National Forest Martyrs Day 2024 : ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಸೆಪ್ಟೆಂಬರ್ 11 ರಂದೇ ಆಚರಿಸುವುದು ಏಕೆ?
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಸೆಪ್ಟೆಂಬರ್ 11 ರಂದು ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಲಾಗುತ್ತದೆ. ಹಾಗಾದ್ರೆ ಈ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಇತಿಹಾಸ, ಮಹತ್ವ ಹಾಗೂ ಸೆಪ್ಟೆಂಬರ್ 11 ರಂದೇ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸುವುದು ಏಕೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಮನುಷ್ಯನ ಸ್ವಾರ್ಥದಿಂದಾಗಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ನಾಶವಾಗುತ್ತಿದೆ. ಈಗಾಗಲೇ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ರಕ್ಷಣೆ ಮಾಡುವಲ್ಲಿ ಅರಣ್ಯಾಧಿಕಾರಿಗಳು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ರಾಷ್ಟ್ರದ ಜೀವವೈವಿಧ್ಯತೆ, ವನ್ಯಜೀವಿ ತಾಣಗಳು ಮತ್ತು ಕಾಡುಗಳನ್ನು ರಕ್ಷಿಸಲು ತಮ್ಮ ಜೀವವನ್ನೇ ನೀಡಿದವರ ಗೌರವಾರ್ಥವಾಗಿ ಭಾರತದಲ್ಲಿ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಇತಿಹಾಸ
2013ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಧಿಕೃತ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಘೋಷಿಸಿತು. ಭಾರತದಲ್ಲಿರುವ ಅರಣ್ಯಗಳು ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ವೀರರ ತ್ಯಾಗವನ್ನು ಸ್ಮರಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗಿದೆ. ಹೀಗಾಗಿ ಪ್ರತಿ ವರ್ಷ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಸೆಪ್ಟೆಂಬರ್ 11 ರಂದೇ ಈ ದಿನವನ್ನು ಆಚರಿಸುವುದು ಏಕೆ?
1730ರ ಸೆಪ್ಟೆಂಬರ್ 11ರಂದು ಖೆಜರ್ಲಿ ನರಮೇಧ ಸಂಭವಿಸಿತ್ತು. ರಾಜಸ್ಥಾನದ ಅಂದಿನ ರಾಜನಾಗಿದ್ದ ಮಹಾರಾಜ ಅಭಯ್ ಸಿಂಗ್ ಆದೇಶದ ಮೇರೆಗೆ ಜನರು ಖೆಜರ್ಲಿ ಮರವನ್ನು ಕಡಿಯಲು ಆರಂಭಿಸಿದರು. ರಾಜಸ್ಥಾನದ ಖೆಜರ್ಲಿ ಗ್ರಾಮದ ಬಿಷ್ಣೊಯ್ ಸಮುದಾಯದ ಜನರಿಗೆ ಈ ಮರವನ್ನು ಅತ್ಯಂತ ಪವಿತ್ರವೆಂದು ಭಾವಿಸಿದ್ದರು. ಹೀಗಾಗಿ ಈ ಮರಗಳ ಹತ್ಯಾಕಾಂಡವನ್ನು ಅಮೃತಾದೇವಿ ಎಂಬ ಮಹಿಳೆಯ ವಿರೋಧಿಸಿದರು. ಅದಲ್ಲದೇ ಆಕೆಯ ಮಕ್ಕಳು ಸೇರಿದಂತೆ ರಾಜನ ಆದೇಶವನ್ನು ವಿರೋಧಿಸಿದ ಸರಿಸುಮಾರು 350 ಜನರ ತಲೆಯನ್ನು ಈ ಸಂದರ್ಭದಲ್ಲಿ ಕಡಿಯಲಾಯಿತು. ಈ ಘಟನೆ ನಡೆದ ಬಳಿಕ ರಾಜ ತನ್ನ ಜನರಿಗೆ ಹಿಂದಿರುಗುವಂತೆ ಆದೇಶ ನೀಡಿದನು. ಅಷ್ಟೇ ಅಲ್ಲದೇ, ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದನು. ಈ ಕರಾಳ ಘಟನೆಯನ್ನು ನೆನಪಿಸುವ ಸಲುವಾಗಿ ಈ ದಿನದಂದೇ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಹಬ್ಬಕ್ಕೆ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಆರೋಗ್ಯಕರ ರೆಸಿಪಿಗಳಿವು
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಆಚರಣೆ ಹೇಗೆ?
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದಂದು ಅರಣ್ಯ ರಕ್ಷಣೆಯಲ್ಲಿ ಹುತಾತ್ಮರಾದ ಅರಣ್ಯ ಅಧಿಕಾರಿಗಳಿಗೆ ಗೌರವವನ್ನು ಸಲ್ಲಿಸಲಾಗುತ್ತದೆ. ದೇಶದಾದ್ಯಂತದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ಕಾಡಿನ ಸಂಪತ್ತನ್ನು ಕಾಪಾಡಲು ಮಕ್ಕಳು ಸೇರಿದಂತೆ ಯುವಸಮುದಾಯವನ್ನು ತೊಡಗಿಕೊಳ್ಳುವಂತೆ ಉತ್ತೇಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ