ಕೊಡಗು: ಕಾಲುವೆಗೆ ಬಿದ್ದು ಮೇಲೆ ಬರಲಾಗದೆ ನೀರಿನಲ್ಲಿ ಪರದಾಡುತ್ತಿದ್ದ ಎರಡು ಕಡವೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯ ನೆರವಿನಿಂದ ಗ್ರಾಮಸ್ಥರು ರಕ್ಷಿಸಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಮಡಿಕೇರಿ ತಾಲೂಕಿನ ಚೇತುಕಾಯ 13ನೇ ಮೈಲು ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಎರಡು ಕಡವೆಗಳು ಆಯತಪ್ಪಿ ಕಾಲುವೆಯಲ್ಲಿ ಬಿದ್ದಿದ್ದವು. ನೀರಿನಲ್ಲಿ ಸಿಲುಕಿದ್ದ ಕಡವೆಗಳು ಮೇಲೆ ಬರಲಾಗದೆ ಪರದಾಡುತ್ತಿದ್ದವು. ಕಡವೆಗಳನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರ ನೆರವಿನೊಂದಿಗೆ ಕಡವೆಗಳನ್ನು ಕಾಲುವೆಯಿಂದ ಮೇಲೆತ್ತಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.