ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಕೆಕೆ ಶೈಲಜಾ; ಪ್ರತಿಷ್ಠಿತ ಪ್ರಶಸ್ತಿ ನಿರಾಕರಣೆಗೆ ಕಾರಣ ಕೊಟ್ಟ ಸಿಪಿಎಂ
ಶೈಲಜಾ ಟೀಚರ್ ಎಂದೇ ಹೆಸರಾದ ಕೆಕೆ ಶೈಲಜಾ ರಾಜ್ಯದಲ್ಲಿ ಹೆಚ್ಚು ಜನಪ್ರಿಯ ನಾಯಕಿ. ಅವರ ಖ್ಯಾತಿಗೆ ತಡೆಯೊಡ್ಡಲು ಈ ರೀತಿ ಮಾಡಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ
ಕೇರಳದ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ (KK Shailaja) ‘ಏಷ್ಯಾದ ನೊಬೆಲ್ ಪ್ರಶಸ್ತಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು (Ramon Magsaysay Award) ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಸಿಪಿಐ(ಎಂ) (CPI(M) ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ಅನುಮತಿ ನಿರಾಕರಿಸಿರುವುದಾಗಿ ವರದಿಯಾಗಿದ್ದು ಇದು ಸದ್ಯ ಚರ್ಚೆ ಹುಟ್ಟುಹಾಕಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವು ಶೈಲಜಾ ಅವರನ್ನು ನಿಪಾ ಮತ್ತು ಕೋವಿಡ್-19 ನಿರ್ವಹಣೆಯಲ್ಲಿ ಪರಿಣಾಮಕಾರಿ ನಾಯಕತ್ವದ ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ನೀಡಿದ ಸೇವೆಯನ್ನು ಪರಿಗಣಿಸಿ 2022 ರ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ. ಆದರೆ, ಶೈಲಜಾ ಈ ಬಗ್ಗೆ ಪಕ್ಷದ ನಾಯಕತ್ವ ಜತೆ ಸಮಾಲೋಚಿಸಿದಾಗ ಅವರು ಪ್ರಶಸ್ತಿ ಸ್ವೀಕರಿಸುವುದನ್ನು ವಿರೋಧಿಸಿದರು ಹೇಳಿರುವುದಾಗಿ ವರದಿ ಆಗಿದೆ
ಭಾನುವಾರ, ಸೆಪ್ಟೆಂಬರ್ 4 ರಂದು ಈ ಸುದ್ದಿ ಬೆಳಕಿಗೆ ಬಂದ ನಂತರ, ಕಾರ್ಯಕರ್ತರು, ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಪಕ್ಷದ ಪರ ವಹಿಸುವ ಒಂದು ವಿಭಾಗವು ಪ್ರಶಸ್ತಿಯನ್ನು ತಿರಸ್ಕರಿಸಿದ ಪಕ್ಷದ ಕ್ರಮವನ್ನು ಖಂಡಿಸಿದ್ದಾರೆ, ಇದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮತ್ತೊಂದು ನಡೆ ಎಂದು ಹಲವರು ಆರೋಪಿಸಿದ್ದಾರೆ. ಶೈಲಜಾ ಟೀಚರ್ ಎಂದೇ ಹೆಸರಾದ ಕೆಕೆ ಶೈಲಜಾ ರಾಜ್ಯದಲ್ಲಿ ಹೆಚ್ಚು ಜನಪ್ರಿಯ ನಾಯಕಿ. ಅವರ ಖ್ಯಾತಿಗೆ ತಡೆಯೊಡ್ಡಲು ಈ ರೀತಿ ಮಾಡಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಕೇರಳದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂದಾಳತ್ವ ವಹಿಸಿದ್ದ ಶೈಲಜಾರ ಕಾರ್ಯವೈಖರಿ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗಿತ್ತು.ಶೈಲಜಾ ಅವರು ಮಟ್ಟನ್ನೂರು ಕ್ಷೇತ್ರದಿಂದ 60,000 ಮತಗಳ ದಾಖಲೆಯ ಬಹುಮತದೊಂದಿಗೆ 2021 ರಲ್ಲಿ ಎರಡನೇ ಅವಧಿಗೆ ರಾಜ್ಯ ವಿಧಾನಸಭೆಗೆ ಪ್ರವೇಶಿಸಿದ್ದರು.
ವರದಿಗಳ ಪ್ರಕಾರ, ಸಿಪಿಎಂ ಪಕ್ಷವು ಪ್ರಶಸ್ತಿಯನ್ನು ನಿರಾಕರಿಸಲು ಮೂರು ಕಾರಣಗಳನ್ನು ಉಲ್ಲೇಖಿಸಿದೆ. ಅದರಲ್ಲಿ ಮೊದಲನೆಯದು, ಈ ಪ್ರಶಸ್ತಿಗೆ ಫಿಲಿಪೈನ್ಸ್ ಮಾಜಿ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಹೆಸರಿಡಲಾಗಿದೆ. ಅವರು ದೇಶದಲ್ಲಿ ಕಮ್ಯುನಿಸ್ಟ್ ಗೆರಿಲ್ಲಾಗಳನ್ನು ದಮನಿಸಿದ್ದರು. ಈ ಪ್ರಶಸ್ತಿ ಸ್ವೀಕರಿಸುವುದರಿಂದ ದೀರ್ಘಾವಧಿಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ. ಎರಡನೆಯದಾಗಿ, ಕೇರಳದಲ್ಲಿ ನಿಪಾ ಮತ್ತು ಕೋವಿಡ್ ಉಲ್ಬಣವಾದಾಗ ಅದರ ಯಶಸ್ವಿ ನಿರ್ವಹಣೆಯು ಯಾವುದೇ ಒಬ್ಬ ವ್ಯಕ್ತಿಯಿಂದಲ್ಲ, ಆದರೆ ಸಾಮೂಹಿಕ ಪ್ರಯತ್ನ ಎಂದು ಸಿಪಿಐ(ಎಂ) ನಂಬುತ್ತದೆ. ಮೂರನೆಯದಾಗಿ, ಶೈಲಜಾ ಅವರಂತಹ ಸಕ್ರಿಯ ರಾಜಕಾರಣಿಗಳನ್ನು ಗುರುತಿಸುವ ಯಾವುದೇ ನಿದರ್ಶನವನ್ನು ಮ್ಯಾಗ್ಸೆಸೆ ಪ್ರಶಸ್ತಿ ಹೊಂದಿಲ್ಲ. ರಾಷ್ಟ್ರೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅರುಣಾ ರಾಯ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಪ್ರಶಸ್ತಿ ಸ್ವೀಕರಿಸಿದ್ದರೂ, ಅವರು ಆ ಸಮಯದಲ್ಲಿ ಸಕ್ರಿಯ ರಾಜಕಾರಣಿಗಳಾಗಿರಲಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.
ಶೈಲಜಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಖಚಿತಪಡಿಸಿದ್ದ ಶೈಲಜಾ, ಅದನ್ನು ತಿರಸ್ಕರಿಸುವ ಕ್ರಮವು ಪಕ್ಷದ ಏಕಪಕ್ಷೀಯ ನಿರ್ಧಾರವಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ ನಾನು ಪ್ರಶಸ್ತಿಯನ್ನು ಪಡೆದಿರುವ ಮಾಜಿ ಪುರಸ್ಕೃತರ ಪಟ್ಟಿ ಪರಿಶೀಲಿಸಿದ್ದೇನೆ. ಇದುವರೆಗೆ ಯಾವುದೇ ರಾಜಕೀಯ ನಾಯಕರು ಅದನ್ನು ಸ್ವೀಕರಿಸಿಲ್ಲ. ನಾನು ಸಿಪಿಐ(ಎಂ) ಕೇಂದ್ರ ಸಮಿತಿಯ ಸದಸ್ಯನಾಗಿರುವುದರಿಂದ ಸಹಜವಾಗಿಯೇ ಈ ಕುರಿತು ಸಮಿತಿಯೊಂದಿಗೆ ಚರ್ಚಿಸಿದ್ದೇನೆ. ರಾಜಕೀಯ ನಾಯಕನ ಸ್ಥಾನದಲ್ಲಿ ನಾನು ಪ್ರಶಸ್ತಿ ಸ್ವೀಕರಿಸುವ ಅಗತ್ಯವಿಲ್ಲ ಎಂದು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಶೈಲಜಾ ಹೇಳಿದ್ದಾರೆ. ಇದು ದೊಡ್ಡ ಮನ್ನಣೆಯಾಗಿದ್ದರೂ ಸಹ, ಕಮ್ಯುನಿಸ್ಟ್ ತತ್ವಗಳೊಂದಿಗೆ ತಮ್ಮನ್ನು ಹೊಂದಿಸಿಕೊಳ್ಳದ ಸರ್ಕಾರೇತರ ಸಂಸ್ಥೆಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆದ್ದರಿಂದ, ನಾನು ವೈಯಕ್ತಿಕವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ
ನಾನು ಪ್ರಶಸ್ತಿ ಪ್ರತಿಷ್ಠಾನಕ್ಕೆ ಧನ್ಯವಾದ ಹೇಳಿದ್ದೇನೆ ಮತ್ತು ನಾನು ವೈಯಕ್ತಿಕ ಸಾಮರ್ಥ್ಯದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ” ಎಂದು ಅವರು ಹೇಳಿದರು, ಪಕ್ಷದಲ್ಲಿ ಅಂತಹ ಎಲ್ಲಾ ನಿರ್ಧಾರಗಳನ್ನು ಸಮಿತಿಯ ಸದಸ್ಯರು ಒಟ್ಟಾಗಿ ಮಾಡುತ್ತಾರೆ. ಇದು ನಾನು ಮಾತ್ರ ನಿರ್ಧರಿಸುವ ವಿಷಯವಲ್ಲ ಎಂದು ಅವರು ಹೇಳಿದ್ದಾರೆ.
ಶೈಲಜಾ ಅವರ ಮಾತಿಗೆ ಧ್ವನಿಗೂಡಿಸಿದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಕೇರಳದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಿದ ರೀತಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು. “ಇದು ರಾಜ್ಯದ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಸಾಮೂಹಿಕ ಪ್ರಯತ್ನವಾಗಿದೆ. ಹಾಗಾಗಿ ಇದು ವೈಯಕ್ತಿಕ ಪ್ರಯತ್ನದ ಫಲವಲ್ಲ. ಅದೂ ಅಲ್ಲದೆ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಇದುವರೆಗೆ ಯಾವುದೇ ಸಕ್ರಿಯ ರಾಜಕಾರಣಿಗಳಿಗೆ ನೀಡಿಲ್ಲ. ಶೈಲಜಾ ನಮ್ಮ ಕೇಂದ್ರ ಸಮಿತಿಯ ಸದಸ್ಯೆ, ಇದು ನಮ್ಮ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಈಗಲೂ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಅಲ್ಲದೆ, ಫಿಲಿಪೈನ್ಸ್‌ನಲ್ಲಿ ಕಮ್ಯುನಿಸ್ಟರ ಮೇಲೆ ಕ್ರೂರ ದಬ್ಬಾಳಿಕೆ ನಡೆಸಿದ ಇತಿಹಾಸ ಹೊಂದಿರುವ ಮ್ಯಾಗ್ಸೆಸೆ ಹೆಸರಿನಲ್ಲಿ ಈ ಪ್ರಶಸ್ತಿ ಇದೆ. ಹೀಗಾಗಿ ಈ ಎಲ್ಲ ಅಂಶಗಳನ್ನು ಒಟ್ಟಾಗಿ ಪರಿಗಣಿಸಿ ಆಕೆ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ ಎಂದು ಅವರು ನವದೆಹಲಿಯಲ್ಲಿ ಮಾಧ್ಯಮದವರಲ್ಲಿ ಮಾತನಾಡಿದ ಯೆಚೂರಿ ಹೇಳಿದ್ದಾರೆ.
ಮಾರ್ಚ್ 1957 ರಲ್ಲಿ ವಿಮಾನ ಅಪಘಾತದಲ್ಲಿ ಮಡಿದ ಫಿಲಿಪೈನ್ಸ್‌ನ ದಿವಂಗತ ಅಧ್ಯಕ್ಷರನ್ನು ಗೌರವಿಸಲು ರಾಕ್‌ಫೆಲ್ಲರ್ ಬ್ರದರ್ಸ್ ಫಂಡ್ (RBF) 1957 ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ಥಾಪಿಸಿತು. ಸರ್ಕಾರಿ ಸೇವೆ, ಸಾರ್ವಜನಿಕ ಸೇವೆ, ಅಂತರರಾಷ್ಟ್ರೀಯ ತಿಳುವಳಿಕೆ, ಪತ್ರಿಕೋದ್ಯಮ ಮತ್ತು ಸಾಹಿತ್ಯ, ಮತ್ತು ಸಮುದಾಯ ನಾಯಕತ್ವವನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಚಲನಚಿತ್ರ ನಿರ್ಮಾಪಕ ಸತ್ಯಜಿತ್ ರೇ, ವ್ಯಂಗ್ಯಚಿತ್ರಕಾರ ಆರ್‌ಕೆ ಲಕ್ಷ್ಮಣ್, ಮಾಜಿ ಚುನಾವಣಾ ಆಯುಕ್ತ ಟಿಎನ್ ಶೇಷನ್, ಗಾಯಕಿ ಎಂಎಸ್ ಸುಬ್ಬುಲಕ್ಷ್ಮಿ, ಕೃಷಿ ವಿಜ್ಞಾನಿ ಡಾ ವರ್ಗೀಸ್ ಕುರಿಯನ್ ಮತ್ತು ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರು ಭಾರತೀಯ ಪ್ರಶಸ್ತಿ ಪುರಸ್ಕೃತ ಪಟ್ಟಿಯಲ್ಲಿದ್ದಾರೆ. ಒಂದು ವೇಳೆ ಶೈಲಜಾ ಈ ಪ್ರಶಸ್ತಿಗೆ ಪಾತ್ರರಾಗುವುದಾದರೆ ಮ್ಯಾಗ್ಸೆಸೆ ಪಡೆದ ಕೇರಳದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗುತ್ತಿದ್ದರು.
Published On - 8:27 pm, Sun, 4 September 22