ವಿಶೇಷ ಅಧಿವೇಶನವೋ, ಮುಂದುವರಿದ ಅಧಿವೇಶನವೋ? ಸದನದಲ್ಲಿ ಅಶೋಕ್ – ಸಿಎಂ ಡಿಕೆಶಿ ವಾಕ್ಸಮರ
ವಿಶೇಷ ಅಧಿವೇಶನವೋ, ಮುಂಗಾರು ಅಧಿವೇಶನದ ಮುಂದುವರಿದ ಭಾಗವೋ ಎಂಬ ವಿಚಾರ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ವಿರೋಧ ಪಕ್ಷದ ನಾಯಕ ಅಶೋಕ್ ಈ ಪ್ರಶ್ನೆ ಎತ್ತಿದರೆ, ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಇದು ಮುಂದುವರಿದ ಉಪವೇಶನ ಎಂದು ಸ್ಪಷ್ಟನೆ ನೀಡಿದರು. ಬಳಿಕ ಗದ್ದಲಗಳ ನಡುವೆಯೇ ಕಲಾಪ ಆರಂಭವಾಯಿತು.

ಮುಖ್ಯಾಂಶಗಳು
- ವಿಧಾನಸಭೆ ವಿಶೇಷ ಅಧಿವೇಶನವೋ ಮುಂದುವರಿದ ಮುಂಗಾರು ಅಧಿವೇಶನವೋ?
- ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಯ್ತು ಆರ್ ಅಶೋಕ್ ಪ್ರಶ್ನೆ
- ಕೊನೆಗೂ ಸ್ಪಷ್ಟನೆ ನೀಡಿದ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು, ಸೆಪ್ಟೆಂಬರ್ 21: ರಾಜ್ಯಪಾಲರು ಮುಂಗಾರು ಅಧಿವೇಶನವನ್ನು ಮುಕ್ತಾಯಗೊಳಿಸದಿರುವಾಗ ವಿಶೇಷ ಅಧಿವೇಶನ ಎಂದು ಹೇಗೆ ಕರೆಯುತ್ತೀರಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಅಶೋಕ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ‘ನೀನು ಹೇಗಾದರೂ ಕರೆಯಪ್ಪಾ’ ಎಂದು ಪ್ರತಿಕ್ರಿಯಿಸಿದರು. ಇದರಿಂದ ಸದನ ಕೆಲಕಾಲ ವಾಕ್ಸಮರಕ್ಕೆ ಸಾಕ್ಷಿಯಾಗಬೇಕಾಯಿತು. ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆ ಹಾಗೂ ಬರಗಾಲದ ಸಂಬಂಧ ಚರ್ಚೆಗಾಗಿ ಸರ್ಕಾರ ಕರೆದಿರುವ ವಿಧಾನಮಂಡಲ ಅಧಿವೇಶನ ಸೋಮವಾರ ಬೆಳಗ್ಗೆ ಆರಂಭವಾದಾಗ ಮಾತಿನ ಚಕಮಕಿ ನಡೆಯಿತು. ಮುಂಗಾರು ಅಧಿವೇಶನ ಪ್ರತಿಪಕ್ಷಗಳ ಪ್ರತಿಭಟನೆಯ ಕಾರಣ ಅವಧಿಪೂರ್ವ ಮುಕ್ತಾಯವಾಗಿತ್ತು.
ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ಅಶೋಕ್, ವಿಶೇಷ ಅಧಿವೇಶನ ಎಂದು ಮುದ್ರಿಸಿರುವುದಾದರೆ, ತಪ್ಪು ಪ್ರಿಂಟ್ ಮಾಡಿಸಿದವರಿಗೆ ಛೀಮಾರಿ ಹಾಕಿ ಎಂದು ಸಿಎಂಗೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ವಿಶೇಷ ಅಧಿವೇಶನ ಕರೆದಿರುವುದಕ್ಕೆ ಕ್ರೆಡಿಟ್ ನಮಗೆ ಬರುತ್ತದೋ ಎಂಬುದನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಸದನದಲ್ಲಿ ಹೇಳಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ, ‘ಇಲ್ಲಿ ಯಾರಿಗೂ ಇಗೋ ಬೇಡ’ ಎಂದು ಹೇಳಿದ್ದಾರೆ. ವಿಶೇಷ ಅಧಿವೇಶನವೋ ಅಥವಾ ಮುಂದುವರಿದ ಅಧಿವೇಶನವೋ ಎಂಬುದನ್ನು ಸ್ಪಷ್ಟಪಡಿಸುವಂತೆ ಅಶೋಕ್ ಸ್ಪೀಕರ್ ಅವರನ್ನು ಒತ್ತಾಯಿಸಿದರು.
ಅಧಿವೇಶನದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದೇನು?
ಸ್ಪಷ್ಟನೆ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಇದು 10ನೇ ಅಧಿವೇಶನದ ಮುಂದುವರಿದ ಉಪವೇಶನ ಎಂದು ಹೇಳಿದರು. ವಿಶೇಷ ಅಧಿವೇಶನ ಎಂದು ಮುದ್ರಿಸಿರುವುದು ತಮ್ಮದೇ ತಪ್ಪು. ಅದನ್ನು ವಿಶೇಷ ಚರ್ಚೆ ಎಂದು ತಿದ್ದಿಕೊಂಡು ಮುಂದಕ್ಕೆ ಹೋಗೋಣ ಎಂದು ಸದನಕ್ಕೆ ಮನವಿ ಮಾಡಿದರು. ಸರ್ಕಾರದ ಉತ್ತರಕ್ಕೆ ವಿರೋಧ ಪಕ್ಷದ ಶಾಸಕರು ತೃಪ್ತಿ ವ್ಯಕ್ತಪಡಿಸಿದರು.
ಜನರ ಭಾವನೆ ಅರ್ಥ ಮಾಡಿಕೊಂಡು ಸದನ ಕರೆದಿದ್ದೇವೆ
ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಸದನ ಕರೆದಿದ್ದೇವೆ ಎಂದು ಹೇಳಿದರು. ಅಧಿವೇಶನಕ್ಕೂ ಮುನ್ನ ನಾಲ್ಕು ವಿಭಾಗಗಳಲ್ಲಿ ಜನರೊಂದಿಗೆ ಸಭೆ ನಡೆಸಿದ್ದು, ಶಾಸಕರನ್ನೂ ಕರೆದು ಮಾತನಾಡಿದ್ದೇನೆ ಎಂದರು. ಕಳೆದ ಅಧಿವೇಶನದಲ್ಲಿ ತಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ಕೊನೆಗೆ ಒಬ್ಬ ನಿರಪರಾಧಿಗೆ ಮನವಿ ಮಾಡಿ ರಾಜೀನಾಮೆ ತೆಗೆದುಕೊಂಡೆ. ನಂತರ ಬಿಜೆಪಿಯವರು ಪಾದಯಾತ್ರೆ ಮಾಡಿದರು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಕಸ್ತೂರಿರಂಗನ್ ವರದಿಯಿಂದ ಉಂಟಾಗಿರುವ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ. ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲು ವಿಪಕ್ಷಗಳಿಗೆ ಅವಕಾಶ ನೀಡಿದ್ದೇವೆ. ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಿದ್ದೇನೆ ಎಂದು ಅವರು ಹೇಳಿದರು. ಜನರ ಭಾವನೆಯೊಂದಿಗೆ ಸದನಕ್ಕೆ ಬಂದಿದ್ದೇನೆ. ಇದು ನನ್ನ ಸರ್ಕಾರವಲ್ಲ, ಎಲ್ಲರ ಸರ್ಕಾರ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ನಿಲುವಳಿ ಸೂಚನೆ ಅಗತ್ಯವಿಲ್ಲ ಎಂದೂ ಅವರು ತಿಳಿಸಿದರು.
ವಿಧಾನಸಭೆ ಕಲಾಪ ನೇರ ಪ್ರಸಾರ ಇಲ್ಲಿದೆ ನೋಡಿ
ನಿಲುವಳಿ ಸೂಚನೆ ವಿಚಾರದಲ್ಲೂ ವಾಕ್ಸಮರ
ವಿಶೇಷ ಅಧಿವೇಶನವನ್ನು ಯಾಕೆ ಕರೆದಿದ್ದೀರಿ? ನಿಲುವಳಿ ಸೂಚನೆ ಮೇಲೆ ಚರ್ಚೆ ಮಾಡಿದರೆ ಏನು ತಪ್ಪು ಎಂದು ಅಶೋಕ್ ಪ್ರಶ್ನಿಸಿದರು. ನಿಲುವಳಿ ಸೂಚನೆ ಮಂಡನೆ ತಪ್ಪು ಎಂದಾದರೆ ಹಿಂಪಡೆಯುತ್ತೇನೆ. ನಾನೇನೂ ಹಠಕ್ಕೆ ಬೀಳುವುದಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ವಿಧಾನಮಂಡಲ ವಿಶೇಷ ಅಧಿವೇಶನ ನೇರಪ್ರಸಾರ
ಇದೇ ವೇಳೆ ಶಾಸಕ ಸುನೀಲ್ ಕುಮಾರ್ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಹೆಚ್.ಕೆ. ಪಾಟೀಲ್ ಪತ್ರ ಬರೆದು ನಿಮಗೆ ಮಂಗಳಾರತಿ ಹಾಕಿದ್ದಾರೆ’ ಎಂದು ಅವರು ಹೇಳಿದರು. ಸ್ಪೀಕರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುನೀಲ್ ಕುಮಾರ್, ನೀವು ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರನ್ನು ಭೇಟಿ ಮಾಡುತ್ತೀರಿ ಎಂದು ಸದನದಲ್ಲಿ ಹೇಳಿದರು. ಈ ಬೆಳವಣಿಗೆಗಳ ನಡುವೆ ಆಡಳಿತ ಹಾಗೂ ವಿಪಕ್ಷಗಳ ಶಾಸಕರ ನಡುವೆ ವಿಧಾನಸಭೆಯಲ್ಲಿ ತೀವ್ರ ವಾಕ್ಸಮರ ನಡೆಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Mon, 21 September 26




