AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ರೂ. ಎಂದು ನಂದಿನಿ ಸಮೃದ್ಧಿ ಹಾಲಿನ ದರ ಲೀಟರ್‌ಗೆ 12 ರೂ. ಏರಿಕೆ! ಬೆಲೆ ಹೆಚ್ಚಳದ ಆಧಾರ, ಮಾನದಂಡಗಳೇನು? ಇಲ್ಲಿದೆ ಮಾಹಿತಿ

ಸರ್ಕಾರವು ನಂದಿನಿ ಹಾಲಿನ ದರ ಲೀಟರ್​ಗೆ 8 ರೂ. ಏರಿಕೆ ಎಂದು ಘೋಷಿಸಿದರೂ ನಂದಿನಿ ಶುಭಂ ಮತ್ತು ಸಮೃದ್ಧಿ ಹಾಲಿನ ದರ ಲೀಟರ್‌ಗೆ ₹12 ಏರಿಕೆಯಾಗಿದೆ. ಸಾಮಾನ್ಯ ಹಾಲು ಹಾಗೂ ಹೆಚ್ಚು ಫ್ಯಾಟ್ ಹೊಂದಿರುವ ಹಾಲಿಗೆ ದರ ವ್ಯತ್ಯಾಸವಾಗಲು ಕಾರಣವೇನು? ಇಲ್ಲಿದೆ ಸರ್ಕಾರದ ಲೆಕ್ಕಾಚಾರದ ಕುರಿತಾದ ಮಾಹಿತಿ.

8 ರೂ. ಎಂದು ನಂದಿನಿ ಸಮೃದ್ಧಿ ಹಾಲಿನ ದರ ಲೀಟರ್‌ಗೆ 12 ರೂ. ಏರಿಕೆ! ಬೆಲೆ ಹೆಚ್ಚಳದ ಆಧಾರ, ಮಾನದಂಡಗಳೇನು? ಇಲ್ಲಿದೆ ಮಾಹಿತಿ
ಸಮೃದ್ಧಿ ಹಾಲು ಮತ್ತು ನಂದಿನಿ ಮೊಸರು (ಸಾಂದರ್ಭಿಕ ಚಿತ್ರ)
ಹರೀಶ್ ಜಿ.ಆರ್​.
| Edited By: |

Updated on: Nov 01, 2026 | 5:54 PM

Share

ಬೆಂಗಳೂರು, ನವೆಂಬರ್ 1: ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಹೊಸ ದರ ಜಾರಿಯಾದ ಬೆನ್ನಲ್ಲೇ, ಸರ್ಕಾರ ಘೋಷಿಸಿರುವ ₹8 ದರ ಹೆಚ್ಚಳ ಮತ್ತು ಕೆಲವು ಉತ್ಪನ್ನಗಳ ವಾಸ್ತವಿಕ ದರ ಏರಿಕೆಯ ನಡುವಿನ ವ್ಯತ್ಯಾಸ ಗ್ರಾಹಕರಲ್ಲಿ ಪ್ರಶ್ನೆ ಹುಟ್ಟುಹಾಕಿದೆ. ಸಾಮಾನ್ಯ ನಂದಿನಿ ನೀಲಿ ಪ್ಯಾಕೆಟ್ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳವಾಗಿದ್ದರೆ, ಹೆಚ್ಚು ಫ್ಯಾಟ್ ಹೊಂದಿರುವ ಶುಭಂ ಹಾಗೂ ಸಮೃದ್ಧಿ ಹಾಲಿನ ದರ ಲೀಟರ್‌ಗೆ ₹12 ಹೆಚ್ಚಳವಾಗಿದೆ. ನಂದಿನಿ ಮೊಸರಿನ ದರದಲ್ಲಿ ಪ್ರತಿ ಲೀಟರ್‌ಗೆ ₹14 ಏರಿಕೆಯಾಗಿದೆ.

ಹಾಗಾದರೆ, ಸರ್ಕಾರ ₹8 ದರ ಹೆಚ್ಚಳ ಎಂದು ಹೇಳಿದ್ದರೂ ಶುಭಂ ಮತ್ತು ಸಮೃದ್ಧಿ ಹಾಲಿನ ದರ ₹12 ಹೆಚ್ಚಾಗಿದ್ದು ಏಕೆ? ಈ ಬೆಲೆ ವ್ಯತ್ಯಾಸಕ್ಕೆ ಹಾಲಿನಲ್ಲಿರುವ ಫ್ಯಾಟ್ ಹಾಗೂ ಎಸ್‌ಎನ್‌ಎಫ್ (ಘನವಸ್ತು) ಪ್ರಮಾಣವನ್ನು ಆಧರಿಸಿದ ದರ ನಿರ್ಧಾರ ಪದ್ಧತಿಯೇ ಪ್ರಮುಖ ಕಾರಣ ಎಂದು ಸರ್ಕಾರ ತಿಳಿಸಿದೆ.

ಫ್ಯಾಟ್ ಮತ್ತು ಎಸ್‌ಎನ್‌ಎಫ್ ಆಧಾರದ ಮೇಲೆ ದರ ನಿರ್ಧಾರ

ಹಾಲಿನ ದರವನ್ನು ಕೇವಲ ಲೀಟರ್ ಪ್ರಮಾಣದ ಆಧಾರದಲ್ಲಿ ಮಾತ್ರ ನಿರ್ಧರಿಸಲಾಗುವುದಿಲ್ಲ. ಹಾಲಿನಲ್ಲಿರುವ ಜಿಡ್ಡಿನ ಅಂಶವಾದ ಫ್ಯಾಟ್ ಹಾಗೂ ಎಸ್‌ಎನ್‌ಎಫ್ ಪ್ರಮಾಣವೂ ದರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಮಾರು 3.0 ಶೇಕಡಾ ಫ್ಯಾಟ್ ಹೊಂದಿರುವ ಸಾಮಾನ್ಯ ಟೋನ್ಡ್ ಮಿಲ್ಕ್ ಅಥವಾ ನಂದಿನಿ ನೀಲಿ ಪ್ಯಾಕೆಟ್ ಹಾಲಿನ ದರದಲ್ಲಿ ₹8 ಏರಿಕೆಯಾಗಿದೆ. ಆದರೆ, 4.5ರಿಂದ 6.0 ಶೇಕಡಾವರೆಗೆ ಹೆಚ್ಚಿನ ಫ್ಯಾಟ್ ಹೊಂದಿರುವ ಶುಭಂ ಮತ್ತು ಸಮೃದ್ಧಿ ಹಾಲಿನ ದರದಲ್ಲಿ ₹12 ಹೆಚ್ಚಳವಾಗಿದೆ.

ಶುಭಂ ಮತ್ತು ಸಮೃದ್ಧಿ ಹಾಲಿನಲ್ಲಿ ಸಾಮಾನ್ಯ ಹಾಲಿಗಿಂತ ಜಿಡ್ಡಿನ ಪ್ರಮಾಣ ಹೆಚ್ಚಿರುವುದರಿಂದ ಅವುಗಳ ಮೂಲ ದರವೂ ಈ ಹಿಂದೆಯೇ ಹೆಚ್ಚಾಗಿತ್ತು. ಈಗಿನ ಪರಿಷ್ಕೃತ ದರದಲ್ಲಿ ಈ ವ್ಯತ್ಯಾಸ ಮತ್ತಷ್ಟು ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

ಹೆಚ್ಚು ಫ್ಯಾಟ್, ರೈತರಿಗೆ ಹೆಚ್ಚಿನ ಆದಾಯ

ಡೈರಿಗಳಲ್ಲಿ ಹಾಲಿನ ಬೆಲೆಯನ್ನು ಕೇವಲ ಲೀಟರ್ ಲೆಕ್ಕದಲ್ಲಿ ನಿಗದಿಪಡಿಸುವುದಿಲ್ಲ. ಹಾಲಿನ ಗುಣಮಟ್ಟ, ಅದರಲ್ಲಿರುವ ಫ್ಯಾಟ್ ಮತ್ತು ಎಸ್‌ಎನ್‌ಎಫ್ ಪ್ರಮಾಣವನ್ನು ಪರಿಗಣಿಸಿ ದರ ನಿಗದಿಪಡಿಸಲಾಗುತ್ತದೆ. ಹೀಗಾಗಿ ಹೆಚ್ಚು ಫ್ಯಾಟ್ ಹೊಂದಿರುವ ಹಾಲು ಪೂರೈಸುವ ರೈತರಿಗೆ ದೊರೆಯುವ ಆದಾಯವೂ ಹೆಚ್ಚಾಗುತ್ತದೆ ಎಂಬುದು ಸರ್ಕಾರದ ವಿವರಣೆಯಾಗಿದೆ.

ಸಾಮಾನ್ಯ ನೀಲಿ ಪ್ಯಾಕೆಟ್ ಹಾಲಿಗೆ ಹೋಲಿಸಿದರೆ ಶುಭಂ ಮತ್ತು ಸಮೃದ್ಧಿ ಹಾಲಿನಲ್ಲಿ ಫ್ಯಾಟ್ ಪ್ರಮಾಣ ಹೆಚ್ಚಿರುವುದರಿಂದ, ದರ ಪರಿಷ್ಕರಣೆಯ ಪರಿಣಾಮ ಈ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.

₹12 ಹಾಲು, ₹14 ಮೊಸರು: ಗ್ರಾಹಕರ ಆಕ್ರೋಶ

ಸರ್ಕಾರ ₹8 ಮೂಲ ದರ ಏರಿಕೆ ಎಂದು ಘೋಷಿಸಿದ್ದರೂ, ಶುಭಂ ಮತ್ತು ಸಮೃದ್ಧಿ ಹಾಲಿನ ಗ್ರಾಹಕರು ಲೀಟರ್‌ಗೆ ₹12 ಹೆಚ್ಚುವರಿ ಹಣ ಪಾವತಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ನಂದಿನಿ ಮೊಸರಿನ ದರದಲ್ಲಿ ಲೀಟರ್‌ಗೆ ₹14 ಏರಿಕೆಯಾಗಿದೆ. ಈ ದರ ಏರಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಮಾಜಿ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ರೈತರ ಹೆಸರಿನಲ್ಲಿ ಸರ್ಕಾರ ಗ್ರಾಹಕರ ಜೇಬಿಗೆ ಕೈಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೈತರಿಗೆ ಹಣ ತಲುಪಬೇಕು ಎಂದ ಯತ್ನಾಳ್

ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಾಲಿನ ದರ ಏರಿಕೆಗೆ ತಮ್ಮ ವಿರೋಧವಿಲ್ಲ ಎಂದು ತಿಳಿಸಿದ್ದಾರೆ. ಆದರೆ ಹೆಚ್ಚಳವಾಗಿರುವ ₹8ರಲ್ಲಿ ರೈತರಿಗೆ ನೇರವಾಗಿ ಹಣ ತಲುಪಬೇಕು. ಕೆಎಂಎಫ್‌ನಲ್ಲಿರುವ ಕೆಲವರ ಪಾಲಾಗಬಾರದು ಎಂದು ಅವರು ಹೇಳಿದ್ದಾರೆ.

ಇತ್ತ ಸಚಿವರಾದ ಜಮೀರ್ ಅಹಮದ್, ಶರಣಪ್ರಕಾಶ್ ಪಾಟೀಲ್ ಮತ್ತು ಬಸವರಾಜ ರಾಯರೆಡ್ಡಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಮೇವಿನ ವೆಚ್ಚ ಹೆಚ್ಚಾಗಿದ್ದು, ರೈತರ ಹಿತದೃಷ್ಟಿಯಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹಾಲಿನ ದರ ಏರಿಕೆಯಿಂದ ಸರ್ಕಾರಕ್ಕೆ ಯಾವುದೇ ಲಾಭವಾಗುವುದಿಲ್ಲ. ಹೆಚ್ಚುವರಿ ಮೊತ್ತವನ್ನು ಹಾಲು ಉತ್ಪಾದಕ ರೈತರ ರಕ್ಷಣೆಗೆ ಬಳಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಮಾಹಿತಿಯಂತೆ, ಹೆಚ್ಚಳವಾದ ಮೊತ್ತದಲ್ಲಿ ರೈತರಿಗೆ ಲೀಟರ್‌ಗೆ ₹7 ನೇರವಾಗಿ ತಲುಪಲಿದೆ.

LIVE TV

ಒಟ್ಟಿನಲ್ಲಿ, ನಂದಿನಿ ಹಾಲಿನ ದರವನ್ನು ₹8 ಹೆಚ್ಚಿಸಲಾಗಿದೆ ಎಂಬ ಘೋಷಣೆಯ ನಡುವೆಯೇ, ಶುಭಂ ಮತ್ತು ಸಮೃದ್ಧಿ ಹಾಲಿನ ದರ ₹12 ಹೆಚ್ಚಾಗಿರುವುದು ಗ್ರಾಹಕರ ಗಮನ ಸೆಳೆದಿದೆ. ಈ ವ್ಯತ್ಯಾಸಕ್ಕೆ ಹಾಲಿನ ಫ್ಯಾಟ್ ಮತ್ತು ಎಸ್‌ಎನ್‌ಎಫ್ ಆಧಾರಿತ ದರ ನಿರ್ಧಾರ ಪದ್ಧತಿಯೇ ಕಾರಣ ಎಂಬುದು ಸರ್ಕಾರದ ಸ್ಪಷ್ಟನೆಯಾಗಿದೆ. ಒಂದು ಕಡೆ ಹೆಚ್ಚುವರಿ ದರದಿಂದ ಗ್ರಾಹಕರು ಅಸಮಾಧಾನಗೊಂಡಿದ್ದರೆ, ಮತ್ತೊಂದೆಡೆ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂಬ ಕಾರಣಕ್ಕೆ ಹಾಲು ಉತ್ಪಾದಕರಲ್ಲಿ ನಿರೀಕ್ಷೆ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಹರೀಶ್ ಜಿ.ಆರ್​.
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
‘ಜೈಲರ್ 2’ ಸಿನಿಮಾನಲ್ಲಿ ನಟಿಸಿರುವ ಕನ್ನಡತಿ ಯಶಸ್ವಿನಿ ದೇವಾಡಿಗ ಜೊತೆ ಮಾತು
‘ಜೈಲರ್ 2’ ಸಿನಿಮಾನಲ್ಲಿ ನಟಿಸಿರುವ ಕನ್ನಡತಿ ಯಶಸ್ವಿನಿ ದೇವಾಡಿಗ ಜೊತೆ ಮಾತು
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ