ಫಾಮ್‌ಶೀಟ್‌ಗಳನ್ನು ಬಳಸಿ ಬಗೆ ಬಗೆಯ ಕ್ರಾಫ್ಟ್ ತಯಾರಿಸಿದ ಬಾಲಕ; ಆಟಿಕೆ ವಾಹನಕ್ಕೆ ಮನಸೋತ ಸ್ಥಳೀಯರು

ಹೊರಗಿನಂತೆ ಒಳಭಾಗದಿಂದಲೂ ನಿಜವಾದ ಬಸ್, ಜೀಪ್‌ಗಳಲ್ಲಿ ಇರುವಂತೆ ಸೀಟ್, ಲೈಟಿಂಗ್ ವ್ಯವಸ್ಥೆ ಅಳವಡಿಸಿದ್ದಾನೆ. ಅದರಲ್ಲೂ ಸೀಬರ್ಡ್ ಟೂರಿಸ್ಟ್‌ನ ಬಸ್ ಅಂತೂ ಅಸಲಿಯಂತೆಯೇ ಭಾಸವಾಗುತ್ತಿದ್ದು ಸಾಕಷ್ಟು ಆಕರ್ಷಕವಾಗಿ ರೂಪುಗೊಂಡಿವೆ.

ಫಾಮ್‌ಶೀಟ್‌ಗಳನ್ನು ಬಳಸಿ ಬಗೆ ಬಗೆಯ ಕ್ರಾಫ್ಟ್ ತಯಾರಿಸಿದ ಬಾಲಕ; ಆಟಿಕೆ ವಾಹನಕ್ಕೆ ಮನಸೋತ ಸ್ಥಳೀಯರು
ಯಾದವ್ ಕೃಷ್ಣ
Follow us
TV9 Web
| Updated By: preethi shettigar

Updated on:Feb 26, 2022 | 8:40 AM

ಉತ್ತರ ಕನ್ನಡ: ಕೊವಿಡ್‌ನಿಂದಾಗಿ(Covid 19) ಕಳೆದೆರಡು ವರ್ಷಗಳಿಂದ ಸರಿಯಾಗಿ ತರಗತಿಗಳು ನಡೆಯದೇ, ಆನ್‌ಲೈನ್ ತರಗತಿಗಳಿಂದಾಗಿ (Online Class) ಮಕ್ಕಳು ದಡ್ಡರಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇಲ್ಲೊಬ್ಬ ಬಾಲಕ ಶಾಲೆಗೆ ರಜೆ ನೀಡಿದ್ದ ಸಂದರ್ಭದಲ್ಲಿ ಫಾಮ್‌ಶೀಟ್‌ಗಳನ್ನ(foam sheets) ಬಳಸಿ ಬಗೆ ಬಗೆಯ ಕ್ರಾಫ್ಟ್‌ಗಳನ್ನ ತಯಾರಿಸಿ ಬಿಡುವಿನ ಸಮಯವನ್ನ ಸದ್ಬಳಕೆ ಮಾಡಿಕೊಂಡಿದ್ದಾನೆ. ಈ ಹುಡುಗನ ಕೈಯಲ್ಲರಳಿದ ಆಟಿಕೆ ವಾಹನಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಕಾರವಾರ ನಗರದ ಗಿಡ್ಡಾ ರೋಡ್ ನಿವಾಸಿ ಯಾದವ್ ಕೃಷ್ಣ ನಿಜವಾದ ವಾಹನಗಳಂತೆಯೇ ಕಾಣುವ ಆಟಿಕೆಗಳನ್ನು ತಯಾರಿಸಿದ್ದಾನೆ. ನಗರದ ಸೇಂಟ್ ಜೋಸೆಫ್ ಹೈಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿರುವ ಯಾದವ್‌, ಫಾಮ್‌ಶೀಟ್‌ ಬಳಸಿ ಬಗೆ ಬಗೆಯ ಕ್ರಾಫ್ಟ್‌ಗಳನ್ನು ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದು, ಇದೀಗ ಈತನ ಕೈಯಲ್ಲಿ ಸಿದ್ಧವಾಗಿರುವ ಆಟಿಕೆ ಜೀಪ್, ಕಾರು ಹಾಗೂ ಬಸ್ಸುಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಬಾಲಕ ಯಾದವ್‌ನಿಗೆ ಲಾಕ್‌ಡೌನ್ ಅವಧಿಯಲ್ಲಿ ಕೇವಲ ಆನ್‌ಲೈನ್ ತರಗತಿಗಳು ನಡೆಯುತ್ತಿದುದರಿಂದ ಯೂಟ್ಯೂಬ್ ಚಾನೆಲ್‌ವೊಂದನ್ನು ಪ್ರಾರಂಭಿಸುವ ಆಸೆಯಾಗಿತ್ತು. ಅದಕ್ಕಾಗಿ ಫಾಮ್‌ಶೀಟ್‌ಗಳನ್ನ ತರಿಸಿಕೊಂಡು ಮೊದಲಿಗೆ ಡ್ಯಾಮ್, ಜೆಸಿಬಿಗಳನ್ನು ತಯಾರಿಸಿ ಅದರ ಮೇಕಿಂಗ್ ವೀಡಿಯೋಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದ. ನಂತರ ಇನ್ನಷ್ಟು ಮಾಡೆಲ್‌ಗಳನ್ನು ತಯಾರು ಮಾಡುವ ಹವ್ಯಾಸ ರೂಢಿಯಾಗಿದ್ದು ಸೀಬರ್ಡ್ ಟೂರಿಸ್ಟ್‌ ಬಸ್, ಮಹೀಂದ್ರ ಥಾರ್ ಜೀಪ್, ಪಜೆರೋ ಕಾರನ್ನು ಫಾಮ್‌ಶೀಟ್‌ನಲ್ಲೇ ಸಿದ್ಧಪಡಿಸಿದ್ದಾನೆ. ಅಲ್ಲದೇ ಹೊರಗಿನಂತೆ ಒಳಭಾಗದಿಂದಲೂ ನಿಜವಾದ ಬಸ್, ಜೀಪ್‌ಗಳಲ್ಲಿ ಇರುವಂತೆ ಸೀಟ್, ಲೈಟಿಂಗ್ ವ್ಯವಸ್ಥೆ ಅಳವಡಿಸಿದ್ದಾನೆ. ಅದರಲ್ಲೂ ಸೀಬರ್ಡ್ ಟೂರಿಸ್ಟ್‌ನ ಬಸ್ ಅಂತೂ ಅಸಲಿಯಂತೆಯೇ ಭಾಸವಾಗುತ್ತಿದ್ದು ಸಾಕಷ್ಟು ಆಕರ್ಷಕವಾಗಿ ರೂಪುಗೊಂಡಿವೆ.

ಯಾದವ್ ತಯಾರಿಸಿರುವ ಸೀಬರ್ಡ್ ಟೂರಿಸ್ಟ್ ಬಸ್ ಬರೋಬ್ಬರಿ 100 ಸೆಂಟಿ ಮೀಟರ್ ಉದ್ದವಿದ್ದು, 25 ಸೆಂಟಿ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಈ ಬಸ್ ತಯಾರಿಸಲು ಸುಮಾರು ಎರಡು ತಿಂಗಳ ಕಾಲ ಶ್ರಮವಹಿಸಿದ್ದು, ಬಸ್ಸ್ ಹೊರಗಿನಿಂದ ಮಾತ್ರವಲ್ಲದೇ ಒಳಗಡೆಯಿಂದಲೂ ನೈಜವಾಗಿ ಮೂಡಿಬರಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ಗಮನಹರಿಸಿ ನಿರ್ಮಿಸಲಾಗಿದೆ. ಹೀಗೆ ಖಾಲಿ ಇದ್ದ ಸಮಯದಲ್ಲಿ ಆರಂಭಿಸಿದ್ದ ಕ್ರಾಫ್ಟ್ ಕೆಲಸ ಇದೀಗ ನೆಚ್ಚಿನ ಹವ್ಯಾಸವಾಗಿದೆ ಎಂದು ವಿದ್ಯಾರ್ಥಿ ಯಾದವ್ ಕೃಷ್ಣ ಅಭಿಪ್ರಾಯಪಟ್ಟಿದ್ದಾನೆ.

vehicles

ಆಟಿಕೆ ವಾಹನ

ಯಾದವ್ ಕೃಷ್ಣ ಮೂಲತಃ ಕೇರಳದವರಾದ ಮಂಜು ಹಾಗೂ ವಿಮಲ್ ದಂಪತಿಯ ಪುತ್ರನಾಗಿದ್ದಾನೆ. ಸುಮಾರು 30 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಕಾರವಾರಕ್ಕೆ ಬಂದ ವಿಮಲ್ ಇಲ್ಲಿಯೇ ನೆಲೆಸಿದ್ದಾರೆ. ಯಾದವ್‌ನಿಗೂ ಕಾರವಾರದ ಶಾಲೆಯಲ್ಲೇ ಓದಿಸುತ್ತಿರುವ ಈ ದಂಪತಿ, ಮಗನ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಖಾಲಿ ಕೂರುವ ಬದಲು ಅದೇ ಸಮಯವನ್ನು ಸದುಪಯೋಗ ಪಡಿಸಿಕೊಂಡು ಆಕರ್ಷಕ ಕ್ರಾಫ್ಟ್ ಕಲಿಕೆಯನ್ನು ರೂಢಿಸಿಕೊಂಡಿರುವ ಯಾದವ್ ನಿಜಕ್ಕೂ ಇತರೆ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾನೆ. ಇದೀಗ ಯೂಟ್ಯೂಬ್ ಚಾನೆಲ್‌ ಮೂಲಕ ತನ್ನ ಸ್ನೇಹಿತರಿಗೂ ತನ್ನ ಕಲೆಯನ್ನು ಹೇಳಿಕೊಡಲು ಯಾದವ್‌ ಮುಂದಾಗಿದ್ದು ನಿಜಕ್ಕೂ ವಿಶೇಷವೆ ಸರಿ.

ವರದಿ: ವಿನಾಯಕ ಬಡಿಗೇರ

ಇದನ್ನೂ ಓದಿ: ಚಿತ್ರದುರ್ಗ: ಓಬವ್ವ ಆತ್ಮ ರಕ್ಷಣಾ ಕಲೆಗೆ ಚಾಲನೆ; ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ರಕ್ಷಣಾ ತರಬೇತಿಯಲ್ಲಿ ಭಾಗಿ

ಇದು ಬೈಕ್​ ವೀಲಿಂಗ್​ ಅಲ್ಲ ಸೈಕಲ್ ವೀಲಿಂಗ್! ನಡುರಸ್ತೆಯಲ್ಲಿ ಯುವಕರ ಸೈಕಲ್ ವೀಲಿಂಗ್ ಕಂಡು ವಾಹನ ಸವಾರರು ಕಕ್ಕಾಬಿಕ್ಕಿ

Published On - 8:39 am, Sat, 26 February 22