ಮಲೆನಾಡಿನಲ್ಲಿನ್ನು ಸೈಕಲ್ ದರ್ಬಾರು, ಕೋಟಿ ಕೋಟಿ ವೆಚ್ಚದಲ್ಲಿ ಸೈಕಲ್ ಯೋಜನೆ, ಯುವಕ-ಯುವತಿಯರು ಫುಲ್ ಖುಷ್

ಪಬ್ಲಿಕ್ ಬೈಕ್ ಶೇರಿಂಗ್ ಸಿಸ್ಟಂ ಅನುಸಾರ ಶಿವಮೊಗ್ಗದಲ್ಲಿ ವಿವಿಧ ಸೈಕಲ್ ಪಾಯಿಂಟ್ ಗಳನ್ನು ಈಗಾಗಲೇ ನಿಗದಿ ಮಾಡಲಾಗಿದೆ. ನಗರದಲ್ಲಿ ಸೈಕಲ್ ಮಾರ್ಗಗಳನ್ನೂ ಸೂಚಿಸಲಾಗಿದೆ. ಇದೇ ನಿರ್ದಿಷ್ಟ ಮಾರ್ಗದಲ್ಲಿ ಈ ಸೈಕಲ್ ಗಳ ಬಳಕೆ ಮಾಡಬೇಕು. ಇಲ್ಲದಿದ್ದರೇ ಸೈಕಲ್ ಗಳು ಲಾಕ್ ಆಗಿ ಬಿಡುತ್ತವೆ!

Follow us
Basavaraj Yaraganavi
| Updated By: ಸಾಧು ಶ್ರೀನಾಥ್​

Updated on: Feb 16, 2024 | 4:06 PM

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸೈಕಲ್ ಗಳದ್ದೇ ಕಾರುಬಾರು ಶುರುವಾಗಿದೆ. ವಿದೇಶದಂತೆ ಮಲೆನಾಡಿನಲ್ಲೂ ಈಗ ಉತ್ತಮ ಆರೋಗ್ಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹೊಸ ಪ್ರಯೋಗಕ್ಕೆ ಕೈಹಾಕಿದೆ. ಇನ್ನು ಸುಲಭವಾಗಿ ನಗರದೆಲ್ಲಡೆ ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಾನಿಕ್ ಸೈಕಲ್ ಗಳ ಬಳಕೆ ಮಾಡಬಹುದು. ಏನಿದು ನಗರದಲ್ಲಿ ಹೊಸ ಯೋಜನೆ ಅಂತೀರಾ ಈ ಸ್ಟೋರಿ ನೋಡಿ… ಅದು ಮುಂದಿನ ಪೀಳಿಗೆಯ ದೂರದೃಷ್ಟಿ. ಮಲೆನಾಡಿನಲ್ಲಿ ಪರಿಸರ ಮಾಲಿನ್ಯ ಮತ್ತು ವಾಹನ ದಟ್ಟಣೆ ನಿಯಂತ್ರಣಕ್ಕೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ (Shivamogga Smart City Limited -SSCL) ಬರೋಬರಿ 4.43 ಕೋಟಿ ರೂ ವೆಚ್ಚದಲ್ಲಿ ಪಬ್ಲಿಕ್ ಬೈಕ್ ಶೇರಿಂಗ್ ಸಿಸ್ಟಂ (Public Electric Bicycle Share system -PBS) ಜಾರಿಗೆ ತಂದಿದೆ. ನಗರದಲ್ಲಿ 30 ಸ್ಟೇಷನ್ ಗಳಲ್ಲಿ 300 ಸೈಕಲ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

270 ಪೆಡಲ್ ಸೈಕಲ್ ಮತ್ತು 30 ಎಲೆಕ್ಟ್ರಾನಿಕ್ ಬೈಸಿಕಲ್ ಗಳಿವೆ. ಒಂದು ಸ್ಟೇಶನ್ ನಲ್ಲಿ 10-12 ಸೈಕಲ್ ಗಳಿರುತ್ತವೆ. ಖಾಸಗಿ ಕಂಪನಿಯು ಐದು ವರ್ಷ ಕಾಲ ಈ ಸೈಕಲ್ ಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲೂ ಈ ಸೈಕಲ್ ಗಳನ್ನು ಬಳಕೆ ಮಾಡಬಹುದಾಗಿದೆ.

ಸೈಕಲ್ ನ ಎಲ್ಲ ಮಾಹಿತಿಯು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಲಭ್ಯವಾಗಲಿದೆ. ಬಾಡಿಗೆ ಪಡೆಯುವುದೂ ಸೇರಿದಂತೆ ಎಲ್ಲವೂ ತಂತ್ರಜ್ಞಾನ ನಿರ್ವಹಣೆಯಿಂದ ( Yaana app using mobile number) ಕೂಡಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸೈಕಲ್ ಬಾಡಿಗೆ ಹಣ ಸಂದಾಯ ವ್ಯವಸ್ಥೆ ಇದೆ. ಯೋಜನೆಯ ಅನುಸಾರ ನಗರದಲ್ಲಿ ವಿವಿಧ ಪಾಯಿಂಟ್ (Docking stations) ಗಳನ್ನು ಈಗಾಗಲೇ ನಿಗದಿ ಮಾಡಲಾಗಿದೆ. ನಗರದಲ್ಲಿ ಸೈಕಲ್ ಮಾರ್ಗಗಳನ್ನೂ ಸೂಚಿಸಲಾಗಿದೆ. ಇದೇ ನಿರ್ದಿಷ್ಟ ಮಾರ್ಗದಲ್ಲಿ ಈ ಸೈಕಲ್ ಗಳ ಬಳಕೆ ಮಾಡಬೇಕು. ಇಲ್ಲದಿದ್ದರೇ ಸೈಕಲ್ ಗಳು ಲಾಕ್ ಆಗಿ ಬಿಡುತ್ತವೆ! ಇಂತಹದ್ದೊಂದು ಹೊಸ ಪ್ರಯೋಗ ಸ್ಮಾರ್ಟ್ ಸಿಟಿ ನಗರದಲ್ಲಿ ಸದ್ಯ ಆರಂಭವಾಗಿದೆ. ಜನರು ಹೇಗೆ ಈ ಸೌಲಭ್ಯವನ್ನು ಬಳಕೆ ಮಾಡುತ್ತಾರೆ ಎನ್ನುವುದರ ಆಧಾರ ಮೇಲೆ ಮುಂದೆ ಒಂದಿಷ್ಟು ಯೋಜನೆಯಲ್ಲಿ ಬದಲಾವಣೆಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಮಾಯಣ್ಣಗೌಡ, ಮಹಾನಗರ ಪಾಲಿಕೆಯ ಆಯುಕ್ತರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ: ಸಾರಿಗೆ ಇಲಾಖೆಯ ಅಧಿಕೃತ ಆದೇಶಲ್ಲೇನಿದೆ ಗೊತ್ತಾ?

ನಗರದಲ್ಲಿ ಇನ್ನು ಸೈಕಲ್ ಗಳದ್ದೇ ಕಾರುಬಾರು ಶುರುವಾಗಿದೆ. ಅದರಲ್ಲೂ ಕಾಲೇಜ್ ಮತ್ತು ವಿದ್ಯಾರ್ಥಿಗಳಿಗೆ ಈ ಸೈಕಲ್ ಯೋಜನೆ ಹೆಚ್ಚು ಲಾಭದಾಯಕವಾಗಲಿದೆ. ಈಗಾಗಲೇ ಯುವಕರು ಮತ್ತು ಯುವತಿಯರು ತುಂಬಾ ಉತ್ಸಾಹದಿಂದ ಸೈಕಲ್ ಗಳ ಬಳಕೆ ಮಾಡುತ್ತಿದ್ದಾರೆ. ಸದಸ್ಯತ್ವ ಪಡೆದವರಿಗೆ ಸಾಮಾನ್ಯ ಸೈಕಲ್ ಆರಂಭದ ಅರ್ಧ ಗಂಟೆ ಫ್ರೀ ಇದ್ದು, ಬಳಿಕ 15 ರೂಪಾಯಿ ಬಾಡಿಗೆ ವೆಚ್ಚ ಇರುತ್ತದೆ. ಎಲೆಕ್ರ್ಟಿಕಲ್ ಸೈಕಲ್ ಆರಂಭದ 30 ನಿಮಿಷ 20 ರೂಪಾಯಿ, ಬಳಿಕ 15 ರೂಪಾಯಿ. ಸದಸ್ಯತ್ವಕ್ಕೆ 300 ರೂಪಾಯಿ ಫಿಕ್ಸ್ ಮಾಡಲಾಗಿದೆ.

ದುಬಾರಿ ಸೈಕಲ್ ಆಗಿರುವುದರಿಂದ ಪಾಲಿಕೆ ಮತ್ತು ಜವಾಬ್ದಾರಿ ವಹಿಸಿಕೊಂಡಿರುವ ಖಾಸಗಿ ಕಂಪನಿಯು ಎಲ್ಲವನ್ನೂ ಕಟ್ಟುನಿಟ್ಟಾಗಿ ನಿತ್ಯ ಫಾಲೋಅಪ್ ಮಾಡಲಿದ್ದಾರೆ. ಸದ್ಯ ನಗರದಲ್ಲಿ ಹೊಸ ಪ್ರಯೋಗ ಶುರುವಾಗಿದೆ. ಎಲ್ಲಡೆ ಈಗ ಸೈಕಲ್ ಗಳ ಬಳಕೆಗೆ ಹೆಚ್ಚು ಅದ್ಯತೆ ನೀಡಲಾಗುತ್ತಿದೆ. ಬೈಕ್ ಮತ್ತು ಕಾರ್ ಗಳ ಅಬ್ಬರದ ನಡುವೆ ನಗರದಲ್ಲಿ ಸೈಕಲ್ ಗಳ ಓಡಾಟ ಶುರುವಾಗಿದೆ.

ಯುವಕ ಮತ್ತು ಯುವತಿಯರು, ವಿದ್ಯಾರ್ಥಿಗಳು, ಮಧ್ಯ ವಯಸ್ಕರರು ಕೂಡಾ ಸೈಕಲ್ ಗಳ ಬಳಕೆ ಆರಂಭಿಸಿದ್ದಾರೆ. ಸ್ಮಾರ್ಟ್ ಸಿಟಿಯ ಈ ಹೊಸ ಯೋಜನೆಯ ಕುರಿತು ಸದ್ಯ ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದಲ್ಲಿ ಕಾಲೇಜ್, ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಓಡಾಡಲು ಸುಲಭವಾಗಿ ಸೈಕಲ್ ಗಳು ಕೈಗೆ ಸಿಗುತ್ತವೆ. ಬಳಕೆ ಮಾಡಿ ಸ್ಟ್ಯಾಂಡ್ ನಲ್ಲಿ ಇಟ್ಟು ಹೋದ್ರೆ ಅವರ ಕೆಲಸ ಮುಗಿಯಿತು. ತುಂಬಾ ಸರಳವಾಗಿ ಸೈಕಲ್ ಬಳಕೆ ಯೋಜನೆ ಮಾಡಿರುವುದರಿಂದ ಹೆಚ್ಚು ಹೆಚ್ಚು ಜನರು ಸೈಕಲ್ ಬಳಕೆಗೆ ಸದ್ಯ ಮುಂದಾಗುತ್ತಿದ್ದಾರೆ.

ಕಾಲ ಎಷ್ಟೇ ಮುಂದೆ ಹೋದ್ರೂ….ಮತ್ತೆ ಹಳೆಯ ಮತ್ತು ವೈಜ್ಞಾನಿಕ ಪ್ರಯೋಜನಗಳು ಇರುವ ವ್ಯವಸ್ಥೆ ಮತ್ತೆ ಆರಂಭವಾಗುತ್ತಿರುವುದು ಗಮನಾರ್ಹ. ಆರಂಭದಲ್ಲಿ ಸೈಕಲ್ ಗಳ ಬಳಕೆ ಅತೀ ಹೆಚ್ಚು ಇತ್ತು. ಕ್ರಮೇಣ ಅದು ಕಡಿಮೆ ಆಗಿತ್ತು. ಈಗ ಮತ್ತೆ ಉತ್ತಮ ಆರೋಗ್ಯ ಮತ್ತು ಪರಿಸರಕ್ಕೆ ನಗರದಲ್ಲಿ ಹೈಟೆಕ್ ತಂತ್ರಜ್ಞಾನದ ಸೈಕಲ್ ಗಳ ಸಂಚಾರ ಆರಂಭವಾಗಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.