International Day For Abolition Of Slavery 2024: ಇಂದಿಗೂ ಅಸ್ತಿತ್ವದಲ್ಲಿರುವ ಆಧುನಿಕ ಗುಲಾಮಗಿರಿಯ ರೂಪಗಳಿವು…

ಹಿಂದೆಲ್ಲಾ ಗುಲಾಮಗಿರಿ ಪದ್ಧತಿ ಇದ್ದಿದ್ದರ ಬಗ್ಗೆ ನಿಮಗೆ ಗೊತ್ತೇ ಇರುತ್ತೆ ಅಲ್ವಾ. ನಾಚಿಕೆಗೇಡಿನ ಸಂಗತಿಯೆಂದರೆ ಈ 21 ನೇ ಶತಮಾನದಲ್ಲಿಯೂ ವಿಶ್ವದಾದ್ಯಂತ ಗುಲಾಮಗಿರಿ ಎಂಬ ಅಮಾನವೀಯ ಪಿಡುಗು ಇನ್ನೂ ಜೀವಂತವಾಗಿದೆ. ಇಂದಿಗೂ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಈ ಆಧುನಿಕ ಗುಲಾಮಗಿರಿಯ ರೂಪಗಳನ್ನು ತೊಡೆದು ಹಾಕುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್‌ 2 ರಂದು ಅಂತಾರಾಷ್ಟ್ರೀಯ ಗುಲಾಮಗಿರಿಯ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವೊಂದು ಮಾಹಿತಿಗಳು ಇಲ್ಲಿವೆ.

International Day For Abolition Of Slavery 2024: ಇಂದಿಗೂ ಅಸ್ತಿತ್ವದಲ್ಲಿರುವ ಆಧುನಿಕ ಗುಲಾಮಗಿರಿಯ ರೂಪಗಳಿವು…
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 02, 2024 | 10:43 AM

ಹಿಂದಿನ ಕಾಲದಲ್ಲಿ ಗುಲಾಮಗಿರಿ, ಜೀತ ಪದ್ಧತಿಯ ಮೂಲಕ ಮುಗ್ಧ ಜನರಿಗೆ ಹಿಂಸೆ ನೀಡುತ್ತಿದ್ದ ಸಂಗತಿಗಳ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ ಅಲ್ವಾ. ಹಲವರು ಇಂದಿನ ದಿನಗಳಲ್ಲಿ ಹಿಂದೆ ಇದ್ದಂತಹ ಗುಲಾಮಗಿರಿ ಪದ್ಧತಿ ಸಂಪೂರ್ಣವಾಗಿ ನಿರ್ನಾಮವಾಗಿದೆ ಎಂದು ಅಂದುಕೊಂಡಿದ್ದಾರೆ. ಆದರೆ ದುರಾದೃಷ್ಟಕರ ಸಂಗತಿಯೇನೆಂದರೆ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಗುಲಾಮಗಿರಿಯೆಂಬ ಅಮಾನವೀಯ ಪಿಡುಗು ಇಂದಿಗೂ ಜೀವಂತವಾಗಿದೆ. ಮುಂದುವರೆದ ಈ ಜಗತ್ತಿನಲ್ಲಿ ಇಂದಿಗೂ ಅಂದಾಜು 40.3 ಮಿಲಿಯನ್‌ ಜನರು ಆಧುನಿಕ ಗುಲಾಮಗಿರಿಯಲ್ಲಿದ್ದಾರೆ. ಯುಎನ್‌ ವರದಿಯ ಪ್ರಕಾರ ಜಾಗತಿಕವಾಗಿ ಹತ್ತು ಮಕ್ಕಳಲ್ಲಿ ಒಂದು ಮಗು ಬಲವಂತದ ದುಡಿಮೆಗೆ ಒಳಗಾಗುತ್ತಿದೆ. ಇದಲ್ಲದೆ 2023 ರ ಜಾಗತಿಕ ಗುಲಾಮಗಿರಿ ಸೂಚ್ಯಂಕದ ಪ್ರಕಾರ ಭಾರತವು 11 ಮಿಲಿಯನ್‌ಗಿಂತಲೂ ಹೆಚ್ಚು ಗುಲಾಮರನ್ನು ಹೊಂದಿದೆ ಎಂಬುದು ತಿಳಿದು ಬಂದಿದೆ. ಈ ಎಲ್ಲಾ ಆಧುನಿಕ ಗುಲಾಮಗಿರಿಯ ರೂಪಗಳನ್ನು ತೊಡೆದು ಹಾಕಬೇಕು, ಗುಲಾಮಗಿರಿಗೆ ತುತ್ತಾಗುವ ಜನರನ್ನು ರಕ್ಷಿಸಬೇಕು ಹಾಗೂ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್‌ 2 ರಂದು ಅಂತಾರಾಷ್ಟ್ರೀಯ ಗುಲಾಮಗಿರಿಯ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನದ ಇತಿಹಾಸ:

ಇಂದು ಅಸ್ತಿತ್ವದಲ್ಲಿರು ಆಧುನಿಕ ಗುಲಾಮಗಿರಿಯ ರೂಪಗಳನ್ನು ನಿರ್ಮೂಲನೆ ಮಾಡಬೇಕು ಎಂಬ ದೃಷ್ಟಿಯಿಂದ ಡಿಸೆಂಬರ್‌ 02 ರಂದು ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನವನ್ನು ಆಚರಿಸಲಾಗುತ್ತದೆ. ಮಾನವರ ಕಳ್ಳಸಾಗಾಣಿಕೆ, ಬಲವಂತವಾಗಿ ವೇಶ್ಯಾವಾಟಿಕೆ ಮಾಡಿಸುವುದು, ಓದುವ ಮಕ್ಕಳನ್ನು ದುಡಿಸಿಕೊಳ್ಳುವುದು ಇಂತಹ ಆಧುನಿಕ ಗುಲಾಮಗಿರಿ ರೂಗಳನ್ನು ನಿಗ್ರಹಿಸುವ ದೃಷ್ಟಿಯಿಂದ 1949 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನವನ್ನು ಆಚರಿಸಲು ಘೋಷಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 02 ರಂದು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನದ ಮಹತ್ವ:

ಗುಲಾಮಗಿರಿಯ ನಿರ್ಮೂಲನೆ ದಿನವು ಆಧುನಿಕ ದಿನದ ಗುಲಾಮಗಿರಿಯಲ್ಲಿ ಸಿಲುಕಿರುವವರ ಹಕ್ಕುಗಳನ್ನು ರಕ್ಷಿಸಲು ಪ್ರಬಲ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮುಂದುವರೆದ ಈ ಜಗತ್ತಿನಲ್ಲಿ ಇಂದಿಗೂ ಕೂಡಾ ಗುಲಾಮಗಿರಿಯೆಂಬ ಪಿಡುಗ ಅಸ್ತಿತ್ವದಲ್ಲಿದೆ. ವಿಶ್ವ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಈ ಮಾನವ ಕಳ್ಳಸಾಗಾಣಿಕೆ, ಬಲವಂತದ ದುಡಿಮೆ, ಬಲವಂತದ ಮದುವೆ ಇತ್ಯಾದಿ ಆಧುನಿಕ ಗುಲಾಮಗಿರಿ ಸಮಸ್ಯೆಗಳನ್ನು ತೊಡೆದು ಹಾಕುವ ಅಗತ್ಯತೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ಕಾನೂನನ್ನು ಬಲಪಡಿಸಲು, ಮಾನವ ಘನತೆಯನ್ನು ಎತ್ತಿ ಹಿಡಿಯಲು, ಸಂತ್ರಸ್ತರನ್ನು ರಕ್ಷಿಸಲು, ಅಪರಾಧಿಗಳಿಗೆ ಸರಿಯಾದ ಶಿಕ್ಷೆ ಕೊಡಬೇಕು ಎಂದು ಸರ್ಕಾರಗಳಿಗೆ ಕರೆ ನೀಡಲಾಗುತ್ತದೆ.

ಆಧುನಿಕ ಗುಲಾಮಗಿರಿಯ ರೂಪಗಳಿವು:

ಬಲವಂತದ ದುಡಿಮೆ: ಹಿಂದಿನ ಕಾಲದಲ್ಲಿ ಗುಲಾಮಗಿರಿಯ ರೂಪಗಳಲ್ಲಿ ಒಂದಾದ ಬಲವಂತದ ದುಡಿಮೆ ಅಸ್ತಿತ್ವದಲ್ಲಿತ್ತು. ಇದಲ್ಲದೆ ಇಂದು ಅದೆಷ್ಟೋ ಜನ ಬಲವಂತದ ದುಡಿಮೆಗೆ ಒಳಗಾಗಿದ್ದಾರೆ. ಶಿಕ್ಷೆ ನೀಡುವ ಮೂಲಕ ಅಥವಾ ಬೆದೆರಿಕೆಯೊಡ್ಡುವ ಮೂಲಕ ಇಲ್ಲಿ ಜನರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತದೆ.

ಮಾನವ ಕಳ್ಳಸಾಗಾಣಿಕೆ: ಮಾನವ ಕಳ್ಳ ಸಾಗಾಣಿಕೆ ಸಮಾಜಕ್ಕೆ ಮಾರಕವಾಗಿದ್ದು, ಇಂದಿಗೂ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಲೈಂಗಿಕ ದಂಧೆದಾಗಿ, ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡಲು, ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ಅಂಗಾಂಗ ತೆಗೆಯುವಿಕೆ ಇತ್ಯಾದಿ ಉದ್ದೇಶಗಳಿಗಾಗಿ ಜನರನ್ನು ಶೋಷಿಸಿ, ಹಿಂಸಾಚಾರ ಮತ್ತು ದಬ್ಬಾಳಿಕೆ ನಡೆಸುವುದಾಗಿದೆ. ಬಡತನದಲ್ಲಿರುವವರನ್ನೇ ಗುರಿಯಾಗಿಸಿಕೊಂಡಿರುವ ಇದು ವಿಶ್ವದಲ್ಲಿ ಅತ್ಯಂತ ಹೆಚ್ಚಾಗಿ ಚಾಲ್ತಿಯಲ್ಲಿರುವ ಗುಲಾಮಗಿರಿಯ ರೂಪ ಇದಾಗಿದೆ.

ಬಲವಂತದ ಮದುವೆ: ಒಪ್ಪಿಗೆ ಇಲ್ಲದಿದ್ದರೂ ಒಬ್ಬ ವ್ಯಕ್ತಿಗೆ ಅಥವಾ ಒಂದು ಹುಡುಗಿಗೆ ಬಲವಂತವಾಗಿ ಮದುವೆ ಮಾಡಿಸುವುದಾಗಿದೆ. ಚಿತ್ರಹಿಂಸೆ ನೀಡಿ ಅಥವಾ ಬೆದರಿಕೆಯೊಡ್ಡಿ ಮದುವೆ ಮಾಡಿಸುವುದು ಕೂಡಾ ಗುಲಾಮಗಿರಿಯಾಗಿದೆ. ಇಂದಿಗೂ ಕೂಡಾ ದುಡ್ಡಿನಾಸೆಗೆ ಬಿದ್ದು ಸಂಬಂಧಿಕರು ಅಥವಾ ಮನೆಯವರು ಇಷ್ಟವಿಲ್ಲ ಎಂದು ಹೇಳಿದರೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಬಲವಂತದ ಮದುವೆ ಮಾಡಿಸುತ್ತಿದ್ದಾರೆ. ಇದು ಕೂಡಾ ಆಧುನಿಕ ಗುಲಾಮಗಿರಿಯ ಒಂದು ರೂಪವಾಗಿದೆ.

ಮಕ್ಕಳ ಗುಲಾಮಗಿರಿ: 14 ವರ್ಷದೊಳಗಿನ ಮಕ್ಕಳನ್ನು ಬಲವಂತವಾಗಿ ದುಡಿಸಿಕೊಳ್ಳುವುದು, ಮಕ್ಕಳನ್ನು ಕಳ್ಳತನ ಮಾಡಿ ನಂತರ ಅವರನ್ನು ಭಿಕ್ಷಾಟನೆಗೆ ಕಳುಹಿಸುವಂತಹದ್ದು, ಬಾಲ್ಯ ವಿವಾಹ, ದೈಹಿಕ ಹಲ್ಲೆ ನಡೆಸಿ ಇಚ್ಛೆಗೆ ವಿರುದ್ಧವಾಗಿ ಮಕ್ಕಳನ್ನು ದುಡಿಸಿಕೊಳ್ಳುವುದು ಇವೆಲ್ಲವೂ ಕೂಡಾ ಆಧುನಿಕ ಗುಲಾಮಗಿರಿಯ ರೂಪಗಳಲ್ಲಿ ಒಂದಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ