AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಜ್ಯೋತಿ ಮರುಪರಿಶೀಲನೆಗೆ ಲಕ್ಷಾಂತರ ಫಲಾನುಭವಿಗಳ ನಿರಾಸಕ್ತಿ: ಫ್ರೀ ಕರೆಂಟ್ ಕೈತಪ್ಪುವ ಭೀತಿಯಿಂದ ಮಾಹಿತಿ ನೀಡಲು ಹಿಂದೇಟು!

ಗೃಹ ಜ್ಯೋತಿ ಯೋಜನೆಯ ದುರ್ಬಳಕೆ ತಡೆಯಲು ಇಂಧನ ಇಲಾಖೆ ಫಲಾನುಭವಿಗಳ ಮರುಪರಿಶೀಲನೆ ನಡೆಸುತ್ತಿದೆ. 1.65 ಕೋಟಿ ಫಲಾನುಭವಿಗಳ ಪೈಕಿ 1.19 ಕೋಟಿ ಮಂದಿಯ ಪರಿಶೀಲನೆ ಪೂರ್ಣಗೊಂಡಿದ್ದು, ಇನ್ನೂ 45.78 ಲಕ್ಷ ಫಲಾನುಭವಿಗಳ ಪರಿಶೀಲನೆ ಬಾಕಿ ಉಳಿದಿದೆ. ಅನೇಕರು, ಯೋಜನೆಯಡಿ ಉಚಿತ ವಿದ್ಯುತ್ ಕೈತಪ್ಪುವ ಭೀತಿಯಿಂದ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪವೂ ಇದೆ.

ಗೃಹ ಜ್ಯೋತಿ ಮರುಪರಿಶೀಲನೆಗೆ ಲಕ್ಷಾಂತರ ಫಲಾನುಭವಿಗಳ ನಿರಾಸಕ್ತಿ: ಫ್ರೀ ಕರೆಂಟ್ ಕೈತಪ್ಪುವ ಭೀತಿಯಿಂದ ಮಾಹಿತಿ ನೀಡಲು ಹಿಂದೇಟು!
ಸಾಂದರ್ಭಿಕ ಚಿತ್ರImage Credit source: tv9
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Sep 08, 2026 | 10:31 AM

Share

ಮುಖ್ಯಾಂಶಗಳು

  • ಗೃಹ ಜ್ಯೋತಿ ಪರಿಶೀಲನೆ ಶೇ 72ರಷ್ಟು ಪೂರ್ಣ
  • 45.78 ಲಕ್ಷ ಫಲಾನುಭವಿಗಳ ಪರಿಶೀಲನೆ ಬಾಕಿ
  • ಸೆಪ್ಟೆಂಬರ್ 30ಕ್ಕೆ ಮರುಪರಿಶೀಲನೆ ಗಡುವು

ಬೆಂಗಳೂರು, ಸೆಪ್ಟೆಂಬರ್ 8: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ದುರ್ಬಳಕೆ ತಡೆಯಲು ಹಾಗೂ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಇಂಧನ ಇಲಾಖೆ ಮರುಪರಿಶೀಲನಾ ಕಾರ್ಯ ನಡೆಸುತ್ತಿದೆ. ಜುಲೈ 1ರಿಂದ ಆರಂಭವಾಗಿರುವ ಈ ಪ್ರಕ್ರಿಯೆ ಸೆಪ್ಟೆಂಬರ್ 30ರವರೆಗೆ ನಡೆಯಲಿದ್ದು, ಈಗಾಗಲೇ ಶೇ 72ರಷ್ಟು ಫಲಾನುಭವಿಗಳ ಪರಿಶೀಲನೆ ಪೂರ್ಣಗೊಂಡಿದೆ. ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯ ಸುಮಾರು 1.65 ಕೋಟಿ ಫಲಾನುಭವಿಗಳಿದ್ದು, ಈ ಪೈಕಿ 1.19 ಕೋಟಿ ಫಲಾನುಭವಿಗಳ ಮರುಪರಿಶೀಲನೆ ಪೂರ್ಣಗೊಂಡಿದೆ. ಆದರೆ ಇನ್ನೂ ಲಕ್ಷಾಂತರ ಫಲಾನುಭವಿಗಳು ಪರಿಶೀಲನಾ ಪ್ರಕ್ರಿಯೆಗೆ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಗೃಹ ಜ್ಯೋತಿ: ಎರಡು ತಿಂಗಳಲ್ಲಿ ಶೇ 72ರಷ್ಟು ಪರಿಶೀಲನೆ ಪೂರ್ಣ

ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸುವ ಕಾರ್ಯ ಕಳೆದ ಎರಡು ತಿಂಗಳಿಂದ ನಡೆಯುತ್ತಿದೆ. ವಿದ್ಯುತ್ ಸರಬರಾಜು ಸಂಸ್ಥೆಗಳ ಸಿಬ್ಬಂದಿ ಮನೆ ಮನೆಗೆ ತೆರಳಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಈವರೆಗೆ 1.19 ಕೋಟಿ ಫಲಾನುಭವಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಒಟ್ಟು ಫಲಾನುಭವಿಗಳ ಪೈಕಿ ಶೇ.72ರಷ್ಟು ಮಂದಿಯ ಮರುಪರಿಶೀಲನೆ ಮುಗಿದಿದೆ.

ಗೃಹ ಜ್ಯೋತಿಗೆ ಮಾಹಿತಿ ನೀಡಲು ಕೆಲವರ ಹಿಂದೇಟು

ಮರುಪರಿಶೀಲನೆಗಾಗಿ ಮೀಟರ್ ರೀಡರ್‌ಗಳು ಹಲವು ಬಾರಿ ಮನೆಗಳಿಗೆ ಭೇಟಿ ನೀಡುತ್ತಿದ್ದರೂ, ವಿವಿಧ ಕಾರಣಗಳನ್ನು ನೀಡಿ ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಪರಿಶೀಲನೆಗೆ ಸಹಕರಿಸದ ಫಲಾನುಭವಿಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ವಿದ್ಯುತ್ ಸರಬರಾಜು ಸಂಸ್ಥೆಗಳು ಮುಂದಾಗಿವೆ. ಹೀಗಾಗಿ ಸೆಪ್ಟೆಂಬರ್ 30ರೊಳಗೆ ಬಾಕಿ ಇರುವ ಫಲಾನುಭವಿಗಳು ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಅನರ್ಹರು ಗೃಹ ಜ್ಯೋತಿ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ

ಮರುಪರಿಶೀಲನೆ ವೇಳೆ ಆದಾಯ ತೆರಿಗೆ ಪಾವತಿಸುವವರು ಹಾಗೂ ಇತರೆ ರಾಜ್ಯಗಳ ಮತದಾರರ ಗುರುತಿನ ಚೀಟಿ ಹೊಂದಿರುವವರ ಅರ್ಹತೆಯ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ಇಂತಹ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಲಾಗಿದೆ.

LIVE TV

ಗೃಹ ಜ್ಯೋತಿ ಯೋಜನೆಯ ದುರ್ಬಳಕೆಯನ್ನು ತಡೆದು, ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ಮುಂದುವರಿಸುವುದು ಮರುಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ.

45.78 ಲಕ್ಷ ಫಲಾನುಭವಿಗಳ ಪರಿಶೀಲನೆ ಬಾಕಿ

ಸದ್ಯದ ಮಾಹಿತಿಯ ಪ್ರಕಾರ ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ 45.78 ಲಕ್ಷ ಫಲಾನುಭವಿಗಳ ಮರುಪರಿಶೀಲನೆ ಇನ್ನೂ ಬಾಕಿ ಇದೆ.

ಸೆಪ್ಟೆಂಬರ್ 30ರ ಗಡುವಿನೊಳಗೆ ಈ ಫಲಾನುಭವಿಗಳ ಪರಿಶೀಲನೆ ಪೂರ್ಣಗೊಳ್ಳಬೇಕಿದೆ. ಪರಿಶೀಲನೆಗೆ ಸಹಕರಿಸದವರು ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಕಳೆದುಕೊಳ್ಳುವರೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us