ಎರಡಂಕಿ ದಾಟುತ್ತಿಲ್ಲ ಬಾಕ್ಸ್ ಟೊಮ್ಯಾಟೋ ಬೆಲೆ; ಲಕ್ಷಾಂತರ ರೂ ಖರ್ಚು ಮಾಡಿ ಬೆಳೆದ ರೈತ ಕಂಗಾಲು
ಆ ಜಿಲ್ಲೆ ಬರಗಾಲಕ್ಕೆ ಬ್ರಾಂಡ್ ಅಂಬಾಸಿಡರ್ ಇದ್ದಂತೆ, ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲ, ಮಳೆಯೂ ಸರಿಯಾಗಿ ಬರುವುದಿಲ್ಲ, ಹೀಗಿದ್ದರೂ ಆ ಜಿಲ್ಲೆಯ ರೈತರು ಕಷ್ಟಪಟ್ಟು ಬೆಳೆ ಬೆಳೆಯುವುದನ್ನು ಬಿಡುವುದಿಲ್ಲ. ಆದರೆ, ಆ ಜಿಲ್ಲೆಯ ರೈತರ ದುರಾದೃಷ್ಟವೋ ಏನೋ ಕಷ್ಟ ಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ.
ಕೋಲಾರ, ಅ.08: ಕೋಲಾರ(Kolar) ಎಪಿಎಂಸಿ ಮಾರುಕಟ್ಟೆಯಲ್ಲಿ ಬಾಕ್ಸ್ ಟೊಮ್ಯಾಟೋಗೆ 50,70, 80 ರೂನಂತೆ ಎರಡಂಕಿಗೆ ಬಿಕರಿಯಾಗುತ್ತಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಬಾಡಿರುವ ರೈತ ಕಂಗಾಲಾಗಿದ್ದಾನೆ. ಹೌದು, ಕಳೆದ ಮೂರು ತಿಂಗಳ ಹಿಂದೆ ಟೊಮ್ಯಾಟೋ(Tomato)ಗೆ ಬಂಗಾರದ ಬೆಲೆ ಬಂದಿತ್ತು. ಇದರಿಂದ ಟೊಮೆಟೊ ಬೆಳೆದ ರೈತರು ಕೋಟ್ಯಾದಿಪತಿಗಳು ಎಂಬಂತೆ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದ್ದರು. ಆದರೆ, ಅಂತಹ ಸಮಯ ಆಗಿ ಇನ್ನೂ ಮೂರು ತಿಂಗಳು ಕಳೆದಿಲ್ಲ, ಅಷ್ಟರಲ್ಲೇ ಟೊಮ್ಯಾಟೋ ಬೆಳೆದ ರೈತನೇ ದುರಾದೃಷ್ಟವಂತ ಎನ್ನುವಂತ ಸ್ಥಿತಿಗೆ ಬಂದು ನಿಂತಿದೆ. ಅದಕ್ಕಾಗಿನೇ ಟೊಮ್ಯಾಟೋವನ್ನು ಜೂಜಾಟದ ಬೆಳೆ ಎಂದು ಇಲ್ಲಿನ ರೈತರು ಕರೆಯುತ್ತಾರೆ. ಸದ್ಯ ಒಂದು ತಿಂಗಳು ಕಳೆದರೂ ಕೂಡ ಟೊಮ್ಯಾಟೋ ಬೆಲೆ ಮಾತ್ರ ಚೇತರಿಕೆ ಕಂಡಿಲ್ಲ.
ಒಂದೆಡೆ ಕೋಲಾರದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿದ್ರೆ, ಇನ್ನೊಂದೆಡೆ ಕಷ್ಟಪಟ್ಟು ಬೋರ್ವೆಲ್ನಿಂದ ನೀರು ತೆಗೆದು ಬೆಳೆದ ತೋಟಗಾರಿಕಾ ಬೆಳೆ ಕೂಡ ಬೆಲೆ ಇಲ್ಲದೆ ಕೈಕೊಟ್ಟಿದೆ. ಇದರಿಂದ ಕೋಲಾರ ಜಿಲ್ಲೆಯ ರೈತರ ಪರಿಸ್ಥಿತಿ ಮಾತ್ರ ಹೇಳತೀರದಾಗಿದೆ. ಒಂದು ಎಕರೆ ಟೊಮ್ಯಾಟೋ ಬೆಳೆಯಲು ಸುಮಾರು ಒಂದುವರೆ ಲಕ್ಷ ರೂಪಾಯಿ ರೈತರಿಗೆ ಖರ್ಚು ಬರುತ್ತದೆ. ಆದರೆ, ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆ ನೋಡಿದ್ರೆ, ರೈತರು ಮಾಡಿದ ಖರ್ಚಿನ ಅರ್ಧದಷ್ಟು ಹಣವೂ ರೈತರಿಗೆ ಸಿಗುತ್ತಿಲ್ಲ. ಹಾಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ರೈತರ ಮನವಿ ಮಾಡುತ್ತಿದ್ದಾರೆ.
ಇನ್ನು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತಿಹೆಚ್ಚು ಟೊಮ್ಯಾಟೋ ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಟೊಮ್ಯಾಟೋವನ್ನು ದೇಶದ ಬಹುತೇಕ ಎಲ್ಲಾ ರಾಜ್ಯಗಳಿಗೆ ಹಾಗೂ ಬಾಂಗ್ಲಾ, ಪಾಕಿಸ್ತಾನ, ದುಬೈ, ಸೇರಿ ಹೊರ ದೇಶಗಳಿಗೂ ರಪ್ತು ಮಾಡುತ್ತಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈಗ ಎಲ್ಲಿಂದಲೂ ಕೂಡ ಟೊಮ್ಯಾಟೋಗೆ ಡಿಮ್ಯಾಂಡ್ ಇಲ್ಲ. ಆದರೆ, ಮೂರು ತಿಂಗಳ ಹಿಂದೆ ಟೊಮ್ಯಾಟೋಗೆ ಬಂಗಾರದ ಬೆಲೆ ಬಂದಿದ್ದ ಕಾರಣದಿಂದ ಒಳ್ಳೆಯ ಬೆಲೆಯ ನಿರೀಕ್ಷೆಯಲ್ಲಿ ರೈತರಿದ್ದರು.
ಬಹುತೇಕ ರೈತರು ಟೊಮ್ಯಾಟೋ ಬೆಳೆದಿದ್ದಾರೆ, ಪರಿಣಾಮ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬೇಡಿಕೆಗಿಂತ ಅತಿ ಹೆಚ್ಚಿನ ಟೊಮ್ಯಾಟೋ ಪೂರೈಕೆಯಾಗುತ್ತಿದೆ. ಈ ಕಾರಣದಿಂದಲೇ ಇಂದು ಬೆಲೆ ಕಳೆದುಕೊಂಡಿದೆ. ಕೆಜಿ ಟೊಮ್ಯಾಟೋ 3 ರಿಂದ 4 ರೂಪಾಯಿಗೆ ಬಿಕರಿಯಾಗುತ್ತಿದೆ, ಅಂದರೆ ಹದಿನೈದು ಕೆಜಿಯ ಒಂದು ಬಾಕ್ಸ್ ಟೊಮ್ಯಾಟೋ ಸರಿ ಸುಮಾರು 50 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಒಟ್ಟಾರೆ ಟೊಮ್ಯಾಟೋ ಬೆಳೆಯುವ ರೈತರ ಪರಿಸ್ಥಿತಿ ಹಾಗೂ ಟೊಮ್ಯಾಟೋ ಬೆಲೆಯನ್ನು ನೋಡಿದರೆ, ಇದು ಟೊಮ್ಯಾಟೋ ಹಾಗೂ ರೈತರ ನಡುವಿನ ಜೂಜಾಟದಂತೆ ಬಾಸವಾಗುತ್ತಿದೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Sun, 8 October 23