ಮೈಸೂರು ದಸರಾ: ಖಾಸಗಿ ಫ್ಲೆಕ್ಸ್ಗಳಿಗೆ ಅವಕಾಶವಿಲ್ಲ, ಹೋಟೆಲ್ನವರು ದರ ಹೆಚ್ಚಳ ಮಾಡುವಂತಿಲ್ಲ; ಸಿಎಂ ಸೂಚನೆ
ದಸರಾಗೆ ದಿನಗಣನೆ ಶುರುವಾಗಿದ್ದು, ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಇದರ ನಡುವೆ ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ದಸರಾ ಸಿದ್ಧತಾ ಪರಿಶೀಲನಾ ಸಭೆ ಮಾಡಲಾಯಿತು. ಮೈಸೂರು ಜಿಲ್ಲಾಡಳಿತಕ್ಕೆ ಡಿಕೆ ಶಿವಕುಮಾರ್ ಕೆಲ ಸೂಚನೆಗಳನ್ನು ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಬರ ಇದ್ದರೂ ಶಿಸ್ತುಬದ್ಧವಾಗಿ ದಸರಾ ಮಾಡುತ್ತೇವೆ ಎಂದಿದ್ದಾರೆ.

ಮುಖ್ಯಾಂಶಗಳು
- ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಸಿದ್ಧತಾ ಪರಿಶೀಲನಾ ಸಭೆ
- ದಸರಾ ಕಾರ್ಯಕ್ರಮದ ಸಂಬಂಧಿಸಿದ ಫೆಕ್ಸ್ಗಷ್ಟೇ ಅವಕಾಶ
- ಜಂಬೂಸವಾರಿ ಮೆರವಣಿಗೆಯಲ್ಲಿ ಸಿನಿಮಾ ಕಲಾವಿದರೂ ಭಾಗಿ
ಮೈಸೂರು, ಅಕ್ಟೋಬರ್ 03: ‘ಮೈಸೂರು ನಗರದಲ್ಲಿ ಅಕ್ಟೋಬರ್ 5ರ ನಂತರ ಯಾವುದೇ ಖಾಸಗಿ ಫ್ಲೆಕ್ಸ್ ಇರಬಾರದು. ದಸರಾ ಕಾರ್ಯಕ್ರಮ ಸಂಬಂಧಿಸಿದ ಫೆಕ್ಸ್ಗಷ್ಟೇ ಅವಕಾಶ ನೀಡಬೇಕು. ಇನ್ನು ದಸರಾ ವೇಳೆ ಹೋಟೆಲ್ನವರು ದರ ಹೆಚ್ಚಳ ಮಾಡಬಾರದು. ಊಟ, ಉಪಾಹಾರದ ದರದ ಮೇಲೆ ನಿಗಾ ವಹಿಸುವಂತೆ ಜಿಲ್ಲಾಡಳಿತಕ್ಕೆ’ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ದಸರಾ ಸಿದ್ಧತಾ ಪರಿಶೀಲನಾ ಸಭೆ
ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ದಸರಾ ಹಬ್ಬ 2026ರ ಸಿದ್ಧತಾ ಪರಿಶೀಲನಾ ಸಭೆ ಮಾಡಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಚಿವ ಈಶ್ವರ ಖಂಡ್ರೆ, ಶಾಸಕರಾದ ದರ್ಶನ್ ಧ್ರುವನಾರಾಯಣ, ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ತನ್ವೀರ್ ಸೇಠ್, ಶ್ರೀವತ್ಸ, ಡಿ.ರವಿಶಂಕರ್, ಅನಿಲ್ ಚಿಕ್ಕಮಾಧು, ರಮೇಶ್ ಬಂಡಿಸಿದ್ದೇಗೌಡ, ವಿಧಾನಪರಿಷತ್ ಸದಸ್ಯರಾದ ಶಿವಕುಮಾರ, ಡಾ.ತಿಮ್ಮಯ್ಯ, ಡಿಸಿ ಲಕ್ಷ್ಮೀಕಾಂತರೆಡ್ಡಿ, ಜಿ.ಪಂ. ಸಿಇಒ ಯುಕೇಶ್ ಕುಮಾರ್, ಕಮಿಷನರ್ ಸೀಮಾ ಲಾಟ್ಕರ್ ಮತ್ತು ಎಸ್ಪಿ ಬಾಲದಂಡಿ ಉಪಸ್ಥಿತರಿದ್ದರು.
ಶಿಸ್ತುಬದ್ಧವಾಗಿ ದಸರಾ ಮಾಡುತ್ತೇವೆ: ಜಂಬೂಸವಾರಿಗೆ ಹೊಸ ರೂಪ ಎಂದ ಸಿಎಂ
ಸಭೆ ಬಳಿಕ ಸುದ್ದಿಗೋಷ್ಠಿ ಮಾಡಿದ ಸಿಎಂ ಡಿಕೆ ಶಿವಕುಮಾರ್, ‘ರಾಜ್ಯದಲ್ಲಿ ಬರ ಇದ್ದರೂ ಶಿಸ್ತುಬದ್ಧವಾಗಿ ದಸರಾ ಮಾಡುತ್ತೇವೆ. ಈ ಬಾರಿ ದಸರಾ ಮೆರವಣಿಗೆಯಲ್ಲಿ ಸೇನಾ ತುಕಡಿ ಭಾಗಿಯಾಗಲಿದೆ. ಮೆರವಣಿಗೆಯಲ್ಲಿ ಭೂಸೇನೆ, ವಾಯುಸೇನೆ, ನೌಕಾಪಡೆ ಸಾಗಲಿದೆ. ಭೂಸೇನೆಯವರು ಈಗಾಗಲೇ ಸ್ಥಳ ಪರಿಶೀಲನೆ ಮಾಡಿದ್ದಾರೆ. ಏರ್ಶೋ ನಡೆಸಲು ರಕ್ಷಣಾ ಇಲಾಖೆಗೆ ಮನವಿ ಮಾಡಿದ್ದೇವೆ. ವಿಶೇಷವಾಗಿ ತುಳುನಾಡಿನ ಪ್ರತ್ಯೇಕ ಸ್ತಬ್ಧಚಿತ್ರವೂ ಇರಲಿದೆ’ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026: ರಾಜವಂಶಸ್ಥರಿಗೆ ಆಹ್ವಾನ ಪತ್ರಿಕೆ ನೀಡಿದ ಜಿಲ್ಲಾಡಳಿತ
‘ಜಂಬೂಸವಾರಿಗೆ ಹೊಸ ರೂಪ ನೀಡಲಾಗುತ್ತಿದೆ. ಈ ಸಲದ ಜಂಬೂಸವಾರಿ ಮೆರವಣಿಗೆಯಲ್ಲಿ ಸಿನಿಮಾ ಕಲಾವಿದರೂ ಕೂಡ ಹೆಜ್ಜೆ ಹಾಕಲಿದ್ದಾರೆ. ಯುವ ದಸರಾಗೂ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅಂಬಾರಿ ಹೊರುವ ರೇಸ್ನಲ್ಲಿ ಐದು ಆನೆಗಳಿವೆ. ಧನಂಜಯ, ಪ್ರಶಾಂತ, ಏಕಲವ್ಯ, ಮಹೇಂದ್ರ, ಸುಗ್ರೀವಾ ಆನೆಗಳಿವೆ. 11 ದಿನ ದಸರಾ ಕಾರ್ಯಕ್ರಮಕ್ಕೆ 22 ಸಚಿವರ ನೇಮಕ ಮಾಡಲಾಗಿದೆ. ಒಂದು ದಿನಕ್ಕೆ ಇಬ್ಬರು ಸಚಿವರು ಉಸ್ತುವಾರಿ ವಹಿಸುತ್ತಾರೆ. ಎಲ್ಲರ ಸಲಹೆ ಪಡೆದು ದಸರಾ ಯಶಸ್ವಿಗೆ ತೀರ್ಮಾನ ಮಾಡಿದ್ದೇವೆ. ನಗರದ ಹಲವೆಡೆ ಲೈವ್ ಸ್ಟ್ರಿಮ್ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.
ನಾಳೆ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಅಧಿಕೃತ ಆಹ್ವಾನ
ಗವಿಸಿದ್ದೇಶ್ವರಶ್ರೀಗಳಿಗೆ ಆಹ್ವಾನ ವಿಚಾರವಾಗಿ ಮಾತನಾಡಿದ ಅವರು, ‘ಮೈಸೂರು ಜಿಲ್ಲಾಡಳಿತದ ವತಿಯಿಂದ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ನಾಳೆ ಅಧಿಕೃತವಾಗಿ ಅ.11ರಂದು ದಸರಾ ಉದ್ಘಾಟನೆಗೆ ಆಹ್ವಾನ ನೀಡುತ್ತೇವೆ’ ಎಂದರು.
ದೇಶ, ವಿದೇಶಗಳ ರಾಯಭಾರಿಗಳಿಗೂ ಆಹ್ವಾನ
ಇನ್ನು ‘ದೇಶ, ವಿದೇಶಗಳ ರಾಯಭಾರಿಗಳಿಗೆ ಆಹ್ವಾನ ನೀಡಿದ್ದೇವೆ. ಈ ಬಾರಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲ. ಪ್ರತಿಯೊಂದು ಆಸನಗಳಿಗೂ ಹೆಸರು ಬರೆದು ಅಂಟಿಸಲಾಗುವುದು. ಗಣ್ಯಾತಿಗಣ್ಯರಿಗೆ ಮೀಸಲಿಟ್ಟ ಆಸನದಲ್ಲಿ ಬೇರೆಯವರು ಕೂರುವಂತಿಲ್ಲ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಮೈಸೂರು ದಸರಾ 2026: ಅಧಿಕೃತ ವೇಳಾಪಟ್ಟಿ ಪ್ರಕಟ; ಪ್ರಮುಖ ಕಾರ್ಯಕ್ರಮಗಳ ಮುಹೂರ್ತ ಫಿಕ್ಸ್
ಸ್ತಬ್ಧಚಿತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ‘ತಮ್ಮ ರಾಜ್ಯಗಳ ಕಲೆ, ಸಂಸ್ಕೃತಿ ಬಗ್ಗೆ ಸ್ತಬ್ಧಚಿತ್ರ ಕಳುಹಿಸುವಂತೆ ತೆಲಂಗಾಣ, ಕೇರಳ, ತಮಿಳುನಾಡು ಮತ್ತು ಆಂಧ್ರಕ್ಕೆ ಪತ್ರ ಬರೆದಿದ್ದೇವೆ. ಜೊತೆಗೆ ಹಾಲಿವುಡ್, ಬಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡ ಪ್ರಸಿದ್ಧವಾಗಿದೆ. ಹೀಗಾಗಿ ದಸರಾದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಫಿಲಂ ಚೇಂಬರ್ಗೆ ಸೂಚಿಸಿದ್ದೇನೆ’ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




