ಹದಗೆಟ್ಟ ಬೆಂಗಳೂರು ರಸ್ತೆಗಳ ಬಗ್ಗೆ ನವೋದ್ಯಮಿಯ ಟ್ವೀಟ್: ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೈದರಾಬಾದ್ಗೆ ಬನ್ನಿ ಎಂದ ತೆಲಂಗಾಣ ಮಂತ್ರಿ
ಕೋಟ್ಯಂತರ ಡಾಲರ್ ಮೊತ್ತದ ತೆರಿಗೆ ಪಾವತಿಸಿದರೂ ಈ ಪ್ರದೇಶದಲ್ಲಿ ರಸ್ತೆಗಳು ಸರಿಯಿಲ್ಲ. ಪವರ್ ಕಟ್ ಪ್ರತಿದಿನ ಆಗುತ್ತಿದೆ. ನೀರು ಸರಿಯಾಗಿ ಬರುತ್ತಿಲ್ಲ ಎಂದು ಉದ್ಯಮಿ ದೂರಿದ್ದರು.
ಬೆಂಗಳೂರು: ಬೆಂಗಳೂರಿನ ಕಳಪೆ ರಸ್ತೆಗಳ ಕುರಿತು ನವೋದ್ಯಮಿಯೊಬ್ಬರು ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿರುವ ತೆಲಗಾಣದ ಸಚಿವ ಕೆ.ಟಿ.ರಾಮಾರಾವ್ ಒಂದು ಆಫರ್ ಕೊಟ್ಟಿದ್ದಾರೆ. ‘ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು, ಹೈದರಾಬಾದ್ಗೆ ಬಂದು ಬಿಡಿ’ ಎಂದು ಸಲಹೆ ಮಾಡಿದ್ದಾರೆ. ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಹಲವು ಸೇವೆಗಳನ್ನು ಒದಗಿಸುವ ‘ಖಾತಾಬುಕ್’ ಕಂಪನಿಯ ಸ್ಥಾಪಕ ಮತ್ತು ಸಿಇಒ ರವೀಶ್ ನರೇಶ್ ಬೆಂಗಳೂರಿನ ರಸ್ತೆಗಳ ಬಗ್ಗೆ ಬೇಸರದಿಂದ ಟ್ವೀಟ್ ಮಾಡಿದ್ದರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಮತ್ತು ಕೋರಮಂಗಲ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ಟ್ವಿಟರ್ನಲ್ಲಿ ಪ್ರಸ್ತಾಪಿಸಿದ್ದರು. ‘ಕೋಟ್ಯಂತರ ಡಾಲರ್ ಮೊತ್ತದ ತೆರಿಗೆ ಪಾವತಿಸಿದರೂ ಈ ಪ್ರದೇಶದಲ್ಲಿ ರಸ್ತೆಗಳು ಸರಿಯಿಲ್ಲ. ಪವರ್ ಕಟ್ ಪ್ರತಿದಿನ ಆಗುತ್ತಿದೆ. ನೀರು ಸರಿಯಾಗಿ ಬರುತ್ತಿಲ್ಲ, ಫುಟ್ಪಾತ್ ಇಲ್ಲ. ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ ಮೂರು ಗಂಟೆ ಬೇಕಾಗುತ್ತದೆ. ಭಾರತದ ಸಿಲಿಕಾನ್ ವ್ಯಾಲಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿಯೇ ಅತ್ಯುತ್ತಮ ಸೌಕರ್ಯಗಳಿವೆ ಎಂದು ಹೇಳಿದ್ದರು.
ಮತ್ತೋರ್ವ ಉದ್ಯಮಿ, ಸೇತು ಎಪಿಐನ ಸ್ಥಾಪಕ ನಿಖಿಲ್ ಕುಮಾರ್ ಸಹ ರವೀಶ್ ನರೇಶ್ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರು. ‘ಬೆಂಗಳೂರು ಗೊಂದಲದ ಗೂಡಾಗಿದೆ. ದಯವಿಟ್ಟು ಗಮನಿಸಿ ಸರ್, ನೀವು ಈ ಕಡೆಗೆ ಗಮನ ಕೊಡದಿದ್ದರೆ ಸಾಮೂಹಿಕ ವಲಸೆ ಶುರುವಾಗುತ್ತದೆ’ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡಿದ್ದರು.
ಈ ಟ್ವೀಟ್ಗಳಿಗೆ ಪ್ರತಿಕ್ರಿಯಿಸಿದ ತೆಲಂಗಾಣದ ಕೈಗಾರಿಕೆ, ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆ.ಟಿ.ರಾಮಾರಾವ್, ‘ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೈದರಾಬಾದ್ಗೆ ಬಂದುಬಿಡಿ. ನಮ್ಮಲ್ಲಿ ಉತ್ತಮ ಮೂಲಸೌಕರ್ಯಗಳಿವೆ. ನಮ್ಮ ವಿಮಾನ ನಿಲ್ದಾಣವು ಅತ್ಯುತ್ತಮವಾಗಿದೆ. ನಮ್ಮ ನಗರದ ಹೊರವಲಯದಲ್ಲಿ ತಣ್ಣನೆ ವಾತಾವರಣವಿದೆ. ನಮ್ಮ ಸರ್ಕಾರವು ಆವಿಷ್ಕಾರ, ಮೂಲಸೌಕರ್ಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದು ಭರವಸೆ ನೀಡಿದ್ದಾರೆ.
ಭಾರತದ ನವೋದ್ಯಮಿಗಳ ನೆಚ್ಚಿನ ತಾಣವಾಗರುವ ಬೆಂಗಳೂರಿನಲ್ಲಿ 2019-21ನೇ ಸಾಲಿನಲ್ಲಿ ದೇಶದ ಶೇ 34ರಷ್ಟು ನವೋದ್ಯಮಗಳು ನೋಂದಣಿಯಾಗಿದ್ದವು. ಕೋರಮಂಗಲ, ಎಚ್ಎಸ್ಆರ್ ಲೇಔಟ್ ಮತ್ತು ಇಂದಿರಾನಗರಗಳ ಬಡಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನವೋದ್ಯಮಗಳು ಸ್ಥಾಪನೆಯಾಗಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಲವು ನವೋದ್ಯಮಿಗಳು ಕಚೇರಿ ಸ್ಥಾಪಿಸಿದ್ದಾರೆ. ಮುಂಬೈನಲ್ಲಿಯೂ ಅಲ್ಲಲ್ಲಿ ಸ್ಟಾರ್ಟ್ಅಪ್ಗಳು ಕಾಣಸಿಗುತ್ತವೆಯಾದರೂ ಬಾಡಿಗೆ ದರ ವಿಪರೀತ ಎನಿಸುವಷ್ಟು ಹೆಚ್ಚಾಗಿರುವುದರಿಂದ ಬಹುತೇಕ ಸ್ಟಾರ್ಟ್ಅಪ್ಗಳು ಬೆಂಗಳೂರಿನಲ್ಲಿಯೇ ಚಟುವಟಿಕೆ ನಡೆಸುತ್ತಿವೆ.
ಇದನ್ನೂ ಓದಿ: ಹೆದ್ದಾರಿ, ಬೆಂಗಳೂರು ರಸ್ತೆಗಳಲ್ಲಿ ವಾಹನ ಸಂಚಾರ ಎಂದಿನಂತೆ ಸಹಜ
ಇದನ್ನೂ ಓದಿ: ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಮತ್ತೊಂದು ಜೀವ ಬಲಿ; ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ