Raichur News: ನ್ಯಾಯಾಧೀಶರ ಮುಂದೆ ಮತ್ತೆ ಒಂದಾದ ವೃದ್ಧ ದಂಪತಿ
ವಿಚ್ಛೇದನಕ್ಕೆ ಮುಂದಾಗಿದ್ದ 15 ಜೋಡಿಗಳಿಗೆ ರಾಯಚೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಮರು ಮದುವೆ ಮಾಡಲಾಗಿದೆ. ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮದುವೆ ನಡೆದಿದೆ.
ರಾಯಚೂರು: ವಿಚ್ಛೇದನಕ್ಕೆ (Divorce) ಮುಂದಾಗಿದ್ದ 15 ಜೋಡಿಗಳಿಗೆ ರಾಯಚೂರಿನ (Raichur) ಕೌಟುಂಬಿಕ ನ್ಯಾಯಾಲಯದಲ್ಲಿ (Family Court) ಮರು ಮದುವೆ ಮಾಡಲಾಗಿದೆ. ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮದುವೆ ನಡೆದಿದ್ದು, ಯುವ ವೈದ್ಯ ದಂಪತಿ ಮತ್ತು 74ರ ಇಳಿ ವಯಸ್ಸಿನ ವೃದ್ಧ ದಂಪತಿ (Couple) ಮತ್ತೆ ಒಂದಾಗಿದ್ದಾರೆ. ಜೋಡಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಹಾರ ಬದಲಾಯಿಸಿ ಸಿಹಿ ತಿನ್ನಿಸಿದ್ದಾರೆ. ಯುವ ವೈದ್ಯ ದಂಪತಿ ತೀರಾ ವೈಯಕ್ತಿಕ ಕಾರಣಗಳಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ಕೌಟುಂಬಿಕ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದರು.
ವೃದ್ಧ ದಂಪತಿ ಮಹಾದೇವ್ ಹಾಗೂ ಪತ್ನಿ ಲಕ್ಷ್ಮೀ ಆಸ್ತಿ ವಿಚಾರಕ್ಕೆ ಬೇರೆಯಾಗಿದ್ದರು. ಲಕ್ಷ್ಮೀ ಪತಿ ಮಹಾದೇವ್ ಜೊತೆ ಜಗಳವಾಡಿ ದೂರವಾಗಿದ್ದರು. ಇತ್ತ ಪತ್ನಿ ದೂರವಾದ ಬಳಿಕ ಮಹಾದೇವ್ ಮನೆ ಬಿಟ್ಟು ಅನಾಥ ಆಶ್ರಮ ಸೇರಿದ್ದರು. ಈ ಮಧ್ಯೆ ಲಕ್ಷ್ಮೀ ಆಪರೇಶನ್ಗೆ ಒಳಗಾಗಿ ಬಲಗೈ ಕಳೆದುಕೊಂಡಿದ್ದಾರೆ. ಈ ವಿಚಾರ ತಿಳಿದು ಪತ್ನಿಯ ನೋವನ್ನ ಸಹಿಸಲಾಗದೆ, ಕೋರ್ಟ್ನಲ್ಲಿ ಪತ್ನಿ ಲಕ್ಷ್ಮೀಯನ್ನು ಮಹಾದೇವ್ ಮರು ಮದುವೆಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ 64 ವರ್ಷದ ಸತ್ಯನಾರಾಯಣ ಹಾಗೂ ಶಾಂತಮ್ಮ ದಂಪತಿ ನಡುವೆ ಸಂಸಾರದ ವಿಚಾರಕ್ಕೆ ಕಲಹ ನಡೆದು ದೂರವಾಗಲು ಇಚ್ಛಿಸಿದ್ದರು. ಇದೀಗ ಸಂದಾನದ ಬಳಿಕ ಮರು ಮದುವೆಯಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ನಾಗರಾಜ್ ಹಾಗೂ ಚಿತ್ರಾ ದಂಪತಿ ನಡುವೆ ಮನೆಗೆಲಸಗಳಿಗೆ ಸಂಬಂಧ ಒಡಕು ಮೂಡಿತ್ತು. ಈ ಹಿನ್ನೆಲೆ ಕಳೆದ ಮೂರು ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ದಂಪತಿಗೆ 14 ವರ್ಷದ ಮಗನಿದ್ದಾನೆ. ಇದೀಗ ದಂಪತಿ ಮತ್ತೆ ಒಂದಾಗಿದ್ದಾರೆ.
ನಿತ್ಯ ವಿಚ್ಛೇದನ ಪ್ರಕರಣಗಳು ಹೆಚ್ಚಾವಗುತ್ತಿರೋದಕ್ಕೆ ನ್ಯಾಯಾಧೀಶರ ಕಳವಳ
ನಿತ್ಯ ವಿಚ್ಛೇದನ ಪ್ರಕರಣಗಳು ಹೆಚ್ಚಾವಗುತ್ತಿರೋದಕ್ಕೆ ನ್ಯಾಯಾಧೀಶರ ಕಳವಳ ವ್ಯಕ್ತಪಡಿಸಿದ್ದಾರೆ. ಪತಿ-ಪತ್ನಿಯೇ ಸಂಸಾರದ ಜವಾಬ್ದಾರಿ ಹೊರಬೇಕು. ಟಿವಿ ನೋಡುವ ವಿಚಾರಕ್ಕೆ, ಗಂಡನ ಮದ್ಯಪಾನದ ವಿಚಾರಕ್ಕೆ ಜಗಳ ಸಹಜ. ಇಷ್ಟು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನಕ್ಕೆ ಮುಂದಾಗದೇ, ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ರಾಯಚೂರು ಜಿಲ್ಲಾ ಮತ್ತ ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿ ಮಾರುತಿ ಬಗಾಡಿ ಸಲಹೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ