೆರೆಯ ಹಿನ್ನೀರಿನಿಂದ ಬೆಳೆ ನಷ್ಟ ಅನುಭವಿಸುತ್ತಿದ್ದರೂ ಪರಿಹಾರವಿಲ್ಲದೆ ಪರದಾಡುತ್ತಿದ್ದಾರೆ.

ಇಡೀ ಊರಿಗೆ ಉಪಕಾರ ಮಾಡಿ ಕಂಗಾಲಾದ ರೈತರು: ಕೆರೆಗಾಗಿ ಭೂಮಿ ಕೊಟ್ಟವರಿಗೆ 5 ದಶಕವಾದ್ರೂ ಸಿಕ್ಕಿಲ್ಲ ಪರಿಹಾರ
ರೈತರು Image Credit source: tv9 kannada
ಸುರೇಶ್ ನಾಯಕ್
| Edited By: |

Updated on: Oct 02, 2026 | 5:56 PM

Share

ಮುಖ್ಯಾಂಶಗಳು

  • ಕೆರೆಗಾಗಿ ಭೂಮಿ ಬಿಟ್ಟುಕೊಟ್ಟು 5 ದಶಕ ಕಳೆದರೂ ಸಿಗದ ಪರಿಹಾರ
  • ಬೀದರ್‌ನ ಹಾಲಹಿಪ್ಪರ್ಗಾ ರೈತರ ಕಣ್ಣೀರು
  • ಕೂಡಲೇ ಸೂಕ್ತ ಪರಿಹಾರಕ್ಕೆ ಅನ್ನದಾತರ ಒತ್ತಾಯ

ಬೀದರ್, ಅಕ್ಟೋಬರ್​​ 20: ಇತರ ರೈತರಿಗೆ ಹಾಗೂ ಊರಿಗೆ ಅನುಕೂಲವಾಗಲಿ ಎಂದು ಫಲವತ್ತಾದ ಕೃಷಿ ಜಮೀನು ಬಿಟ್ಟುಕೊಟ್ಟ ಅನ್ನದಾತರಿಗೆ ಐದು ದಶಕಗಳೇ ಕಳೆದರೂ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಕೆರೆಗಾಗಿ ಭೂಮಿ ನೀಡಿ, ಇಡೀ ಊರಿಗೆ ಉಪಕಾರ ಮಾಡಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ನೀಡಿದ ಭರವಸೆ ಈಡೇರದೆ, ಪರಿಹಾರಕ್ಕಾಗಿ ರೈತರು ಕಚೇರಿಗಳಿಗೆ ಅಲೆದಾಡುತ್ತಿರುವ ಈ ದಾರುಣ ಪರಿಸ್ಥಿತಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ಗ್ರಾಮದಲ್ಲಿ ಕಂಡುಬಂದಿದೆ.

50 ವರ್ಷಗಳಿಂದ ಬಾಕಿ ಉಳಿದ ಪರಿಹಾರ: ರೈತರು ಅಸಮಾಧಾನ

ಹಾಲಹಿಪ್ಪರ್ಗಾ ಗ್ರಾಮದ ಕೆರೆ ನಿರ್ಮಾಣದ ಸಂದರ್ಭದಲ್ಲಿ ಗ್ರಾಮದ 56 ರೈತರಿಂದ ಸುಮಾರು 300 ಎಕರೆ ಕೃಷಿ ಜಮೀನನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಂಡಿತ್ತು. ಕೆರೆ ನಿರ್ಮಾಣದಿಂದ ರೈತರಿಗೆ ಸೇರಿದ ಫಲವತ್ತಾದ ಜಮೀನು ನೀರಾವರಿ ಯೋಜನೆಗೆ ಒಳಪಟ್ಟಿತ್ತು. ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದಾಗಿ ಅಂದಿನ ಸರ್ಕಾರ ಭರವಸೆ ನೀಡಿತ್ತು. ಆಗಿನ ನಿಯಮದಂತೆ ಪ್ರತಿ ಎಕರೆಗೆ 4 ಸಾವಿರ ರೂ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು.

ಇದನ್ನೂ ಓದಿ: ಬೀದರ್: ಭೀಕರ ಬರಗಾಲದ ನಡುವೆಯೂ ಸಾವಯವ ಪದ್ದತ್ತಿಯಲ್ಲಿ ಪಪ್ಪಾಯಿ ಬೆಳೆಸಿ ಲಕ್ಷಲಕ್ಷ ಆದಾಯದ ನಿರೀಕ್ಷೆಯಲ್ಲಿ ರೈತ!

ಅದರಂತೆ ಮೊದಲ ಹಂತದಲ್ಲಿ ಪ್ರತಿ ಎಕರೆಗೆ 2 ಸಾವಿರದಂತೆ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ಜಮೆ ಮಾಡಲಾಗಿತ್ತು. ಉಳಿದ 2 ಸಾವಿರವನ್ನು ಎರಡನೇ ಕಂತಿನಲ್ಲಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರು ಎಂದು ರೈತರು ಹೇಳುತ್ತಿದ್ದಾರೆ. ಆದರೆ ಮೊದಲ ಕಂತಿನ ಹಣ ಪಾವತಿಯಾದ ನಂತರ ಎರಡನೇ ಕಂತಿನ ಪರಿಹಾರ ಮಾತ್ರ ರೈತರ ಕೈಸೇರಿಲ್ಲ. ವರ್ಷಗಳು, ದಶಕಗಳು ಕಳೆದರೂ ಬಾಕಿ ಪರಿಹಾರದ ಹಣ ಬಿಡುಗಡೆಯಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಟುಂಬಗಳಿಗೆ ಆರ್ಥಿಕ ಸಂಕಷ್ಟ: ಅಳಲು ತೋಡಿಕೊಂಡ ರೈತರು

‘ಐದು ದಶಕಗಳು ಕಳೆದರೂ ತಮ್ಮ ಜಮೀನಿಗೆ ಸಂಪೂರ್ಣ ಪರಿಹಾರ ಸಿಗದಿರುವುದು ದುರಂತ. ಕೆರೆ ನಿರ್ಮಾಣದ ಉದ್ದೇಶದಿಂದ ಜಮೀನು ಕಳೆದುಕೊಂಡ ರೈತರು ತಮ್ಮ ಜೀವನಾಧಾರವನ್ನೇ ಕಳೆದುಕೊಂಡಿದ್ದಾರೆ. ಕೃಷಿಯನ್ನೇ ನಂಬಿಕೊಂಡಿದ್ದ ಕುಟುಂಬಗಳು ಜಮೀನು ಕಳೆದುಕೊಂಡ ಬಳಿಕ ಪರಿಹಾರದ ಹಣವನ್ನೇ ನಿರೀಕ್ಷಿಸುತ್ತಿದ್ದರು. ಆದರೆ ವರ್ಷಗಳೇ ಕಳೆದರೂ ಸರ್ಕಾರದಿಂದ ಉಳಿದ ಪರಿಹಾರ ದೊರೆಯದಿರುವುದರಿಂದ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಹಿನ್ನೀರಿನಿಂದ ಹೆಚ್ಚಿದ ಸಂಕಷ್ಟ: ಪ್ರತಿವರ್ಷ ಬೆಳೆ ಹಾನಿ

ಇನ್ನು ಕೆರೆ ಹಿನ್ನೀರಿನಿಂದಾಗಿ ಮತ್ತೊಂದು ಸಮಸ್ಯೆ ರೈತರನ್ನು ಕಾಡುತ್ತಿದೆ. ಮಳೆ ಪ್ರಮಾಣ ಹೆಚ್ಚಾದಾಗ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತದೆ. ಕೆರೆ ತುಂಬಿದ ಬಳಿಕ ಹಿನ್ನೀರಿನ ಪ್ರಮಾಣವೂ ಹೆಚ್ಚಾಗುವುದರಿಂದ ಕೆರೆಯ ಸುತ್ತಮುತ್ತಲಿನ ಕೃಷಿ ಜಮೀನುಗಳಿಗೆ ನೀರು ನುಗ್ಗುತ್ತದೆ. ಇದರಿಂದ ರೈತರು ಪ್ರತಿವರ್ಷ ಬೆಳೆ ಹಾನಿಯನ್ನು ಎದುರಿಸುವಂತಾಗಿದೆ.

LIVE TV

ಅದರಲ್ಲೂ ವಿಶೇಷವಾಗಿ ಕೆರೆ ನಿರ್ಮಾಣದ ವೇಳೆ ಭೂಸ್ವಾಧೀನ ಮಾಡಿಕೊಳ್ಳದ ಕೆಲವು ಜಮೀನುಗಳಲ್ಲಿಯೂ ಮಳೆಗಾಲದಲ್ಲಿ ನೀರು ನಿಂತುಕೊಳ್ಳುತ್ತದೆ. ಹಿನ್ನೀರಿನಿಂದಾಗಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದು, ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರದಿಂದ ಜಮೀನು ಅಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳದ ಕಾರಣ ರೈತರಿಗೆ ಪರಿಹಾರವೂ ಸಿಗುತ್ತಿಲ್ಲ.

ರೈತರ ಪ್ರಮುಖ ಬೇಡಿಕೆಗಳು ಏನು?

ಕೆರೆ ನಿರ್ಮಾಣದ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ಘೋಷಿಸಿದ ಪರಿಹಾರದ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಅಲ್ಲದೆ, ಪ್ರತಿ ವರ್ಷ ಕೆರೆಯ ಹಿನ್ನೀರಿನಿಂದ ಮುಳುಗಡೆಯಾಗುತ್ತಿರುವ ಜಮೀನುಗಳನ್ನ ಸರ್ಕಾರ ಸಮರ್ಪಕವಾಗಿ ಪರಿಶೀಲಿಸಿ, ಅಗತ್ಯವಿದ್ದರೆ ಅವುಗಳನ್ನು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಜಮೀನಿನ ವಿಸ್ತೀರ್ಣ, ಹಿನ್ನೀರಿನಿಂದಾಗುತ್ತಿರುವ ಹಾನಿ ಹಾಗೂ ರೈತರಿಗೆ ಉಂಟಾಗುತ್ತಿರುವ ನಷ್ಟದ ಕುರಿತು ಸಮಗ್ರ ಸಮೀಕ್ಷೆ ನಡೆಸುವಂತೆ ರೈತರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೀದರ್‌ನಲ್ಲಿ ವಿದ್ಯುತ್ ನೀಡಲು ಕಣ್ಣಾಮುಚ್ಚಾಲೆ: ಜೆಸ್ಕಾಂ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆ

ಒಂದೆಡೆ ಕಳೆದುಕೊಂಡ ಜಮೀನಿಗೆ ಪರಿಹಾರ ಸಿಗದೆ, ಮತ್ತೊಂದೆಡೆ ಉಳಿದ ಜಮೀನಿಗೆ ಹಿನ್ನೀರು ನುಗ್ಗಿ ಬೆಳೆ ನಷ್ಟ ಅನುಭವಿಸುತ್ತಿರುವ ಹಾಲಹಿಪ್ಪರ್ಗಾ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬಾಕಿ ಪರಿಹಾರ ವಿತರಿಸುವುದರ ಜೊತೆಗೆ ಹಿನ್ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಸುರೇಶ್ ನಾಯಕ್
ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More