ಅಕ್ಕಿ ಬೆನ್ನಲ್ಲೇ ಉತ್ತರ ಕರ್ನಾಟಕದ ಬಿಳಿಜೋಳಕ್ಕೂ ಬಂಗಾರದ ಬೆಲೆ: ದರ ಕೇಳಿಯೇ ಜನರು ಶಾಕ್
ಉತ್ತರ ಕರ್ನಾಟಕ ಭಾಗದ ಪ್ರಮುಖ ಆಹಾರ ಧಾನ್ಯ ಜೋಳದ ಬೆಲೆ ಗಗನಕ್ಕೇರಿದೆ. ಇದೀಗ ಭೀಕರ ಬರಗಾಲದಿಂದ ಬಿಳಿಜೋಳದ ಬೆಲೆ ಕೂಡ ದುಪ್ಪಟ್ಟಾಗಿದೆ. ಪ್ರತಿ ಕ್ವಿಂಟಾಲ್‌ಗೆ 10-11 ಸಾವಿರಕ್ಕೆ ತಲುಪಿ, ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ. ಇದರಿಂದ ಜೋಳದ ರೊಟ್ಟಿ ಊಟಕ್ಕೂ ಜನರಿಗೆ ಆತಂಕ ಎದುರಾಗಿದೆ.

ಮುಖ್ಯಾಂಶಗಳು
- ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನಲೆ
- ಉತ್ತರ ಕರ್ನಾಟಕದ ಬಿಳಿಜೋಳಕ್ಕೂ ಬಂತು ಬಂಗಾರದ ಬೆಲೆ
- ಪ್ರತಿ ಕ್ವಿಂಟಾಲ್ ಗೆ 10 ರಿಂದ 11 ಸಾವಿರ ರೂ ಮಾರಾಟ
ಕಲಬುರಗಿ, ಅಕ್ಟೋಬರ್ 30: ಕರ್ನಾಟಕದಲ್ಲಿ ಮಳೆ ಮರೆಯಾಗಿ ಬರ ಬರೆ ಎಳೆದಿದೆ. ಆದರೆ ಉತ್ತರ ಕರ್ನಾಟಕ ಭಾಗದ ಅನ್ನದಾರಿಗೆ ಈ ಬರಗಾಲ ವರದಾನವಾಗಿದೆ. ಏಕೆಂದರೆ ಬಿಳಿಜೋಳಕ್ಕೂ ಬಂಗಾರದ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್‌ಗೆ 10 ರಿಂದ 11 ಸಾವಿರ ರೂ ಮಾರಾಟವಾಗುತ್ತಿದ್ದು, ಇದು ಇತಿಹಾಸದಲ್ಲೇ ಗರಿಷ್ಟ ಬೆಲೆಗೆ ಮಾರಾಟವಾಗುತ್ತಿದೆ. ಹೀಗಾಗಿ ಜೋಳದ ರೊಟ್ಟಿ ತಿನ್ನುವವರಿಗೆ ಶಾಕ್ ಎದುರಾಗಿದೆ.
ಜೋಳದ ದರ ಕೇಳಿಯೇ ಜನರು ಶಾಕ್
ಕಲಬುರಗಿಯ ಎಪಿಎಂಸಿಯಲ್ಲಿ ದಾಖಲೆ ಬೆಲೆಗೆ ಜೋಳ ಮಾರಾಟವಾಗುತ್ತಿದೆ. ಇದೆ ವರ್ಷ ಆಗಸ್ಟ್ವರೆಗೂ ಕ್ವಿಂಟಾಲ್‌ಗೆ 3 ರಿಂದ 4 ಸಾವಿರ ರೂ.ಗೆ ಜೋಳ ಸಿಗುತ್ತಿತ್ತು. ಆದರೆ ಒಂದೇ ತಿಂಗಳಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. ಹೀಗಾಗಿ ಜೋಳ ಖರೀದಿಗೆ ಬಂದ ಜನರು ದರ ಕೇಳಿಯೇ ಶಾಕ್ ಆಗುತ್ತಿದ್ದಾರೆ.
ಏಕಾಏಕಿ ದರ ಹೆಚ್ಚಳಕ್ಕೆ ಕಾರಣವೇನು?
ರಾಜ್ಯದಲ್ಲಿ ಬರಗಾಲ ಹಿನ್ನಲೆ ಜೋಳ ಆವಕ ಕಡಿಮೆ ಆಗಿದೆ. ಹೀಗಾಗಿ ದಿನದಿಂದ ದಿನಕ್ಕೆ ಜೋಳದ ಬೆಲೆ ಗಗನಕ್ಕೇರುತ್ತಿದೆ. ಇನ್ನು ಈ ಬಗ್ಗೆ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹೀಗಾದರೆ ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುವವರು ಏನು ತಿನ್ನಬೇಕು. ನಮಗೆ ಪ್ರತಿನಿತ್ಯ ಜೋಳದ ರೊಟ್ಟಿ ಊಟ ಬೇಕು. ದುಪ್ಪಟ್ಟು ಬೆಲೆಗೆ ಮಾರಾಟವಾದರೆ ಏನು ತಿನ್ನಬೇಕು. ಹಾಗಾಗಿ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಗೆ ಸರ್ಕಾರ ಕಡಿವಾಣ ಹಾಕಬೇಕು’ ಎಂದು ಟಿವಿ9 ಎದರು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಬರದ ಬಿಸಿ: ಜೋಳದ ಬೆಲೆ ದಿಢೀರ್ ಏರಿಕೆ, ಜೋಳದ ರೊಟ್ಟಿ ದರವೂ ಹೆಚ್ಚಳ ಸಾಧ್ಯತೆ
ಜೋಳ ಉತ್ತರ ಕರ್ನಾಟಕ ಭಾಗದ ಪ್ರಮುಖ ಆಹಾರ ಧಾನ್ಯ. ಕಳೆದ ಎರಡು ತಿಂಗಳಲ್ಲಿ ಜೋಳದ ಬೆಲೆ ಬಹುತೇಕ ದುಪ್ಪಟ್ಟಾಗಿದೆ. ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಕ್ವಿಂಟಾಲ್‌ಗೆ ಸುಮಾರು 5,500 ರೂ.ಬೆಲೆಯಿತ್ತು. ಆದರೆ ಅಕ್ಟೋಬರ್‌ನಲ್ಲಿ 9,200 ರೂ. ಏರಿಕೆಯಾಗಿದೆ. ಹೀಗಾಗಿ ಜನಸಾಮಾನ್ಯರ ಆರ್ಥಿಕತೆಗೆ ಹೊಡೆತ ನೀಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




