ಜಾತ್ರೆಗಳಲ್ಲಿ ಮುಸ್ಲಿಮರ ನಿರ್ಬಂಧಕ್ಕೆ ಆಗ್ರಹ: ತೋಂಟದಾರ್ಯ ಮಠದ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ

ಮಠದ ಆಡಳಿತ ಮಂಡಳಿಯ ವಿರುದ್ಧ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ಹಾಗೂ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಾತ್ರೆಗಳಲ್ಲಿ ಮುಸ್ಲಿಮರ ನಿರ್ಬಂಧಕ್ಕೆ ಆಗ್ರಹ: ತೋಂಟದಾರ್ಯ ಮಠದ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ
ಗದಗದ ತೋಂಟದಾರ್ಯ ಮಠದ ಎದುರು ಪೊಲೀಸ್ ಭದ್ರತೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 10, 2022 | 3:35 PM

ಗದಗ: ದೇಗುಲ ಮತ್ತು ಜಾತ್ರೆಗಳಲ್ಲಿ ಮುಸ್ಲಿಂ​​ ವ್ಯಾಪಾರಿಗಳಿಗೆ ನಿರ್ಬಂಧ ಹೇರಬೇಕು ಎಂಬ ಹಿಂದುತ್ವ ಪರ ಸಂಘಟನೆಗಳ ಒತ್ತಾಯವು ಇದೀಗ ಗದಗದಲ್ಲಿ ದೊಡ್ಡ ಸದ್ದು ಮಾಡಿದೆ. ತೋಂಟದಾರ್ಯ ಮಠದ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಮಠದ ಆಡಳಿತ ಮಂಡಳಿಯ ವಿರುದ್ಧ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ಹಾಗೂ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭಾವೈಕ್ಯತೆಯ ಹೆಸರಿನಲ್ಲಿ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಕಾರ್ಯಕರ್ತರು ದೂರಿದರು.

ತೋಂಟದಾರ್ಯ ಮಠದ ಎದುರು ಹಿಂದೂ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮಠಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಏಪ್ರಿಲ್ 15ರಂದು ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪಾಲ್ಗೊಳ್ಳಲಿದ್ದಾರೆ. ಅಂದೂ ಸಹ ಶ್ರೀರಾಮಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಕೊಟ್ಟ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮಠದ ಆಡಳಿತ ಮಂಡಲಿಯು ಇದು ಜಿಲ್ಲಾಡಳಿತದ ನಿರ್ಧಾರ ಎಂದು ಹೇಳಿದೆ. ಒಂದೆಡೆ ಜಾತ್ರೆಗೆ ಭರ್ಜರಿ ತಯಾರಿಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಪ್ರತಿಭಟನೆಯೂ ಜೋರಾಗಿದೆ.

ಅರಾಜಕತೆ ಸೃಷ್ಟಿಗೆ ಯತ್ನ

ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಇದರಿಂದ ಉದ್ಯಮಿಗಳು ರಾಜ್ಯ ತೊರೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗದಗದಲ್ಲಿ ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು. ನಮ್ಮದು ಡಬಲ್ ಇಂಜಿನ್ ಸರ್ಕಾರವೆಂದು ಹೇಳಿಕೊಳ್ಳುತ್ತಾರೆ. ಆದರೆ ಬಿಜೆಪಿ ಸರ್ಕಾರವು ಈವರೆಗೆ ಒಂದಾದರೂ ಜನಪರ ಕಾಳಜಿಯ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ದೆಹಲಿಯಲ್ಲಿ ರಾಜ್ಯದ ಪರ ಯಾವುದೇ ಧ್ವನಿ ಎತ್ತುತ್ತಿಲ್ಲ ಎಂದರು.

2014ರಲ್ಲಿ ಬಿಜೆಪಿ ಎಲ್ಲೆಡೆ ಬೆಲೆ ಏರಿಕೆಯನ್ನು ಪ್ರಸ್ತಾಪಿಸುತ್ತಿತ್ತು. ಆದರೆ ಈಗ ಅದೇ ಕೆಲಸ ಮಾಡುತ್ತಿದೆ. ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವವರು ಯಾವುದೇ ಕೆಲಸ ಮಾಡಲಿಲ್ಲ. ನೋಟ್ ಬ್ಯಾನ್ ಮಾಡಿ ಯುವಕರ ಉದ್ಯೋಗ ಕಸಿದುಕೊಂಡರು. ಇಂಥ ಕೆಟ್ಟ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡುತ್ತಿದ್ದೀರಿ. ಹೋಟೆಲ್​ನಲ್ಲಿ ಉಪಹಾರ ಮಾಡಿದರೆ ಅದರಲ್ಲೂ ಜಿಎಸ್​ಟಿ ಮೂಲಕ ಅಮೀತ್ ಶಾ, ಮೋದಿ ಪಾಲು ಪಡೆಯುತ್ತಾರೆ. ಕೇವಲ ಜಯಕಾರ ಹಾಕಿದರೆ ಹೊಟ್ಟೆ ತುಂಬಲು ಸಾಧ್ಯವೇ? ಕರ್ನಾಟಕ ಅಂದ್ರೆ ನಾಟಕ‌ ಮಾಡೋರು ಅಂತಾರೆ. ಇಂಥ ಕೆಟ್ಟ ಸ್ಥಿತಿಗೆ ರಾಜ್ಯ ಬಂದಿದ್ದೇಕೆ? ಕರ್ನಾಟಕದ 41 ಸಾವಿರ ಯುವಕರು ಖಿನ್ನತೆಗೆ ಜಾರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Google: ಮುಸ್ಲಿಂ ಪ್ರಾರ್ಥನೆ ಆ್ಯಪ್​ಗಳನ್ನು ಪ್ಲೇ ಸ್ಟೋರ್​ನಿಂದ ತೆಗೆದುಹಾಕಿದ ಗೂಗಲ್

ಇದನ್ನೂ ಓದಿ: ಶ್ರೀರಾಮಸೇನೆ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆಯಿದೆ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ