AEEಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಎಂ ಹೇಳಿದ್ರೂ ಅಭ್ಯರ್ಥಿಗಳಿಗೆ ಸರ್ಕಾರಿ ಕೆಲಸ ಕೊಟ್ಟಿದ್ದು ಏಕೆ? ಹೆಚ್ಡಿಕೆ ಪ್ರಶ್ನೆ
ಎಇಇಗಳ ನೇಮಕಾತಿಯ ಅಕ್ರಮ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದಾರೆ. AEEಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ಸದನದಲ್ಲಿ ಸಿಎಂ ಹೇಳಿದ್ದರು. ಹಾಗಿದ್ದರೂ ತಪ್ಪಿತಸ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸರ್ಕಾರಿ ಕೆಲಸ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಮಂಡ್ಯ, ಆಗಸ್ಟ್ 29: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ (AEE) ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರ ಪಾತ್ರ ಹಾಗೂ ಕಾವೇರಿ ನೀರಿನ ನಿರ್ವಹಣೆ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಈ ಹಿಂದೆ ಸದನದಲ್ಲಿ ನೀಡಿದ್ದ ಹೇಳಿಕೆಯ ದಾಖಲೆಗಳನ್ನು ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ಹರಿಹಾಯ್ದರು.
KPSC ಅಕ್ರಮ ಆಗಿದೆ ಎಂದು ವರದಿ ಕೊಟ್ಟರು ಹೇಗೆ ಕೆಲಸ ನೀಡಿದ್ದೀರಿ: ಪ್ರಿಯಾಂಕ ಖರ್ಗೆ ವಿರುದ್ಧ ಕುಮಾರಸ್ವಾಮಿ ಕಿಡಿ
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ‘ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅವಧಿಯಲ್ಲಿ ಎಇಇ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದರು. 2022ರಲ್ಲಿ ಕೆಪಿಎಸ್‌ಸಿ ಮೂಲಕ ಅಧಿಸೂಚನೆ ಹೊರಬಿದ್ದು, 2024ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಿತು. ಓಎಂಆರ್ ಶೀಟ್‌ಗಳನ್ನು ಕಾರ್ಬನ್ ಬಳಸಿ ತಿದ್ದಲಾಗಿದೆ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ತನಿಖಾ ಹಾಗೂ ಫೋರೆನ್ಸಿಕ್ ವರದಿಗಳಲ್ಲಿ ಸಾಬೀತಾದರೂ ಪ್ರಿಯಾಂಕ್ ಖರ್ಗೆ ನೇಮಕಾತಿ ಮಾಡಿದ್ದು ಏಕೆ? ಅಕ್ರಮ ಸಾಬೀತಾದ ಮೇಲೂ ಅದನ್ನು ರದ್ದುಪಡಿಸಲು ಮೀನಮೇಷ ಎಣಿಸುತ್ತಿರುವುದೇಕೆ? ವಿಷಯಾಂತರ ಮಾಡುವುದನ್ನು ಬಿಟ್ಟು ನನ್ನ ಪ್ರಶ್ನೆಗೆ ನೇರ ಉತ್ತರ ಕೊಡಿ’ ಎಂದು ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ಬಿಗ್ ಬಾಂಬ್: ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ!
‘ಇಡೀ ಪ್ರಕರಣ ಬಗ್ಗೆ ಸರ್ಕಾರದ ಮೌನಕ್ಕೆ ಶರಣಾದ ಬಗ್ಗೆ ಬಹಳಷ್ಟು ಅನುಮಾನಗಳು ಕಾಡುತ್ತಿವೆ. ಈ ಅಕ್ರಮದ ಆಳ ಹಗಲ, ವ್ಯಾಪ್ತಿ ಇನ್ನಷ್ಟು ಹೆಚ್ಚು ಇದೆಯಾ ಎಂಬ ಬಗ್ಗೆ ಅನುಮಾನ ಬರುತ್ತಿದೆ. ಆ ಸಂದರ್ಭದಲ್ಲಿ ಸರ್ಕಾರವು ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲ? ಅಕ್ರಮ ಹಗರಣ ಮುಚ್ಚಿ ಹಾಕಲಿಕ್ಕೆ ಮೌನಕ್ಕೆ ಶರಣಾಯಿತಾ? ಅಕ್ರಮವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದು ಮಾತ್ರವಲ್ಲದೆ ಒಂದು ವರ್ಷದಿಂದ ಅವರಿಗೆ ಸಂಬಳ ಬೇರೆ ಕೊಡುತ್ತಾ ಬಂದಿದ್ದೀರಿ. ಆರೋಪಿಗಳನ್ನು ರಕ್ಷಣೆ ಮಾಡಿಕೊಂಡು ಬರುತ್ತಿದ್ದೀರಿ’ ಎಂದು ತೀವ್ರ ವಾಗ್ದಾಳಿ ಮಾಡಿದರು.
ಡಿಸಿಎಂ ಪರಮೇಶ್ವರ್ಗೆ ಟಾಂಗ್ ಕೊಟ್ಟ ಹೆಚ್ಡಿ ಕುಮಾರಸ್ವಾಮಿ
ಆರೋಪ ಮಾಡುವುದೇ ಕುಮಾರಸ್ವಾಮಿ ಕೆಲಸ ಎಂದು ಡಿಸಿಎಂ ಪರಮೇಶ್ವರ್ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, ‘ನಾನು ಸುಮ್ಮ ಸುಮ್ಮನೆ ಆರೋಪ ಮಾಡುತ್ತಿಲ್ಲ. ನಡೆದಿರುವ ಅಕ್ರಮದ ಬಗ್ಗೆ ದಾಖಲೆ ಸಮೇತ ಹೇಳುತ್ತಿದ್ದೇನೆ. ಆರೋಪಿತರಿಗೆ ಕೆಲಸ ಕೊಟ್ಟಿದ್ದೀರಪ್ಪ ಪರಮೇಶ್ಚರ್ರವರೇ? ಅಕ್ರಮ ಸಾಬೀತಾಗಿರುವ ದಾಖಲಾತಿ ಕೊಟ್ಟಿದ್ದಾರೆ. ಆ ದಾಖಲಾತಿಗೆ ಗಂಧದ ಕಡ್ಡಿ ಬೆಳಕೊಂಡು ಕುಳಿತಿದ್ದೀರಪ್ಪ. ನೀವೇ ಆಗ ಗೃಹ ಸಚಿವರು ಆಗಿದ್ದೀರಿ. ನೀವು ಏನ್ ಮಾಡಿದ್ರಿ? ಅದಕ್ಕೆ ಉತ್ತರ ಕೊಡಿ, ತೆವಲಿಗೆ ಮಾತನಾಡಬೇಡಿ’ ಎಂದು ಕಿಡಿಕಾರಿದರು.
ನಾಗೇಂದ್ರ ಅಮಾಯಕರಾದರೆ ರಾಜೀನಾಮೆ ಪಡೆದಿದ್ದೇಕೆ?
ವಾಲ್ಮೀಕಿ ನಿಗಮದ ಹಗರಣದಲ್ಲಿ ಬಿ. ನಾಗೇಂದ್ರ ಅಮಾಯಕರು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನಾಗೇಂದ್ರ ಅವರು ಸಾಚಾ ಆಗಿದ್ದರೆ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಏಕೆ ಪಡೆದುಕೊಂಡರು? ಅವರನ್ನೇ ಸಚಿವ ಸ್ಥಾನದಲ್ಲಿ ಮುಂದುವರಿಸಬಹುದಿತ್ತಲ್ಲವೇ? ದಲಿತರ ಹೆಸರಿನಲ್ಲಿ ರಕ್ಷಣೆ ಪಡೆಯುವುದು ತಪ್ಪು. ಇಲ್ಲಿ ದುರುಪಯೋಗವಾಗಿರುವುದೇ ದಲಿತರ 87 ಕೋಟಿ ರೂ ಹಣ. ಆ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ನನ್ನ ಮೇಲಿರುವುದು ರಾಜಕೀಯ ದುರುದ್ದೇಶದ ಆರೋಪ. ನಾನು ಎಲ್ಲೂ ದುಡ್ಡು ಹೊಡೆದಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ನಾನು ಆ ಪ್ರಕರಣವನ್ನು ಮುಚ್ಚಿಹಾಕದೆ ತನಿಖೆಗೆ ಮುಕ್ತವಾಗಿಟ್ಟಿದ್ದೆ’ ಎಂದು ಸ್ಪಷ್ಟಪಡಿಸಿದರು.
ಕಾವೇರಿ ನೀರು ನಿರ್ವಹಣೆಯಲ್ಲಿ ಸರ್ಕಾರದ ಬದ್ಧತೆಯಿಲ್ಲ
ಇನ್ನು ರಾಜ್ಯದಲ್ಲಿ ಜಲಾಶಯಗಳು ಪೂರ್ಣ ಭರ್ತಿಯಾಗದಿದ್ದರೂ ಕಳೆದ ಎರಡು ತಿಂಗಳಿಂದ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿದು ಹೋಗುತ್ತಿದೆ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು. ‘ನೆರೆ ರಾಜ್ಯಕ್ಕೆ ನೀರು ಬಿಡುತ್ತಿದ್ದೇವೆ ಎಂದು ಜನರಿಗೆ ನೇರವಾಗಿ ಹೇಳುವ ಧೈರ್ಯ ಸರ್ಕಾರಕ್ಕಿಲ್ಲ. ತಮಿಳುನಾಡು ಪದೇಪದೇ ನೀರಿನ ಕೊರತೆಯ ನೆಪವೊಡ್ಡಿ ನ್ಯಾಯಾಲಯದ ಮೊರೆ ಹೋಗುತ್ತಿದ್ದರೂ, ನಮ್ಮ ರಾಜ್ಯ ಸರ್ಕಾರ ಸರಿಯಾದ ಸಿದ್ಧತೆಯೊಂದಿಗೆ ಕಾನೂನು ಹೋರಾಟ ನಡೆಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




