ಹಾವೇರಿಯಲ್ಲಿ ರಕ್ತದಾನ ಶಿಬಿರ; ಇತರರಿಗೆ ಮಾದರಿಯಾದ ಮೂವರು ಸ್ವಾಮೀಜಿಗಳು
ಸಾಮಾಜಿಕ ಕಾರ್ಯಕರ್ತ ಸದಾನಂದರ ಷಷ್ಠಬ್ದಿ ಪೂರ್ತಿ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಒಟ್ಟು 34 ಜನರು ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು. ಈಗಾಗಲೆ 28 ಬಾರಿ ರಕ್ತದಾನ ಮಾಡಿರುವ ಗ್ರಾಮದ ವೈದ್ಯ ಡಾ.ಗುರುರಾಜ್ ದೇಸಾಯಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಹಾವೇರಿ : ಮಠಾಧೀಶರು, ಸ್ವಾಮೀಜಿಗಳು ಎಂದರೆ ಸಾಕು ಸಮಾಜಕ್ಕೆ ಮಾದರಿ ಆಗಿರಬೇಕು ಎಂಬ ಮಾತಿದೆ. ಅದರಂತೆ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂವರು ಸ್ವಾಮೀಜಿಗಳು ಸಮಾಜಕ್ಕೆ, ಅದರಲ್ಲೂ ವಿಶೇಷವಾಗಿ ಯುವಜನತೆಗೆ ಮಾದರಿ ಆಗುವಂತಹ ಕೆಲಸ ಮಾಡಿದ್ದಾರೆ. ಸುಮಾರು ವರ್ಷಗಳಿಂದ ಪಟ್ಟಣದಲ್ಲಿ ನೆಲೆಸಿರುವ ಸಾಮಾಜಿಕ ಕಾರ್ಯಕರ್ತ ಸದಾನಂದ ಉಡುಪಿ ಎಂಬುವರ ಷಷ್ಠಬ್ದಿ ಪೂರ್ತಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಸ್ವಾಮೀಜಿಗಳು ಇತರರಿಗೆ ಮಾದರಿಯಾಗಿದ್ದಾರೆ.
ಗ್ರಾಮದಲ್ಲಿರುವ ಚನ್ನವೀರೇಶ್ವರ ವಿರಕ್ತಮಠದಲ್ಲಿ ಸದಾನಂದ ಉಡುಪಿಯವರ ಷಷ್ಠಬ್ದಿ ಪೂರ್ತಿ ಕಾರ್ಯಕ್ರಮದ ಪ್ರಯುಕ್ತ ಜೀವದಾನ ಹಬ್ಬ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಕ್ಕಿಆಲೂರು ಗ್ರಾಮದ ವಿರಕ್ತಮಠದ ಶಿವಬಸವ ಶ್ರೀಗಳು, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು ರಕ್ತದಾನ ಮಾಡಿದರು. ಈ ಮೂವರು ಸ್ವಾಮೀಜಿಗಳು ಈಗಾಗಲೆ ಹಲವು ಬಾರಿ ರಕ್ತದಾನ ಮಾಡಿದ್ದಾರೆ. ಶಿವಬಸವ ಶ್ರೀಗಳು ಎಂಟನೆ ಬಾರಿ, ಚಂದ್ರಶೇಖರ ಶ್ರೀಗಳು ಹನ್ನೊಂದನೆ ಬಾರಿ ಮತ್ತು ಮಲ್ಲಿಕಾರ್ಜುನ ಸ್ವಾಮೀಜಿಗಳು ಹತ್ತನೆ ಬಾರಿ ರಕ್ತದಾನ ಮಾಡಿದರು.
34 ಜನರಿಂದ ರಕ್ತದಾನ : ಸಾಮಾಜಿಕ ಕಾರ್ಯಕರ್ತ ಸದಾನಂದರ ಷಷ್ಠಬ್ದಿ ಪೂರ್ತಿ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಒಟ್ಟು 34 ಜನರು ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು. ಈಗಾಗಲೆ 28 ಬಾರಿ ರಕ್ತದಾನ ಮಾಡಿರುವ ಗ್ರಾಮದ ವೈದ್ಯ ಡಾ.ಗುರುರಾಜ್ ದೇಸಾಯಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ 13 ಜನರು ಮೊದಲ ಬಾರಿಗೆ ರಕ್ತದಾನ ಮಾಡಿದರೆ, ನಾಲ್ವರು ಮಹಿಳೆಯರು ಕೂಡ ರಕ್ತದಾನ ಮಾಡಿದ್ದಾರೆ. ಇನ್ನು ರೂಪಾ ಶೇಟ್ ಮತ್ತು ಗಣೇಶ ಶೇಟ್ ಎಂಬ ತಾಯಿ ಮತ್ತು ಮಗ ಹಾಗೂ ವಿನಯ ಮತ್ತು ವಿಜಯ ಡೊಳ್ಳಿನ ಎಂಬ ಅಣ್ಣ ಮತ್ತು ತಮ್ಮಂದಿರು ರಕ್ತದಾನ ಮಾಡಿ ರಕ್ತದಾನ ಮಾಡುವಂತೆ ಇತರರಿಗೆ ಪ್ರೇರಣೆ ನೀಡಿದರು.
ದುಂಡಿಬಸವೇಶ್ವರ ಜನಪದ ಕಲಾ ಸಂಘ, ಸ್ನೇಹಮೈತ್ರಿ ಬ್ಲಡ್ ಆರ್ಮಿ, ಜಿಲ್ಲಾಸ್ಪತ್ರೆಯ ಜಿಲ್ಲಾ ರಕ್ರನಿಧಿ ಘಟಕ, ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಈ ಅಪರೂಪದ ಜೀವದಾನ ಹಬ್ಬ ಆಚರಿಸಿದರು. ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ರಕ್ತದ ಕೊರತೆ ನೀಗಿಸಲು ಹಾಗೂ ರಕ್ತದಾನ ಮಾಡುವಂತೆ ಜಾಗೃತಿ ಮೂಡಿಸಲು ಈ ಜೀವದಾನ ಹಬ್ಬ ಆಯೋಜಿಸಿದ್ದವು. ಆ ಮೂಲಕ ಸಾಮಾಜಿಕ ಕಾರ್ಯ ಹಾಗೂ ಮಾನವೀಯ ಕಳಕಳಿಯ ಸದಾನಂದ ಉಡುಪಿಯವರಿಗೆ ರಕ್ತದಾನದ ಜೀವದಾನ ಹಬ್ಬ ಆಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಮನುಷ್ಯ ವೈಜ್ಞಾನಿಕವಾಗಿ ಎಷ್ಟೇ ಬುದ್ಧಿಶಾಲಿಯಾಗಿದ್ದರೂ ರಕ್ತವನ್ನು ಕೃತಕವಾಗಿ ತಯಾರಿಸಲಾಗದು. ಈ ನಿಟ್ಟಿನಲ್ಲಿ ರಕ್ತ ಕೊಟ್ಟು ಆರೋಗ್ಯ ಹಂಚುವುದರೊಂದಿಗೆ ಆರೋಗ್ಯವಂತರಾಗಲು ಎಲ್ಲರೂ ಅದರಲ್ಲೂ ವಿಶೇಷವಾಗಿ ಯುವಜನತೆ ಮುಂದೆ ಬರಬೇಕು ಎಂದು ರಕ್ತದಾನ ಮಾಡಿದ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಲ್ಲದೆ ಶಿರಸಿಯ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ನಾನು ಈವರೆಗೆ 11 ಬಾರಿ ರಕ್ತದಾನ ಮಾಡಿದ್ದೇನೆ. ಇದೊಂದು ಪುಣ್ಯದ ಕೆಲಸ. ಮಾನವೀಯತೆ ಸಾರಲು ಇದೊಂದು ಉತ್ತಮ ದಾರಿ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:
ಕೈದಿಗೆ ರಕ್ತದಾನ: ಮಾನವೀಯತೆ ಮೆರೆದ ಹಾವೇರಿ ಜೈಲು ಸಿಬ್ಬಂದಿಗಳು
ರಕ್ತದಾನಕ್ಕೆ ಪ್ರೇರಣೆಯಾದ ಪೇದೆ: ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಗ್ರೂಪ್ನಿಂದ ಕೊರೊನಾ ನಡುವೆಯೂ ರಕ್ತದಾನ ಶಿಬಿರಗಳು
Published On - 7:25 am, Mon, 19 April 21