ಮಕ್ಕಳ ಆರೋಗ್ಯದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ; ಜಂಕ್ಫುಡ್ ಪ್ಯಾಕ್ ಮೇಲೆ ಎಚ್ಚರಿಕೆ ಹಾಕಲು ಸೂಚನೆ
ಉಪ್ಪು, ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುವ ಪ್ಯಾಕ್ ಮಾಡಿದ ಆಹಾರಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ದೇಶದ ಜನರ ಅದರಲ್ಲೂ ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಫ್ರಂಟ್-ಆಫ್-ಪ್ಯಾಕೇಜ್ ಲೇಬಲಿಂಗ್ (FOPL) ಅನ್ನು ಜಾರಿಗೆ ತರುವ ಬಗ್ಗೆ ಪರಿಗಣಿಸಲು ಆಹಾರ ಸುರಕ್ಷತೆಯಲ್ಲಿ ತೊಡಗಿರುವ ಎಲ್ಲಾ ಪಾಲುದಾರರಿಗೆ ಸುಪ್ರೀಂ ಕೋರ್ಟ್ ಮನವಿ ಮಾಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 28ರಂದು ನಡೆಯಲಿದೆ.

ನವದೆಹಲಿ, ಸೆಪ್ಟೆಂಬರ್ 10: ಮಕ್ಕಳು ಮತ್ತು ಯುವಕರು ಹೆಚ್ಚಾಗಿ ತಿನ್ನುವ ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನಂಶವನ್ನು ಹೊಂದಿರುವ ಸಂಸ್ಕರಿಸಿದ ಮತ್ತು ಸಿದ್ಧ ಆಹಾರ ಪದಾರ್ಥಗಳ (ಪ್ಯಾಕೇಜ್ಡ್ ಫುಡ್) ಮೇಲೆ ಗ್ರಾಹಕರಿಗೆ ಸ್ಪಷ್ಟವಾಗಿ ಕಾಣಿಸುವಂತಹ ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯವಾಗಿ ಹಾಕುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರಕ್ಕೆ (FSSAI) ನಿರ್ದೇಶನ ನೀಡಿದೆ. ಜನರಲ್ಲಿ ಹೆಚ್ಚುತ್ತಿರುವ ಬೊಜ್ಜು, ಮಧುಮೇಹ ಮತ್ತು ಹೃದಯಸಂಬಂಧಿ ಕಾಯಿಲೆಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ನ್ಯಾಯಾಲಯವು ಈ ಪ್ರಮುಖ ಕ್ರಮಕ್ಕೆ ಮುಂದಾಗಿದೆ.
FSSAI ಪ್ರಸ್ತಾವನೆಯ ಪ್ರಕಾರ, ಒಂದು ಆಹಾರ ಉತ್ಪನ್ನವು ನಿಗದಿತ ಮಿತಿಗಳನ್ನು ಮೀರಿದರೆ, ಅದರಲ್ಲಿ ಹೆಚ್ಚುವರಿ ಸ್ಯಾಚುರೇಟೆಡ್ ಕೊಬ್ಬು, ಸೇರಿಸಿದ ಸಕ್ಕರೆ ಮತ್ತು ಉಪ್ಪು ಇದ್ದರೆ, ಪ್ಯಾಕೇಜ್‌ನ ಮುಂಭಾಗದಲ್ಲಿ ಕೆಂಪು ಷಡ್ಭುಜಾಕೃತಿಯ ಎಚ್ಚರಿಕೆ ಲೇಬಲ್ ಅನ್ನು ಹಾಕಲಾಗುತ್ತದೆ. ಸರಳ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳುವ ಮಾಹಿತಿಯನ್ನು ಒದಗಿಸುವ ಮೂಲಕ ಗ್ರಾಹಕರು ಉತ್ತಮ ಆಹಾರ ಆಯ್ಕೆಗಳನ್ನು ಮಾಡಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ: ಕೃತಕವಾಗಿ ಮಾಗಿದ ಮಾವಿನಹಣ್ಣುಗಳು ನಿಮಗೆ ಹಾನಿಕಾರಕವಾಗಬಹುದು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ
ಪ್ಯಾಕೇಜ್ ಮಾಡಿದ ಆಹಾರಗಳ ಮೇಲೆ ಪ್ಯಾಕೇಜ್‌ನ ಮುಂಭಾಗದ ಪೌಷ್ಟಿಕಾಂಶದ ಲೇಬಲ್‌ಗಳ ಸ್ವರೂಪವನ್ನು ನಿರ್ಧರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಆಗಸ್ಟ್ 13ರ ಆದೇಶದ ಅನುಸಾರವಾಗಿ ಈ ಅಫಿಡವಿಟ್ ಅನ್ನು ಸಲ್ಲಿಸಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳ ಅಂತಾರಾಷ್ಟ್ರೀಯ ಮಾನದಂಡಗಳಿಗಿಂತ ಭಾರತ ಹಿಂದುಳಿದಿರಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಪ್ಯಾಕೇಜ್ ಮಾಡಿದ ಆಹಾರಗಳ ಮೇಲೆ ಎಚ್ಚರಿಕೆ ಲೇಬಲ್‌ಗಳನ್ನು ಅಳವಡಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಪೀಠವು FSSAIಗೆ ಕೂಡ ಛೀಮಾರಿ ಹಾಕಿತು. ಭಾರತದಲ್ಲಿ ಬೊಜ್ಜುತನವನ್ನು ಸಾರ್ವಜನಿಕ ಆರೋಗ್ಯ ಸವಾಲಾಗಿ ಗುರುತಿಸಲಾಗಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
ಗ್ರಾಹಕರ ಮಾಹಿತಿ ಹಕ್ಕು ಮತ್ತು ಜಾಗೃತಿ:
ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲ್ಭಾಗದಲ್ಲಿಯೇ ಅದರಲ್ಲಿರುವ ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣದ ಬಗ್ಗೆ ಕೆಂಪು ಬಣ್ಣದ ಎಚ್ಚರಿಕೆ ಗುರುತು ಅಥವಾ ‘ವಾರ್ನಿಂಗ್ ಲೇಬಲ್’ ಹಾಕುವುದು ಕಡ್ಡಾಯವಾಗಬೇಕು. ಇದರಿಂದ ಸಾಮಾನ್ಯ ಗ್ರಾಹಕರು ತಾವು ಸೇವಿಸುವ ಆಹಾರ ಎಷ್ಟು ಆರೋಗ್ಯಕರ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆಹಾರ ಸುರಕ್ಷತಾ ಕಾಯ್ದೆಯಡಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿಯಂತ್ರಿಸುವುದು ಮತ್ತು ಪ್ಯಾಕೇಜಿಂಗ್ ನಿಯಮಗಳನ್ನು ಬಿಗಿಗೊಳಿಸುವುದು FSSAIನ ಜವಾಬ್ದಾರಿಯಾಗಿದೆ. ಕೇವಲ ಹಿಂಭಾಗದಲ್ಲಿ ಚಿಕ್ಕ ಅಕ್ಷರಗಳಲ್ಲಿ ಪೋಷಕಾಂಶಗಳ ವಿವರ ಮುದ್ರಿಸುವುದರಿಂದ ಗ್ರಾಹಕರಿಗೆ ಸೂಕ್ತ ಅರಿವು ಮೂಡುತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ. ಜಂಕ್ ಫುಡ್, ತಂಪಾದ ಪಾನೀಯಗಳು ಮತ್ತು ಸಂಸ್ಕರಿಸಿದ ತಿಂಡಿಗಳಲ್ಲಿ ಅತಿಯಾದ ಸಕ್ಕರೆ ಹಾಗೂ ಕೊಬ್ಬಿನಂಶವಿರುವುದು ಮಕ್ಕಳ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿ ಅನುಸರಿಸಲಾಗುವ ‘ನ್ಯೂಟ್ರಿ-ಸ್ಕೋರ್’ ಅಥವಾ ‘ವಾರ್ನಿಂಗ್ ಲೇಬಲ್’ ಮಾದರಿಯನ್ನು ಭಾರತದಲ್ಲೂ ಶೀಘ್ರ ಜಾರಿಗೆ ತರಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




