International Day of Happiness 2025 : ಅಂತಾರಾಷ್ಟ್ರೀಯ ಸಂತೋಷ ದಿನ ಆಚರಿಸುವುದು ಏಕೆ? ಈ ದಿನದ ಇತಿಹಾಸ, ಮಹತ್ವವೇನು? ಇಲ್ಲಿದೆ ಮಾಹಿತಿ
ಸಂತೋಷ ಯಾರಿಗೆ ತಾನೇ ಬೇಡ ಹೇಳಿ? ನಮ್ಮ ಖುಷಿ, ಸಂತೋಷವನ್ನು ನಮ್ಮಲ್ಲೇ ನಾವು ಕಂಡುಕೊಳ್ಳಬೇಕು. ಸಂತೋಷಕ್ಕಾಗಿ ಒಂದು ದಿನವನ್ನು ಮೀಸಲಿಡಲಾಗಿದ್ದು ಅದುವೇ ಅಂತಾರಾಷ್ಟ್ರೀಯ ಸಂತೋಷ ದಿನ. ಪ್ರತಿವರ್ಷ ಮಾರ್ಚ್ 20ರಂದು ಅಂತಾರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. 2013ರಿಂದ ವಿಶ್ವಸಂಸ್ಥೆಯು ಈ ದಿನದ ಆಚರಣೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿತ್ತು. ಅಂದಿನಿಂದ ಪ್ರತಿ ವರ್ಷ ಸಂತೋಷದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಖುಷಿಯಾಗಿರಬೇಕೆಂದು ಹಗಲಿರುಳು ಎನ್ನದೇ ದುಡಿಯುತ್ತಾನೆ. ಕೆಲವರಿಗೆ ಹಣ (money) ವೊಂದಿದ್ದರೆ ಖುಷಿಯಾಗಿರಬಹುದೆಂಬುದು ಇದೆ. ಆದರೆ ಹಣ ಮಾತ್ರ ಬದುಕಿನಲ್ಲಿ ನೆಮ್ಮದಿಯಿದ್ದರೆ ಅದಕ್ಕಿಂತ ಸಂತೋಷಮಯ (happiness) ವಾದ ಜೀವನ ಮತ್ತೊಂದಿಲ್ಲ. ಎಷ್ಟೇ ದುಡ್ಡು ಕೊಟ್ಟರೂ ಈ ಖುಷಿಯನ್ನು ಖರೀದಿ ಮಾಡಲು ಸಾಧ್ಯವಿಲ್ಲ. ತಮ್ಮ ಜೀವನದ ಸಂತೋಷವನ್ನು ತಮ್ಮಲ್ಲಿಯೇ ತಾವೇ ಕಂಡುಕೊಳ್ಳಬೇಕು. ಪ್ರತಿಯೊಬ್ಬರು ಜೀವನದಲ್ಲಿ ಖುಷಿಯನ್ನು ಕಂಡುಕೊಳ್ಳಬೇಕು ಹಾಗೂ ಈ ಸಂತೋಷದ ಪ್ರಾಮುಖ್ಯತೆ ತಿಳಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಂತೋಷ ದಿನ (International Day of Happiness) ವನ್ನು ಪ್ರತಿವರ್ಷ ಮಾರ್ಚ್ 20ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಸಂತೋಷ ದಿನದ ಇತಿಹಾಸ:
ವಿಶ್ವದಾದ್ಯಂತ ಪ್ರತಿವರ್ಷ ಮಾರ್ಚ್ 20ರಂದು ಅಂತಾರಾಷ್ಟ್ರೀಯ ಸಂತೋಷದಿನವನ್ನು ಆಚರಿಸಲಾಗುತ್ತದೆ. ಆದರೆ ಈ ದಿನವನ್ನು ಆಚರಿಸುವುದಕ್ಕೂ ಮೊದಲು ವರ್ಲ್ಡ್ ಹ್ಯಾಪಿನೆಸ್ ಫೌಂಡೇಶನ್‌ನ ಅಧ್ಯಕ್ಷ ಲೂಯಿಸ್ ಗಲ್ಲಾರ್ಡೊ ಹಾಗೂ ಜೇಮ್ ಇಲಿಯನ್ ʼಹ್ಯಾಪಿಟಲಿಸಂʼ ಎಂಬ ಸಂಸ್ಥೆ ಸ್ಥಾಪಿಸಿದರು. ಸಂತೋಷ, ಯೋಗಕ್ಷೇಮ ಮತ್ತು ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಇಲಿಯನ್ 2006 ರಿಂದ 2012ರವರೆಗೆ ವಿಶ್ವಸಂಸ್ಥೆಯಲ್ಲಿ ಅಭಿಯಾನವನ್ನು ನಡೆಸಿದ್ದರು. ಕೊನೆಗೆ ಅಂತಾರಾಷ್ಟ್ರೀಯ ಸಂತೋಷ ದಿನವನ್ನು 2012ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಘೋಷಿಸಿತು. ತದನಂತರದಲ್ಲಿ 2013ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಂತೋಷ ದಿನವನ್ನು ಆಚರಿಸಲಾಯಿತು. ಅಂದಿನಿಂದ ಈ ಅಂತಾರಾಷ್ಟ್ರೀಯ ಸಂತೋಷ ದಿನದ ಆಚರಣೆಯೂ ಚಾಲ್ತಿಯಲ್ಲಿದೆ.
ಅಂತಾರಾಷ್ಟ್ರೀಯ ಸಂತೋಷ ದಿನದ ಮಹತ್ವ:
ಪ್ರತಿ ವರ್ಷ ಮಾರ್ಚ್ 20 ರಂದು ಅಂತಾರಾಷ್ಟ್ರೀಯ ಸಂತೋಷ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಂತೋಷವಾಗಿ ಇರುವುದರಿಂದ ಆಗುವ ಲಾಭಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಅನೇಕರು ತಮ್ಮ ಕುಟುಂಬದ ಜೊತೆಗೆ ಸಮಯ ಕಳೆಯುವುದು, ಪಾರ್ಟಿ ಸೇರಿದಂತೆ ಇನ್ನಿತ್ತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಈ ದಿನವನ್ನು ಆಚರಿಸುತ್ತಾರೆ.
ಮತ್ತಷ್ಟು ಓದಿ: Personality Test : ನಿಮ್ಮ ಹೆಸರಿನ ಕೊನೆಯ ಅಕ್ಷರ ಯಾವುದು? ಹೇಳುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ
ನೀವು ಸದಾ ಖುಷಿಯಾಗಿರಲು ಇಲ್ಲಿದೆ ಟಿಪ್ಸ್:
- ಸಿಗದಿದ್ದರ ಹಿಂದೆ ಓಡುವುದನ್ನು ಬಿಟ್ಟು, ಇರುವುದರಲ್ಲೇ ಖುಷಿ ಪಡಿ: ಹೆಚ್ಚಿನವರು ಸಿಗದಿರುವುದರ ಹಿಂದೆಯೇ ಹೋಗಿ ತಮ್ಮ ಸಂತೋಷವನ್ನು ಹಾಳು ಮಾಡಿಕೊಳ್ಳುತ್ತಾರೆ. ಹೀಗಾಗಿ ನಿಮಗೆ ಯಾವುದೇ ಸಿಗುವುದಿಲ್ಲ ಎಂದಾದರೆ ಅದರ ಬಗ್ಗೆ ಕೊರಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಜೀವನದಲ್ಲಿ ಏನಿದೆ ಅದರಲ್ಲೇ ಖುಷಿ ಪಡಿ, ಈ ಮೂಲಕ ನೆಮ್ಮದಿಯುತ ಜೀವನ ಕಳೆಯಿರಿ.
- ಬೇರೆಯವರನ್ನು ದೂಷಿಸಬೇಡಿ: ಜೀವನದಲ್ಲಿ ಯಾರಿಗೆ ಸಮಸ್ಯೆಗಳು ಇಲ್ಲ ಹೇಳಿ, ಆದರೆ ಸಮಸ್ಯೆಗಳು ಬಂದ ಕೂಡಲೇ ನಮ್ಮ ಸುತ್ತಲಿನ ವ್ಯಕ್ತಿಗಳನ್ನು, ಸಂದರ್ಭಗಳನ್ನು ದೂಷಿಸುತ್ತೇವೆ. ಆದರೆ ಈ ಸಮಯದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗಿ ಸುಮ್ಮನೆ ದೂಷಿಸುವುದರಿಂದ ಮನಸ್ಸಿನ ನೆಮ್ಮದಿಯೂ ಹಾಳಾಗುತ್ತದೆ.
- ಬೇರೆಯವರು ಉತ್ತೇಜನಕ್ಕಾಗಿ ಕಾಯಬೇಡಿ: ಈ ಸಮಯ ಯಾರನ್ನು ಕಾಯುವುದಿಲ್ಲ. ಹೀಗಾಗಿ ಯಾರಿಗೂ ಕೂಡ ಯಾರ ಬಗ್ಗೆ ಯೋಚಿಸಲು ಸಮಯವಿಲ್ಲ. ಆದರೆ ಬೇರೆಯವರು ನಮಗೆ ಪ್ರೋತ್ಸಾಹ ನೀಡಲಿ, ಉತ್ತೇಜಿಸಲಿ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ನಮ್ಮನ್ನು ನಾವೇ ಉತ್ತೇಜಿಸಿಕೊಂಡು ಮುನ್ನಡೆದರೆ ಮಾತ್ರ ಬದುಕಿನಲ್ಲಿ ಖುಷಿಯಾಗಿ ನೆಮ್ಮದಿಯಾಗಿ ಇರಲು ಸಾಧ್ಯ.
- ಏನನ್ನೂ ಯಾರಿಂದಲೂ ನಿರೀಕ್ಷಿಸಬೇಡಿ: ಜೀವನದಲ್ಲಿ ನಿರೀಕ್ಷೆಗಳು ಸಹಜ. ಕೆಲವೊಮ್ಮೆ ನಮ್ಮ ನಿರೀಕ್ಷೆಗಳು ಹುಸಿಯಾದಾಗ ಮನಸ್ಸಿಗೆ ನೋವಾಗುತ್ತದೆ. ಹೀಗಾಗಿ ಬದುಕನ್ನು ಇರುವ ಹಾಗೆಯೇ ಸ್ವೀಕರಿಸಿ, ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ. ನಿರೀಕ್ಷೆಗಳಿಲ್ಲದೇ ಬದುಕಿದಾಗ ಮಾತ್ರ ಜೀವನದಲ್ಲಿ ಏನು ಎದುರಾದರೂ ಕೂಡ ಖುಷಿಯಾಗುತ್ತದೆ.
- ಸರಿಯಾದ ನಿರ್ಧಾರವಿರಲಿ: ಬದುಕಿನಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಖುಷಿಗೆ ಕಾರಣವಾಗುತ್ತದೆ. ಮನಸ್ಸಿಗೆ ಖುಷಿ ನೀಡುವ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳಿ. ನೀವು ತೆಗೆದುಕೊಳ್ಳುವ ನಿರ್ಧಾರಗಳಿಂದ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯ. ಇದರಿಂದ ಬದುಕು ಸುಂದರವಾಗಿರಲು ಸಾಧ್ಯ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ