Solar Eclipse: ದೀಪಾವಳಿಯಂದು ರಾಜ್ಯದ ಈ ಎಲ್ಲಾ ಪ್ರಮುಖ ದೇವಾಲಯಗಳು ಬಂದ್
ಈ ಬಾರಿ ಸೂರ್ಯಗ್ರಹಣ ದೀಪಾವಳಿಯಂದೇ ಬರುತ್ತಿರುವ ಹಿನ್ನೆಲೆ ಅಂದು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಿರಲಿವೆ. ಈ ಬಗ್ಗೆ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಈ ಬಾರಿ ಸೂರ್ಯಗ್ರಹಣ (Solar Eclipse)ವು ದೀಪಾವಳಿ (Deepavali)ಯಿಂದು (ಅ.5ರಂದು) ಸಂಭವಿಸಲಿದೆ. ಬರೋಬ್ಬರಿ 27 ವರ್ಷದ ಬಳಿಕ ಅಂದರೆ 1995ರ ಬಳಿಕ ಮತ್ತೆ ದೀಪಾವಳಿ ಹಬ್ಬದಂದೂ ಸೂರ್ಯನಿಗೆ ಗ್ರಹಣ ಹಿಡಿಯುತ್ತಿದೆ. ಹೀಗಾಗಿ ಶುಭ-ಅಶುಭದ ಬಗ್ಗೆ ಲೆಕ್ಕಾಚಾರ ಹಾಕಲಾಗುತ್ತಿದೆ. ಪ್ರತಿ ವರ್ಷ ದೀಪಾವಳಿಯಂದು ಭಕ್ತರು ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಹಬ್ಬದ ದಿನದಂದೇ ಸೂರ್ಯಗ್ರಹಣ ಸಂಭವಿಸುತ್ತಿರುವುದರಿಂದ ಅಂದು ಬಹುತೇಕ ದೇವಾಲಯಗಳ ಬಾಗಿಲು ಮುಚ್ಚಿರಲಿವೆ. ಹೀಗಾಗಿ ಭಕ್ತರು ಸೂರ್ಯಗ್ರಹಣಕ್ಕೂ ಮುನ್ನ ಅಥವಾ ನಂತರದ ದಿನದಲ್ಲಿ ದೇವಾಲಯಕ್ಕೆ ಭೇಟಿಕೊಟ್ಟು ದೇವರ ದರ್ಶನ ಪಡೆಯಬೇಕಾಗಿದೆ. ಕರ್ನಾಟಕದಲ್ಲಿ ಯಾವೆಲ್ಲ ದೇವಾಲಯಗಳು ಬಂದ್ ಆಗಿರಲಿವೆ ಎಂಬೂದು ಇಲ್ಲಿದೆ ನೋಡಿ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮಂಗಳವಾರದಂದು ಮಧ್ಯಾಹ್ನದವರೆಗೆ ಎಂದಿನಂತೆ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶವಿದೆ. ಬಳಿಕ ಮಧ್ಯಾಹ್ನ 2:30ರಿಂದ ರಾತ್ರಿ 7:30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅನ್ನಸಂತರ್ಪಣೆ ಛತ್ರದಲ್ಲಿ ಮಧ್ಯಾಹ್ನ 2:30ರವರೆಗೆ ಭೋಜನ ಪ್ರಸಾದದ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7:30ರ ನಂತರ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲೂ ಭಕ್ತರಿಗೆ ದೇವರ ದರ್ಶನ ಭಾಗ್ಯ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಅಕ್ಟೋಬರ್ 25ರಂದು ದೇವಸ್ಥಾನ ಇಡೀ ದಿನ ಬಾಗಿಲು ಮುಚ್ಚಲಿದೆ. ಆ ದಿನ ದೇವಸ್ಥಾನದಲ್ಲಿ ಯಾವುದೇ ಸೇವೆಗಳು, ಭೋಜನ ವ್ಯವಸ್ಥೆ ಇರುವುದಿಲ್ಲ. ಅ.26ರ ಬೆಳಗ್ಗೆ 9 ಗಂಟೆಗೆ ಎಲ್ಲಾ ಸೇವೆಗಳು ಆರಂಭಗೊಳ್ಳಲಿದೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ ಎಂದಿನಂತೆ ಅನ್ನ ಪ್ರಸಾದವಿರುತ್ತದೆ. ಗ್ರಹಣ ಆರಂಭಗೊಳ್ಳುವ ಅವಧಿಯಿಂದ ಮೋಕ್ಷದ ಅವಧಿಯಲ್ಲಿ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶವಿದ್ದು, ದೇವಸ್ಥಾನದಲ್ಲಿ ಜಪಮಾಡಬಹುದು. ಆದರೆ ಈ ಅವಧಿಯಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಇನ್ನು, ಬೆಂಗಳೂರಿನಲ್ಲಿ ಪ್ರಮುಖ ದೇವಾಲಯಗಳ ಬಾಗಿಲು ಮುಚ್ಚಿರಲಿದ್ದು, ದರ್ಶನದ ಅವಧಿಯಲ್ಲೂ ಬದಲಾವಣೆಯಾಗಲಿದೆ. ಶನೇಶ್ವರ ದೇಗುಲ ಮಾತ್ರ ಗ್ರಹಣದ ಸಂದರ್ಭದಲ್ಲಿ ತೆರೆದಿರಲಿದ್ದು, ನಿರಂತರ ಪೂಜೆ ಪುನಸ್ಕಾರ ನಡೆಯಲಿದೆ.
ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಜೆ 4:45ರಿಂದ 6:45ರವರೆಗೆ ಯಾವುದೇ ಪೂಜೆ, ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಸಂಜೆ 6:45ರ ಬಳಿಕ ನಿತ್ಯ ಪೂಜೆ ಜರುಗಲಿದೆ. ಆದರೆ ಅಂದು ಮಧ್ಯಾಹ್ನ ಅನ್ನ ಪ್ರಸಾದ ಇರುವುದಿಲ್ಲ. ಸೂರ್ಯಗ್ರಹಣದ ಹಿನ್ನೆಲೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮಧ್ಯಾಹ್ನದ ಅನ್ನಸಂತರ್ಪಣೆ ಇರುವುದಿಲ್ಲ. ಆದರೆ ಸಾರ್ವಜನಿಕರಿಗೆ ಕೃಷ್ಣ ದರ್ಶನಕ್ಕೆ ಅವಕಾಶ ಇರುತ್ತದೆ. ಕೃಷ್ಣಮಠದ ಸಂಪ್ರದಾಯದಂತೆ ಉಡುಪಿಯಲ್ಲಿ ಆಕ್ಟೋಬರ್ 25ರಂದು ಬೆಳಗ್ಗೆ ಗೋಪೂಜೆ ನಡೆಯಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಧ್ಯಾಹ್ನದ ಪೂಜೆಯು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಬಳಿಕ ರಾತ್ರಿ 7.30ರ ನಂತರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ದೀಪಾವಳಿಯಂದು ಹಾಸನದ ಹಾಸನಾಂಬಾ ದೇವಿಯ ದರ್ಶನ ಭಾಗ್ಯ ಭಕ್ತರಿಗೆ ಇರುವುದಿಲ್ಲ. ಬೇಲೂರಿನ ಚೆನ್ನಕೇಶವ ದೇವಸ್ಥಾನ, ಮೇಲುಕೋಟೆ ಶ್ರೇ ಚೆಲುವನಾರಾಯಣಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ನಿಮಿಷಾಂಬಾ ದೇಗುಲ, ಸಿಗಂದೂರೇಶ್ವರಿ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಮಂತ್ರಾಲಯದಲ್ಲಿ ಮತ್ತು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇಗುಲದಲ್ಲಿ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ಅದರೆ ಸೇವೆ ಮತ್ತು ಪೂಜೆ ಇರುವುದಿಲ್ಲ.
ಶಿವಮೊಗ್ಗದ ಸಾಗರ ತಾಲೂಕಿನ ಸಿಂಗದೂರಿನ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಅ. 25 ರಂದು ದೇವಿಯ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೂರ್ಯ ಗ್ರಹಣ ಹಿನ್ನಲೆ ಸಾರ್ವಜನಿಕರಿಗೆ ದೇವಿ ದರ್ಶನ ಕ್ಕೆ ಅವಕಾಶ ಇಲ್ಲ ಎಂದು ದೇವಸ್ಥಾನದ ಧರ್ಮಾಧಿಕಾರಿ ರಾಮಪ್ಪ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Sun, 23 October 22




