ಕೊವಿಡ್ ಎರಡನೇ ಅಲೆಯಲ್ಲಿ ದೇಶದ 420 ವೈದ್ಯರು ಸಾವಿಗೀಡಾಗಿದ್ದಾರೆ: ಐಎಂಎ
Second Covid Wave: ಕಳೆದ ಎರಡು ತಿಂಗಳುಗಳಲ್ಲಿ ಕೊವಿಡ್ -19 ಎರಡನೇ ಅಲೆಯಲ್ಲಿ 269 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೇ 18 ರಂದು ಐಎಂಎ ತಿಳಿಸಿತ್ತು. 2020 ರಲ್ಲಿ ನಡೆದ ಮೊದಲ ಅಲೆಯಲ್ಲಿ ಭಾರತ 748 ವೈದ್ಯರನ್ನು ಕಳೆದುಕೊಂಡಿತ್ತು. ಇಂದು ಐಎಂಎ ಹಂಚಿಕೊಂಡ ನವೀಕರಿಸಿದ ಮಾಹಿತಿ ಪ್ರಕಾರ ಕೊವಿಡ್ -19 ನಿಂದಾಗಿ ಭಾರತವು ಈಗ 1,000 ಕ್ಕೂ ಹೆಚ್ಚು ವೈದ್ಯರನ್ನು ಕಳೆದುಕೊಂಡಿದೆ.
ದೆಹಲಿ: ಕೊವಿಡ್ ಎರಡನೇ ಅಲೆಯಲ್ಲಿ ದೆಹಲಿಯಲ್ಲಿ 100 ವೈದರು ಸೇರಿದಂತೆ 420 ವೈದ್ಯರು ಮೃತಪಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹೇಳಿದೆ. ಏಪ್ರಿಲ್ ತಿಂಗಳಲ್ಲಿ ಭಾರಿ ಬಿಕ್ಕಟ್ಟಿನ ನಂತರ ರಾಷ್ಟ್ರ ರಾಜಧಾನಿಯಲ್ಲಿನ ಕೊರೊನಾವೈರಸ್ ಪ್ರಕರಣಗಳು ಇತ್ತೀಚೆಗೆ ಕ್ಷೀಣಿಸುತ್ತಿವೆ. ಬಿಹಾರದಲ್ಲಿ ಕನಿಷ್ಠ 96 ಮತ್ತು ಉತ್ತರ ಪ್ರದೇಶದಲ್ಲಿ 41 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ವೈದ್ಯರ ಸಂಘ ತಿಳಿಸಿದೆ. ಈ ವಾರದ ಆರಂಭದಲ್ಲಿ, ಕೊರೊನಾದಿನಿಂದಾಗಿ 270 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಸಂಸ್ಥೆ ವರದಿ ಮಾಡಿದೆ. ಈ ಪೈಕಿ ಮಾಜಿ ಐಎಂಎ ಅಧ್ಯಕ್ಷ ಡಾ.ಕೆ.ಕೆ. ಅಗರ್‌ವಾಲ್ ಕೂಡ ಸೋಮವಾರ ಮಾರಣಾಂತಿಕ ವೈರಸ್‌ನಿಂದ ಮೃತಪಟ್ಟಿದ್ದಾರೆ. ಅವರಿಗೆ 65 ವರ್ಷ ಆಗಿತ್ತು.
ಎರಡೂ ಲಸಿಕೆ ಡೋಸ್ ತೆಗೆದುಕೊಂಡಿದ್ದ ಡಾ. ಅಗರ್‌ವಾಲ್ ಸೋಮವಾರ ರಾತ್ರಿ 11.30 ಮೃತಪಟ್ಟಿದ್ದರು ಐಎಂಎಯ ಕೋವಿಡ್ -19 ದಾಖಲೆಗಳ ಪ್ರಕಾರ, ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ 748 ವೈದ್ಯರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.
ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಎಲ್ಲರಿಗೂ ಮತ್ತು ವಿಶೇಷವಾಗಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಅತ್ಯಂತ ಮಾರಕವಾಗಿದೆ ಎಂದು ಐಎಂಎ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದ್ದರು. ಐಎಂಎ ತನ್ನ ಸುಮಾರು 3.5 ಲಕ್ಷ ಸದಸ್ಯರ ದಾಖಲೆಯನ್ನು ಮಾತ್ರ ಇಡುತ್ತದೆ. ಆದಾಗ್ಯೂ, ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ವೈದ್ಯರಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,57,299 ಹೊಸ ಕೊವಿಡ್ ಸೋಂಕುಗಳು ಮತ್ತು 4,194 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರು ವೈರಸ್‌ನಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಮಾತನಾಡುವಾಗ ಅವರು ಭಾವುಕರಾಗಿದ್ದರು. ಉತ್ತರ ಪ್ರದೇಶದ ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಆರೋಗ್ಯ ಕಾರ್ಯಕರ್ತರೊಂದಿಗೆ ವಿಡಿಯೊ ಸಂವಾದ ನಡೆಸಿದ್ದ ಮೋದಿ ಅವರು ವೈದ್ಯರು ಮತ್ತು ಮುಂಚೂಣಿ ಕೆಲಸಗಾರರಿಗೆ ಧನ್ಯವಾದ ಅರ್ಪಿಸಿದರು.
ಬಿಹಾರದಲ್ಲಿ 96 ವೈದ್ಯರ ಸಾವು; ತನಿಖೆಗೆ ಸಮಿತಿ ರೂಪಿಸಿದ ಐಎಂಎ ಪ್ರಸ್ತುತ ಕೊವಿಡ್ -19 ರ ಅಲೆಯಲ್ಲಿ ಬಿಹಾರದಲ್ಲಿ 96 ಕ್ಕೂ ಹೆಚ್ಚು ವೈದ್ಯರ ಸಾವಿಗೀಡಾಗಿದ್ದು , ಈ ಬಗ್ಗೆ ತನಿಖೆ ನಡೆಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ), ಬಿಹಾರ ಶಾಖೆ, ಐಎಂಎ ಇಂಡಿಯಾ (ಅಧ್ಯಕ್ಷ) ಡಾ.ಸಹಜಾನಂದ್ ಪ್ರಸಾದ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರ ಸಮಿತಿಯನ್ನು ರಚಿಸಿದೆ. ಎರಡನೇ ಕೊವಿಡ್ -19 ಅಲೆಯಲ್ಲಿ ಇದುವರೆಗೆ 329 ಕ್ಕೂ ಹೆಚ್ಚು ವೈದ್ಯರು ಸಾವನ್ನಪ್ಪಿದ್ದಾರೆ ಮತ್ತು ಈ ಪೈಕಿ 96 ವೈದ್ಯರ ಬಿಹಾರದಿಂದ ಸಾವಿಗೀಡಾಗಿರುವುದಾಗಿ ಐಎಂಎ ಅಧ್ಯಕ್ಷರು ಹೇಳಿದ್ದಾರೆ.
ಕಳೆದ ವರ್ಷ ಕೊವಿಡ್ -19 ರ ಮೊದಲ ಅಲೆಯಲ್ಲಿ 30 ವೈದ್ಯರು ಬಿಹಾರದಲ್ಲಿ ಪ್ರಾಣ ಕಳೆದುಕೊಂಡಿದ್ದರು ಎಂದು ಡಾ ಸಿಂಗ್ ಹೇಳಿದರು. ಸುದ್ದಿ ಸಂಸ್ಥೆ ಎಎನ್ಐ ವರದಿಯ ಪ್ರಕಾರ, ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ದೇಶಾದ್ಯಂತ 400 ಕ್ಕೂ ಹೆಚ್ಚು ವೈದ್ಯರು ಕೊವಿಡ್ -19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ಐಎಂಎ ಹೇಳಿದೆ.
ಕಳೆದ ಎರಡು ತಿಂಗಳುಗಳಲ್ಲಿ ಕೊವಿಡ್ -19 ಎರಡನೇ ಅಲೆಯಲ್ಲಿ 269 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೇ 18 ರಂದು ಐಎಂಎ ತಿಳಿಸಿತ್ತು. 2020 ರಲ್ಲಿ ನಡೆದ ಮೊದಲ ಅಲೆಯಲ್ಲಿ ಭಾರತ 748 ವೈದ್ಯರನ್ನು ಕಳೆದುಕೊಂಡಿತ್ತು. ಇಂದು ಐಎಂಎ ಹಂಚಿಕೊಂಡ ನವೀಕರಿಸಿದ ಮಾಹಿತಿ ಪ್ರಕಾರ ಕೊವಿಡ್ -19 ನಿಂದಾಗಿ ಭಾರತವು ಈಗ 1,000 ಕ್ಕೂ ಹೆಚ್ಚು ವೈದ್ಯರನ್ನು ಕಳೆದುಕೊಂಡಿದೆ.
ಬಿಹಾರದಲ್ಲಿ ವರದಿಯಾದ 96 ಸಾವುಗಳಲ್ಲಿ 38 ಸಾವು ಪಾಟ್ನಾದಲ್ಲಿ ಮಾತ್ರ ನಡೆದಿದ್ದು, 14 ಸಾವುಗಳು ಮುಜಾಫರ್ಪುರ್ನಿಂದ ವರದಿಯಾಗಿವೆ ಎಂದು ಐಎಂಎ, ಬಿಹಾರ ಹೇಳಿದೆ. ಭಾಗಲ್ಪುರದಲ್ಲಿ ಐದು ಮತ್ತು ಗಯಾ ಮತ್ತು ಸಿವಾನ್‌ನಲ್ಲಿ ತಲಾ ಮೂರು ಸಾವುಗಳು ವರದಿಯಾಗಿವೆ.
“ಬಿಹಾರದಲ್ಲಿ ವೈದ್ಯರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ಅಲ್ಲದ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿನ ವೈದ್ಯರು ಸಹ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಸಾವಿಗೆ ಕಾರಣಗಳನ್ನು ಕಂಡುಹಿಡಿಯಲು ಸಮಿತಿಯನ್ನು ರಚಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ರೋಗಿಗಳೊಂದಿಗೆ ಸರಿಯಾದ ದೂರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ (ಚುನಾಯಿತ) ಡಾ.ಸಿಂಗ್ ಹೇಳಿದ್ದಾರೆ.
ಇಂತಹ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ವೈದ್ಯರಿಗೆ ಸರಿಯಾದ ಆರೈಕೆ ಮತ್ತು ಸೌಲಭ್ಯಗಳ ಕೊರತೆಯಿದೆ ಎಂದು ಐಎಂಎ ಅಧ್ಯಕ್ಷರು ಆರೋಪಿಸಿದರು. “ಎಲ್ಲಾ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಚಿಕಿತ್ಸೆಗಾಗಿ ಯಾವುದೇ ಹಾಸಿಗೆಗಳನ್ನು ಕಾಯ್ದಿರಿಸಲಾಗಿಲ್ಲ. ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ಕೊರತೆಯಿಂದಾಗಿ ವೈದ್ಯರು ಸಾವನ್ನಪ್ಪಿದ್ದಾರೆ ”ಎಂದಿದ್ದಾರೆ ಸಿಂಗ್. “ನಮ್ಮ ಸದಸ್ಯರಿಗೆ ಕನಿಷ್ಠ ಎರಡು ಹಾಸಿಗೆಗಳನ್ನು ಕಾಯ್ದಿರಿಸಬಹುದಿತ್ತು. ಮರಣ ಪ್ರಮಾಣವು ತುಂಬಾ ಕಡಿಮೆಯಾಗುತ್ತಿತ್ತು. ಅಂದಹಾಗೆ ನಾವು ಜನರಿಗಾಗಿ ಮತ್ತು ಅವರ ಕಲ್ಯಾಣಕ್ಕಾಗಿ ಸಹ ಕೆಲಸ ಮಾಡುತ್ತಿದ್ದೇವೆ, ”ಎಂದು ಅವರು ಹೇಳಿದರು.
ಆಮ್ಲಜನಕದ ಪೂರೈಕೆಯ ಬಗ್ಗೆ ಟೀಕಿಸಿದ ಡಾ ಸಿಂಗ್ ರಾಜ್ಯ ರಾಜಧಾನಿಯಲ್ಲಿ 200 ಕ್ಕೂ ಹೆಚ್ಚು ಆಸ್ಪತ್ರೆಗಳಿವೆ (ಸರ್ಕಾರಿ ಮತ್ತು ಖಾಸಗಿ ಎರಡೂ) ಆದರೆ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇವಲ 90 ಜನರಿಗೆ ಮಾತ್ರ ಆಮ್ಲಜನಕ ಪೂರೈಕೆ ದೊರೆತಿದೆ ಎಂದು ಹೇಳಿದರು. “100 ಕ್ಕಿಂತ ಹೆಚ್ಚು ಜನರು ಸರಬರಾಜು ಪಡೆಯಲಿಲ್ಲ ಆದರೆ ಮಾನವೀಯತೆಯ ಹೆಸರಿನಲ್ಲಿ ಆಮ್ಲಜನಕವನ್ನು ನಿರ್ವಹಿಸುವ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ” ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿಯೂ ವೈದ್ಯರಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು ಮತ್ತು ಹಾಸಿಗೆಗಳನ್ನು ಅವರಿಗೆ ಮೀಸಲಿಡಬೇಕು ಎಂದು ಐಎಂಎ ಒತ್ತಾಯಿಸಿದೆ. “ಕೋವಿಡ್ -19 ನಿಂದ ಸಾವನ್ನಪ್ಪಿದ ವೈದ್ಯರಿಗೆ ಆಯಾ ರಾಜ್ಯ ಸರ್ಕಾರಗಳು ₹ 50 ಲಕ್ಷ ಪರಿಹಾರ ಮೊತ್ತವನ್ನು ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಎಂದಿದ್ದಾರೆ ಸಿಂಗ್. ಬಡ ವೈದ್ಯರ ಕುಟುಂಬಗಳಿಗೆ ತಲಾ ₹ 10 ಲಕ್ಷ ನೀಡಲು ಐಎಂಎ ನಿರ್ಧರಿಸಿದೆ ಎಂದು ಅವರು ಹೇಳಿದರು. “ಬಿಹಾರದಲ್ಲಿ, ನಾವು ಮೂರು ಬಡ ವೈದ್ಯರ ಕುಟುಂಬಕ್ಕೆ 10 ಲಕ್ಷವನ್ನು ನೀಡಲಿದ್ದೇವೆ ಮತ್ತು ಇದನ್ನು ಇತರ ರಾಜ್ಯಗಳಲ್ಲಿಯೂ ಮಾಡಲಾಗುವುದು” ಎಂದು ಡಾ ಸಿಂಗ್ ಹೇಳಿದರು.
ಇದನ್ನೂ ಓದಿ: Coronavirus Cases in India: ಕಳೆದ 24 ಗಂಟೆಗಳಲ್ಲಿ 2.40 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3741 ಮಂದಿ ಸಾವು
Published On - 12:20 pm, Sun, 23 May 21