ರಾಜ್ಯದಲ್ಲಿ ಮುಂದುವರೆದ ಮಳೆ: ಧಾರಕಾರ ಮಳೆಗೆ ಇಡೀ ಗ್ರಾಮ ಜಲಾವೃತ; 60ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಮಳೆ ನೀರು
ಮಳೆಯಿಂದ ರಸ್ತೆಗೆ ಮರ ಉರುಳಿ ಬಿದ್ದು ಪೆರೇಸಂದ್ರ-ಗುಡಿಬಂಡೆ-ಗೌರಿಬಿದನೂರು ಸಂಪರ್ಕ ರಸ್ತೆ ಸಂಚಾರ ಬಂದ್ ಆಗಿರುವಂತಹ ಘಟನೆ ತಾಲೂಕಿನ ರೇಣಮಾಕಲಹಳ್ಳಿ ಬಳಿ ನಡೆದಿದೆ.
ರಾಮನಗರ: ಚನ್ನಪಟ್ಟಣ ತಾಲೂಕಿನಾದ್ಯಂತ ಧಾರಕಾರ ಮಳೆ ಹಿನ್ನೆಲೆ ಇಡೀ ಗ್ರಾಮ ಜಲಾವೃತವಾಗಿರುವಂತಹ ಘಟನೆ ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಗ್ರಾಮದ ಬಳಿ ಇರುವ ಗಾಂಧಿ ಗ್ರಾಮದಲ್ಲಿ ಕಂಡುಬಂದಿದೆ. ಸುಮಾರು 60ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಆಹಾರ ಪದಾರ್ಥಗಳು, ವಸ್ತುಗಳು ನಾಶವಾಗಿದೆ. ಮನೆಯಲ್ಲಿದ್ದ ದಾಖಲಾತಿಗಳು ನೀರಿನಲ್ಲಿ ನೆನೆದು ಹೋಗಿದೆ. ಇದೀಗ ಮಳೆ ನೀರು ತಗ್ಗಿದ್ದು, ದಾಖಲಾತಿಗಳು, ವಸ್ತುಗಳನ್ನ ಬಿಸಿಲಿಗೆ ಕುಟಂಬಸ್ತರು ಒಣಗಲು ಹಾಕಿದ್ದಾರೆ. ಇಡೀ ರಾತ್ರಿ ಗ್ರಾಮದ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಕ್ಕಸ ಮಳೆಗೆ ಚನ್ನಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನೂರಾರು ಹೆಕ್ಟೇರ್ ಪ್ರದೇಶ ಜಲಾವೃತವಾಗಿದ್ದು, ತೆಂಗು, ಸೀಮೆಹುಲ್ಲು, ತರಕಾರಿ ಬೆಳೆ ನಾಶವಾಗಿದೆ. ಇಡೀ ಜಮೀನು ನೀರಿನಿಂದ ಜಲಾವೃತಗೊಂಡಿದೆ.
ಮಳೆಯಿಂದ ರಸ್ತೆಗೆ ಮರ ಉರುಳಿ ಬಿದ್ದು ಸಂಚಾರ ಬಂದ್
ಚಿಕ್ಕಬಳ್ಳಾಪುರ: ಮಳೆಯಿಂದ ರಸ್ತೆಗೆ ಮರ ಉರುಳಿ ಬಿದ್ದು ಪೆರೇಸಂದ್ರ-ಗುಡಿಬಂಡೆ-ಗೌರಿಬಿದನೂರು ಸಂಪರ್ಕ ರಸ್ತೆ ಸಂಚಾರ ಬಂದ್ ಆಗಿರುವಂತಹ ಘಟನೆ ತಾಲೂಕಿನ ರೇಣಮಾಕಲಹಳ್ಳಿ ಬಳಿ ನಡೆದಿದೆ. ಮರ ಬಿದ್ದ ಹಿನ್ನೆಲೆ ರಸ್ತೆಯಲ್ಲಿ ಕೆಲಕಾಲ ಸಂಚಾರ ಬಂದ್ ಆಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಮರ ತೆರವುಗೊಳಿಸಿದರು.
ಇದನ್ನೂ ಓದಿ: Viral News: ಹೆಂಡತಿಯೊಂದಿಗೆ ನಿತ್ಯ ಜಗಳ: ಹೆದರಿ ತಾಳೆ ಮರವೇರಿ ಗಂಡನ ವಾಸ, ಹೌಹಾರಿದ ನೆಟ್ಟಿಗರು
ಗಾಳಿ ಮಳೆಗೆ ಕುಸಿದ ಮನೆ ಮೇಲ್ಚಾವಣಿ
ಮೈಸೂರು: ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಗಾಳಿ ಮಳೆಗೆ ಮನೆ ಮೇಲ್ಚಾವಣಿ ಕುಸಿದಿರುವಂತಹ ಘಟನೆ ನಡೆದಿದೆ. ಗಾಳಿ ಮಳೆಗೆ ಸ್ವಾಮಿ ಎಂಬುವವರ ಮನೆಯ ಮೇಲ್ಚಾವಣಿ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಕುಟುಂಬಸ್ತರು ಮನವಿ ಮಾಡಿದ್ದಾರೆ.
ಕೋಲಾರದಲ್ಲಿ ಕೆರೆಯಂತಾದ ರೈತರ ಹೊಲಗಳು
ಕೋಲಾರ: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಿನ್ನಲೆ, ರೈತರ ಹೊಲಗಳು ಕೆರೆಯಂತಾಗಿವೆ. ತಾಲ್ಲುಕಿನ ಬೆತ್ತನಿ ಗ್ರಾಮದ ಬಳಿ ನೀರು ತುಂಬಿ ಬೀನ್ಸ್ ತೋಟ ಹಾಳಾಗಿದೆ. ತೋಟದಲ್ಲಿ ಎರಡು ಮೂರು ಅಡಿಗಳಷ್ಟು ನೀರು ನಿಂತಿದೆ. ನೀರಿನಲ್ಲಿ ನೆನೆದು ಬೀನ್ಸ್ ಬೆಳೆ ಕೊಳೆಯುವಂತಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ನೀರುಪಾಲಾಗಿದೆ.
ನಾಲ್ಕು ಮನೆಗಳ ಕುಸಿತ, ಒಂದು ಆಟೋ ಜಖಂ
ರಾಯಚೂರು: ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ ಮುಂದುವರಿಕೆಯಾಗಿದ್ದು, ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬೆಳ್ಳಿಗನೂರ ಗ್ರಾಮದಲ್ಲಿ ಮಳೆಯಿಂದ ನಾಲ್ಕು ಮನೆಗಳು ಕುಸಿತವಾಗಿದ್ದು, ಒಂದು ಆಟೋ ಜಖಂವಾಗಿರುವಂತಹ ಘಟನೆ ನಡೆದಿದೆ. ಕುಸಿದ ಮನೆಗಳಿಗೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ ನೀಡಿ, ವೈಯಕ್ತಿಕ ಪರಿಹಾರ ನೀಡಲು ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿದರು. ಅಪಾರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು, ಮಸ್ಕಿಯ ಹಳ್ಳಕೊಳ್ಳಗಳು ಭರ್ತಿಯಾಗಿ ಸೂರ್ಯಕಾಂತಿ, ಭತ್ತ, ಹತ್ತಿ ಸೇರಿ ಇತರೆ ಬೆಳೆ ಹಾನಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.