ನಿಸ್ವಾರ್ಥ ರಾಜಕಾರಣದ ಮೂಲಕ ಅಪರೂಪದ ನಾಯಕರೆನಿಸಿಕೊಂಡಿದ್ದ ಕಾಂಗ್ರೆಸ್ ಮಾಜಿ ಸಂಸದ ಹೆಚ್ ಬಿ ಪಾಟೀಲ ವಿಧಿವಶ
ಪಾಟೀಲರು 1984-89 ರ ಆವಧಿಗೆ ಬಾಗಲಕೋಟೆಯ ಸಂಸದರಾಗಿದ್ದರು. ಇಂದಿರಾ ಗಾಂಧಿಯವರು ಭಯೋತ್ಪಾದಕರ ಗುಂಡಿಗೆ ಬಲಿಯಾದ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ದಾಖಲೆಯ 414 ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೆ ಬಂದಾಗ ಪಾಟೀಲ ಅವರು ಬಾಗಲಕೋಟೆಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.
ಕಾಂಗ್ರೆಸ್ ಪಕ್ಷದ ಹಿರಿಯ ಕೊಂಡಿಯೊಂದು ಕಳಚಿದೆ. ಪಕ್ಷದ ಸಂಸತ್ ಸದಸ್ಯರಾಗಿದ್ದ ಹನುಮಂತ ಗೌಡ ಭೀಮನಗೌಡ ಪಾಟೀಲ (HB Patil) (ಎಚ್ ಬಿ ಪಾಟೀಲ ಅಂತಲೇ ಹೆಚ್ಚು ಪರಿಚಿತರು) ಮಂಗಳವಾರ ಮಧ್ಯಾಹ್ನ ಇಹಲೋಕ ಯಾತ್ರೆಯನ್ನು ತ್ಯಜಿಸಿದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಾಟೀಲ್ ಅವರು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನಲ್ಲಿರುವ ರಡ್ಡೇರ ತಿಮ್ಮಾಪುರ (Radder Timmapur) ಹೆಸರಿನ ತಮ್ಮ ಸ್ವಗ್ರಾಮದಲ್ಲಿ ಹೃದಯಾಘಾತಕ್ಕೊಳಗಾದರು (heart attack). ಕೂಡಲೇ ಅವರನ್ನು ಬಾಗಲಕೋಟೆಯ ಕೆರೂಡಿ ಅಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಶ್ರೀಯುತರು ಪತ್ನಿ, ಐವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ. ಮಗ ಡಾ ಭೀಮನಗೌಡ ಪಾಟಿಲ್ ( Dr Bhimangouda Patil) ನ್ಯೂರೋಲಾಜಿಸ್ಟ್ ಆಗಿದ್ದು, ಲಂಡನ್ ನಲ್ಲಿ ನೆಲೆಸಿದ್ದಾರೆ. ಅವರ ಅಂತಿಮ ಸಂಸ್ಕಾರ ಬುಧವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ.
ಪಾಟೀಲರು 1984-89 ರ ಆವಧಿಗೆ ಬಾಗಲಕೋಟೆಯ ಸಂಸದರಾಗಿದ್ದರು. ಇಂದಿರಾ ಗಾಂಧಿಯವರು ಭಯೋತ್ಪಾದಕರ ಗುಂಡಿಗೆ ಬಲಿಯಾದ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ದಾಖಲೆಯ 414 ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೆ ಬಂದಾಗ ಪಾಟೀಲ ಅವರು ಬಾಗಲಕೋಟೆಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.
ನಿಮಗೆ ನೆನೆಪಿರಬಹುದು, ವೃತ್ತಿಯಲ್ಲಿ ಪೈಲಟ್ ಆಗಿದ್ದ ಇಂದಿರಾ ಗಾಂಧಿಯವರ ಪ್ರಥಮ ಪುತ್ರ ದಿವಂಗತ ರಾಜೀವ್ ಗಾಂಧಿ ಅವರನ್ನು ಕರೆ ತಂದು ದೇಶದ ಪ್ರಧಾನ ಮಂತ್ರಿಯಾಗಿ ಮಾಡಲಾಗಿತ್ತು. ಅವರ ಸಂಪುಟದಲ್ಲಿ ಪಾಟೀಲ ಅವರಿಗೆ ಸಚಿವ ಸ್ಥಾನ ಸಿಕ್ಕೀತೆಂಬ ನಿರೀಕ್ಷೆ ಸಂಸದರಿಗೆ ಮತ್ತು ಕನ್ನಡಿಗರಿಗೆ ಇತ್ತು. ಆದರೆ ಅದು ಹುಸಿ ಹೋಗಿದ್ದು ಸತ್ಯ. ಗಮನಿಸಬೇಕಾದ ಸಂಗತಿಯೆಂದರೆ, ಪಾಟೀಲರು ಸಚಿವ ಸ್ಥಾನ ಸಿಗದೇ ಹೋಗಿದ್ದಕ್ಕೆ ತಮ್ಮ ಆಪ್ತರ ಮುಂದೆ ಯಾವತ್ತೂ ನಿರಾಶೆ ವ್ಯಕ್ತಪಡಿಸಿರಲಿಲ್ಲವಂತೆ.
ಎಮ್ ಎ ಪದವೀಧರರಾಗಿದ್ದ ಹೆಚ್ ಬಿ ಪಾಟೀಲ್ ಅವರು ವಿದ್ಯಾರ್ಥಿ ದೆಸೆಯಿಂದ ಹಿಂದೆ ಲೋಕಸಭಾ ಸದಸ್ಯರಾಗಿದ್ದ ಗದಗದ ಕೆ ಹೆಚ್ ಪಾಟಿಲ್ ಹಾಗೂ ಸುನಗ ಮೂಲದ ದಿ. ಎಸ್ ಬಿ ಪಾಟೀಲ್ ಅನುಯಾಯಿಗಳಾಗಿದ್ದರು. ಅವರಿಂದ ಪ್ರಭಾವಿತರಾಗಿ ರಾಜಕೀಯ ರಂಗಕ್ಕೆ ದುಮುಕಿದ್ದರು.
ತಮ್ಮ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ನಂದಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಲೈಸೆನ್ಸ್ ದೊರಕಿಸಿಕೊಟ್ಟರು ಮತ್ತು ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ನೂಲಿನ ಗಿರಣಿ ಚೇರ್ಮನ್ ಆಗಿ ಸೇವೆ ಸಹ ಸಲ್ಲಿಸಿದ್ದರು. ಹಲವಾರು ಜನರಿಗೆ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಿಗಳಾಗಿದ್ದ ಪಾಟೀಲ್ ಅವರ ನಿಧನದಿಂದ ಬಾಗಲಕೋಟೆ ಜಿಲ್ಲೆ ಬಡವಾಗಿದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಹನುಮಂತಗೌಡ ಪಾಟಿಲ್ ಒಬ್ಬ ಮಾಜಿ ಸಂಸದರಾದರೂ ಎಲ್ಲೂ ತಮ್ಮ ಪ್ರಭಾವ ಬಳಸುತ್ತಿರಲಿಲ್ಲ. ತೀರ ಸರಳ ಜೀವಿಯಾಗಿ ಬದುಕುತ್ತಿದ್ದರು. ತಮ್ಮ ಸ್ವಂತ ಕೆಲಸಗಳಿಗೂ ಮಾಜಿ ಸಂಸದನೆಂಬ ಪ್ರಭಾವ ಬೀರುತ್ತಿರಲಿಲ್ಲ. ತಮ್ಮ ಕುಟುಂಬ ಸದಸ್ಯರಿಗೆ ಎಂದೂ ಕೂಡ ರಾಜಕೀಯ ಸೇರುವಂತೆ ಪ್ರೇರೇಪಿಸಲಿಲ್ಲ. ಕುಟುಂಬ ರಾಜಕಾರಣಕ್ಕೆ ಅವರು ಮಣೆ ಹಾಕಿದವರಲ್ಲ.
ಒಬ್ಬನೇ ಮಗನನ್ನು ವೈದ್ಯರನ್ನಾಗಿ ಮಾಡಿ, ಐವರು ಪುತ್ರಿಯರನ್ನು ಉತ್ತಮ ಮನೆತನಗಳಿಗೆ ಮದುವೆ ಮಾಡಿಕೊಟ್ಟು ಸಂತೃಪ್ತ ಜೀವನ ಸಾಗಿಸಿ ಮಾದರಿ ಬದುಕು ನಡೆಸಿದರು ಹನುಮಂತ ಗೌಡ ಪಾಟೀಲ್.
ಆದರೆ, ಸಂಸದರಾಗಿ ಅವಧಿ ಪೂರ್ಣಗೊಳಿಸಿದ ಬಳಿಕ ಪಾಟೀಲ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿದರು. 1989ರಲ್ಲಿ ನಡೆದ ಸಾರ್ವತ್ರಿಕ ಚುನಾಣೆಯಲ್ಲಿ ಕಾಂಗ್ರೆಸ್ ವೀರೇಂದ್ರ ಪಾಟೀಲ ಅವರಿಗೆ ಟಿಕೆಟ್ ನೀಡಿತ್ತು. ಟಿಕೆಟ್ ನೀಡದ ಕಾರಣ ಅವರಲ್ಲಿ ರಾಜಕೀಯದ ಬಗ್ಗೆ ವೈರಾಗ್ಯ ಮೂಡಲು ಕಾರಣವಾಯಿತೋ ಅಂತ ಜನ ಅಂದುಕೊಳ್ಳುವುದುಂಟು.
ಇದನ್ನೂ ಓದಿ: ಬಾಗಲಕೋಟೆ: ವಜಾಗೊಂಡ ಪೊಲೀಸ್ ಕಾನ್ಸ್ಟೇಬಲ್ನಿಂದ ಅಧಿಕಾರಿಯ ಅಪಹರಣಕ್ಕೆ ಯತ್ನ; ಬೆಚ್ಚಿಬಿದ್ದ ಸ್ಥಳೀಯರು