ಶಿವಮೊಗ್ಗ; ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಮೆಗ್ಗಾನ್ ಗೆ ದಾಖಲು, ಚಿಕಿತ್ಸೆ ನೀಡದೇ ವೈದ್ಯರ ನಿರ್ಲಕ್ಷ್ಯ, ರೋಗಿ ಸಾವು

ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಯನ್ನು ಚಿಕಿತ್ಸೆಗೆಂದು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಬಂದ್ರೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಜೀವ ಉಳಿಸಬೇಕಾಗಿದ್ದ ಆಸ್ಪತ್ರೆಯ ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲಿಲ್ಲ. ಇದರಿಂದ ರೋಗಿಯು ಒದ್ದಾಡಿ ಒದ್ದಾಡಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾನೆ. ಮೆಗ್ಗಾನ್ ಆಸ್ಪತ್ರೆಯ ವೈದ್ಯರ ಯಡವಟ್ಟು ಕುರಿತು ಒಂದು ವರದಿ ಇಲ್ಲಿದೆ.

ಶಿವಮೊಗ್ಗ; ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಮೆಗ್ಗಾನ್ ಗೆ ದಾಖಲು, ಚಿಕಿತ್ಸೆ ನೀಡದೇ ವೈದ್ಯರ ನಿರ್ಲಕ್ಷ್ಯ, ರೋಗಿ ಸಾವು
ವಿಷಸೇವಿಸಿ ಶಿವಮೊಗ್ಗದ ಮೆಗ್ಗಾನ್​ಗೆ ದಾಖಲಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡದೇ ವೈದ್ಯರ ನಿರ್ಲಕ್ಷ್ಯ, ರೋಗಿ ಸಾವು
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 06, 2024 | 7:20 PM

ಶಿವಮೊಗ್ಗ, ಅ.06: ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಬಡರೋಗಿಗಳು ಚಿಕಿತ್ಸೆಗೆಂದು ಬಂದರೆ ಅವರ ಕಥೆ ಮುಗಿದಂತೆ ಎನ್ನುವಂತಾಗಿದೆ. ಹೌದು, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸ್ವಾಮಿನಾಥ್ (55) ಭದ್ರಾವತಿಯಿಂದ ಶಿವಮೊಗ್ಗ(Shivamogga)ದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ವಿಷ ಸೇವಿಸಿ ಒದ್ದಾಡುತ್ತಿದ್ದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ವಿಫಲರಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಒಂದು ಗಂಟೆ ಆದರೂ ಯಾವುದೇ ಸಿಬ್ಬಂದಿ ಮತ್ತು ವೈದ್ಯರು ವ್ಯಕ್ತಿಗೆ ಚಿಕಿತ್ಸೆ ನೀಡದ ಪರಿಣಾಮ ರೋಗಿಯ ಜೀವ ಹೋಗಿದೆ.

ವಿಷಸೇವಿಸಿದ ಕೇಸ್ ಬಂದ ತಕ್ಷಣ ಕೂಡಲೇ ಅವರಿಗೆ ವಾಂತಿ ಮಾಡಿಸಬೇಕು. ಆದರೆ ವಾಂತಿ ಮಾಡಿಸಲು ಆಸ್ಪತ್ರೆಯಲ್ಲಿ ಉಪ್ಪು ಖಾಲಿ ಆಗಿದ್ದು, ಉಪ್ಪು ಇಲ್ಲದೇ ಸಿಬ್ಬಂದಿಗಳು ಪರದಾಡಿದ್ದಾರೆ. ಇನ್ನು ಉಪ್ಪು ತರಲು ಒಂದು ಗಂಟೆ ವಿಳಂಬ ಮಾಡಿದ್ದಾರೆ. ಅಷ್ಟರಲ್ಲೇ ವಿಷಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಜೀವ ಹೋಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿಗಳು ಇರದ ಹಿನ್ನಲೆಯಲ್ಲಿ ವ್ಯಕ್ತಿಯ ಜೀವ ಹೋಗಿದೆ ಎನ್ನುವುದು ಮೃತನ ಕುಟುಂಬಸ್ಥರ ಆರೋಪವಾಗಿದೆ. ಸ್ವಾಮಿನಾಥ್ ನ ಸಾವಿಗೆ ವೈದ್ಯರು ಮತ್ತು ಜಿಲ್ಲಾಸ್ಪತ್ರೆಯ ಬೇಜವಾಬ್ದಾರಿಯೇ ಕಾರಣವಾಗಿದೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮೃತನ ಕುಟುಂಬಸ್ಥರು ಮತ್ತು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಯಾವುದೇ ರೀತಿಯ ತನಿಖೆ ಮಾಡ್ಬೇಡಿ: ಡೆತ್​ನೋಟ್​ ಬರೆದಿಟ್ಟು ಯುವತಿ ಆತ್ಮಹತ್ಯೆ

ಕೆಲವು ತಿಂಗಳನಿಂದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಆಡಳಿತ ವ್ಯವಸ್ಥೆ ಇಲ್ಲದಂತಾಗಿದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷ ಡಾ. ತಿಮ್ಮಪ್ಪ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ತುರ್ತು ಚಿಕಿತ್ಸೆ ವಿಭಾಗದಲ್ಲಿರುವ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗಳು ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಿದ್ದಾರೆ. ಪರಿಣಾಮ ಇಂದು ಸಾವು ಬದುಕಿನ ನಡುವೆ ರೋಗಿ ಹೋರಾಟ ಮಾಡುತ್ತಿದ್ದರೂ ವೈದ್ಯರು ಮಾತ್ರ ಚಿಕಿತ್ಸೆ ನೀಡಲು ಧಾವಿಸಲಿಲ್ಲ. ಇದರಿಂದ ವಿಷ ಸೇವಿಸಿ ಒದ್ದಾಡುತ್ತಿದ್ದ ರೋಗಿಗೆ ಚಿಕಿತ್ಸೆ ಸಿಗದೇ ಆತ ಮೃತಪಟ್ಟಿದ್ಧಾನೆ.

ಜಿಲ್ಲಾಸ್ಪತ್ರೆಯಲ್ಲಿ ಈ ಅವ್ಯವಸ್ಥೆ ನೋಡಿದ ಮೃತನ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಆಸ್ಪತ್ರೆಯಲ್ಲಿ ಎಲ್ಲದಕ್ಕೂ ಹಣ ಕೇಳುತ್ತಾರೆ. ಸರಕಾರಿ ಆಸ್ಪತ್ರೆಯಲ್ಲಿ ಲಂಚ ಕೊಡದೇ ಇದ್ದರೇ ಯಾವುದೇ ಕೆಲಸ ಆಗುವುದಿಲ್ಲ. ಮೃತ ವ್ಯಕ್ತಿಯ ದೇಹವನ್ನು ಶವಾಗಾರಕ್ಕೆ ಶಿಫ್ಟ್ ಮಾಡಲು ಸರಕಾರಿ ಅಂಬುಲೇನ್ಸ್ ಚಾಲಕ 300 ರೂಪಾಯಿ ಪಡೆದಿದ್ದಾನಂತೆ. ಮೃತ ಪಟ್ಟ ಬಳಿಕವೂ ಮೃತನ ಸಂಬಂಧಿಗಳು ದುಡ್ಡು ಕೊಟ್ಟೇ ಮುಂದಿನ ಕೆಲಸ ಮಾಡಿಕೊಂಡಿದ್ದಾರೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಹಣ ಕೊಟ್ಟರೇ ಮಾತ್ರ ಚಿಕಿತ್ಸೆ ಮತ್ತು ಸೌಲಭ್ಯಗಳು ಸಿಗಲು ಸಾಧ್ಯ. ಸರಕಾರಿ ಆಸ್ಪತ್ರೆಗೆ ಬಡರೋಗಿಗಳು ಬಂದರೆ ಅವರನ್ನು ದೇವರೇ ಕಾಪಡುವಂತ ಸ್ಥಿತಿ ನಿರ್ಮಾಣವಾಗಿದೆ.

ತುರ್ತು ಚಿಕಿತ್ಸಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ವೈದ್ಯಾಧಿಕಾರಿಗಳು ಕ್ರಮ ವಹಿಸಬೇಕಿದೆ. ಸ್ವಾಮಿನಾಥ್​ಗೆ ಸೂಕ್ತ ಸಮಯದಲ್ಲಿ ಯಾಕೇ ಚಿಕಿತ್ಸೆ ಕೊಟ್ಟಿಲ್ಲ. ಆತನ ಸಾವಿಗೆ ಯಾರು ಕಾರಣ ಎನ್ನುವ ಕುರಿತು ಸೂಕ್ತ ತನಿಖೆಯಾಗಬೇಕೆಂದು ಮೃತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆ ಅಂದರೆ ಸಂಜೀವಿನಿ ಎನ್ನುವ ಹೆಸರು ಇದೆ. ಕೆಲ ಸರಕಾರಿ ವೈದ್ಯರು ಮತ್ತು ಸಿಬ್ಬಂದಿಗಳು ಜಿಲ್ಲಾಸ್ಪತ್ರೆಯ ಹೆಸರನ್ನು ಹಾಳು ಮಾಡುತ್ತಿದ್ದಾರೆ. ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೋಗಿಗೆ ಚಿಕಿತ್ಸೆ ನೀಡದೇ ಆತನ ಸಾವಿಗೆ ಕಾರಣ ಆಗಿರುವ ವೈದ್ಯರು ಮತ್ತು ಸಿಬ್ಬಂದಿ ವಿರುದ್ದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ