ಶಾಲೆಗಳನ್ನು ಆ 17ರಿಂದ ಪುನರಾರಂಭಿಸುವ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ತಡೆಹಿಡಿಯಿತು
ಬುಧವಾರದಂದು ಶಿಕ್ಷಣ ಇಲಾಖೆ ಮತ್ತು ಕಾರ್ಯಪಡೆಯ ನಡುವೆ ಸಭೆಯೊಂದು ನಡೆಯಿತು. ಸದರಿ ಸಭೆಯಲ್ಲಿ ಮುಖ್ಯಮಂತ್ರಿ ಉಧವ್ ಠಾಕ್ರೆಯವರೂ ಹಾಜರಿದ್ದರು.
ಮುಂಬೈ: ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿಯ ಬಗ್ಗೆ ತನ್ನ ಕಾರ್ಯ ಪಡೆಯು ಆಕ್ಷೇಪಣೆಗಳನ್ನು ಪ್ರಕಟಿಸಿದ ನಂತರ ಮಹಾರಾಷ್ಟ್ರದ ಶಿಕ್ಷಣ ಇಲಾಖೆಯು ಆಗಸ್ಟ್ 17 ರಿಂದ ಶಾಲೆಗಳನ್ನು ಪುನರಾರಂಭಿಸುವ ತನ್ನ ನಿರ್ಧಾರವನ್ನು ತಡೆಹಿಡಿದಿದೆ. ಆಗಸ್ಟ್ 10 ರಂದು ಮಹಾರಾಷ್ಟ್ರ ಸರ್ಕಾರವು ರಾಜ್ಯದ ಗ್ರಾಮೀಣ ಭಾಗಗಳಲ್ಲಿ 5-12 ತರಗತಿ ಮತ್ತು ನಗರ ಪ್ರದೇಶಗಳಲ್ಲಿ 8-12 ತರಗತಿಯ ಶಾಲೆಗಳು ಆರಂಭವಾಗಲಿವೆ ಎಂದು ಪ್ರಕಟಿಸಿ ಎಸ್ಒಪಿಗಳನ್ನು ರೂಪಿಸಿತ್ತು. ಆದರೆ, ಕೇವಲ ಒಂದು ದಿನದ ನಂತರ ಕಾರ್ಯ ಪಡೆಯು ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ತಡೆಹಿಡಿದಿದೆ.
ಬುಧವಾರದಂದು ಶಿಕ್ಷಣ ಇಲಾಖೆ ಮತ್ತು ಕಾರ್ಯಪಡೆಯ ನಡುವೆ ಸಭೆಯೊಂದು ನಡೆಯಿತು. ಸದರಿ ಸಭೆಯಲ್ಲಿ ಮುಖ್ಯಮಂತ್ರಿ ಉಧವ್ ಠಾಕ್ರೆಯವರೂ ಹಾಜರಿದ್ದರು.
ಮಾಧ್ಯಮದವರು, ಕಾರ್ಯಪಡೆಯ ಅಳುಕಿಗೆ ಕಾರಣವೇನು ಅಂತ ಕೇಳಿದಾಗ ಅದರ ಸದಸ್ಯರೊಬ್ಬರು, 18ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಿಲ್ಲವಾದ್ದರಿಂದ ಮೂರನೇ ಅಲೆ ಅಪ್ಪಳಿಸಿದರೆ ಅವರಿಗೆ ತೊಂದರೆಯಾಗಲಿದೆ ಎಂದರು. ಅಷ್ಟು ಮಾತ್ರವಲ್ಲದೆ ಶಾಲೆಗಳಲ್ಲಿ ಕೋವಿಡ್ ವಿರುದ್ಧ ಸುರಕ್ಷತೆಗೆ ಸೂಕ್ತವಾದ ಸೌಲಭ್ಯಗಳಿಲ್ಲ. ಜ್ವರ ಚೆಕ್ ಮಾಡಲು ಥರ್ಮಾಮೀಟರ್, ಮಾಸ್ಕ್ಗಳು, ವಿಶಾಲವಾದ ಕ್ಲಾಸ್ ರೂಮುಗಳು, ಸೋಪ್ ಮತ್ತು ಸ್ಯಾನಿಟೈಜರ್-ಮುಂತಾದವುಗಳ ವ್ಯವಸ್ಥೆ ಶಾಲೆಗಳಲ್ಲಿ ಇಲ್ಲ, ಎಂದು ಅವರು ಹೇಳಿದರು.
ಗಮ್ಮತ್ತಿನ ಸಂಗತಿಯೆಂದರೆ ರಾಜ್ಯ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಅವರಿಗೆ ಸರ್ಕಾರ ತನ್ನ ನಿರ್ಧಾರ ತಡೆಹಿಡಿದಿರುವ ಬಗ್ಗೆ ಮಾಹಿತಿಯೇ ಇಲ್ಲ.
‘ನಮ್ಮ ನಿರ್ಧಾರ ಅಂತಿಮ ಅಂತ ನಾವು ಹೇಳಿರಲೇ ಇಲ್ಲ. ಶಾಲೆಗಳನ್ನು ಪುನರಾರಂಭಿಸುವ ನಿರ್ಧಾರವನ್ನು ನಾವು ಆಯಾ ಜಿಲ್ಲೆಗಳ ಕಲೆಕ್ಟರ್ ಮತ್ತು ಮುನಿಸಿಪಲ್ ಕಮೀಶನರ್ಗಳ ಸುಪರ್ದಿಗೆ ವಹಿಸಿದ್ದೆವು. ಕಾರ್ಯಪಡೆಯೊಂದಿಗೆ ಭಿನ್ನಾಭಿಪ್ರಾಯ ಹೊಂದುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸುವ ಅಂಶದಿಂದ ಆರಂಭಗೊಂಡು ನಾವು ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆಯೂ ಗಮನ ಹರಿಸಿದ್ದೇವೆ. ಅಸಲಿಗೆ ಏನಾಗಿದೆ ಎಂಬ ವಿವರವನ್ನು ಸಂಗ್ರಹಿಸಲು ನಾನು ಪ್ರಯತ್ನಿಸುತ್ತೇನೆ,’ ಎಂದು ಆಕೆ ಹೇಳಿದರು.
ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಶಾಲೆಗಳು ಮುಚ್ಚಿರುವುದರಿಂದ ಡ್ರಾಪ್ ಔಟ್ ಪ್ರಮಾಣ, ಬಾಲ ಕಾರ್ಮಿಕ, ಬಾಲ್ಯ ವಿವಾಹ ಮೊದಲಾದವುಗಳ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ವರ್ಷಾ ಹೇಳಿದರು.
ರಾಜ್ಯ ಶಿಕ್ಷಣ ಸಂಶೋಧನಾ ಮಂಡಳಿಯು ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 81 ರಷ್ಟು ಪೋಷಕರು ಶಾಲೆಗಳನ್ನು ಪುನಃ ತೆರೆಯಲು ಬಯಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಸಚಿವರು ಹೇಳಿದರು. ಹಾಗಾಗಿ ಕೋವಿಡ್-ಮುಕ್ತ ಹಳ್ಳಿಗಳಲ್ಲಿ, ಜುಲೈ 15 ರಿಂದ 8-12 ನೇ ತರಗತಿಗಳಿಗೆ ದೈಹಿಕ ತರಗತಿಗಳು ಆರಂಭವಾಗುತ್ತವೆ, ಎಂದು ಸಚಿವೆ ಹೇಳಿದರು.
ಮಹಾರಾಷ್ಟ್ರದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪೋಷಕರು ಶಾಲೆಗಳು ರೀ-ಓಪನ್ ಆಗುವುದನ್ನು ಬಯಸುತ್ತಿದ್ದಾರೆ. ತಮ್ಮಲ್ಲಿ ಆಂಡ್ರಾಯ್ಡ್ ಪೋನ್ಗಳು ಇಲ್ಲದ ಕಾರಣ ಮಕ್ಕಳು ಆನ್ ಲೈನ್ ತರಗತಿಗಳನ್ನು ಅಟೆಂಡ್ ಮಾಡುವುದು ಆಗುತ್ತಿಲ್ಲ ಅಂತ ಅವರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 45 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ; ಜಲಗಾಂವ್ನಲ್ಲೇ ಜಾಸ್ತಿ ಇದೆ ಅಪಾಯಕಾರಿ ವೈರಸ್