World Hepatitis Day 2024: ಏನಿದು ಹೆಪಟೈಟಿಸ್ ಕಾಯಿಲೆ? ಈ ರೋಗ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಸ್ಯಾಮ್ಯುಯೆಲ್ ಬ್ಲೂಮ್‌ಬರ್ಗ್ ಅವರ ಜನ್ಮದಿನವಾದ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಲಾಗುತ್ತದೆ. ಈ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷ ಜಾಗೃತಿ ಮತ್ತು ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಹೆಪಟೈಟಿಸ್ ಯಕೃತ್ತಿನ ಉರಿಯೂತಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ವಿಪರೀತವಾದ ಸಾವು ಸಂಭವಿಸುತ್ತದೆ. ಇದು ವೈರಲ್ ಸೋಂಕಿನಿಂದ ಹರಡುವ ಕಾಯಿಲೆಯಾಗಿದ್ದು, ಇವುಗಳಲ್ಲಿ ಹೆಪಟೈಟಿಸ್ ಎ, ಬಿ, ಸಿ ಡಿ ಮತ್ತು ಇ ಎಂಬ ಐದು ವಿಧಗಳಿವೆ. ವಿಧಗಳ ಆಧಾರದ ಮೇಲೆ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಆದರೆ ಈ ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ದೀರ್ಘಕಾಲದ ಕಾಯಿಲೆಯಾಗಿದ್ದು, ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಹೆಪಟೈಟಿಸ್ ದಿನದ ಇತಿಹಾಸ ಹಾಗೂ ಮಹತ್ವ
2008ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮೊದಲ ಬಾರಿಗೆ ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಿತು. ಹೆಪಟೈಟಿಸ್ ರೋಗಕ್ಕೆ ಲಸಿಕೆ ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಬರೂಚ ಸಾಮ್ಯುಯಲ್ ಬ್ಲೂಮ್‌ಬರ್ಗ್ ಅವರ ಜನ್ಮದಿನವಾದ ಕಾರಣ ಅವರಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಿಸಲು ಮುಂದಾಯಿತು. ಅಂದಿನಿಂದ ಪ್ರತಿ ವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದೇಹದ ಪ್ರಮುಖ ಅಂಗವಾದ ಯಕೃತ್ತಿನ ಆರೋಗ್ಯವನ್ನು ಕಾಪಾಡುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವಕಾರಿಯಾಗಿದೆ.
ಏನಿದು ಹೆಪಟೈಟಿಸ್ ಕಾಯಿಲೆ?
ಹೆಪಟೈಟಿಸ್ ಯಕೃತ್ತಿನ ಉರಿಯೂತವಾಗಿದ್ದು, ಯಕೃತ್ತಿನ ಕಾರ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಈ ರೋಗಲಕ್ಷಣವನ್ನು ಪತ್ತೆ ಹಚ್ಚಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಜೀವಕ್ಕೆ ತೊಂದರೆಯಾಗುವುದಂತೂ ಖಂಡಿತ.
ಈ ಕಾಯಿಲೆಯು ಹೇಗೆ ಹರಡುತ್ತದೆ?
* ಹೆಪಟೈಟಿಸ್ ಎ- ಈ ಕಾಯಿಲೆಯೂ ಕಲುಷಿತ ನೀರು ಮತ್ತು ಆಹಾರದಿಂದ ಹರಡುತ್ತದೆ.
* ಹೆಪಟೈಟಿಸ್ ಬಿ – ರಕ್ತ, ಎಂಜಲು, ವೀರ್ಯಗಳಂತಹ ದೇಹದ ದ್ರವಗಳಿಂದ ರೋಗ ಬರುತ್ತದೆ.
* ಹೆಪಟೈಟಿಸ್ ಸಿ – ಒಬ್ಬರು ಬಳಸಿದ ಸೂಜಿ, ಸಿರಿಂಜ್ ಗಳನ್ನು ಮತ್ತೊಬ್ಬರು ಬಳಸುವುದು, ಅಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ತಾಯಿಯಿಂದ ನವಜಾತ ಶಿಶುವಿಗೆ ಈ ವೈರಸ್ ಹರಡುತ್ತದೆ.
* ಹೆಪಟೈಟಿಸ್ ಡಿ – ಹೆಪಟೈಟಿಸ್ ಬಿ ಸೋಂಕಿನಿಂದ ಬಳಲುತ್ತಿರುವವರಿಗೆ ಹೆಪಟೈಟಿಸ್ ಡಿ ಕಾಯಿಲೆಯು ಬರುವ ಸಾಧ್ಯತೆಯು ಅಧಿಕವಾಗಿರುತ್ತದೆ.
ಹೆಪಟೈಟಿಸ್ ರೋಗ ಲಕ್ಷಣಗಳು
* ಆಯಾಸ
* ಜ್ವರ
* ಹಸಿವಾಗದಿರುವುದು
* ಕೀಲು ನೋವು
* ಗಾಢ ಹಳದಿ ಬಣ್ಣದ ಮೂತ್ರ
* ತೂಕ ನಷ್ಟ
* ಕಾಮಾಲೆ ಲಕ್ಷಣಗಳು
* ಹೊಟ್ಟೆ ನೋವು
* ವಾಂತಿ ಮತ್ತು ವಾಕರಿಕೆ
ಇದನ್ನೂ ಓದಿ: ಕಾಂತಿಯುತ ತ್ವಚೆ ಪಡೆಯಲು ಅಲೋವೆರಾ ಹೀಗೆ ಬಳಸಿ
ಈ ರೋಗವನ್ನು ಪತ್ತೆ ಹಚ್ಚುವುದು ಹೇಗೆ?
ವೈದ್ಯಕೀಯ ತಪಾಸಣೆಗಳು, ರಕ್ತಮಾದರಿಯ ಪರೀಕ್ಷೆ ಹಾಗೂ ತೀವ್ರತೆರೆನಾಗಿದ್ದಲ್ಲಿ ಯಕೃತ್ತಿನ ಬಯಾಪ್ಸಿಯನ್ನು ಮಾಡಿಸುವ ಮೂಲಕ ರೋಗವನ್ನು ಪತ್ತೆ ಹಚ್ಚಬಹುದು.
ಹೆಪಟೈಟಿಸ್ ಬರದಂತೆ ತಡೆಗಟ್ಟುವುದು ಹೇಗೆ?
* ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಛವಾಗಿಟ್ಟುಕೊಳ್ಳುವುದು.
* ಸ್ವಚ್ಛವಾದ ನೀರು ಮತ್ತು ಆಹಾರ ಸೇವನೆ ಮಾಡುವುದು
* ರಕ್ತ ಪಡೆಯುವಾಗ ಮುಂಜಾಗ್ರತೆ ವಹಿಸುವುದು. ಒಬ್ಬರು ಬಳಸಿದ ಸೂಜಿ, ಬ್ಲೇಡ್, ರೇಜರ್ ಮತ್ತೊಬ್ಬರು ಬಳಸದೇ ಇರುವ ಮೂಲಕ ರೋಗ ಬರದಂತೆ ತಡೆಗಟ್ಟಬಹುದು.
* ಹೆಪಟೈಟಿಸ್‌ಗೆ ಬರದಂತೆ ವಿವಿಧ ಲಸಿಕೆಗಳನ್ನು ತೆಗೆದುಕೊಳ್ಳುವುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ