ಕೊವಿಡ್ ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಿರಿ.. ಎಚ್ಚರ!
ಸಾಮಾಜಿಕ ಜಾಲತಾಣದಲ್ಲಿ ಪ್ರಮಾಣಪತ್ರವನ್ನು ಪೋಸ್ಟ್ ಮಾಡುವುದರ ಕುರಿತಂತೆ ಏನು ತೊಂದರೆ ಆಗಬಹುದು ಎಂಬುದರ ಕುರಿತಾಗಿ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ.
ಕೊವಿಡ್ ಸೋಂಕನ್ನು ನಿಯಂತ್ರಣಕ್ಕೆ ತರಲು ಎದುರಿರುವ ಒಂದೇ ಒಂದು ಪರಿಹಾರ ಮಾರ್ಗವೆಂದರೆ ಲಸಿಕೆ(ವ್ಯಾಕ್ಸಿನೇಷನ್). ಕೊರೊನಾ ಸೋಂಕಿನ ಆರ್ಭಟ ತಣಿಸಲು ಸರ್ಕಾರ, ಎಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿಕೊಳ್ಳುತ್ತಿದೆ. ಲಸಿಕೆ ಪಡೆದಿದ್ದೀರಿ ಎಂಬ ಕುರಿತಾಗಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಲಸಿಕೆ ಪಡೆದ ಬಳಿಕ ಇನ್ನಿತರರಿಗೆ ಸ್ಪೂರ್ತಿಯಾಗಲು, ಹೆಚ್ಚಿನ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಮಾಣಪತ್ರವನ್ನು ಪೋಸ್ಟ್ ಮಾಡಲಾಗುತ್ತಿದೆ. ಆದರೆ ಈ ಕುರಿತಂತೆ ಏನು ತೊಂದರೆ ಆಗಬಹುದು ಎಂಬುದಾಗಿ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ.
ಈ ಹಿಂದೆ ಕೆಲವು ನಟ-ನಟಿಯರು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಬಳಿಕ ಜನಸಾಮಾನ್ಯರೂ ಕೂಡಾ ಲಸಿಕೆ ಪಡೆದ ಪ್ರಮಾಣಪತ್ರವನ್ನು ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದರು. ಪ್ರಮಾಣ ಪತ್ರದಲ್ಲಿ ಕೆಲವು ನಿರ್ಣಾಯಕ ಡೇಟಾಗಳಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರಿಂದ ಅಪಾಯ ಹೆಚ್ಚು ಎಂದು ಸರ್ಕಾರ ಸೂಚನೆ ನೀಡಿದೆ.
Beware of sharing #vaccination certificate on social media: pic.twitter.com/Tt9vJZj2YK
— Cyber Dost (@Cyberdost) May 25, 2021
ಲಸಿಕೆ ಪಡೆದವರ ಹೆಸರು ಜತೆಗೆ ಕೆಲ ವಿವರಗಳನ್ನು ಲಸಿಕೆ ಪ್ರಮಾಣಪತ್ರ ಒಳಗೊಂಡಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವಿವರವನ್ನು ಪೋಸ್ಟ್ ಮಾಡುವುದು ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಗೃಹ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುವುದರಿಂದಾಗಿ ಈ ಕುರಿತಾಗಿ ಎಚ್ಚರವಹಿಸಿ ಎಂದು ಸೂಚನೆ ನೀಡಿದೆ.
ಲಸಿಕೆ ಪ್ರಮಾಣಪತ್ರದಲ್ಲಿ ಲಸಿಕೆ ಪಡೆದವರ ಹೆಸರು, ಗುರುತಿನ ಚೀಟಿಯ ಕೊನೆಯ ನಾಲ್ಕು ಸಂಖ್ಯೆ, ಅವರು ಪಡೆದ ಲಸಿಕೆಯ ಹೆಸರು, ಲಸಿಕೆ ಪಡೆದ ಸಮಯ ಮತ್ತು ವ್ಯಾಕ್ಸಿನೇಷನ್ ಕೇಂದ್ರದ ಕುರಿತಾದ ಮಾಹಿತಿಗಳು ಇರುತ್ತವೆ. ಚೀನಾ, ಜಪಾನ್ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವು ದೇಶಗಳು ಈ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಭವಿಷ್ಯದಲ್ಲಿ ಈ ಪ್ರಮಾಣಪತ್ರವು ಸಹಕಾರಿಯಾಗಿದೆ. ಯಾವುದೇ ದೇಶಗಳಿಗೆ ಪ್ರಯಾಣಿಸುವಾಗ ಕೊವಿಡ್ ಲಸಿಕೆ ಪಡೆದ ಕುರಿತಾಗಿ ಪ್ರಮಾಣಪತ್ರವನ್ನು ತೋರಿಸುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ:
ಹೈಕೋರ್ಟ್ ಸುದ್ದಿ: ಕೊವಿಡ್ ಲಸಿಕೆಗೆ ತಡೆ ನೀಡಲು ಒತ್ತಾಯಿಸಿದ್ದ ಅರ್ಜಿ ವಜಾ
ಕೊರೊನಾ ಲಸಿಕೆ, ಔಷಧಿ ಮೇಲಿನ ಜಿಎಸ್‌ಟಿಗೆ ಬೀಳುತ್ತಾ ಕಡಿವಾಣ; ಮೇ 28ಕ್ಕೆ ಜಿಎಸ್ಟಿ ಮಂಡಳಿ ಮಹತ್ವದ ಸಭೆ
Published On - 12:26 pm, Thu, 27 May 21