AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, KPS ಶಾಲೆಗಳ ಶೀಘ್ರ ಆರಂಭ: ಸಚಿವ ಮಧು ಬಂಗಾರಪ್ಪ ಪ್ರಮುಖ ಘೋಷಣೆ

ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ರಾಜ್ಯದ ವಿದ್ಯಾರ್ಥಿ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. 1 ಮತ್ತು 2ನೇ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಆರಂಭಗೊಂಡಿದ್ದು, ಶಾಲೆಗಳಿಗೆ ಪುಸ್ತಕ ಪೂರೈಕೆ ಪೂರ್ಣಗೊಂಡಿದೆ. ಕಳಪೆ ಶೂಗಳ ದೂರುಗಳ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಟೆಂಡರ್ ಕರೆಯಲಾಗಿದ್ದು, 800 KPS ಶಾಲೆಗಳ ಸ್ಥಾಪನೆ ಯೋಜನೆಗೆ ಅನುಮೋದನೆ ದೊರೆತಿದೆ. ಶಿಕ್ಷಣ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ.

ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, KPS ಶಾಲೆಗಳ ಶೀಘ್ರ ಆರಂಭ: ಸಚಿವ ಮಧು ಬಂಗಾರಪ್ಪ ಪ್ರಮುಖ ಘೋಷಣೆ
ಸಾಂದರ್ಭಿಕ ಚಿತ್ರ
Basavaraj Yaraganavi
| Edited By: |

Updated on: Aug 15, 2026 | 1:43 PM

Share

ಶಿವಮೊಗ್ಗ, ಆ.15: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದ್ದು, ಮೊದಲ ಮತ್ತು 2ನೇ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಶಾಲಾ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ವಿತರಣೆ ಹಾಗೂ 800 ಕೆಪಿಎಸ್ (KPS) ಶಾಲೆಗಳ ಸ್ಥಾಪನೆ ಕುರಿತು ಹಲವು ಮುಖ್ಯ ನಿರ್ಧಾರಗಳನ್ನು ಹಂಚಿಕೊಂಡರು.

ರಾಜ್ಯದ ಬಹುತೇಕ ಶಾಲೆಗಳಿಗೆ ಪಠ್ಯಪುಸ್ತಕಗಳ ಪೂರೈಕೆ ಪೂರ್ಣಗೊಂಡಿದೆ. ಪ್ರವೇಶಾತಿ ಹೆಚ್ಚು-ಕಡಿಮೆಯಾದ ಕಡೆಗಳಲ್ಲಿ ತಕ್ಷಣವೇ ಪಠ್ಯಪುಸ್ತಕ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ 1ನೇ ಮತ್ತು 2ನೇ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಸ್ಥಳೀಯವಾಗಿ ಕಳಪೆ ದರ್ಜೆಯ ಶೂಗಳನ್ನು ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸಚಿವ ಸಂಪುಟದ ಒಪ್ಪಿಗೆಯೊಂದಿಗೆ ರಾಜ್ಯಮಟ್ಟದಲ್ಲೇ ಟೆಂಡರ್ ಕರೆಯಲಾಗಿದೆ. ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಅಳತೆಯಲ್ಲಿ ವ್ಯತ್ಯಾಸವಿದ್ದರೆ ತಕ್ಷಣವೇ ಬದಲಾಯಿಸಿಕೊಡಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ಶಾಲಾ ಸೌಲಭ್ಯಗಳಲ್ಲಿ ಕಳಪೆತನ ಅಥವಾ ಮೋಸ ಎಸಗುವ ಟೆಂಡರ್‌ದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. 100% ಉಚಿತ ವಿದ್ಯುತ್, ಮಧ್ಯಾಹ್ನದ ಊಟ, ಹಾಲು, ಮೊಟ್ಟೆ, ಶೂ ಹಾಗೂ ಪಠ್ಯಪುಸ್ತಕ ತಲುಪಿಸಲು ಇಲಾಖೆ ಬದ್ಧವಾಗಿದೆ. 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ಆರಂಭಿಸುವ ಕುರಿತು ಜೂನ್ 1ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸುವುದಾಗಿ ತಿಳಿಸಿದ್ದರು. ಅಲೋಕೇಷನ್ ಮುಂದಿನ ವರ್ಷವಾದರೂ ಈ ವರ್ಷವೇ ಯೋಜನೆಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದ್ದರು.

ಇದನ್ನೂ ಓದಿ: ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?

ಅಷ್ಟರಲ್ಲೇ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಿದ್ದು, ಮುಂದಿನ ಹಂತದಲ್ಲಿ ಈ ಯೋಜನೆಯ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದು ಚರ್ಚಿಸಲು ನಿರ್ಧರಿಸಲಾಗಿದೆ. ಯೋಜನೆಗೆ ಸಂಬಂಧಿಸಿದ ಪ್ಲಾನ್‌ಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಬಜೆಟ್ ಹೊಂದಾಣಿಕೆ ಆಧರಿಸಿ ಮುಂದಿನ ಹಂತದಲ್ಲಿ ನೇರವಾಗಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us