ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣ ಪೊಲೀಸ್ ವೈಫಲ್ಯದಿಂದಾಗಿದೆಯಾ? ಹೀಗೊಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇದನ್ನು ಪುಷ್ಠೀಕರಿಸುವಂತೆ ಗಲಭೆ ನಂತರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡಾ ವ್ಯವಸ್ಥೆ ವೈಫಲ್ಯದಿಂದ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಗಲಭೆ ಆಗಿದೆ. ಜೊತೆಗೆ ಗಲಭೆಗೆ SDPIನಿಂದ ಸಂಚು ಎಂದು ಹೇಳಿದ್ದಾರೆ.
ಖುದ್ದು ಗೃಹ ಸಚಿವರೇ SDPI ಸಂಚಿನಿಂದ ಈ ಗಲಭೆ ಎಂದಿದ್ದಾರೆ. ಹಾಗಾದ್ರೆ ಗಲಭೆ ಪ್ರಕರಣದಲ್ಲಿ ಗುಪ್ತದಳ ಸಂಪೂರ್ಣವಾಗಿ ವಿಫಲವಾಗಿದೆ. ಇದೆಲ್ಲದಕ್ಕೂ ನೇರ ಕಾರಣ ಸರ್ಕಾರದ ಆಡಳಿತ ವ್ಯವಸ್ಥೆ. ಇಂಟಲಿಜೆನ್ಸ್ ಜತೆ ಅನುಭವ ಇಲ್ಲದ ಪೊಲೀಸರನ್ನು ನಿಯೋಜಿಸಿರೋದು ಕೂಡಾ ಕಾರಣ ವೆನ್ನಲಾಗ್ತಿದೆ.
ಕಳೆದ ಕೆಲ ವರ್ಷಗಳಿಂದ ಪೊಲೀಸ್ ಇಲಾಖೆ ದುರ್ಬಲವಾಗಿದೆ. ಇಲಾಖೆಯನ್ನು ಸದೃಢಗೊಳಿಸುವ ಕೆಲಸ ಸರ್ಕಾರಗಳಿಂದ ಆಗಿರಲಿಲ್ಲ. ಪದೇ ಪದೇ ಸರ್ಕಾರಗಳಿಂದ ಇಲಾಖೆಯ ವರ್ಗಾವಣೆಯಲ್ಲಿ ಹಸ್ತಕ್ಷೇಪವಾಗುತ್ತಿದೆ. ರಾಜಕೀಯ ಹಸ್ತಕ್ಷೇಪದಿಂದ ಪದೇ ಪದೆ ವರ್ಗಾವಣೆಯಾಗುತ್ತಿದ್ದು, ತಮಗೆ ಬೇಕಾದವರನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿಕೊಳ್ಳಲಾಗ್ತಿದೆ.
ವರ್ಗಾವಣೆಯಲ್ಲಿ ರಾಜಕೀಯ ಪ್ರಭಾವ ಹೆಚ್ಚಾಗಿರೋದ್ರಿಂದ ಪೊಲೀಸ್ ಶಿಷ್ಟಾಚಾರ ಬಿಟ್ಟು ವರ್ಷಗಳಾಗಿವೆ. ಡಿಜಿ, ಆಡಳಿತ ವಿಭಾಗದ ಎಡಿಜಿಪಿ, ಸಿಐಡಿ ಡಿಜಿ ಅವರು ಇರುವ ಕಮಿಟಿ ಪೊಲೀಸ್ ವರ್ಗಾವಣೆ ಬಗ್ಗೆ ತೀರ್ಮಾನ ಮಾಡಬೇಕು. ಆದ್ರೆ ಈಗ ಈ ಟ್ರಾನ್ಸ್ಫರ್ ಕಮಿಟಿ ಹೆಸರಿಗಷ್ಟೇ ಸೀಮಿತವಾಗಿದೆ.
ಸರ್ಕಾರ ಮಾತ್ರ ಏನನ್ನೂ ಪರಿಗಣಿಸದೆ ತನ್ನ ಮೂಗಿನ ನೇರಕ್ಕೆ ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿದೆ. ಎಲ್ಲಾ ಸರ್ಕಾರಗಳೂ ಇದನ್ನೇ ಅನುಸರಿಸಿಕೊಂಡು ಬಂದಿವೆ. ಹೀಗಾಗಿ ಡಿಜೆ ಹಳ್ಳಿಯಂಥ ಘಟನೆಗಳು ನಡೆಯುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.