ಭಾರತ-ಚೀನಾ ಗಡಿ ಮಾತುಕತೆ: ಬೀಜಿಂಗ್ನಲ್ಲಿ ಆ. 24ರಂದು ಅಜಿತ್ ದೋವಲ್ ಮತ್ತು ವಾಂಗ್ ಯಿ ಭೇಟಿ
Ajit Doval to meet China FM Wang Yi at Beijing on 2026 August 24th: ಭಾರತ ಮತ್ತು ಚೀನಾ ಮಧ್ಯೆ ಆಗಸ್ಟ್ 24ರಂದು 25ನೇ ಸುತ್ತಿನ ವಿಶೇಷ ಪ್ರತಿನಿಧಿಗಳ ಸಭೆ ನಡೆಯಲಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಚೀನಾದ ಪರವಾಗಿ ವಿದೇಶಾಂಗ ಸಚಿವ ವಾಂಗ್ ಯಿ ಮಾತುಕತೆ ನಡೆಸುತ್ತಾರೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಭಾರತದಲ್ಲಿ ಬ್ರಿಕ್ಸ್ ಸಮಿಟ್ ನಡೆಯುವ ಮುನ್ನ ಈ ಮಾತುಕತೆ ಆಯೋಜನೆಯಾಗಿದೆ.

ನವದೆಹಲಿ, ಆಗಸ್ಟ್ 23: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ (Wang Yi) ಅವರು ಗಡಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಬೀಜಿಂಗ್ನಲ್ಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ಹಾಗೂ ಗಡಿ ಸಮಸ್ಯೆಗಳಿಗೆ ನ್ಯಾಯಯುತ ಮತ್ತು ಪರಸ್ಪರ ಒಪ್ಪಿಗೆಯಾಗುವ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈ ಉನ್ನತ ಮಟ್ಟದ ಸಭೆಯ ಮುಖ್ಯ ಉದ್ದೇಶವಾಗಿದೆ.
ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಭಾರತ ಭೇಟಿಗೂ ಮುನ್ನ ನಡೆಯುತ್ತಿರುವ ಈ ಮಾತುಕತೆಗೆ ರಾಜತಾಂತ್ರಿಕವಾಗಿ ಹೆಚ್ಚಿನ ಮಹತ್ವವಿದೆ. ಅಜಿತ್ ದೋವಲ್ ಅವರು ಭಾರತದ ಪ್ರತಿನಿಧಿಯಾಗಿ ಈ ಮಾತುಕತೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗೆಯೇ, ಚೀನಾದ ವಿದೇಶಾಂಗ ಸಚಿವರು ತಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ. ಆಗಸ್ಟ್ 24ರಂದು ನಡೆಯಲಿರುವುದು ಎರಡೂ ದೇಶಗಳ ನಡುವೆ ನಡೆಯಲಿರುವ 25ನೇ ಸುತ್ತಿನ ವಿಶೇಷ ಪ್ರತಿನಿಧಿಗಳ ಮಾತುಕತೆಯಾಗಿರುತ್ತದೆ.
ಇದನ್ನೂ ಓದಿ: ರಾಷ್ಟ್ರೀಯ ಬಾಹ್ಯಾಕಾಶ ದಿನ: ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಶಕ್ತಿ ತುಂಬುತ್ತಿರುವ ‘ಮೇಡ್ ಇನ್ ಇಂಡಿಯಾ’ ಚಿಪ್‌ಗಳು
ಭಾರತ ಮತ್ತು ಚೀನಾ ನಡುವೆ ವಿಶೇಷ ಪ್ರತಿನಿಧಿಗಳ ಮಾತುಕತೆ ನಡೆಸುವ ಒಂದು ವ್ಯವಸ್ಥೆ ಶುರುವಾಗಿದ್ದು 2003ರಲ್ಲಿ. ಈ ಎರಡು ದೊಡ್ಡ ದೇಶಗಳ ನಡುವೆ 3,488 ಕಿಮೀ ಬೌಂಡರಿ ವಿವಾದ ಇದ್ದು ಅದಕ್ಕೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಈ ವಿಶೇಷ ವ್ಯವಸ್ಥೆ ಏರ್ಪಡಿಸಲಾಯಿತು. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಚೀನಾ ಭೇಟಿ ಸಂದರ್ಭ ಈ ಒಪ್ಪಂದಕ್ಕೆ ಚಾಲೂ ನೀಡಲಾಯಿತು. 2003ರ ಅಕ್ಟೋಬರ್ನಲ್ಲಿ ಬ್ರಜೇಶ್ ಮಿಶ್ರಾ ಮತ್ತು ಡಾಯ್ ಬಿಂಗ್ಗೋ ಮಧ್ಯೆ ಮೊದಲ ವಿಶೇಷ ಪ್ರತಿನಿಧಿಗಳ ಸಭೆ ನಡೆದಿದ್ದು. ಈವರೆಗೆ 24 ಸುತ್ತಿನ ಮಾತುಕತೆಗಳಾಗಿವೆ. ಆಗಸ್ಟ್ 24ರಂದು ನಡೆಯಲಿರುವುದು 25ನೇ ಸುತ್ತಿನ ಮಾತುಕತೆ.
ದ್ವಿಪಕ್ಷೀಯ ಸಂಬಂಧಗಳು ಉತ್ತಮವಾಗಿರಲು ಗಡಿ ಭಾಗದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಯ್ದುಕೊಳ್ಳುವುದು ಅತ್ಯಂತ ಪೂರ್ವಷರತ್ತು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪುನರುಚ್ಚರಿಸಿದೆ.
ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ತಾತ್ವಿಕವಾಗಿ ಅಂತಿಮ; ಕಾನೂನು ಅಂಶಗಳು ಅಂತಿಮಗೊಳ್ಳುವುದಷ್ಟೇ ಬಾಕಿ: ರಾಯಭಾರಿ ಸೆರ್ಗಿಯೋ ಗೋರ್
ಇನ್ನು, ಸೆಪ್ಟೆಂಬರ್ 12-13ರಂದು ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಒಂದು ವೇಳೆ, ಆ ಸಭೆಗೆ ಚೀನಾ ಮುಖ್ಯಸ್ಥ ಷಿ ಜಿನ್‌ಪಿಂಗ್ ಆಗಮಿಸಿದ್ದೇ ಆದಲ್ಲಿ ಅವರು ಮತ್ತು ಭಾರತದ ಪ್ರಧಾನಿ ಮಧ್ಯೆ ಒನ್ ಟು ಒನ್ ಮಾತುಕತೆ ನಡೆಯಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




