ದೇಶವ್ಯಾಪಿ ರೈಲು ನಿಲ್ದಾಣಗಳಿಗೆ ಕಾಯಕಲ್ಪ: ಅತ್ಯಾಧುನಿಕ ಸೌಕರ್ಯ, ಕಣ್ಸೆಳೆಯುವ ಅಲಂಕಾರ
ಯಶವಂತಪುರ, ಬೈಯಪ್ಪನಹಳ್ಳಿ ಸೇರಿದಂತೆ ದೇಶಾದ್ಯಂತ ಸದ್ದಿಲ್ಲದೆ ಮೇಲ್ದರ್ಜೆಗೇರುತ್ತಿವೆ ಹಲವು ರೈಲು ನಿಲ್ದಾಣಗಳು. ದೇಶದಲ್ಲಿ ಯಾವ್ಯಾವ ರೈಲು ನಿಲ್ದಾಣಗಳು ಹೇಗೆ ಮೇಲ್ದರ್ಜೆಗೇರಿವೆ ಎನ್ನುವ ವಿವರ ಇಲ್ಲಿದೆ.
ರೈಲು ನಿಲ್ದಾಣಗಳೆಂದರೆ ಒಂದು ಕಾಲದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇತ್ತು. ಆದರೆ, ಈಗ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಗೊಂಡಿವೆ. ಸದ್ದಿಲ್ಲದೆ ಮೇಲ್ದರ್ಜೆಗೇರುತ್ತಿವೆ, ಫಳಫಳನೇ ಹೊಳೆಯುತ್ತಿವೆ. ಈ ಬದಲಾವಣೆ ಹೇಗೆ ಆಯಿತು? ದೇಶದಲ್ಲಿ ಯಾವ್ಯಾವ ರೈಲು ನಿಲ್ದಾಣಗಳು ಹೇಗೆ ಮೇಲ್ದರ್ಜೆಗೇರಿವೆ ಎನ್ನುವ ವಿವರ ಇಲ್ಲಿದೆ.
ಫಳಫಳ ಹೊಳೆಯುವ ಟೈಲ್ಸ್ ನೆಲಹಾಸು. ಏರ್ಕಂಡೀಷನ್ ವೇಯ್ಟಿಂಗ್ ಲಾಂಜ್, ಸ್ಟೀಲ್ ಬೆಂಚ್, ಫುಲ್ ಕ್ಲೀನ್ ಇರೋ ಲಾಂಜ್, ಮಿರಿಮಿರಿ ಮಿಂಚುತ್ತಾ ಕಣ್ಣು ಕುಕ್ಕುವ ಎಲ್ಇಡಿ ಲೈಟ್ಗಳು, ಎಲ್ಸಿಡಿ ಡಿಸ್ಪ್ಲೇ ಪ್ಯಾನೆಲ್ಗಳು, ಫೈವ್ಸ್ಟಾರ್ ಹೋಟೇಲ್ನ ವಾಷ್ ಬೇಸಿನ್, ಕ್ಲೀನ್ ಟಾಯ್ಲೆಟ್, ಸ್ಥಳೀಯ ಕಲೆ, ಸಂಸ್ಕೃತಿ ಬಿಂಬಿಸುವ ಗೋಡೆಯ ಚಿತ್ರಕಲೆ. ಇವೆಲ್ಲವನ್ನೂ ನೋಡಿದ ಮೇಲೆ, ಇದು ನಮ್ಮ ದೇಶದ ಸ್ಥಳವಲ್ಲ, ಯಾವುದೋ ವಿದೇಶದ್ದು ಇರಬೇಕು, ಯೂರೋಪ್, ಆಮೆರಿಕದ ಸ್ಥಳವಿರಬೇಕು ಅಂತ ನಿಮಗೆ ಅನ್ನಿಸಿದರೆ ಅಚ್ಚರಿಯೇನಿಲ್ಲ. ಆದರೆ, ಇದು ನಮ್ಮ ದೇಶದ್ದೇ ದೃಶ್ಯಗಳು. ಇದು ನಮ್ಮ ದೇಶದ ಯಾವುದೋ ಪ್ರಸಿದ್ಧ ಏರ್ಪೋರ್ಟ್ ದೃಶ್ಯಗಳು ಅಂತ ನಿಮಗೆ ಅನ್ನಿಸಿದರೂ ಅಚ್ಚರಿ ಇಲ್ಲ. ಆದರೆ ಇವು ರೈಲು ನಿಲ್ದಾಣಗಳು ಎನ್ನುವುದು ವಿಶೇಷ. ನಮ್ಮ ದೇಶದಲ್ಲಿ ಕಳೆದ 5 ವರ್ಷದಲ್ಲಿ ಸಾಕಷ್ಟು ರೈಲು ನಿಲ್ದಾಣಗಳ ಚಿತ್ರಣವೇ ಬದಲಾಗಿದೆ. 5 ವರ್ಷದ ಹಿಂದೆ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ್ದವರು, ಈಗ ಭೇಟಿ ನೀಡಿದರೇ ವ್ಯತ್ಯಾಸ ಗೊತ್ತಾಗುತ್ತದೆ.
ರೈಲು ಮತ್ತು ರೈಲು ನಿಲ್ದಾಣಗಳನ್ನು ಪ್ರಧಾನಿ ಮೋದಿಯಷ್ಟು ಹತ್ತಿರದಿಂದ ನೋಡಿದವರು ಕೇಂದ್ರ ಸರ್ಕಾರದಲ್ಲಿ ಬೇರೆ ಯಾರು ಇಲ್ಲ ಅನ್ನಿಸುತ್ತೆ. ಏಕೆಂದರೆ, ಪ್ರಧಾನಿ ಮೋದಿ ಚಿಕ್ಕಂದಿನಲ್ಲಿ ತಂದೆ ದಾಮೋದರ್ ದಾಸ್ ಮೋದಿ ಜೊತೆ ಗುಜರಾತ್ನ ಮೆಹಸನಾದ ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದರು. ರೈಲು ಬೋಗಿಗಳನ್ನು ಹತ್ತಿ ಚಹಾ ಮಾರಿದ್ದಾರೆ. ಹೀಗಾಗಿಯೇ ಅದೇ ನರೇಂದ್ರ ಮೋದಿ, ದೇಶದ ಪ್ರಧಾನಿಯಾಗುತ್ತಿದ್ದಂತೆ, ದೇಶದ ರೈಲು ಮತ್ತು ರೈಲು ನಿಲ್ದಾಣಗಳ ಸ್ಥಿತಿಯನ್ನು ಬದಲಾಯಿಸಿ, ಹೊಸ ರೂಪ ನೀಡಲು ನಿರ್ಧರಿಸಿಬಿಟ್ಟರು. ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಸೂಚನೆಯ ಮೇರೆಗೆ ಈಗ ದೇಶದ ರೈಲು ಮತ್ತು ರೈಲು ನಿಲ್ದಾಣಗಳ ಸ್ಥಿತಿಯೇ ಬದಲಾಗುತ್ತಿದೆ. ಹತ್ತಾರು ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಯಾಗುತ್ತಿವೆ. ಹಲವು ರೈಲು ನಿಲ್ದಾಣಗಳನ್ನು ನವೀಕರಣ ಮತ್ತು ಮರುಅಭಿವೃದ್ದಿ ಮಾಡಲಾಗುತ್ತಿದೆ.
400 ಸ್ಮಾರ್ಟ್ ರೈಲು ನಿಲ್ದಾಣಗಳು ಅಭಿವೃದ್ಧಿ ರೈಲು ನಿಲ್ದಾಣಗಳು ಯಾವುದೇ ನಗರಕ್ಕಾದರೂ ಎಂಟ್ರಿ ಪಾಯಿಂಟ್ ಇದ್ದಂತೆ. ಹೀಗಾಗಿ ದೇಶದಲ್ಲಿ ಸ್ಮಾರ್ಟ್ಸಿಟಿ ಮಾತ್ರವಲ್ಲ, ರೈಲು ನಿಲ್ದಾಣಗಳನ್ನೂ ಸ್ಮಾರ್ಟ್ ಆಗಿ ರೂಪಿಸಬೇಕು ಅನ್ನೋದು ಮೋದಿ ಸರ್ಕಾರದ ಐಡಿಯಾ. ಸ್ಮಾರ್ಟ್ ಐಡಿಯಾ ಮೂಲಕವೇ ಸ್ಮಾರ್ಟ್ ರೈಲು ನಿಲ್ದಾಣ ರೂಪಿಸಲು ಮೋದಿ ಸರ್ಕಾರ ಹೆಜ್ಜೆ ಇಟ್ಟಿತ್ತು. ದೇಶದ 400 ರೈಲು ನಿಲ್ದಾಣಗಳನ್ನು ಸ್ಮಾರ್ಟ್ ನಿಲ್ದಾಣಗಳಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವ ತೀರ್ಮಾನವನ್ನು ಮೋದಿ ಸರ್ಕಾರವು 2016ರಲ್ಲೇ ತೆಗೆದುಕೊಂಡಿತ್ತು. ಭೋಪಾಲ್ನ ಹಬೀಬ್ಗಂಜ್ ರೈಲು ನಿಲ್ದಾಣವನ್ನು ಮೊದಲಿಗೆ ಸ್ಮಾರ್ಟ್ ರೈಲು ನಿಲ್ದಾಣವಾಗಿ ಅಭಿವೃದ್ದಿಪಡಿಸಲಾಯ್ತು. ಈಗ ದೇಶದ ನಾಲ್ಕು ದಿಕ್ಕುಗಳಲ್ಲೂ ಕೆಲ ರೈಲು ನಿಲ್ದಾಣಗಳು ಥೇಟ್ ವಿಮಾನ ನಿಲ್ದಾಣಗಳಂತೆ ಅಭಿವೃದ್ಧಿಯಾಗಿವೆ. ಇನ್ನೂ ಕೆಲವು ಅಭಿವೃದ್ಧಿಯ ಹಾದಿಯಲ್ಲಿವೆ. ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ದಿಕ್ಕಿನ ಕೆಲ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದು ಮಿಂಚುತ್ತಿವೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ಅಸಹಕಾರ, ಬುಲೆಟ್ ಟ್ರೇನ್ ಸಂಚಾರ ಇನ್ನೂ ತಡ: ಸಂಸತ್ತಿನಲ್ಲಿ ರೈಲ್ವೆ ಸಚಿವರ ಉತ್ತರ
ತೀನ್ ಸೂಕಿಯಾ ರೈಲು ನಿಲ್ದಾಣ ಈಗ ಫುಲ್ ಸ್ಮಾರ್ಟ್ ಈಶಾನ್ಯ ದಿಕ್ಕಿನಲ್ಲಿರುವ ಅಸ್ಸಾಂ ರಾಜ್ಯದ ನ್ಯೂ ತೀನ್ ಸೂಕಿಯಾ ರೈಲು ನಿಲ್ದಾಣ ಒಂದು ಕಾಲದಲ್ಲಿ ದೇಶದ ಉಳಿದೆಲ್ಲಾ ರೈಲು ನಿಲ್ದಾಣಗಳಂತೆಯೇ ಇತ್ತು. ಸುಮಾರು 70 ವರ್ಷಗಳ ಹಿಂದೆ ರೈಲು ನಿಲ್ದಾಣ ನಿರ್ಮಾಣ ಮಾಡಿದಾಗ ಹೇಗಿತ್ತೋ ಅದೇ ಸ್ಥಿತಿಯಲ್ಲಿ 2016ರಲ್ಲೂ ಇತ್ತು. ರೈಲ್ವೇ ನಿಲ್ದಾಣದ ಹಳಿಗಳ ಮೇಲೆ ಮಲ ವಿಸರ್ಜನೆಯಿಂದ ಗಬ್ಬು ನಾರುತ್ತಿತ್ತು. ಸಿಮೆಂಟ್ ಷೀಟಿನ ಚಾವಣಿ 2016ರವರೆಗೂ ಇತ್ತು. ಆದರೆ, 2016ರಲ್ಲಿ ಕೇಂದ್ರ ರೈಲ್ವೇ ಇಲಾಖೆಯು ನ್ಯೂ ತಿನ್ ಸೂಕಿಯಾ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣದಂತೆ ಸ್ಮಾರ್ಟ್ ಆಗಿ ಮೇಲ್ದರ್ಜೆಗೇರಿಸಿ ಅಭಿವೃದ್ದಿಪಡಿಸುವ ತೀರ್ಮಾನ ಕೈಗೊಂಡಿತು. ಮೂರೇ ವರ್ಷದಲ್ಲಿ ರೈಲು ನಿಲ್ದಾಣದ ಸ್ಥಿತಿ ಸಂಪೂರ್ಣ ಬದಲಾಯಿತು. ರೈಲು ನಿಲ್ದಾಣದ ಹೊರಗಿನ ಗೋಡೆಗಳ ಮೇಲೆ ಸುಂದರ ಚಿತ್ರಕಲೆ ಬಿಡಿಸಲಾಗಿದೆ. ರಾತ್ರಿ ವೇಳೆ ಎಲ್ಇಡಿ ಲೈಟ್ಗಳು ಹೊಳೆಯುತ್ತವೆ. ವಿಶಾಲವಾದ ಲಾಂಜ್, ಟೈಲ್ಸ್ನ ನೆಲಹಾಸು ಗಮನ ಸೆಳೆಯುತ್ತೆ. ವಿಮಾನ ನಿಲ್ದಾಣಗಳಂತೆ ಈ ರೈಲು ನಿಲ್ದಾಣದಲ್ಲೂ ಪಾವತಿಸಿ ಉಪಯೋಗಿಸುವ ಎಕ್ಸಿಕ್ಯೂಟಿವ್ ಲಾಂಜ್ಗಳು ಇವೆ. ವೈಫೈ ಸಂಪರ್ಕದ ಸೌಲಭ್ಯವೂ ಇದೆ. ಈ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ 5 ಕೋಟಿ ಖರ್ಚು ಮಾಡಲಾಗಿದೆ.
ನವದೆಹಲಿ ರೈಲು ನಿಲ್ದಾಣವೂ ಝಗಮಗ ರಾಷ್ಟ್ರ ರಾಜಧಾನಿ ನವದೆಹಲಿಯ ರೈಲು ನಿಲ್ದಾಣ ಕೂಡ ಈಗ ಝಗಮಗಿಸುತ್ತಿದೆ. ಪ್ಲಾಟ್ಫಾರ್ಮ್ಗಳಿಗೆ ಲಗೇಜ್ ಸಾಗಿಸಲು ಚಿಕ್ಕ ವಾಹನಗಳಿವೆ. ಜನರಿಗೆ ವಿಶ್ರಾಂತಿ ಪಡೆಯಲು ಎಸಿ ವೇಯ್ಟಿಂಗ್ ಲಾಂಜ್ಗಳನ್ನು ನಿರ್ಮಿಸಲಾಗಿದೆ. ನಿಲ್ದಾಣದ ಗೋಡೆಗಳು ಸಹ ಆಕರ್ಷಕ ಚಿತ್ರಕಲೆಗಳಿಂದ ಕಂಗೊಳಿಸುತ್ತಿವೆ. ರೈಲು ನಿಲ್ದಾಣದ ಕಾರಿಡಾರ್ ವಿಶಾಲವಾಗಿದೆ. ನವದೆಹಲಿಯ ರೈಲು ನಿಲ್ದಾಣದಿಂದ ದೇಶದ ಎಲ್ಲ ರಾಜ್ಯಗಳಿಗೂ ರೈಲುಗಳು ಹೋಗುತ್ತವೆ. ದೇಶದ ಎಲ್ಲ ರಾಜ್ಯಗಳಿಂದಲೂ ಪ್ರಯಾಣಿಕರು ಇಲ್ಲಿಗೆ ಬರುತ್ತಾರೆ. ಭಾರತೀಯ ರೈಲ್ವೇ ಆಧುನಿಕತೆಯತ್ತ ಹೇಗೆ ಮುಖ ಮಾಡಿದೆ ಎಂಬುದನ್ನು ದೆಹಲಿ ರೈಲು ನಿಲ್ದಾಣ ಸಾರಿ ಹೇಳುತ್ತದೆ.
ವಾರಾಣಸಿಯ ಮಂಡವಾಡಿ ರೈಲು ನಿಲ್ದಾಣ ಈಗ ಫುಲ್ ಹೈಟೆಕ್ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಾಣಸಿಯ ರೈಲು ನಿಲ್ದಾಣ ಕಾರ್ಪೋರೇಟ್ ಕಚೇರಿಯಂತೆ ಕಾಣುತ್ತೆ. ಮಂಡವಾಡಿ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ಗಳು ಸ್ವಚ್ಛವಾಗಿವೆ. ಎಲ್ಇಡಿ ಲೈಟ್ಗಳಿಂದ ಮಿರಿಮಿರಿ ಮಿಂಚುತ್ತಿವೆ. ಏರ್ಕಂಡೀಷನ್ ವೇಯ್ಟಿಂಗ್ ಲಾಂಜ್, ನೀರಿನ ಫೌಂಟೇನ್ಗಳು ನಿಲ್ದಾಣದ ಸೌಂದರ್ಯ ಹೆಚ್ಚಿಸಿವೆ. ಟಿಕೆಟ್ ಬುಕಿಂಗ್ ಸೆಂಟರ್, ಫುಡ್ ಕೋರ್ಟ್, ವೇಯ್ಟಿಂಗ್ ರೂಮು ಸೇರಿದಂತೆ ಎಲ್ಲವೂ ಸುಂದರವಾಗಿ ಕಾಣುತ್ತಿವೆ. ರೈಲು ನಿಲ್ದಾಣದ ವಾಸ್ತುಶಿಲ್ಪವು ಕಾಶಿಯ ಸಂಸ್ಕೃತಿಯನ್ನು ಬಿಂಬಿಸುವಂತಿದೆ. ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಈ ರೈಲು ನಿಲ್ದಾಣವನ್ನು ಬನಾರಸ್ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆನ್ನುವ ಬೇಡಿಕೆಯೂ ಕೇಂದ್ರ ಸರ್ಕಾರದ ಮುಂದಿದೆ.
ಇದನ್ನೂ ಓದಿ: ರೈಲ್ವೆ ಸಚಿವರನ್ನು ಭೇಟಿಯಾದ ಎ.ನಾರಾಯಣಸ್ವಾಮಿ; ರೈಲ್ವೆ ಮಾರ್ಗದ ಬಗ್ಗೆ ಚರ್ಚೆ
ಗುಜರಾತ್ನ ವಲ್ಸದ್ ರೈಲು ನಿಲ್ದಾಣ ಈಗ ಹೈಟೆಕ್ ಗುಜರಾತ್ನ ವಲ್ಸದ್ ರೈಲು ನಿಲ್ದಾಣಕ್ಕೆ ಬರೊಬ್ಬರಿ 95 ವರ್ಷಗಳ ಇತಿಹಾಸ ಇದೆ. ಈ ಮೊದಲು ವಲ್ಸದ್ ರೈಲು ನಿಲ್ದಾಣದ ಗೋಡೆ ಪಕ್ಕದಲ್ಲೇ ಬೈಕ್ಗಳ ಪಾರ್ಕಿಂಗ್ ಮಾಡಲಾಗುತ್ತಿತ್ತು. ಗೋಡೆಯ ಬಣ್ಣ ಮಾಸಿ ಹೋಗಿತ್ತು. ಆದರೆ, ಈಗ ವಲ್ಸದ್ ರೈಲು ನಿಲ್ದಾಣವನ್ನು ಯೂರೋಪಿಯನ್ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ರೈಲು ನಿಲ್ದಾಣದ ಎಂಟ್ರಿ ಪಾಯಿಂಟ್ ಸುಂದರವಾಗಿದೆ. ಒಳಭಾಗದ ಟಿಕೆಟ್ ಕೌಂಟರ್ ಬಳಿ ಅತ್ಯಾಧುನಿಕ ಟೈಲ್ಸ್ ಹಾಕಲಾಗಿದೆ. ಎಲ್ಇಡಿ ಲೈಟ್ಗಳಿಂದ ಟಿಕೆಟ್ ಕೌಂಟರ್ ಫಳಫಳನೇ ಮಿಂಚುತ್ತಿದೆ.
ವಲ್ಸದ್ ರೈಲು ನಿಲ್ದಾಣಕ್ಕೆ ಬಂದರೆ, ಯಾವುದೋ ಯೂರೋಪಿಯನ್ ರೈಲು ನಿಲ್ದಾಣಕ್ಕೆ ಬಂದ ಅನುಭವವಾಗುತ್ತೆ. ರೈಲು ನಿಲ್ದಾಣದ ಮುಂಭಾಗದಲ್ಲಿ ಹಸಿರು ಹುಲ್ಲಿನ ಲಾನ್ ನಿರ್ಮಾಣ ಮಾಡಲಾಗಿದೆ. ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಅತ್ಯಾಧುನೀಕ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿಪಡಿಸಲಾಗಿದೆ. ರೈಲು ನಿಲ್ದಾಣದ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಈ ಮೊದಲು ವಲ್ಸದ್ ರೈಲು ನಿಲ್ದಾಣದಲ್ಲಿ ಚಿಕ್ಕದಾದ ಪ್ಲಾಟ್ಫಾರ್ಮ್ಗಳಿದ್ದವು. ಟಿಕೆಟ್ ಪಡೆಯಲು ಉದ್ದನೆಯ ಕ್ಯೂ ಇರುತ್ತಿತ್ತು. ಆದರೆ, ಈಗ ಈ ಸಮಸ್ಯೆಗಳೆಲ್ಲಾ ಪರಿಹಾರವಾಗಿವೆ. ವಿಶಾಲ ಪ್ಲಾಟ್ಫಾರ್ಮ್ಗಳನ್ನು ನಿರ್ಮಿಸಲಾಗಿದೆ. ಟಿಕೆಟ್ ಕೌಂಟರ್ ಬಳಿಯೂ ಹೆಚ್ಚು ಜಾಗ ಇದೆ. ಪ್ರಯಾಣಿಕರ ವೇಯ್ಟಿಂಗ್ ಹಾಲ್ನಲ್ಲಿ ಈ ಮೊದಲು ಯಾವುದೇ ಸೌಲಭ್ಯ ಇರಲಿಲ್ಲ. ಆದರೆ, ಈಗ ಏರ್ ಕಂಡೀಷನ್ ವೇಯ್ಟಿಂಗ್ ಹಾಲ್ಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗಿದೆ. ಈ ಮೊದಲು ವ್ಯವಸ್ಥಿತ ಪಾರ್ಕಿಂಗ್ ಜಾಗ ಇರಲಿಲ್ಲ. ಆದರೆ, ಈಗ ವಾಹನಗಳ ಪಾರ್ಕಿಂಗ್ಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ವಲ್ಸದ್ ರೈಲು ನಿಲ್ದಾಣದ ಮೂಲಕವೇ ವೀರಾರ್ ಮತ್ತು ಸೂರತ್ಗೆ ರೈಲುಗಳು ಸಂಚರಿಸುತ್ತವೆ. ನಿತ್ಯ 25 ರಿಂದ 30 ಸಾವಿರ ಮಂದಿ ಪ್ರಯಾಣಿಕರು ಈ ರೈಲು ನಿಲ್ದಾಣದಿಂದ ಸಂಚರಿಸುತ್ತಾರೆ.
ಪರಿಸರ ಸ್ನೇಹಿ ಕ್ರಮಗಳನ್ನು ರೈಲು ಇಲಾಖೆ ಕೈಗೊಂಡಿದ್ದು, ಮಳೆ ನೀರು ಸಂಗ್ರಹಿಸಲು ಮಳೆ ನೀರು ಕೊಯ್ಲು ಪದ್ದತಿಯನ್ನು ವಲ್ಸದ್ ರೈಲು ನಿಲ್ದಾಣದಲ್ಲಿ ಆಳವಡಿಸಿಕೊಳ್ಳಲಾಗಿದೆ. ವರ್ಟಿಕಲ್ ಗಾರ್ಡನ್ ನಿರ್ಮಿಸಲಾಗಿದೆ.
ಕಣ್ಮನ ಸೆಳೆಯುವ ಮಧುರೈ ಜಂಕ್ಷನ್ ತಮಿಳುನಾಡಿನ ಮಧುರೈ ಜಂಕ್ಷನ್ ಸಹ ಮೇಲ್ದರ್ಜೆಗೇರಿದೆ. ಮಧುರೈ ಮೀನಾಕ್ಷಿ ದೇವಾಲಯಕ್ಕೆ ಪ್ರಸಿದ್ಧ. ಸ್ಥಳೀಯ ಸಂಸ್ಕೃತಿ, ಇತಿಹಾಸ, ಪರಂಪರೆಗೆ ತಕ್ಕಂತೆ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಗೋಡೆಗಳನ್ನು ಮದುವೆ ಮತ್ತು ದೇವಸ್ಥಾನದ ದೃಶ್ಯಗಳ ಚಿತ್ರಕಲೆಗಳಿಂದ ಸಿಂಗರಿಸಲಾಗಿದೆ. ಹಣ ಕೊಟ್ಟು ಬಳಕೆ ಮಾಡುವ ವೇಯ್ಟಿಂಗ್ ಲಾಂಜ್ ಇಲ್ಲಿದೆ. ಡಾರ್ಮೆಟರಿಯಲ್ಲಿ ಪ್ರಯಾಣಿಕರು ಮಲಗಲು ವ್ಯವಸ್ಥೆ ಇದೆ.
ಬಿಹಾರದ ಮಧುಬನಿ ರೈಲು ನಿಲ್ದಾಣವು ಕೂಡ ಹೈಟೆಕ್ ಆಗಿದೆ. ಮಧುಬನಿ ರೈಲು ನಿಲ್ದಾಣದ ಸೌಂದರ್ಯ ವೃದ್ಧಿಯಾಗಿವೆ. ವಡೋದಾರ ರೈಲು ನಿಲ್ದಾಣವೂ ಹೈಟೆಕ್, ಮಾರ್ಡನ್ ಆಗಿದೆ. ಡಾರ್ಮೆಟರಿಯಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡೆದು ಮಲಗುವ ವ್ಯವಸ್ಥೆ ಮಾಡಲಾಗಿದೆ.
ಬೈಯ್ಯಪ್ಪನಹಳ್ಳಿ, ಯಶವಂತಪುರ ರೈಲು ನಿಲ್ದಾಣ ಮೇಲ್ದರ್ಜೆಗೆ ಕರ್ನಾಟಕದಲ್ಲಿ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಮತ್ತು ಯಶವಂತಪುರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಿದ ಮೇಲೆ ಉದ್ಘಾಟನೆಯ ಭಾಗ್ಯ ಇನ್ನೂ ಸಿಕ್ಕಿಲ್ಲ. ಯಶವಂತಪುರ ಮತ್ತು ಮೆಜೆಸ್ಟಿಕ್ ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್ಗಳನ್ನು ಆಳವಡಿಸಲಾಗಿದೆ. ಯಶವಂತಪುರ ರೈಲು ನಿಲ್ದಾಣದ ಲುಕ್ ಕೂಡ ಈಗ ಬದಲಾಗಿದೆ. ಹೊರ ಭಾಗವನ್ನು ಅತ್ಯಾಕರ್ಷಕ ಮರು ವಿನ್ಯಾಸ ಮಾಡಲಾಗಿದೆ. ಪಕ್ಕದಲ್ಲೇ ಇರುವ ಮೆಟ್ರೋ ರೈಲು ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಾಗಿದೆ. ಆಟೊ ನಿಲ್ದಾಣ, ಅತ್ಯಾಧುನಿಕ ಶೌಚಾಲಯ, ಎಸ್ಕಲೇಟರ್ಗಳನ್ನು ನಿರ್ಮಾಣ ಮಾಡಲಾಗಿದೆ.
‘ರೈಲು ನಿಲ್ದಾಣಕ್ಕೆ ಬಂದರೇ, ಈಗ ಯಾವುದೋ ಏರ್ಪೋರ್ಟ್ಗೆ ಬಂದ ಅನುಭವ ಆಗುತ್ತೆ. ಒಳ್ಳೆಯ ಟೈಲ್ಸ್ ಹಾಕಿದ್ದಾರೆ. ಎಂಟ್ರಿ ಗೇಟ್ ನೋಡುತ್ತಿದ್ದಂತೆ, ಏರ್ಪೋರ್ಟ್ ಮುಂಭಾಗದಲ್ಲಿದ್ದ ಅನುಭವ ಆಗುತ್ತೆ’ ಎಂದು ತುಮಕೂರಿನಿಂದ ನಿತ್ಯ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಸಂಚರಿಸುವ ರಾಜಣ್ಣ ಎಂಬ ಪ್ರಯಾಣಿಕರು ಹೇಳುತ್ತಾರೆ.
ಇದನ್ನೂ ಓದಿ: ರೈಲಿನಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣ ವಾಪಸ್; ರೈಲ್ವೆ ಪೊಲೀಸರಿಂದ ಪ್ರಶಂಸನೀಯ ಕಾರ್ಯ
49 ರೈಲು ನಿಲ್ದಾಣಗಳ ಮರು ಅಭಿವೃದ್ದಿಗೆ ಆರ್‌ಎಲ್‌ಡಿಎಗೆ ಸೂಚನೆ ದೇಶದಲ್ಲಿ ಈಗಾಗಲೇ 125 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದೆ. ಇವುಗಳ ಜೊತೆಗೆ 49 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ರೈಲು ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿಗೆ (RLDA) ರೈಲ್ವೆ ಇಲಾಖೆ ಆದೇಶ ನೀಡಿದೆ. ಈಗಾಗಲೇ 60 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಆರ್ಎಲ್ಡಿಎ ಕೆಲಸ ಮಾಡುತ್ತಿದೆ ಎಂದು ಉಪಾಧ್ಯಕ್ಷ ವೇದ್ ಪ್ರಕಾಶ್ ದುದೇಜಾ ಹೇಳಿದ್ದಾರೆ. 125 ರೈಲ್ವೇ ನಿಲ್ದಾಣಗಳ ಮರು ಅಭಿವೃದ್ದಿಗೆ ₹ 50 ಸಾವಿರ ಕೋಟಿ ಬಂಡವಾಳ ಹೂಡಿಕೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ರೈಲು ನಿಲ್ದಾಣದ ಅಭಿವೃದ್ದಿಯಿಂದ ಸ್ಥಳೀಯ ಆರ್ಥಿಕತೆಗೂ ಅನುಕೂಲವಾಗುತ್ತದೆ. ಸ್ಥಳೀಯ ಚಿಲ್ಲರೆ ವ್ಯಾಪಾರ, ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುತ್ತಾರೆ ಅವರು. ಆರ್ಎಲ್ಡಿಎ ಅಭಿವೃದ್ದಿಪಡಿಸುವ 49 ರೈಲು ನಿಲ್ದಾಣಗಳಲ್ಲಿ ಕರ್ನಾಟಕದ 2 ನಿಲ್ದಾಣಗಳು ಸೇರಿವೆ. ಅಮರಾವತಿ, ರಾಜಕೋಟ್, ಮಥುರಾ, ಆಗ್ರಾ ಕೋಟೆ, ಬಿಕಾನೇರ್, ಕುರುಕ್ಷೇತ್ರ, ಭೋಪಾಲ್ ರೈಲ್ವೇ ನಿಲ್ದಾಣಗಳನ್ನು ಆರ್ಎಲ್ಡಿಎ ಮೇಲ್ದರ್ಜೆಗೇರಿಸಿ ಅಭಿವೃದ್ದಿಪಡಿಸಲಿದೆ.
(Railway Stations Across India Modernised Many New Amenities Provided to Passengers)
ಇದನ್ನೂ ಓದಿ: ಮುಂಬೈ: ಜುಲೈನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ 90,000ಕ್ಕೂ ಅಧಿಕ ಪ್ರಯಾಣಿಕರನ್ನು ಹಿಡಿದು ದಂಡ ಹಾಕಿದ ರೈಲ್ವೆ ಇಲಾಖೆ