ಹಾಲಶ್ರೀ ಮಠದಲ್ಲಿ 56 ಲಕ್ಷ ರೂ. ಹಣ ಇಟ್ಟು ಹೋದ ಅನಾಮಿಕ ವ್ಯಕ್ತಿ
chaitra kundapura cheating case: ಚೈತ್ರಾ ಕುಂದಾಪುರ ಗ್ಯಾಂಗ್ನಿಂದ ಉದ್ಯಮಿಗೆ 5 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿರುವ ಹಾಲಸ್ವಾಮಿ ಮಠಕ್ಕೆ ಅನಾಮಿಕ ವ್ಯಕ್ತಿಯೊಬ್ಬರು 56 ಲಕ್ಷ ರೂಪಾಯಿ ನೀಡಿ ತೆರಳಿದ್ದಾರೆ.ಅನಾಮಿಕ ವ್ಯಕ್ತಿಯ ಹೆಸರು ಪ್ರಣವ್ ಪ್ರಸಾದ್ ಎನ್ನಲಾಗುತ್ತಿದ್ದು, ಈ ಕುರಿತಾಗಿ ವಿಡಿಯೋ ಹೇಳಿಕೆ ಸಹ ನೀಡಿದ್ದಾರೆ.
ವಿಜಯನಗರ, ಸೆಪ್ಟೆಂಬರ್ 20: ಚೈತ್ರಾ ಕುಂದಾಪುರ ಗ್ಯಾಂಗ್ನಿಂದ ಉದ್ಯಮಿಗೆ 5 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿರುವ ಹಾಲಸ್ವಾಮಿ ಮಠಕ್ಕೆ (Halashree mutt) ಅನಾಮಿಕ ವ್ಯಕ್ತಿಯೊಬ್ಬರು 56 ಲಕ್ಷ ರೂಪಾಯಿ ನೀಡಿ ತೆರಳಿದ್ದಾರೆ. ಅನಾಮಿಕ ವ್ಯಕ್ತಿಯ ಹೆಸರು ಪ್ರಣವ್ ಪ್ರಸಾದ್ ಎನ್ನಲಾಗುತ್ತಿದೆ. ಈ ಕುರಿತಾಗಿ ವಿಡಿಯೋ ಹೇಳಿಕೆ ನೀಡಿರುವ ಪ್ರಣವ್, ತಾನು ವಕೀಲನೆಂದು ಹೇಳಿಕೊಂಡಿದ್ದಾರೆ. 56 ಲಕ್ಷ ರೂ. ಹಣ ಅಭಿನವ ಹಾಲಶ್ರೀಗೆ ಸೇರಿದ್ದು ಎಂದಿದ್ದಾರೆ.
ಖುದ್ದು ಹಾಲಸ್ವಾಮಿ ಮಠಕ್ಕೆ ತೆರಳಿ ಹಣ ನೀಡಿದ ಪ್ರಣವ್ ಪ್ರಸಾದ್
ಅಭಿನವ ಹಾಲಶ್ರೀ ಕಾರು ಚಾಲಕ ಮೈಸೂರಿನಲ್ಲಿ ನನಗೆ ಹಣ ನೀಡಿದ್ದರು. ಒಟ್ಟು 60 ಲಕ್ಷ ರೂ. ತಂದು ಈ ಪೈಕಿ 56 ಲಕ್ಷ ರೂ. ನನಗೆ ತಲುಪಿಸಿದ್ದರು. ಉಳಿದ 4 ಲಕ್ಷ ರೂ. ವಕೀಲರ ಶುಲ್ಕಕ್ಕಾಗಿ ಕಾರು ಚಾಲಕ ಪಡೆದುಕೊಂಡಿದ್ದಾರೆ. ಮೈಸೂರಿನ ನನ್ನ ಕಚೇರಿಗೆ ಶ್ರೀಗಳ ಕಾರು ಚಾಲಕ ಹಣ ಕೊಟ್ಟು ಹೋಗಿದ್ದರು. ಹಣ ವಾಪಸ್ ಪಡೆಯಲು ಯಾರೂ ಬಾರದಿದ್ದರಿಂದ ಮಠಕ್ಕೆ ನೀಡಿದ್ದೇನೆ. ನಾನು ಖುದ್ದು ಹಾಲಸ್ವಾಮಿ ಮಠಕ್ಕೆ ಆಗಮಿಸಿ 56 ಲಕ್ಷ ರೂ. ಕೊಟ್ಟಿದ್ದೇನೆ ಎಂದು ವಿಡಿಯೋ ಹೇಳಿಕೆಯಲ್ಲಿ ವಕೀಲ ಪ್ರಣವ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಸಿಸಿಬಿ ಡಿಸಿಪಿ ಅಬ್ದುಲ್ ಅಹದ್‌ಗೆ ಪತ್ರ ಬರೆದಿರುವ ಪ್ರಣವ್ ಪ್ರಸಾದ್
ಮೈಸೂರು ಮೂಲದ ವಕೀಲ ಹಾಗೂ ಉದ್ಯಮಿ ಪ್ರಣವ್ ಪ್ರಸಾದ್ ಮಠಕ್ಕೆ ಹಣ ತಲುಪಿಸಿದ್ದ ಬಗ್ಗೆ ಸಿಸಿಬಿ ಡಿಸಿಪಿ ಅಬ್ದುಲ್ ಅಹದ್‌ಗೆ ಪ್ರಣವ್ ಪ್ರಸಾದ್ ಪತ್ರ ಬರೆದಿದ್ದಾರೆ. ಕಳೆದ ಎಂಟು ತಿಂಗಳಿಂದ ಶ್ರೀಗಳಿಗೆ ಪ್ರಣವ್ ಪ್ರಸಾದ್ ಪರಿಚಯವಿದ್ದು, ಆಗಾಗ ಮನೆಗೆ ಆಶೀರ್ವಚನ ನೀಡಲು ಹೋಗುತ್ತಿದ್ದರು.
ಇದನ್ನೂ ಓದಿ: ಅಭಿನವ ಹಾಲಶ್ರೀ ಸ್ವಾಮಿಯನ್ನು ನಗರದ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದ ಸಿಸಿಬಿ ಪೊಲೀಸರು
4 ದಿನಗಳ ಹಿಂದೆ ಪ್ರಣವ್ ಪ್ರಸಾದ್‌ಗೆ ತನ್ನ ಕಾರು ಚಾಲಕ ರಾಜು ಮೂಲಕ ಹಾಲಶ್ರೀ ಹಣ ತಲುಪಿಸಿದ್ದಾರೆ. ಬ್ಯಾಗ್ ಅನ್ನು ಮೈಸೂರಿನಲ್ಲಿ ವಕೀಲರಿಗೆ ತಲುಪಿಸಲು ಹೋಗಿದ್ದರು. ಆದರೆ ವಕೀಲರು ಸಿಗದ ಕಾರಣ ನನ್ನ ಕಚೇರಿಯಲ್ಲಿ ಬಿಟ್ಟುಹೋಗಿದ್ದರು. ಬ್ಯಾಗ್‌ನಲ್ಲಿದ್ದ 60 ಲಕ್ಷ ರೂ. ಪೈಕಿ 4 ಲಕ್ಷ ರೂ. ಚಾಲಕ ರಾಜು ತೆಗೆದುಕೊಂಡು ಹೋಗಿದ್ದ. ಉಳಿದ ಹಣ ಶ್ರೀಗಳಿಗೆ ತಲುಪಿಸುವಂತೆ ಹೇಳಿದ್ದರು.
ಇದನ್ನೂ ಓದಿ: ವಂಚನೆ ಪ್ರಕರಣ: ಹಾಲಶ್ರೀಯನ್ನು ಸಿಸಿಬಿ ಕಸ್ಟಡಿಗೆ ನೀಡಿದ ಕೋರ್ಟ್, ತನಿಖೆಯ ಅಸಲಿ ಆಟ ಈಗ ಶುರು
ಸದ್ಯ ಬ್ಯಾಗ್‌ನಲ್ಲಿದ್ದ ಹಣವನ್ನು ಬೆಳಗ್ಗೆ ಮಠಕ್ಕೆ ತಲುಪಿಸಿರುವ ಪ್ರಣವ್ ಪ್ರಸಾದ್, ನನಗೂ, ವಂಚನೆ ಕೇಸ್‌ಗೂ ಯಾವುದೇ ಸಂಬಂಧವಿಲ್ಲ. ತನಿಖೆಗೆ ಅನಕೂಲವಾಗುತ್ತೆ ಎಂದು ಮಾಹಿತಿ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಮನೆ ಬಿಟ್ಟು ಮೂರು ದಿನವಾಯ್ತು: ಪ್ರಣವ್ ಪತ್ನಿ ಪಲ್ಲವಿ
ಪ್ರಣವ್ ಪತ್ನಿ ಪಲ್ಲವಿ ಟಿವಿ 9 ಗೆ ಪ್ರತಿಕ್ರಿಯಿಸಿದ್ದು, ಪತಿ ಪ್ರಣವ್ ಮನೆ ಬಿಟ್ಟು ಮೂರು ದಿನವಾಯಿತು. ಇವತ್ತೇ ಟಿವಿಯಲ್ಲಿ ನೋಡಿ ನನಗೆ ಗಾಬರಿ ಆಯ್ತು. ಸ್ವಾಮೀಜಿಗೂ ನಮ್ಮ ಕುಟುಂಬಕ್ಕೂ ಪರಿಚಯವಿತ್ತು. ನನ್ನ ಪತಿಯ ಸಹೋದರ ಮನೆಯಲ್ಲಿ ಸ್ವಾಮೀಜಿ ಉಳಿದು ಕೊಂಡಿದ್ದರು. ಎರಡು ವರ್ಷದಿಂದ ನಮಗೆ ಸ್ವಾಮೀಜಿ ಪರಿಚಯ. ನಮಗೆ ಹಣದ ವ್ಯವಹಾರ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಹಣ ಇರಲಿಲ್ಲ ಎಂದಿದ್ದಾರೆ.
ಸ್ವಾಮೀಜಿ ಮೇಲೆ ಕೇಸ್ ಆದ ದಿನದಿಂದ ನಾವು ಸಿಸಿಬಿ ಯಾವುದೇ ಕ್ಷಣದಲ್ಲೂ ನಮ್ಮ ಮನೆಗೆ ಬರಬಹುದು ಅಂತಾ ಕಾಯ್ತಾ ಇದ್ದೇವು. ನಮಗೆ ಸ್ವಾಮೀಜಿ ಬಗ್ಗೆ ಗೊತ್ತಿರುವ ವಿಚಾರ ಹೇಳಲು ಸಿದ್ದರಿದ್ದೇವು. ಮೂರು ದಿನದ ಹಿಂದೆ ನಮ್ಮ ಪತಿ ಮೈಸೂರಿನಿಂದ ಹೊರಗಡೆ ಹೋಗಿದ್ದಾರೆ. ಹಣ ತಂದಿಟ್ಟಿರುವ ಬಗ್ಗೆ ನನಗೆ ಯಾವ ಮಾಹಿತಿಯನ್ನು ನನ್ನ ಪತಿ ಹೇಳಿಲ್ಲ. ಪತ್ರ ಬರೆದಿರುವುದು, ವಿಡಿಯೋ ಮಾಡಿರೋದು ಗೊತ್ತಿಲ್ಲ. ದುಡ್ಡು ಇಟ್ಟಿದ್ದರ ಬಗ್ಗೆಯು ನನಗೆ ಏನು ಗೊತ್ತಿಲ್ಲ. ಈ ಪ್ರಕರಣದ ಬಗ್ಗೆ ನಮಗೆ ಏನು ಗೊತ್ತಿಲ್ಲ. ನಮ್ಮ ಮನೆಗೂ ಸ್ವಾಮೀಜಿ ಬಂದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Wed, 20 September 23