ಅಡಿಕೆ ಸುರಕ್ಷತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಚಿವ ಚೌಹಾಣ್ಗೆ ಮನವಿ ಮಾಡಿದ ಅಡಿಕೆ ಬೆಳೆಗಾರರು
ಸಾಗರದಲ್ಲಿ ನಡೆದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ, ಅಡಿಕೆಯ ಸುರಕ್ಷತೆಯ ಕುರಿತು ವಿಸ್ತೃತ ಸಂಶೋಧನೆ, ಪ್ಯಾಕೇಜಿಂಗ್‌ನಲ್ಲಿನ ಎಚ್ಚರಿಕೆ ಲೇಬಲ್ ತೆಗೆದುಹಾಕುವುದು ಮತ್ತು ಪಾರಂಪರಿಕ ಕೃಷಿಭೂಮಿ ರಕ್ಷಣೆ ಸೇರಿದಂತೆ ಹಲವು ಮುಖ್ಯ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ರಿಗೆ ಅಡಿಕೆ ಬೆಳೆಗಾರರು ಮನವಿ ಮಾಡಿದ್ದಾರೆ.
ಶಿವಮೊಗ್ಗ, ಜನವರಿ 18: ಇಂದು ಸಾಗರದಲ್ಲಿ ಅಡಿಕೆ (Arecanut) ಬೆಳೆಗಾರರ ಬೃಹತ್ ಸಮಾವೇಶ ನಡೆಯಿತು. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅಡಿಕೆ ಸುರಕ್ಷತೆಯ ಕುರಿತು ಸಂಶೋಧನೆ, ಅಡಿಕೆ ಪೊಟ್ಟಣದ ಮೇಲಿನ ಸೂಚನಾಪಟ್ಟಿ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಅಡಿಕೆ ಬೆಳೆಗಾರರು ಸಚಿವ ಶಿವರಾಜ್ ಸಿಂಗ್ ಚೌಹಾಣ್ರಿಗೆ ಮನವಿ ಮಾಡಿದ್ದಾರೆ.
ಅಡಿಕೆ ಬೆಳೆಗಾರರ ಬೇಡಿಕೆಗಳು ಹೀಗಿವೆ
- ವಿಸ್ತೃತ ಸಂಶೋಧನೆಗೆ ಚಾಲನೆ: ಶುದ್ಧ ಅಡಿಕೆಯೂ ಸಹ ಆರೋಗ್ಯಕ್ಕೆ ಹಾನಿಕರ ಎಂಬ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO) ನಿರಂತರವಾಗಿ ವರದಿ ಪ್ರಕಟಿಸುತ್ತಲೇ ಇದೆ. ದೇಶದ ಸರ್ವೋಚ್ಚ ನ್ಯಾಯಾಲಯದಲ್ಲೂ ಈ ಕುರಿತ ದಾವೆ ಮುಂದುವರಿದಿದೆ. ಆದರೆ, ರೈತರು ಹಾಗೂ ಬಳಕೆದಾರರು ತಲೆತಲಾಂತರದಿಂದ ಕಂಡುಕೊಂಡಿರುವ ನೈಜ ಅನುಭವ ಇದನ್ನು ಒಪ್ಪಲು ಸಾಧ್ಯವಿಲ್ಲ. ಜೊತೆಗೆ, ದೇಶದ ಬಹಳಷ್ಟು ಸಂಶೋಧನಾ ಸಂಸ್ಥೆಗಳ ಸಂಶೋಧನೆಗಳೂ ಸಹ ಶುದ್ಧ ಅಡಿಕೆಯನ್ನು ಸುರಕ್ಷಿತ ಎಂದೇ ನಿರೂಪಿಸಿವೆ. ಆದ್ದರಿಂದ, ಅಡಿಕೆಯ ಸುರಕ್ಷಿತವೆಂಬ ನಿಖರ ಮಾಹಿತಿಯನ್ನು ಸರ್ವೋಚ್ಚ ನ್ಯಾಯಾಲಯ ಹಾಗೂ ವಿಶ್ವ ಅರೋಗ್ಯ ಸಂಸ್ಥೆಯ ಎದುರು ವ್ಯವಸ್ಥಿತವಾಗಿ ಮಂಡಿಸುವ ಅಗತ್ಯವಿದೆ.
- ಅಡಿಕೆ ಪೊಟ್ಟಣದ ಮೇಲಿನ ಸೂಚನಾಪಟ್ಟಿ ಕೈಬಿಡುವದು: ಕೇಂದ್ರ ಆರೋಗ್ಯ ಇಲಾಖೆಯಡಿಯಲ್ಲಿ ಬರುವ “ಆಹಾರ ಸುರಕ್ಷತೆ ಮತ್ತು ಮಾನದಂಡ ನಿರ್ವಹಣಾ ಪ್ರಾಧಿಕಾರ” 2011 ಅಗಸ್ಟ್ 1ರಂದು ಗೆಜೆಟ್ ಪ್ರಕಟಣೆಯಲ್ಲಿ, ಸಿದ್ಧ ಆಹಾರ ಸಾಮಗ್ರಿಗಳನ್ನು ಮಾರುಕಟ್ಟೆಯಲ್ಲಿ ಮಾರುವಾಗ ಪಾಲಿಸಬೇಕಾದ ನಿಯಮಗಳ ಆದೇಶದ 2ನೇ ಅಧ್ಯಾಯದ 31ನೇ ನಿಯಮದಂತೆ, ಮಾರುಕಟ್ಟೆಯಲ್ಲಿ ಮಾರುವ ಶುದ್ಧ ಅಡಿಕೆಯ ಪೊಟ್ಟಣಗಳ ಮೇಲೂ “ಅಡಿಕೆ ಜಗಿಯುವದು ಆರೋಗ್ಯಕ್ಕೆ ಹಾನಿಕರ” ಎಂಬ ಸೂಚನೆ ಮುದ್ರಿಸುವದು ಖಡ್ಡಾಯ ಮಾಡಲಾಗಿದೆ. ಇದು ನಿಜಕ್ಕೂ ಅವಸರದ ತೀರ್ಮಾನ. ಹೀಗಾಗಿ, ಈ ಸರ್ಕಾರಿ ಆದೇಶದಲ್ಲಿನ ಈ ಅಂಶವನ್ನು ಸರ್ಕಾರವು ತಕ್ಷಣ ಕೈಬಿಡುವಂತೆ ಮನವಿ ಮಾಡಲಾಗಿದೆ.
- ಪಾರಂಪರಿಕ ಅಡಿಕೆ ಕೃಷಿಭೂಮಿ ರಕ್ಷಣೆ: ರಾಜ್ಯ ಹಾಗೂ ದೇಶದ ಪಾರಂಪರಿಕ ಅಡಿಕೆ ಬೆಳೆ ಕೃಷಿ ಪ್ರದೇಶಗಳನ್ನು ಹೊರತುಪಡಿಸಿ, ಬೇರೆಡೆ ತೀರಾ ವೇಗವಾಗಿ ಈ ಬೆಳೆ ಪಸರಿಸುತ್ತಿದೆ. ಹೀಗಾಗಿ, ದೇಶದಲ್ಲಿ ಇಂದು ಮಾರುಕಟ್ಟೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಎರಡುಪಟ್ಟು ಹೆಚ್ಚು ವೇಗದ ದರದಲ್ಲಿ ಅಡಿಕೆ ಉತ್ಪಾದನೆಯಾಗುತ್ತಿದೆ. ಇದು ಕೃಷಿಭೂಮಿಯ ವಲಯ ಹಾಗೂ ಅಡಿಕೆ ಮಾರುಕಟ್ಟೆ ಸ್ಥಿರತೆ- ಇವೆರಡರ ಮೇಲೂ ಗಾಢವಾದ ವ್ಯತಿರಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ, ಸೂಕ್ತ ಕೃಷಿ ಭೂಬಳಕೆ ನೀತಿ ಜಾರಿಗೆ ತಂದು, ಪ್ರತಿಯೊಂದೂ ಕೃಷಿ-ಹವಾಮಾನ ವಲಯಕ್ಕೆ ಸೂಕ್ತವಾದ ಬೆಳೆಯನ್ನು ಮಾತ್ರ ಉತ್ತೇಜಿಸುವ ಹಾಗೂ ಅಡಿಕೆ ಬೆಳೆಯ ಅವೈಜ್ಞಾನಿಕ ವಿಸ್ತರಣೆಯನ್ನು ನಿಯಂತ್ರಿಸುವ ನೀತಿ ರೂಪಿಸಬೇಕು.
- ಆಮದು ನಿರ್ಬಂಧ: ದೇಶದೊಳಗೆ ಕಾನೂನು ಬಾಹೀರವಾಗಿ ಒಳನುಸುಳುತ್ತಿರುವ ಅಡಿಕೆಯನ್ನು ಸಂಪೂರ್ಣ ನಿಶೇಧಿಸಬೇಕು. ಕಾನೂನಿನ ಅನ್ವಯ ಆಮದು ಮಾಡಿಕೊಳ್ಳಲಾಗುತ್ತಿರುವ ಅಡಿಕೆಯ ಪ್ರಮಾಣವನ್ನು ಸೂಕ್ತ ಕಸ್ಟಮ್ಸ್ ತೆರಿಗೆ ಹಾಗೂ ಕನಿಷ್ಟ ಆಮದು ಬೆಲೆ ನಿಗದಿ ಪಡಿಸುವದರ ಮೂಲಕ, Central Board of Indirect Taxes and Customs (CBIC) ನಿಯಂತ್ರಿಸಬೇಕು.
- ರೈತರಿಂದ-ಬಳಕೆದಾರರವರೆಗಿನ ಅಡಿಕೆ ಉತ್ಪನ್ನದ ಗರಿಷ್ಟ ಗುಣಮಟ್ಟ ಕಾಯ್ದುಕೊಳ್ಳುವದು ಹಾಗೂ ಕಲಬೆರಕೆಯಾಗುತ್ತಿರುವ ಅಪಾಯಕಾರಿ ರಾಸಾಯನಿಕಗಳ ಬಳಕೆಗೆ ಕಠಿಣ ಕಡಿವಾಣ ಹಾಕಲು, ಅಡಿಕೆ ಮತ್ತು ಸಾಂಬಾರು ಬೆಳೆ ಅಭಿವೃದ್ಧಿ ನಿರ್ದೇಶನಾಲಯ ಸಮಗ್ರವಾ ನಿಯಮಾವಳಿ ರೂಪಿಸಿ, ಜಾರಿಗೆ ತರಬೇಕು.
- ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಡಿಕೆ ಉತ್ಪನ್ನಗಳ ಗುಣಮಟ್ಟದ ಕುರಿತು ಆಹಾರ ಸುರಕ್ಷತೆ ಮತ್ತು ಮಾನದಂಡ ನಿರ್ವಹಣಾ ಪ್ರಾಧಿಕಾರ ಸೂಕ್ತ ನಿಯಮವಾಳಿ ರೂಪಿಸಿ ಜಾರಿಗೆ ತರಬೇಕು.
- ಆಹಾರ ವಸ್ತುಗಳ ಗುಣಮಟ್ಟ ಮೇಲ್ವಿಚಾರಣೆ ಹಾಗೂ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವುದು
- ಅಡಿಕೆ ಬೆಳೆಯ ಪಾರಂಪರಿಕ ಪ್ರದೇಶಗಳಲ್ಲಿ ಸೂಕ್ತ ಮಿಶ್ರ ಬೆಳೆಗಳಿಗೆ ಉತ್ತೇಜನ ನೀಡುವುದು
- ಅಡಿಕೆಯ ಬ್ರಾಂಡ್ ಮೌಲ್ಯ ಕಾಪಾಡಿಕೊಳ್ಳುವುದು
- ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಸಮಿತಿ ರಚನೆ ಮಾಡುವುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.