ಭವಿಷ್ಯದ ಪೀಳಿಗೆಯ ಆರೋಗ್ಯಕ್ಕೆ ಕಂಟಕವಾಗುತ್ತೆ ಈ ಮಾದಕ ವಸ್ತುಗಳು: 12,000 ಪುರುಷರಲ್ಲಿ ವೀರ್ಯಾಣು ದೋಷ ದೃಢಪಡಿಸಿದ ಏಮ್ಸ್
ಪಂಜಾಬ್‌ನಲ್ಲಿ ಮಾದಕ ವಸ್ತುಗಳ ಸೇವನೆಯು ಪುರುಷರಲ್ಲಿ ಬಂಜೆತನದ ಆತಂಕ ಹೆಚ್ಚಿಸಿದೆ. ಭಟಿಂಡಾ ಏಮ್ಸ್ ವರದಿಯ ಪ್ರಕಾರ, 12,000 ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ, ಚಲನೆ ಮತ್ತು ಗುಣಮಟ್ಟದಲ್ಲಿ ಗಂಭೀರ ದೋಷಗಳು ಪತ್ತೆಯಾಗಿವೆ. ಇದು ಡಿಎನ್‌ಎ ಮಟ್ಟದಲ್ಲೂ ಪರಿಣಾಮ ಬೀರಿ, ಹುಟ್ಟುವ ಮಕ್ಕಳಲ್ಲಿ ಜನ್ಮಜಾತ ದೋಷಗಳಿಗೆ ಕಾರಣವಾಗಬಹುದು. ಈ ಸಮಸ್ಯೆ ಭವಿಷ್ಯದ ಪೀಳಿಗೆಯ ಆರೋಗ್ಯ ಹಾಗೂ ರಾಜ್ಯದ ಜನಸಂಖ್ಯಾ ಬೆಳವಣಿಗೆಗೆ ಕಂಟಕವಾಗಿದೆ.

ಚಂಡೀಗಢ, ಅಕ್ಟೋಬರ್ 28:ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಈಗ ಯುವಜನರ ಆರೋಗ್ಯದ ಬಗ್ಗೆ ಆತಂಕ ಮೂಡಿಸಿದೆ. ಹೆರಾಯಿನ್ ಮತ್ತು ಇತರ ಮಾದಕ ವಸ್ತುಗಳ ಸೇವನೆಯಿಂದ ಪುರುಷರ ವೀರ್ಯಾಣುಗಳ ಸಂಖ್ಯೆ, ಚಲನೆ ಹಾಗೂ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಭಟಿಂಡಾ ಏಮ್ಸ್‌ನ ತಜ್ಞರು ಎಚ್ಚರಿಸಿದ್ದಾರೆ. ಈ ಸಮಸ್ಯೆ ಬಂಜೆತನಕ್ಕೂ ಕಾರಣವಾಗಬಹುದು ಎಂಬ ಕಳವಳ ವ್ಯಕ್ತವಾಗಿದೆ. ಆದರೂ, ವೀರ್ಯಾಣುಗಳಲ್ಲಿನ ದೋಷಗಳಿಗೆ ಡ್ರಗ್ಸ್ ಒಂದೇ ಕಾರಣವೆಂದು ನಿರ್ಧರಿಸಲು ಹೆಚ್ಚಿನ ವೈದ್ಯಕೀಯ ಸಾಕ್ಷ್ಯ ಅಗತ್ಯವಿದೆ.
ಪಂಜಾಬ್‌ನಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹೆರಾಯಿನ್, ಅಫೀಮು, ಮತ್ತು ಸಿಂಥೆಟಿಕ್ ಮಾದಕ ದ್ರವ್ಯಗಳ ಜಾಲವು ರಾಜ್ಯದ ಭವಿಷ್ಯದ ಪೀಳಿಗೆಯ ಅಸ್ತಿತ್ವಕ್ಕೇ ಮಾರಕವಾಗಿ ಪರಿಣಮಿಸಿದೆ. ಮಾದಕ ವಸ್ತುಗಳ ಅತಿಯಾದ ಸೇವನೆಯಿಂದಾಗಿ ಪುರುಷರ ವೀರ್ಯಾಣುಗಳ ರಚನೆ, ಆಕಾರ ಹಾಗೂ ಡಿಎನ್‌ಎ (DNA) ಮಟ್ಟದಲ್ಲಿ ಆಘಾತಕಾರಿ ಬದಲಾವಣೆಗಳು ಕಂಡುಬರುತ್ತಿದ್ದು, ಪುರುಷರಲ್ಲಿ ಬಂಜೆತನ ವ್ಯಾಪಕವಾಗಿ ಹೆಚ್ಚುತ್ತಿದೆ. ವೈದ್ಯಕೀಯ ತಜ್ಞರ ಪ್ರಕಾರ, ಮಾದಕ ವ್ಯಸನಿಗಳ ಈ ವೀರ್ಯಾಣುಗಳಿಂದ ಹುಟ್ಟುವ ಮಕ್ಕಳು ಭವಿಷ್ಯದಲ್ಲಿ ಗಂಭೀರ ನರವ್ಯೂಹ, ಬೆಳವಣಿಗೆಯ ಕೊರತೆ ಹಾಗೂ ಅನುವಂಶಿಕ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.
ಭಟಿಂಡಾ ಏಮ್ಸ್‌ನ ಮೂತ್ರಶಾಸ್ತ್ರ ಮತ್ತು ಅಂತಃಸ್ರಾವಶಾಸ್ತ್ರ(ಮಾನವ ದೇಹದ ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಅಧ್ಯಯನ ನಡೆಸುತ್ತದೆ) ವಿಭಾಗವು 2020 ರಿಂದ 2025 ರವರೆಗೆ ಸಂಗ್ರಹಿಸಿದ 1,42,732 ಪುರುಷ ರೋಗಿಗಳ ಕ್ಲಿನಿಕಲ್ ವರದಿಗಳನ್ನು ವಿಶ್ಲೇಷಿಸಿದೆ. ಇದರಲ್ಲಿ ಬರೋಬ್ಬರಿ 12,000 ಪುರುಷರ ವೀರ್ಯಾಣುಗಳ ರಚನೆ ಮತ್ತು ಸಂಯೋಜನೆಯಲ್ಲಿ (Sperm Morphology) ಗಂಭೀರ ಅಸಹಜತೆಗಳು ದೃಢಪಟ್ಟಿವೆ.ಅಮೃತಸರ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೂತ್ರ ಶಸ್ತ್ರಚಿಕಿತ್ಸಕ ಡಾ. ಹರ್‌ದೀಪ್ ಅವರ ಪ್ರಕಾರ, ಆಸ್ಪತ್ರೆಯ ಒಪಿಡಿಗೆ ದಿನಕ್ಕೆ ಬರುವ ಸರಾಸರಿ 40 ರೋಗಿಗಳಲ್ಲಿ 5 ರಿಂದ 7 ರೋಗಿಗಳ ವೀರ್ಯಾಣುಗಳಲ್ಲಿ ತೀವ್ರ ಅಸಹಜತೆ ಕಂಡುಬರುತ್ತಿದೆ. ಈ ರೋಗಿಗಳ ಪೈಕಿ ಬಹುತೇಕರು ಈ ಹಿಂದೆ ಅಥವಾ ಪ್ರಸ್ತುತ ಮಾದಕ ದ್ರವ್ಯಗಳಿಗೆ ದಾಸರಾಗಿದ್ದವರು ಎಂಬುದು ದೃಢಪಟ್ಟಿದೆ.
ಇದನ್ನೂ ಓದಿ:
ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಗೃಹ ಸಚಿವ ಅಮಿತ್ ಶಾ ಘೋಷಣೆ
ಏಮ್ಸ್ ವಿಭಾಗದ ಮುಖ್ಯಸ್ಥ ಡಾ. ಕವಲ್ಜಿತ್ ಸಿಂಗ್ ಕೌರಾ ಮಾತನಾಡಿ, “ಡ್ರಗ್ಸ್ ಸೇವನೆಯು ವೀರ್ಯಾಣುಗಳ ಸಂಖ್ಯೆ ಮತ್ತು ಅವುಗಳ ಚಲನಶೀಲತೆಯನ್ನು ಸಂಪೂರ್ಣವಾಗಿ ಕುಂಠಿತಗೊಳಿಸುತ್ತಿದೆ. ಔಷಧಿಯ ತೀವ್ರತೆ ಮತ್ತು ವ್ಯಸನದ ಅವಧಿಗೆ ತಕ್ಕಂತೆ ಡಿಎನ್‌ಎ ಮಟ್ಟದಲ್ಲೇ ಹಾನಿ ಉಂಟಾಗುತ್ತಿದೆ” ಎಂದು ವಿವರಿಸಿದ್ದಾರೆ.ಮಾದಕ ವಸ್ತುಗಳ ಬಳಕೆಯು ವೀರ್ಯಾಣುವಿನ ಡಿಎನ್‌ಎಯಲ್ಲಿರುವ ರಾಸಾಯನಿಕ ಸಂಕೇತಗಳು ಮತ್ತು ಪ್ರೋಟೀನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ವೈಜ್ಞಾನಿಕವಾಗಿ ‘ಎಪಿಜೆನೆಟಿಕ್ ಬದಲಾವಣೆಗಳು’ ಎಂದು ಕರೆಯಲಾಗುತ್ತದೆ.
ಮಗುವಿನ ಆರಂಭಿಕ ಬೆಳವಣಿಗೆಗೆ ಧಕ್ಕೆ: ತಂದೆಯ ವೀರ್ಯದಲ್ಲಾಗುವ ಇಂತಹ ಹಾನಿಯು ಗರ್ಭದಲ್ಲಿರುವ ಭ್ರೂಣದ ಆರಂಭಿಕ ಅಂಗಾಂಗಗಳ ಬೆಳವಣಿಗೆ ಹಾಗೂ ಜೀನ್‌ಗಳ ಕಾರ್ಯವೈಖರಿಯನ್ನು ತಪ್ಪಿಸುತ್ತದೆ. ಇದರಿಂದಾಗಿ ಹುಟ್ಟುವ ಮಗುವಿನಲ್ಲಿ ಜನ್ಮಜಾತ ದೋಷಗಳು, ಬುದ್ಧಿಮಾಂದ್ಯತೆ ಹಾಗೂ ರೋಗನಿರೋಧಕ ಶಕ್ತಿಯ ಕೊರತೆ ಕಾಣಿಸಿಕೊಳ್ಳಬಹುದು. ಯುವಕರಲ್ಲಿ ಬಂಜೆತನ ಹೆಚ್ಚುತ್ತಿರುವುದರಿಂದ ಹಲವು ಕುಟುಂಬಗಳಲ್ಲಿ ಮುಂದಿನ ತಲೆಮಾರೇ ಇಲ್ಲದಂತಾಗುವ ಭೀತಿ ಎದುರಾಗಿದ್ದು, ಪಂಜಾಬ್‌ನ ಒಟ್ಟಾರೆ ಜನಸಂಖ್ಯಾ ಬೆಳವಣಿಗೆ (Demographics) ಮೇಲೆ ಇದು ಗಂಭೀರ ದುಷ್ಪರಿಣಾಮ ಬೀರಲಿದೆ.
ವೈದ್ಯಕೀಯ ಕಳವಳ ಒಂದೆಡೆಯಾದರೆ, ಪಂಜಾಬ್‌ನಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ಧ್ವನಿ ಎತ್ತುವವರನ್ನು ಹತ್ಯೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಲ್ಲಿ ಮಾದಕ ದ್ರವ್ಯ ವಿರೋಧಿ ಸಾಮಾಜಿಕ ಕಾರ್ಯಕರ್ತರ ಭೀಕರ ಕೊಲೆಗಳು ನಡೆದಿವೆ. ಡ್ರಗ್ ಮಾಫಿಯಾದ ಈ ಹಿಂಸಾಚಾರದಿಂದಾಗಿ ಸ್ಥಳೀಯ ಗ್ರಾಮಸ್ಥರು ಮತ್ತು ಯುವಕರು ಈ ಮಾರಕ ಹಾವಳಿಯ ವಿರುದ್ಧ ಬಹಿರಂಗವಾಗಿ ಮಾತನಾಡಲು ಹೆದರುತ್ತಿದ್ದು, ಇಡೀ ಪ್ರಾಂತ್ಯದಲ್ಲಿ ಭಯದ ಛಾಯೆ ಆವರಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 am, Wed, 28 October 26




