ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 8.89 ಕೋಟಿ ರೂ. ಹಗರಣ: ‘ಟೆಂಪಲ್ ರನ್’ ಮಾಡುತ್ತಿದ್ದ ಪ್ರಮುಖ ರೂವಾರಿ ಸೇರಿ ಮೂವರ ಬಂಧನ
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (KUDA) ನಡೆದ ₹8.89 ಕೋಟಿ ಸೈಟ್ ಅಕ್ರಮ ಮತ್ತು ಹಣ ವಂಚನೆ ಪ್ರಕರಣದಲ್ಲಿ ಪ್ರಮುಖ ರೂವಾರಿ ಹೊರಗುತ್ತಿಗೆ ನೌಕರ ರವೀಂದ್ರಕುಮಾರ್, ಪತ್ನಿ ರಮಾ, ಸಹೋದರ ಅನಿಲ್ ಕುಮಾರ್ ಬಂಧನವಾಗಿದೆ. 40ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದ್ದು, 3 ಕೋಟಿ ರೂ.ಗೂ ಅಧಿಕ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಮಾಜಿ ಆಯುಕ್ತರ ಬಂಧನಕ್ಕೂ ಬಲೆ ಬೀಸಲಾಗಿದೆ. ಸಚಿವರು ಆಗಸ್ಟ್ 30ರಂದು ಕೊಪ್ಪಳಕ್ಕೆ ಭೇಟಿ ನೀಡಲಿದ್ದಾರೆ.

ಕೊಪ್ಪಳ, ಆ.28: ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ (KUDA) ನಡೆದಿದೆ ಎನ್ನಲಾದ ಬರೋಬ್ಬರಿ 8 ಕೋಟಿ 89 ಲಕ್ಷ ರೂಪಾಯಿ ಸೈಟ್ ಅಕ್ರಮ ಹಾಗೂ ಹಣ ವಂಚನೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಹಗರಣದ ಪ್ರಮುಖ ರೂವಾರಿ, ಪ್ರಾಧಿಕಾರದ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್, ಆತನ ಪತ್ನಿ ರಮಾ ಹಾಗೂ ಸಹೋದರ ಅನಿಲ್ ಕುಮಾರ್‌ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮೊಬೈಲ್ ಬಳಸದೆ ತಮಿಳುನಾಡು, ಮಂತ್ರಾಲಯದ ವಿವಿಧ ದೇವಸ್ಥಾನಗಳಲ್ಲಿ ‘ಟೆಂಪಲ್ ರನ್’ ನಡೆಸುತ್ತಿದ್ದ ರವೀಂದ್ರ ಕುಮಾರ್ ಹಾಗೂ ಆತನ ಪತ್ನಿಯನ್ನು ಚಿತ್ರದುರ್ಗದ ಬಳಿ ಕೊಪ್ಪಳ ನಗರ ಪೊಲೀಸರು ಅತ್ಯಂತ ರೋಚಕವಾಗಿ ಖೆಡ್ಡಾಗೆ ಕೆಡವಿದ್ದಾರೆ.
40ಕ್ಕೂ ಹೆಚ್ಚು ಅಕೌಂಟ್‌ಗಳಿಗೆ 8.89 ಕೋಟಿ ರೂ. ವರ್ಗಾವಣೆ
ಕೊಪ್ಪಳದ ಕಿಮ್ಸ್ (KIMS) ಹಿಂಭಾಗದ ಸರೋಜಮ್ಮ ಬಡಾವಣೆಯಲ್ಲಿ ಸೈಟ್ ನೀಡುವುದಾಗಿ ಹೇಳಿ ಜನಸಾಮಾನ್ಯರಿಂದ ಹಣ ವಸೂಲಿ ಮಾಡಲಾಗಿತ್ತು. ಗಂಗಾವತಿಯ ಬನಶಂಕರಿ ಎಂಬ ಮಹಿಳೆ ಹಣ ಕಳೆದುಕೊಂಡು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ, ಅನಧಿಕೃತ ಅಕೌಂಟ್‌ಗಳಿಗೆ ಪ್ರಾಧಿಕಾರದ ಅಧಿಕೃತ ಖಾತೆಯಿಂದಲೇ ಹಣ ವರ್ಗಾವಣೆಯಾಗಿರುವುದು ಬಯಲಾಗಿತ್ತು.
ಆಡಿಟ್ ರಿಪೋರ್ಟ್ ಪ್ರಕಾರ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್, ಆತನ ಪತ್ನಿ ಹಾಗೂ ಸಹೋದರ ಸೇರಿ ಸುಮಾರು 40ಕ್ಕೂ ಹೆಚ್ಚು ಅಕೌಂಟ್‌ಗಳಿಗೆ ಹಣ ವರ್ಗಾಯಿಸಿಕೊಂಡಿದ್ದ. ರವೀಂದ್ರನ ಸಹೋದರ ಅನಿಲ್ ಕುಮಾರ್ ಹೆಸರಿಗೆ 1.5 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆಯಾಗಿತ್ತು. ಬೆಂಗಳೂರಿನ ಪಿಜಿಯಲ್ಲಿದ್ದ ಈತ ಮಗನಿಗೆ ಕರೆ ಮಾಡಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಇನ್ನು ರವೀಂದ್ರನ ಪತ್ನಿ ರಮಾ ಅಕೌಂಟ್‌ನಿಂದ 30 ಲಕ್ಷ ರೂ.ಗೂ ಅಧಿಕ ಹಣ ವರ್ಗಾವಣೆಯಾಗಿತ್ತು.
ಮಾಜಿ ಆಯುಕ್ತ ಯೋಗಾನಂದ್‌ಗೂ ಶಾಕ್;
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಎಸ್.ಪಿ ಡಾ. ರಾಮ್ ಎಲ್. ಅರಸಿದ್ದಿ ಅವರ ನೇತೃತ್ವದಲ್ಲಿ 3 ತನಿಖಾ ತಂಡಗಳನ್ನು ರಚಿಸಲಾಗಿತ್ತು. ಸದ್ಯ ಅನಧಿಕೃತ ಅಕೌಂಟ್‌ನಲ್ಲಿದ್ದ ಸುಮಾರು 3 ಕೋಟಿ ರೂ.ಗೂ ಅಧಿಕ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಪ್ರಾಧಿಕಾರದ ಮಾಜಿ ಆಯುಕ್ತ ಯೋಗಾನಂದ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರಿಗಾಗಿಯೂ ಪೊಲೀಸರು ಜಾಲ ಬೀಸಿದ್ದಾರೆ.
ಪ್ರಕರಣವನ್ನು ನಗರಾಭಿವೃದ್ದಿ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ನಗರಾಭಿವೃದ್ಧಿ ಸಚಿವರು ಇಲಾಖೆಯ ಕಾರ್ಯದರ್ಶಿಗಳ ಮೂಲಕ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹಾಗೂ ಪ್ರಾಧಿಕಾರದ ಪ್ರಸ್ತುತ ಆಯುಕ್ತ ಶರಣಪ್ಪ ಚವ್ಹೌಣ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆಗಸ್ಟ್ 30 ರಂದು ಸಚಿವರು ಕೊಪ್ಪಳಕ್ಕೆ ಆಗಮಿಸಲಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




